ಅಯೋಧ್ಯೆ: ದೇಶದಲ್ಲಿ ರಾಮ ರಾಜ್ಯ ಉದಯವಾಗುತ್ತಿದೆ. ಎಲ್ಲಾ ವಿವಾದಗಳನ್ನು ದೂರವಿಟ್ಟು, ಸಣ್ಣ-ಪುಟ್ಟ ವಿಚಾರಗಳಿಗೆ ನಮ್ಮೊಳಗೆ ಜಗಳವಾಡುವುದನ್ನು ಬಿಡಬೇಕು. ಅಹಂಕಾರ ದೂರವಿಟ್ಟು, ಒಗ್ಗಟ್ಟಾಗಿ ಇರಬೇಕು ಎಂದು ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದರು.
ಅಯೋಧ್ಯೆಯಲ್ಲಿ ರಾಮ ಮಂದಿರ ಲೋಕಾರ್ಪಣೆ ಸಮಾರಂಭದಲ್ಲಿ ಮಾತನಾಡಿದ ಅವರು, “ಪ್ರಧಾನಿ ಮೋದಿ ರಾಮಲಲ್ಲಾ ಪ್ರಾಣಪ್ರತಿಷ್ಠಾಪನೆಗಾಗಿ ತಪಸ್ಸು ಮಾಡಿದ್ದಾರೆ. ಈಗ ನಾವೆಲ್ಲರೂ ತಪಸ್ಸು ಆಚರಿಸಬೇಕಿದೆ. ಅನೇಕ ಜನರ ತಪಸ್ಸು ಫಲವಾಗಿ 500 ವರ್ಷಗಳ ನಂತರ ರಾಮಲಲ್ಲಾ ತನ್ನ ಮನೆಗೆ ಮರಳಿದ್ದಾನೆ. ಅವರ ಶ್ರಮ ಮತ್ತು ತ್ಯಾಗವನ್ನು ನಾನು ಗೌರವಿಸುತ್ತೇನೆ’ ಎಂದರು.
“ರಾಮಲಲ್ಲಾ ಪ್ರಾಣಪ್ರತಿಷ್ಠಾಪನೆ ಮೂಲಕ ಭಾರತದ ಸ್ವಾಭಿಮಾನ ಮರಳಿದೆ. ಇಂದಿನ ಕಾರ್ಯಕ್ರಮವು ನವ ಭಾರತದ ಸಂಕೇತವಾಗಿದೆ. ದೇಶವು ಎದ್ದುನಿಂತು ಇಡೀ ವಿಶ್ವಕ್ಕೆ ಸಹಾಯ ಮಾಡಲಿದೆ’ ಎಂದು ಹೇಳಿದರು.
“ಶ್ರೀರಾಮ ಏಕೆ ಅಯೋಧ್ಯೆ ಬಿಟ್ಟು ಹೋದ? ಏಕೆಂದರೆ ಇಲ್ಲಿ ವಿವಾದಗಳು ಇದ್ದವು. ಈಗ ನಾವೆಲ್ಲರೂ ಒಂದಾಗಬೇಕಿದೆ. ಎಲ್ಲೆಲ್ಲೂ ರಾಮನಿದ್ದಾನೆ ಎಂದು ತಿಳಿದು, ನಮ್ಮಲ್ಲಿ ಹೊಂದಾಣಿಕೆ ಮೂಡಬೇಕು. ನಾವು ಸಂಪಾದಿಸಿದ ಹಣದ ಕೆಲವು ಪಾಲನ್ನು ದಾನಕ್ಕೆ ಮೀಸಲಿಡಬೇಕು. ದೇಶವನ್ನು ವಿಶ್ವ ಗುರುವನ್ನಾಗಿಸಲು ಒಟ್ಟಾಗಿ ಕೆಲಸ ಮಾಡಬೇಕು’ ಎಂದು ಭಾಗವತ್ ಪ್ರತಿಪಾದಿಸಿದರು.