ಕಲಬುರಗಿ: ಬಿಜೆಪಿ ಹಿರಿಯ ಮುಖಂಡ, ಮಾಜಿ ಶಾಸಕ ಬಸವಂತರೆಡ್ಡಿ ಪಾಟೀಲ ಮೋತಕಪಲ್ಲಿ ನಿಧನರಾಗಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ನಗರದ ಖಾಸಗಿ ಆಸ್ಪತ್ರೆಯಲ್ಲಿ ಸೋಮವಾರ ರಾತ್ರಿ ಕೊನೆಯುಸಿರೆಳೆದರು. ಅವರಿಗೆ 88 ವರ್ಷ ವಯಸ್ಸಾಗಿತ್ತು.
ಬಸವಂತರೆಡ್ಡಿ ಸೇಡಂ ತಾಲೂಕಿನ ಮೋತಕಪಲ್ಲಿ ಗ್ರಾಮದವರು. ಸೇಡಂ ವಿಧಾನಸಭಾ ಕ್ಷೇತ್ರಕ್ಕೆ ಎರಡು ಬಾರಿ ಶಾಸಕರಾಗಿದ್ದರು. 1978 ರಲ್ಲಿ ಜನತಾ ಪಕ್ಷದ ಮೂಲಕ ರಾಜಕೀಯ ಪ್ರವೇಶಿಸಿದ್ದರು.
1988ರಲ್ಲಿ ಮುಧೋಳ ಜಿಲ್ಲಾ ಪಂಚಾಯಿತಿ ಸದಸ್ಯರಾಗಿ ಆಯ್ಕೆಯಾಗಿದ್ದರು. ನಂತರ 1989ರಲ್ಲಿ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿ ಸೇಡಂನ ಶಾಸಕರಾಗಿ ಆಯ್ಕೆಗೊಂಡಿದರು. 1994ರ ಚುನಾವಣೆಯಲ್ಲಿ ಸೋಲು ಕಂಡಿದ್ದರು. 1999ರಲ್ಲಿ ಮತ್ತೆ ಕಾಂಗ್ರೆಸ್ ಪಕ್ಷದಿಂದಲೇ ಶಾಸಕರಾಗಿ ಪುನರಾಯ್ಕೆಯಾಗಿದ್ದ ಬಸವಂತರೆಡ್ಡಿ ಅವರು ಎಸ್.ಎಂ.ಕೃಷ್ಞ ಅವರ ಆಪ್ತ ಬಳಗದಲ್ಲಿ ಗುರುತಿಸಿ ಕೊಂಡಿದ್ದರು. ಕಳೆದ ಹತ್ತು ವರ್ಷಗಳಿಂದೀಚೆಗೆ ಬಿಜೆಪಿ ಪಕ್ಷದಲ್ಲಿದ್ದರು.
ಇದನ್ನೂ ಓದಿ:ಶಾಸಕರ ಸಭೆಯಲ್ಲಿ ಸಿಎಂ ವಿರುದ್ಧ ಅಸಮಾಧಾನ ಸ್ಫೋಟ: ಯತ್ನಾಳ್‌ಗೆ ಸಿಎಂ ಪಾಠ
ಒಬ್ಬ ಪುತ್ರ ಮತ್ತು ಒಬ್ಬ ಪುತ್ರಿ, ಆರು ಜನ ಮೊಮ್ಮಕ್ಕಳು ಇದ್ದು, ಮೋತಕಪಲ್ಲಿ ಗ್ರಾಮದ ಸ್ವಂತ ಜಮೀನಿನಲ್ಲಿ ಇಂದು ಮಧ್ಯಾಹ್ನ 3 ಗಂಟೆಗೆ ಅಂತ್ಯಕ್ರಿಯೆ ನೆರೆವೆರಲಿದೆ ಎಂದು ಮೂಲಗಳು ತಿಳಿಸಿವೆ.
ಖರ್ಗೆ ಸಂತಾಪ: ಸೇಡಂ ಕ್ಷೇತ್ರದ ಮಾಜಿ ಶಾಸಕರಾದ ಬಸವಂತರೆಡ್ಡಿ ಪಾಟೀಲ ಮೋತಕಪಲ್ಲಿ ಅವರ ಅಗಲಿಕೆಯಿಂದ ಕಲಬುರಗಿ ಜಿಲ್ಲೆಯು ಒಬ್ಬ ಮುತ್ಸದ್ಧಿ ನಾಯಕನನ್ನು ಕಳೆದುಕೊಂಡಂತಾಗಿದೆ ಎಂದು ಕಾಂಗ್ರೆಸ್ ಹಿರಿಯ ನಾಯಕ, ರಾಜ್ಯಸಭಾ ಸದಸ್ಯ ಮಲ್ಲಿಕಾರ್ಜುನ ಖರ್ಗೆ ಕಂಬನಿ ಮಿಡಿದಿದ್ದಾರೆ.
ಸುಮಾರು 4 ದಶಕಗಳ ರಾಜಕೀಯ ಜೀವನದಲ್ಲಿ ಅಜಾತಶತ್ರುವಾಗಿ ಬದುಕಿ ಬಾಳಿದ ಪಾಟೀಲರ ಆತ್ಮಕ್ಕೆ ಶಾಂತಿ ಸಿಗಲಿ. ಅವರ ಕುಟುಂಬದ ಹಾಗೂ ಅಭಿಮಾನಗಳ ದುಃಖದಲ್ಲಿ ನಾನೂ ಭಾಗಿ ಎಂದು ಸಂತಾಪ ಸೂಚಿಸಿ ಖರ್ಗೆ ಟ್ವೀಟ್ ಮಾಡಿದ್ದಾರೆ.