Advertisement

ಬಿಬಿಎಂಪಿ ಚುನಾವಣೆ: ಸರ್ಕಾರದ ವಾದ ಒಪ್ಪದ “ಹೈ’

12:05 PM Nov 26, 2020 | Suhan S |

ಬೆಂಗಳೂರು: ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯ ವಾರ್ಡ್‌ ಪುನರ್‌ವಿಂಗಡಣೆಗೆ ಕಾಯ್ದೆ ಜಾರಿಗೊಳಿಸಿರುವುದೇ ಚುನಾವಣೆ ಮುಂದೂಡಿಕೆಗೆ ಕಾರಣ ಎಂದು ಮೌಖಿಕ ಅಭಿಪ್ರಾಯಪಟ್ಟಿರುವ ಹೈಕೋರ್ಟ್‌, ಕಾಯ್ದೆಯನ್ನು ಅಮಾನತ್ತಿನಲ್ಲಿಟ್ಟು ಚುನಾವಣೆ ನಡೆಸಬಹುದಲ್ಲವೇ ಎಂದು ಸರ್ಕಾರವನ್ನು ಪ್ರಶ್ನಿಸಿದೆ.

Advertisement

ಪಾಲಿಕೆಗೆ ಶೀಘ್ರ ಚುನಾವಣೆ ನಡೆಸುವಂತೆ ಕೋರಿ ಕಾಂಗ್ರೆಸ್‌ ಪಾಲಿಕೆಯ ಮಾಜಿ ಸದಸ್ಯ ಎಂ.ಶಿವರಾಜು ಹಾಗೂ ಇತರರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್‌.ಓಕ್‌ ನೇತೃತ್ವದ ವಿಭಾಗೀಯ ನ್ಯಾಯಪೀಠ ಬುಧವಾರ ವಿಚಾರಣೆ ನಡೆಸಿತು.

ಸರ್ಕಾರದ ಪರ ವಾದ ಮಂಡಿಸಿದ ಅಡ್ವೋಕೇಟ್‌ ಜನರಲ್‌ ಪ್ರಭುಲಿಂಗ ಕೆ.ನಾವದಗಿ, ಚುನಾವಣೆಮುಂದೂಡುವ ಯಾವುದೇ ಉದ್ದೇಶ ಸರ್ಕಾರಕ್ಕಿಲ್ಲ. ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ ಇದೀಗ ವಿಸ್ತಾರವಾಗಿ ಬೆಳೆದಿದೆ. ಬಿಬಿಎಂಪಿ ವಾರ್ಡ್‌ಗಳನ್ನುಮರು ವಿಂಗಡಣೆ ಮಾಡುವ ಅಗತ್ಯವಿದೆ. ಜಂಟಿ ಸದನ ಸಮಿತಿ ಶಿಫಾರಸ್ಸಿನಂತೆ ವಾರ್ಡ್‌ಗಳ ಮರು ವಿಂಗಡಣೆಗೆ ಪ್ರತ್ಯೇಕ ಕಾಯ್ದೆ ಜಾರಿಗೊಳಿಸಲಾಗಿದೆ. ಹಾಗಾಗಿ ಸದ್ಯಕ್ಕೆ ಚುನಾವಣೆ ನಡೆಸಲು ಸಾಧ್ಯವಾಗುತ್ತಿಲ್ಲ. ಮರು ವಿಂಗಡಣೆ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಚುನಾವಣೆನಡೆಸಲಾಗುವುದು. ವಾರ್ಡ್‌ ಪುನರ್‌ ವಿಂಗಡಣೆ ಕಾರ್ಯ ಕೈಗೆತ್ತಿಕೊಳ್ಳಲು ವಿಳಂಬವಾಗಿದ್ದಕ್ಕೆ ಕೋವಿಡ್‌ ಮತ್ತಿತರ ಕಾರಣಗಳಿವೆ.ಸದುದ್ದೇಶದಿಂದಲೇ ಸರ್ಕಾರ ಕಾಯ್ದೆ ರೂಪಿಸಿದೆ. ನ್ಯಾಯಾಲಯ ಅದನ್ನು ಅರ್ಥ ಮಾಡಿಕೊಳ್ಳಬೇಕು. ನ್ಯಾಯಾಲಯ ಹೇಳಿದಂತೆ ಕಾಯ್ದೆ ಜಾರಿಯಲ್ಲಿರುವಾಗ ಅದನ್ನು ಅಮಾನತ್ತಿನಲ್ಲಿರಿಸಿ ಚುನಾವಣೆ ನಡೆಸಲಾಗದು ಎಂದು ಹೇಳಿದರು.

ರಾಜ್ಯ ಚುನಾವಣಾ ಆಯೋಗದ ಪರ ವಾದ ಮಂಡಿಸಿದ ಹಿರಿಯ ನ್ಯಾಯವಾದಿಕೆ.ಎನ್‌.ಫ‌ಣೀಂದ್ರ ಹೊಸದಾಗಿ ವಾರ್ಡ್‌ಗಳ ಪುನರ್‌ ವಿಂಗಡಣೆ ಮಾಡುವಾಗ ಒಂದೇ ವಾರ್ಡ್‌ ಹಲವು ವಿಧಾನಸಭಾ ಕ್ಷೇತ್ರಗಳಲ್ಲಿ ಹಂಚಿ ಹೋಗುವುದನ್ನುತಪ್ಪಿಸಲಾಗುವುದು ಎಂದು ಸರ್ಕಾರ ಹೇಳಿದೆ. ಆದರೆ,ಹಾಲಿ ವಾರ್ಡ್‌ಗಳಲ್ಲಿಯೇ ಆ ರೀತಿ ಕ್ರಮ ಜರುಗಿಸಲಾಗಿದ್ದು, ಯಾವ ವಾರ್ಡ್‌ 2-3 ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಬರುವುದಿಲ್ಲ ಎಂದರು. ಅಲ್ಲದೆ, ಬಿಬಿಎಂಪಿ ವ್ಯಾಪ್ತಿಯಲ್ಲಿ ಏನೂ ಬದಲಾವಣೆಯಾಗಿಲ್ಲ. ಜತೆಗೆ ಸರ್ಕಾರ ಕಾಯ್ದೆಜಾರಿಗೆ ತಂದಿರುವುದು ಅಕ್ಟೋಬರ್‌ನಲ್ಲಿ, ಅದಕ್ಕೆ ಸಮಿತಿ ರಚನೆ ಮಾಡಿರುವುದು ಆಯೋಗ ಹೈಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ ನಂತರ ಎಂದು ವಿವರಿಸಿದರು.

ಇದನ್ನೂ ಓದಿ :ಕಾಪು ಶಾಸಕ ಲಾಲಾಜಿ ಆರ್ ಮೆಂಡನ್ ಗೆ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ! ಸಚಿವ ಸ್ಥಾನಕ್ಕೆ ಬ್ರೇಕ್

Advertisement

ಅರ್ಜಿದಾರರ ಪರ ವಾದ ಮಂಡಿಸಿದ ಹಿರಿಯ ನ್ಯಾಯವಾದಿ ಪ್ರೊ.ರವಿವರ್ಮ ಕುಮಾರ್‌, ಜಂಟಿ ಸದನ ಸಮಿತಿ ಶಿಫಾರಸು ಆಧರಿಸಿ ಪಾಲಿಕೆ ವಾರ್ಡ್ ಗಳ ಪುನರ್‌ವಿಂಗಡಣೆಗೆ ಕಾನೂನು ಜಾರಿಗೊಳಿಸಲಾಗಿದೆ ಎಂದು ಸರ್ಕಾರ ಹೇಳಿದೆ. ಆದರೆ ಸರ್ಕಾರ ಸಮಿತಿ ಬಗ್ಗೆ ತಪ್ಪು ಮಾಹಿತಿ ನೀಡುತ್ತಿದೆ. ಸಮಿತಿ ರಚನೆ ಮಾಡಿದ್ದು ಬಿಬಿಎಂಪಿಗೆ ಹೊಸ ಕಾಯ್ದೆ ರಚಿಸುವ ಸಲುವಾಗಿಯೇ ಹೊರತು, ವಾರ್ಡ್‌ಗಳ ಪುನರ್‌ವಿಂಗಡಣೆಗೆ ಶಿಫಾರಸು ಮಾಡಲು ಅಲ್ಲ. ಕಾನೂನು ಜಾರಿಗೊಳಿಸಿರುವುದು ಪಾಲಿಕೆಯ ಅಧಿಕಾರಾವಧಿ ಮುಕ್ತಾಯದ ಬಳಿಕ. ಹೀಗಾಗಿ ಅದನ್ನು ಒಪ್ಪಲಾಗದು, ಸಾಂವಿಧಾನದಕಲಂ 243(ಯು) ಅನ್ವಯ ಚುನಾವಣೆಗಳನ್ನು ನಡೆಸಲೇಬೇಕು ಎಂದು ಹೇಳಿದರು.

ಈಗಾಗಲೇ ಹೈಕೋರ್ಟ್‌ ವಿಭಾಗೀಯ ನ್ಯಾಯಪೀಠ ಗ್ರಾಪಂ ಚುನಾವಣೆ ತೀರ್ಪಿನಲ್ಲಿ ಚುನಾವಣೆ ನಡೆಸುವ ವಿಚಾರವಾಗಿ ಸ್ಪಷ್ಟ ನಿರ್ದೇಶನ ನೀಡಿದೆ. ಚುನಾವಣೆ ಮುಂದೂಡುವ ಅಧಿಕಾರ ಸರ್ಕಾರಕ್ಕಿಲ್ಲ. ಅವಧಿಗೆ ಮುನ್ನ ಚುನಾವಣೆ ನಡೆಸುವುದು ಚುನಾವಣಾ ಆಯೋಗದ ಸಾಂವಿಧಾನಿಕ ಕರ್ತವ್ಯ. ಈ ವಿಚಾರದಲ್ಲಿ ಸರ್ಕಾರದ ಯಾವುದೇ ಪಾತ್ರವಿಲ್ಲ. ಹಾಗೆಯೇ ಸರ್ಕಾರದ ನಿಲುವು ಮುಖ್ಯವಲ್ಲ ಎಂದು ಸ್ಪಷ್ಟಪಡಿಸಲಾಗಿದೆ ಎಂದು ವಿವರಿಸಿದರು.

ಕೋವಿಡ್‌ಗಿಂತ ಕಾಯ್ದೆ ಜಾರಿಯೇ ಚುನಾವಣೆವಿಳಂಬಕ್ಕೆ ಕಾರಣ :  ಈ ವೇಳೆ ಚುನಾವಣೆ ವಿಳಂಬಕ್ಕೆ ಪ್ರಮುಖ ಕಾರಣ ಕೋವಿಡ್‌-19. ಇದರ ಜತೆಗೆ ವಾರ್ಡ್‌ ಪುನರ್‌ವಿಂಗಡಣೆಗೆ ಕಾಯ್ದೆ ಜಾರಿಗೊಳಿಸಿರುವುದರಿಂದ ಸದ್ಯಕ್ಕೆ ಚುನಾವಣೆ ನಡೆಸಲು ಸಾಧ್ಯವಾಗುತ್ತಿಲ್ಲ ಎಂಬ ಸರ್ಕಾರದ ವಾದ ಒಪ್ಪುವಂತಹದ್ದಲ್ಲ. ಕೋವಿಡ್‌ಗಿಂತ ಕಾಯ್ದೆ ಜಾರಿಯೇ ಚುನಾವಣೆ ವಿಳಂಬಕ್ಕೆ ಕಾರಣ. ಒಂದೊಮ್ಮೆ ಕಾಯ್ದೆ ಜಾರಿಗೊಳಿಸಿರುವುದನ್ನು ನ್ಯಾಯಾಲಯ ಎತ್ತಿಹಿಡಿದರೆ, ಸಕಾಲದಲ್ಲಿ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆಸಬೇಕು ಎಂಬ ಸಾಂವಿಧಾನಿಕ ಬಾಧ್ಯತೆಗೆ ಸೋಲು ಕಾಣಿಸಿದಂತಾಗುತ್ತದೆ. ಈಗಾಗಲೇ ಚುನಾವಣೆಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ಕೋಟ್ಯಂತರ ರೂ.ವೆಚ್ಚ ಮಾಡಿ ಮತದಾರರ ಪಟ್ಟಿ ಸಿದ್ಧಪಡಿಸಲಾಗಿದೆ. ಹೀಗಾಗಿ ಕಾಯ್ದೆಯನ್ನು ಅಮಾನತ್ತಿನಲ್ಲಿಟ್ಟು ಚುನಾವಣೆ ನಡೆಸಿದರೆ ಸಾಂವಿಧಾನಿಕ ಬಾಧ್ಯತೆ ಪಾಲಿಸಿದಂತಾಗುತ್ತದಲ್ಲವೇ ಎಂದು ಸರ್ಕಾರವನ್ನು ಪ್ರಶ್ನಿಸಿತು. ಕೊನೆಗೆ ಸರ್ಕಾರ, ಚುನಾವಣಾ ಆಯೋಗ ಹಾಗೂ ಅರ್ಜಿದಾರರ ವಾದ-ಪ್ರತಿವಾದ ಆಲಿಸಿ ವಿಚಾರಣೆ ಪೂರ್ಣಗೊಳಿಸಿದ ನ್ಯಾಯಪೀಠ ತೀರ್ಪು ಕಾಯ್ದಿರಿಸಿತು.

Advertisement

Udayavani is now on Telegram. Click here to join our channel and stay updated with the latest news.

Next