Advertisement

HMPV ಸೋಂಕಿಗೆ ಆತಂಕ ಬೇಡ: ಐಸಿಎಂಆರ್‌

02:02 AM Jan 07, 2025 | Team Udayavani |

ಹೊಸದಿಲ್ಲಿ: ಜಗತ್ತಿನಲ್ಲಿ ಆತಂಕ್ಕೆ ಕಾರಣವಾಗಿರುವ ಹ್ಯೂಮನ್‌ ಮೆಟಾನ್ಯೂಮೋ ವೈರಸ್‌ (ಎಚ್‌ಎಂಪಿವಿ) ಈಗಾಗಲೇ ದೇಶದಲ್ಲಿ ಇದೆ. ಇದಕ್ಕೆ ಚಿಕಿತ್ಸೆ ನೀಡಲು ನಮ್ಮ ವೈದ್ಯರು ಸಂಪೂರ್ಣವಾಗಿ ಸಿದ್ಧರಾಗಿದ್ದಾರೆ. ಹೀಗಾಗಿ ಯಾವುದೇ ಆತಂಕ ಪಡುವ ಅಗತ್ಯವಿಲ್ಲ ಎಂದು ಭಾರತೀಯ ವೈದ್ಯಕೀಯ ಸಂಶೋಧನ ಸಂಸ್ಥೆ (ಐಸಿಎಂಆರ್‌) ಹೇಳಿದೆ.

Advertisement

ಬೆಂಗಳೂರಿನಲ್ಲಿ 2 ಪ್ರಕರಣ ಸೇರಿದಂತೆ ದೇಶದಲ್ಲಿ 5 ಎಚ್‌ಎಂಪಿವಿ ಸೋಂಕು ಕಾಣಿಸಿಕೊಂಡ ಬೆನ್ನಲ್ಲೇ ಐಸಿ­ಎಂಆರ್‌ ಈ ಹೇಳಿಕೆ ಬಿಡುಗಡೆ ಮಾಡಿದೆ. ಸೋಂಕಿಗೆ ತುತ್ತಾಗಿರುವವರೂ ಈಗ ಚೇತರಿಸಿಕೊಳ್ಳುತ್ತಿದ್ದಾರೆ. ಅಲ್ಲದೇ ಸೋಂಕಿಗೆ ತುತ್ತಾಗಿರುವವರು ಇತ್ತೀಚೆಗೆ ವಿದೇಶ ಪ್ರವಾಸ ಕೈಗೊಂಡಿಲ್ಲ ಎಂದು ಹೇಳಿದೆ.

“ಭಾರತವೂ ಸೇರಿದಂತೆ ವಿಶ್ವಾದ್ಯಂತ ಎಚ್‌ಎಂಪಿವಿ ಸೋಂಕು ಇದೆ. ಆದರೆ ಭಾರತದಲ್ಲಿ ಅತ್ಯಂತ ವೇಗವಾಗಿ ಸೋಂಕು ಹರಡುತ್ತಿರುವುದು ಕಂಡುಬಂದಿಲ್ಲ. ಕೇಂದ್ರ ಆರೋಗ್ಯ ಸಚಿವಾಲಯ ಭಾರತದಲ್ಲಿನ ಪರಿಸ್ಥಿತಿಯನ್ನು ಗಂಭೀರವಾಗಿ ಪರಿಗಣಿಸಿದ್ದು, ಸೂಕ್ತ ಕ್ರಮಗಳನ್ನು ಈಗಾಗಲೇ ಕೈಗೊಂಡಿದೆ’ ಎಂದು ಹೇಳಿದೆ.

ಆತಂಕ ಬೇಡ: ಎಚ್‌ಎಂಪಿವಿ ಸೋಂಕು ಜಾಗತಿಕವಾಗಿ ಅತ್ಯಂತ ವೇಗವಾಗಿ ಹರಡುತ್ತಿದೆ ಎಂಬ ವರದಿಗಳು ಭಾರಿ ಆತಂಕ ಮೂಡಿಸುತ್ತಿದೆ. ಆದರೆ ಜನ ಆತಂಕ­ಕ್ಕೀ­ಡಾಗುವುದು ಬೇಡ. ಇದು ಹೊಸ ಸಾಂಕ್ರಾಮಿಕವಲ್ಲ ಎಂದು ಐಸಿಎಂಆರ್‌ ಹೇಳಿದೆ.

ಕೋವಿಡ್‌, ಎಚ್‌ಎಂಪಿವಿ ನಡುವಿನ ವ್ಯತ್ಯಾಸವೇನು?
ಎಚ್‌ಎಂಪಿವಿ ಮತ್ತು ಕೋವಿಡ್‌ ಎರಡೂ ರೋಗ­ಗಳು ಸಹ ಉಸಿರಾಟಕ್ಕೆ ಸಂಬಂಧಿಸಿದ ರೋಗ­ವಾಗಿವೆ. 2 ಸೋಂಕುಗಳು ಕೆಮ್ಮು, ಜ್ವರ ಮತ್ತು ಉಸಿರಾಟದ ಸಮ­ಸ್ಯೆಗಳನ್ನು ತಂದೊಡ್ಡುತ್ತದೆ. ಉಸಿರಾಟದ ತೊಂದರೆಗಳು ಸೌಮ್ಯ ಸ್ವಭಾವದಿಂದ ತೀವ್ರವಾಗಿರಬಹುದು. ಕೋವಿಡ್‌ ಸೋಂಕಿಗೆ ತುತ್ತಾದರೆ ರುಚಿ ಮತ್ತು ವಾಸನೆ ಗುರುತಿಸುವಿಕೆ ನಷ್ಟವಾಗಬಹುದು. ಅಲ್ಲದೆ ರಕ್ತ ಹೆಪ್ಪುಗಟ್ಟುವಿಕೆ ಮತ್ತು ಬಹುಅಂಗಾಂಗ ವೈಫ‌ಲ್ಯಕ್ಕೆ ತುತ್ತಾಗಬಹುದು. ಕೋವಿಡ್‌ ಸೋಂಕು ಹೊಸದಾಗಿ ಕಾಣಿಸಿಕೊಂಡ ಕಾರಣ ಜನ ಬಹುಬೇಗ ಸೋಂಕಿಗೆ ತುತ್ತಾದರು. ಆದರೆ ಎಚ್‌ಎಂಪಿವಿ 2001ರಲ್ಲೇ ಕಾಣಿಸಿಕೊಂಡಿರುವುದರಿಂದ ಜನ ಸಾಕಷ್ಟು ರೋಗ ನಿರೋಧಕ ಶಕ್ತಿ ಬೆಳೆಸಿಕೊಂಡಿದ್ದಾರೆ.

Advertisement

ಸೋಂಕಿನಿಂದ ರಕ್ಷಣೆ ಹೇಗೆ?
ಸೀನುವಾಗ ಅಥವಾ ಕೆಮ್ಮುವಾಗ ಮೂಗು ಬಾಯಿಗಳನ್ನು ಬಟ್ಟೆಯ ಸಹಾಯದಿಂದ ಮುಚ್ಚಿಕೊಳ್ಳಬೇಕು. ಆಗಾಗ ಕೈ ತೊಳೆದು ಕೊಳ್ಳಬೇಕು. ಸೋಂಕಿಗೆ ತುತ್ತಾಗಿರುವವ ರಿಂದ ಅಂತರ ಕಾಯ್ದುಕೊಳ್ಳಬೇಕು. ಅತೀಹೆಚ್ಚು ನೀರು ಕುಡಿಯಬೇಕು.

ಬೆಂಗಳೂರಿನ ಪ್ರಕರಣಕ್ಕೂ ಚೀನ ಸೋಂಕಿಗೂ ಸಂಬಂಧವಿಲ್ಲ: ಕೇಂದ್ರ
ಹೊಸದಿಲ್ಲಿ: ಚೀನದಲ್ಲಿ ಹಬ್ಬುತ್ತಿರುವ ಎಚ್‌ಎಂಪಿವಿ(ಹ್ಯೂಮನ್‌ ಮೆಟಾ ನ್ಯೂಮೋ ವೈರಸ್‌) ಸೋಂಕಿನ 3 ಪ್ರಕರಣಗಳು ಭಾರತದಲ್ಲಿ ಪತ್ತೆಯಾಗುತ್ತಿದ್ದಂತೆಯೇ, ಈ ಕುರಿತು ಪ್ರತಿಕ್ರಿಯಿಸಿರುವ ಕೇಂದ್ರ ಆರೋಗ್ಯ ಸಚಿವಾಲಯ, “ಬೆಂಗಳೂರಿನಲ್ಲಿ ಕಂಡುಬಂದಿರುವ ಸೋಂಕಿಗೂ ಚೀನದಲ್ಲಿ ವ್ಯಾಪಿಸುತ್ತಿರುವ ಸೋಂಕಿಗೂ ಸಂಬಂಧವಿಲ್ಲ’ ಎಂದಿದೆ. “ಎಚ್‌ಎಂಪಿವಿ ಸೋಂಕು ಭಾರತ ಸೇರಿದಂತೆ ಹಲವು ದೇಶಗಳಲ್ಲಿ ಹಬ್ಬುತ್ತಿದೆ. ಭಾರತದಲ್ಲಿ ಸೋಂಕು ಕಂಡುಬಂದಿರುವ 3 ಮಕ್ಕಳಾಗಲೀ, ಅವರ ಹೆತ್ತವರಾಗಲೀ ಅಂತಾರಾಷ್ಟ್ರೀಯ ಪ್ರಯಾಣ ಮಾಡಿದವರಲ್ಲ. ಹೀಗಾಗಿ ಈ ಸೋಂಕಿಗೂ ಚೀನದಲ್ಲಿನ ವೈರಸ್‌ಗೆ ಸಂಬಂಧವಿಲ್ಲ. ಆದರೂ, ನಾವು ಪರಿಸ್ಥಿತಿ ಬಗ್ಗೆ ನಿಗಾ ಇಟ್ಟಿದ್ದೇವೆ’ ಎಂದೂ ಸಚಿವಾಲಯ ತಿಳಿಸಿದೆ.

ದೇಶದಲ್ಲಿ ಒಂದೇ ದಿನ 5 ಎಚ್‌ಎಂಪಿವಿ ಕೇಸು ದೃಢ
ದೇಶದಲ್ಲಿ ಸೋಮವಾರ ಒಂದೇ ದಿನ ಹ್ಯೂಮನ್‌ ಮೆಟಾ ನ್ಯೂಮೋ ವೈರಸ್‌ (ಎಚ್‌ಎಂಪಿವಿ) ಪ್ರಕರಣಗಳು ದೃಢಪಟ್ಟಿವೆ. ಕರ್ನಾಟಕದ ಬೆಂಗಳೂರಿನಲ್ಲಿ 3 ತಿಂಗಳ ಮಗು ಹಾಗೂ 8 ತಿಂಗಳ ಮಗುವಿನಲ್ಲಿ, ಗುಜರಾತ್‌ನ ಅಹ್ಮದಾಬಾದ್‌ನಲ್ಲಿ ದಾಖಲಾಗಿದ್ದ ರಾಜಸ್ಥಾನ ಮೂಲದ ಮಗು 2ತಿಂಗಳ ಹಸುಗೂಸು, ತಮಿಳುನಾಡಿನ ಚೆನ್ನೈಯಲ್ಲಿ ಇಬ್ಬರು ಮಕ್ಕಳಿಗೆ ಪತ್ತೆಯಾಗಿದೆ ಎಂದು ರಾಜ್ಯ ಆರೋಗ್ಯ ಇಲಾಖೆ ತಿಳಿಸಿದೆ. ಹೊಸ ಸೋಂಕಿನ ಆತಂಕದ ಹಿನ್ನೆಲೆಯಲ್ಲಿ ಮಹಾರಾಷ್ಟ್ರ, ಪಶ್ಚಿಮ ಬಂಗಾಲ, ದಿಲ್ಲಿ ರಾಜ್ಯಗಳಲ್ಲಿ ಆರೋಗ್ಯ ಪಾಲನೆಯ ಸೂಚನೆಗಳನ್ನು ಹೊರಡಿಸಲಾಗಿದೆ. ಯಾವುದೇ ಕಾರಣಕ್ಕೂ ಆತಂಕಕ್ಕೆ ಒಳಗಾಗುವುದು ಬೇಡ ಎಂದು ಜನರಿಗೆ ಮನವಿ ಮಾಡಿಕೊಂಡಿವೆ.

Advertisement

Udayavani is now on Telegram. Click here to join our channel and stay updated with the latest news.

Next