ರಾಯ್‌ಪುರ: ಛತ್ತೀಸ್‌ಗಢದ ನಾರಾಯಣಪುರ ಜಿಲ್ಲೆಯಲ್ಲಿ ಗುರುವಾರ ಪೊಲೀಸರು ಮತ್ತು ಸಿಆರ್‌ಪಿಎಫ್ ಪಡೆ ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಇಬ್ಬರು ಮಹಿಳಾ ನಕ್ಸಲೀಯರು ಸೇರಿದಂತೆ 7 ಮಂದಿಯನ್ನು ಕೊ*ಲ್ಲಲಾಗಿದೆ. ನಾರಾಯಣಪುರ, ದಾಂತೇವಾಡ ಜಿಲ್ಲೆಗಳ ಗಡಿ ಭಾಗದ ಅರಣ್ಯದಲ್ಲಿ ಗುರುವಾರ ಬೆಳಗ್ಗೆ 3 ಗಂಟೆಗೆ ನಕ್ಸಲರ ಜತೆಗೆ ಗುಂಡಿನ ಚಕಮಕಿ ಆರಂಭವಾಯಿತು. ನಕ್ಸಲೀಯರ ಇರುವಿಕೆ ಬಗ್ಗೆ ಡಿ.10ರಂದು ಲಭಿಸಿದ್ದ ಸುಳಿವಿನ ಆಧಾರದಲ್ಲಿ ಶೋಧ ಕಾರ್ಯ ನಡೆಸಲಾಗುತ್ತಿತ್ತು. ಈ ಸಂದರ್ಭದಲ್ಲಿ ಗುಂಡಿನ ಚಕಮಕಿ ಆರಂಭವಾಯಿತು ಐಜಿಪಿ ಸುಂದರರಾಜ್ ಹೇಳಿದ್ದಾರೆ.
ಒಟ್ಟು 7 ಗಂಟೆಗಳ ಕಾಲ ಗುಂಡಿನ ಚಕಮಕಿ ನಡೆದಿದ್ದು, 7 ಮಂದಿ ಅಸುನೀಗಿದ್ದಾರೆ. ಸ್ಥಳದಿಂದ ಅಪಾರ ಪ್ರಮಾಣದ ಶಸ್ತ್ರಾಸ್ತ್ರ ವಶಪಡಿಸಿಕೊಳ್ಳಲಾಗಿದೆ ಎಂದರು. ಈ ಘಟನೆಯಿಂದ ಬಸ್ತಾರ್ ವಲಯದಲ್ಲಿ ಪ್ರಸಕ್ತ ವರ್ಷ 215 ಮಂದಿ ನಕ್ಸಲರನ್ನು ಕೊಲ್ಲಲಾಗಿದೆ ಎಂದು ಸುಂದರರಾಜ್ ಹೇಳಿದರು.
ಸಿಎಂ ಹರ್ಷ: ಪೊಲೀಸರ ಕಾರ್ಯಾಚರಣೆಗೆ ಮೆಚ್ಚುಗೆ ವ್ಯಕ್ತಪಡಿಸಿದ ಸಿಎಂ ವಿಷ್ಣು ದೇವ್ ಸಾಯಿ “ಇನ್ನು 1 ವರ್ಷದಲ್ಲಿ ಛತ್ತೀಸ್‌ಗಢ ನಕ್ಸಲ್ ಮುಕ್ತ ರಾಜ್ಯವಾಗಲಿದೆ’ ಎಂದು ಹೇಳಿದ್ದಾರೆ.