ಕೆಂಗೇರಿ: ಯಶವಂತಪುರ ಕ್ಷೇತ್ರದ ಕೆಂಗೇರಿ ವಾರ್ಡ್‌ನ ಬಂಡೇಮಠ ಕರ್ನಾಟಕ ಗೃಹ ಮಂಡಳಿ(ಕೆಎಚ್‌ಬಿ) ಬಡಾವಣೆ ಅವ್ಯವಸ್ಥೆಯ ಅಗರವಾಗಿದ್ದು,ನಿರ್ಮಾಣವಾಗಿ ಒಂದೂವರೆ ದಶಕ ಕಳೆದರೂ ಸರಿಯಾಗಿ ಅಭಿವೃದ್ಧಿಯಾಗಿಲ್ಲ, ರೆವಿನ್ಯೂ ಬಡಾವಣೆಗಿಂತ ಶೋಚನೀಯ ಅವಸ್ಥೆಯಲ್ಲಿ ಇಲ್ಲಿನ ನಿವಾಸಿಗಳು ನಿತ್ಯ ಅನುಭವಿಸುವಂತಾಗಿದೆ.
ನೀರಿನ ಕೊಳವೆ ಮತ್ತು ಒಳಚರಂಡಿಗಾಗಿ ಗುಂಡಿ ಅಗೆದು ರಸ್ತೆಗಳು ಓಡಾಡಲು ಆಗದ ಸ್ಥಿತಿ ನಿರ್ಮಾಣವಾಗಿದೆ. ಬಡಾವಣೆಯ ನಿವಾಸಿಗಳು
ಹೋರಾಟದ ನಡೆಸಿದ ತರುವಾಯ ಡಾಂಬರು ಹಾಕಲಾಯಿತಾದರೂ ಕಳಪೆ ಕಾಮಗಾರಿಯಿಂದ ಒಂದೇ ತಿಂಗಳಲ್ಲಿ ರಸ್ತೆಯೆಲ್ಲಾಕಿತ್ತು ಬಂದು ಯತಾಸ್ಥಿತೆ ತಲುಪಿದೆ.
ಇದನ್ನೂ ಓದಿ:ಒನ್ ಪ್ಲಸ್ ನಾರ್ಡ್ ಸಿಇ 5ಜಿ: ಯೂತ್‍ಫುಲ್ ಫೋನ್!
ಈ ಬಗ್ಗೆ ಹಲವು ಬಾರಿ ಕೆಎಚ್‌ಬಿಗೆ ದೂರು ನೀಡಿದರೂ ಯಾವ ಆಧಿಕಾರಿಯೂ ಇದರ ಬಗ್ಗೆ ಗಮನ ಹರಿಸಿಲ್ಲ ಎಂದು ಬಡಾವಣೆಯ ನಿವಾಸಿ ಸತೀಶ್ ತಮ್ಮ ಆಕ್ರೋಶವನ್ನು ಹೊರಹಾಕಿದರು. ಜುಲೈ 11 ರಂದು ಬಡಾವಣೆಯ ನಿವಾಸಿಗಳು ಪ್ರತಿಭಟನೆ ಮಾಡಿ ಮುಖ್ಯಮಂತ್ರಿಗಳಿಗೆ, ಕೆಎಚ್‌ಬಿ ಆಯುಕ್ತರಿಗೆ, ಮುಖ್ಯ ಎಂಜಿನಿಯರ್‌ಗೆ ಹಾಗೂ ಸ್ಥಳೀಯ ಯೋಜನೆ ಕಚೇರಿಗೆ ಲಿಖೀತವಾಗಿ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ,ಕೆಎಚ್ ಬಿಯ ಅಧಿಕಾರಿಗಳಿಗೆ ವಾಸ್ತವತೆಯ ಅರಿವೇ ಇಲ್ಲದಂತಾಗಿದೆ.ಸಂವೇದನೆಯನ್ನೇ ಕಳೆದುಕೊಂಡು ಪೂರ್ಣ ನಿಷ್ಕ್ರಿಯವಾಗಿದ್ದಾರೆ ಎಂದು ಬಡಾವಣೆಯ ನಿವಾಸಿ ಶಿವಕುಮಾರ್ ಬೇಸರ ವ್ಯಕ್ತಪಡಿಸಿದರು.
15 ವರ್ಷವಾದರೂ ಬಡಾವಣೆಯಲ್ಲಿ ಒಂದೇ ಒಂದು ಉದ್ಯಾನವನವನ್ನೂ ಅಭಿವೃದ್ಧಿ ಪಡಿಸಿಲ್ಲ,ರಸ್ತೆಗಳ ಕಾಮಗಾರಿ ಕಳಪೆ ಗುಣಮಟ್ಟದಿಂದ ಕೂಡಿದೆ. ಆದರೂ 2.75ಕೋಟಿ ರಸ್ತೆ ಡಾಂಬರೀಕರಣಕ್ಕೆ ವೆಚ್ಚವಾಗಿದೆ ಎಂದು ಕೆಎಚ್‌ಬಿ ಹೇಳುತ್ತದೆ. ಈ ಕಾಮಗಾರಿಗಳ ಬಗ್ಗೆ ಸಮಗ್ರ ತನಿಖೆ ಆಗಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ. ಇಲ್ಲಿನ ಉದ್ಯಾನವನಗಳಲ್ಲಿ ಮತ್ತು ರಸ್ತೆಯ ಎರಡು ಬದಿಯಲ್ಲಿ ಕಾಡು ಗಿಡಗಂಟಿ ಬೆಳೆದು ಹಾವುಗಳ ವಾಸಸ್ಥಾನವಾಗಿದೆ. ಹಲವುಕಂಬಗಳಲ್ಲಿ ಬೀದಿದೀಪಗಳೂ ಇಲ್ಲ ಇದರಿಂದ ಕಳ್ಳಕಾಕರಿಗೆ ಅನುಕೂಲವಾಗಿದೆ. ಒಟ್ಟಾರೆ ಕೆಎಚ್‌ಬಿ ಬಂಡೇಮಠ ಬಡಾವಣೆ ಅವ್ಯವಸ್ಥೆಯ ಅಗರವಾಗಿದ್ದು, ಸ್ಥಳೀಯ ಶಾಸಕರು, ಸಚಿವರೂ ಆದ ಎಸ್.ಟಿ.ಸೋಮಶೇಖರ್ ಅವರು ಇತ್ತ ಕಡೆ ಗಮನ ಹರಿಸಬೇಕು ಎಂದು ಮನವಿ ಮಾಡಿದ್ದಾರೆ.
-ರವಿ ವಿ.ಆರ್.ಕೆಂಗೇರಿ