Advertisement

ಹುನ್ನಿಗೆರೆಯಲ್ಲಿ ಬಿಡಿಎ ಹೊಸ ಯೋಜನೆ

07:12 AM Jun 25, 2019 | Lakshmi GovindaRaj |

ಬೆಂಗಳೂರು: ಸಾರ್ವಜನಿಕರಿಂದ ಹೆಚ್ಚಿನ ಬೇಡಿಕೆ ಬರುತ್ತಿರುವ ಹಿನ್ನೆಲೆಯಲ್ಲಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಆಧುನಿಕ ವಿನ್ಯಾಸದ ವಿಲ್ಲಾ ಹಾಗೂ 1 ಬಿಎಚ್‌ಕೆ ಫ್ಲ್ಯಾಟ್‌ಗಳ ನಿರ್ಮಾಣಕ್ಕೆ ಮುಂದಾಗಿದೆ.

Advertisement

ಆಲೂರಿನಲ್ಲಿ ನಿರ್ಮಿಸಿದ್ದ ವಿಲ್ಲಾಗಳು ಈಗಾಗಲೇ ಮಾರಾಟವಾದ ಹಿನ್ನೆಲೆಯಲ್ಲಿ, ಬೆಂಗಳೂರು ಉತ್ತರ ತಾಲೂಕಿನ ದಾಸನಪುರ ಹೋಬಳಿಯ ಹುನ್ನಿಗೆರೆ ಗ್ರಾಮದಲ್ಲಿ ವಿಲ್ಲಾಗಳ ಜತೆಗೆ ಫ್ಲ್ಯಾಟ್‌ಗಳ ನಿರ್ಮಾಣಕ್ಕೆ ಯೋಜನೆ ರೂಪಿಸಿದೆ.

ತುಮಕೂರು ರಸ್ತೆ ಸಮೀಪದ ಹುನ್ನಿಗೆರೆಯಲ್ಲಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರಕ್ಕೆ ಸೇರಿದ 31 ಎಕರೆ ಜಮೀನಿನಲ್ಲಿ 322 ವಿಲ್ಲಾ ಮತ್ತು 320 ಫ್ಲ್ಯಾಟ್‌ಗಳನ್ನು ನಿರ್ಮಿಸಲು ನೀಲಿ ನಕ್ಷೆ ಸಿದ್ಧಪಡಿಸಲಾಗಿದೆ.

195 ಕೋಟಿ.ರೂ. ವೆಚ್ಚ: ಮುಂದಿನ ಐದಾರು ತಿಂಗಳಲ್ಲಿ ಆರಂಭವಾಗಲಿರುವ ಈ ಯೋಜನೆಗಾಗಿ ಸುಮಾರು 195 ಕೋಟಿ ರೂ. ಮೀಸಲಿಡಲು ಬಿಡಿಎ ತೀರ್ಮಾನಿಸಿದೆ. 26 ಎಕರೆ ಜಮೀನಿನಲ್ಲಿ ವಿಲ್ಲಾ ಮತ್ತು 1 ಬಿಎಚ್‌ಕೆ ಫ್ಲ್ಯಾಟ್‌ಗಳು ತಲೆ ಎತ್ತಲಿವೆ. ಉಳಿದ 6 ಎಕರೆ ಪ್ರದೇಶವನ್ನು ರಸ್ತೆ ಸೇರಿದಂತೆ ಇನ್ನಿತರ ಸೌಲಭ್ಯಗಳಿಗೆ ಬಳಸಿಕೊಳ್ಳಲು ನಿರ್ಧರಿಸಲಾಗಿದೆ. ಜತೆಗೆ, ಸೋಲಾರ್‌ ವ್ಯವಸ್ಥೆ ಕಲ್ಪಿಸಲು ಚಿಂತನೆ ನಡೆದಿದೆ.

ಮೂರು ವರ್ಷದಲ್ಲಿ ಪೂರ್ಣ: ಮೂರು ವರ್ಷಗಳಲ್ಲಿ ಯೋಜನೆ ಪೂರ್ಣಗೊಳಿಸುವ ಇರಾದೆಯಲ್ಲಿ ಬಿಡಿಎ ಇದೆ. ಅಲ್ಲದೆ ನೀರಿನ ಸೌಲಭ್ಯಕ್ಕೆ ಆದ್ಯತೆ ನೀಡಿದ್ದು, ಮಳೆ ನೀರು ಕೊಯ್ಲು ಯೋಜನೆ ಅಳವಡಿಸುವ ಚಿಂತನೆಯಿದೆ. ಹುನ್ನಿಗೆರೆ ಯೋಜನೆಯಲ್ಲಿ ಆಧುನಿಕ ವಿನ್ಯಾಸದ ಈಜು ಕೊಳ, ಸುಸಜ್ಜಿತವಾದ ಸ್ಫೋರ್ಟ್ಸ್ ಕ್ಲಬ್‌ ನಿರ್ಮಿಸುವ ಆಲೋಚನೆ ಹೊಂದಲಾಗಿದೆ ಎಂದು ಬಿಡಿಎ ಹಿರಿಯ ಅಧಿಕಾರಿ ಮಾಹಿತಿ ನೀಡಿದ್ದಾರೆ.

Advertisement

ಪರಿಸರ ಇಲಾಖೆ ಸಮ್ಮತಿ: ಹುನ್ನಿಗೆರೆ ಗ್ರಾಮದಲ್ಲಿ ವಿಲ್ಲಾ ಮತ್ತು ಫ್ಲ್ಯಾಟ್‌ ನಿರ್ಮಿಸುವ ಯೋಜನೆಗೆ ಬಿಡಿಎ ಈಗಾಗಲೇ ಪರಿಸರ ಇಲಾಖೆಯಿಂದ ಅನುಮತಿ ಪಡೆದಿದೆ. ಪರಿಸರ ಸ್ನೇಹಿ ವಾತಾವರಣಕ್ಕೆ ಆದ್ಯತೆ ನೀಡಲಾಗಿದ್ದು, ಫ್ಲ್ಯಾಟ್‌ನ ಸುತ್ತಮುತ್ತ ವಿವಿಧ ಜಾತಿಯ ಸುಮಾರು 1.400ಕ್ಕೂ ಹೆಚ್ಚು ಗಿಡಗಳನ್ನು ನೆಡಲು ತೀರ್ಮಾನಿಸಲಾಗಿದೆ.

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ, ಹಲವು ಕಡೆ ಈಗಾಗಲೇ ನಿರ್ಮಿಸಿರುವ ಫ್ಲ್ಯಾಟ್‌ಗಳಲ್ಲಿ ಮಳೆ ಬಂದಾಗ ಅನೇಕ ರೀತಿಯ ತೊಂದರೆಗಳು ಎದುರಾಗಿರುವ ಉದಾಹರಣೆಗಳಿವೆ. ಆ ಹಿನ್ನೆಲೆಯಲ್ಲಿ ಭವಿಷ್ಯದಲ್ಲಿ ಇಂತಹ ತೊಂದರೆಗಳು ಎದುರಾಗದ ರೀತಿಯಲ್ಲಿ ಕ್ರಮಗಳನ್ನು ಕೈಗೊಳ್ಳಲಿದೆ.

ರಾವುತ್ತನಹಳ್ಳಿಗೆ ಸಮೀಪ: ಪ್ರಸ್ತುತ ನೆಲಮಂಗಲ ಸಮೀಪದ ರಾವುತ್ತನಹಳ್ಳಿವರೆಗೂ ಬಿಎಂಟಿಸಿ ಬಸ್‌ಗಳು ಸಂಚರಿಸುತ್ತಿವೆ. ಇಲ್ಲಿಂದ ಹುನ್ನಿಗೆರೆ ಪ್ರದೇಶ ಕೇವಲ 1 ಕಿ.ಮೀ ದೂರದಲ್ಲಿದ್ದು, ಮುಂದಿನ ದಿನಗಳಲ್ಲಿ ರಾವುತ್ತನ ಹಳ್ಳಿಯಿಂದ ಹುನ್ನಿಗೆರೆವರೆಗೂ ಬಿಎಂಟಿಸಿ ಬಸ್‌ ಸೇವೆ ಕಲ್ಪಿಸುವ ಆಲೋಚನೆಯಲ್ಲಿ ಬಿಡಿಎ ಅಧಿಕಾರಿಗಳು ಹೊಂದಿದ್ದಾರೆ.

ಜತೆಗೆ ಹುನ್ನಿಗೆರೆ ಪ್ರದೇಶ ಮೆಜೆಸ್ಟಿಕ್‌ನಿಂದ ಸುಮಾರು 18 ಕಿ.ಮೀ ಹಾಗೂ ತುಮಕೂರು ರಸ್ತೆಯಲ್ಲಿರುವ ಬೆಂಗಳೂರು ಅಂತಾರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರದಿಂದ 4 ಕಿ.ಮೀ ದೂರದಲ್ಲಿದೆ. “ನಮ್ಮ ಮೆಟ್ರೊ’ ಎರಡನೇ ಹಂತದ ಯೋಜನೆ ಬಿಐಇಸಿವರೆಗೂ ಸಂಪರ್ಕ ಕಲ್ಪಿಸಲಿದೆ.

ಹುನ್ನಿಗೆರೆ ಪ್ರದೇಶದಲ್ಲಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ವಿಲ್ಲಾ ಮತ್ತು 1 ಬಿಎಚ್‌ಕೆ ಫ್ಲ್ಯಾಟ್‌ಗಳ ನಿರ್ಮಾಣಕ್ಕೆ ಯೋಜನೆ ರೂಪಿಸಿದ್ದು, ಇದಕ್ಕೆ ಪರಿಸರ ಇಲಾಖೆಯ ಅನುಮತಿ ದೊರೆತಿದೆ.
-ವಿನಾಯಕ ಸುಗೂರ್‌, ಬಿಡಿಎ ಅಭಿಯಂತರ

* ದೇವೇಶ ಸೂರಗುಪ್ಪ

Advertisement

Udayavani is now on Telegram. Click here to join our channel and stay updated with the latest news.

Next