ಹುಣಸೂರು: ಎಚ್.ಡಿ.ಕೋಟೆಯ ಕಾನಿಷ್ಕ ಚಾರಿಟಬಲ್ ಟ್ರಸ್ಟ್‌ನಿಂದ ತಾಲೂಕಿನ ಹಗರನಹಳ್ಳಿ ಸರಕಾರಿ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಶಿಕ್ಷಣ, ಆರೋಗ್ಯ, ಪರಿಸರ ಕಾಪಾಡುವ, ಪರೀಕ್ಷೆ ಎದುರಿಸುವ ಹಾಗೂ ಕಾಡ್ಗಿಚ್ಚು ತಡೆಯುವ ಕುರಿತು ಕಾರ್ಯಾಗಾರ ನಡೆಸಲಾಯತು. ಅಲ್ಲದೇ ಟ್ರಸ್ಟ್‌ವತಿಯಿಂದ ವಿದ್ಯಾರ್ಥಿಗಳಿಗೆ ಲೇಖನ ಸಾಮಗ್ರಿ ವಿತರಿಸಲಾಯಿತು.
ಕಾರ್ಯಾಗಾರ ಉದ್ಘಾಟಿಸಿದ ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಪಿ.ನಾಗರಾಜು ಶಿಕ್ಷಣ, ಪರಿಸರ, ಆರೋಗ್ಯದ ಧ್ಯೇಯವನ್ನಿಟ್ಟುಕೊಂಡಿರುವ ಟ್ರಸ್ಟ್, ಸರಕಾರಿ ಶಾಲೆಗಳ ವಿದ್ಯಾರ್ಥಿಗಳಿಗೆ ಕಾರ್ಯಾಗಾರ ನಡೆಸಿ ಜ್ಞಾನ ಹೆಚ್ಚಿಸುತ್ತಿರುವುದು ಶ್ಲಾಘನೀಯ ಎಂದರು.
ಬಿಆರ್‌ಸಿ ಸಂತೋಷ್‌ಕುಮಾರ್ ಮಾತನಾಡಿ, ಎಲ್ಲಾ ಸರಕಾರಿ ಶಾಲೆಗಳಲ್ಲೂ ಇಂತಹ ಕಾರ್ಯಾಗಾರ ನಡೆಸಬೇಕು ಎಂದು ಕೋರಿದರು. ಟ್ರಸ್ಟ್ ಅಧ್ಯಕ್ಷ ಮಹಿಮಾಂಜನ್ ಸಿಂಗ್ ಮಾತನಾಡಿ, ಟ್ರಸ್ಟ್ ಮೂಲಕ ಶಾಲಾ ಮಕ್ಕಳ ಶ್ರೇಯೋಭಿವೃದ್ಧಿಗೆ ಕಾರ್ಯಕ್ರಮ ಹಾಗೂ ನೆರವು ನೀಡಲಾಗುತ್ತಿದ್ದು, ಹಂತ ಹಂತವಾಗಿ ವಿವಿಧ ಶಾಲೆಗಳಲ್ಲಿಯೂ ಇದೇ ರೀತಿ ಕಾರ್ಯಕ್ರಮ ರೂಪಿಸಲಾಗುವುದು ಎಂದರು.
ಪರೀಕ್ಷಾ ಭಯ ನಿವಾರಣೆ ಕುರಿತು ಟ್ರಸ್ಟ್ ನಿರ್ದೇಶಕ ಎಂ.ಮಹೇಶ್ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು. ಆರೋಗ್ಯ ಇಲಾಖೆಯ ಎಲ್.ದಿನಕರ್, ಅಪಘಾತಗಳು ಮತ್ತು ಚಿಕಿತ್ಸೆ, ಹಾಗೂ ಮಾರಣಾಂತಿಕ ಕಾಯಿಲೆಗಳು ಮತ್ತು ಮುಂಜಾಗ್ರತಾ ಕ್ರಮಗಳ ಬಗ್ಗೆ ವಿದ್ಯಾರ್ಥಿಗಳಿಗೆ ಪ್ರಾತ್ಯಕ್ಷಿಕೆಗಳ ಮೂಲಕ ಪ್ರಥಮ ಚಿಕಿತ್ಸಾ ವಿಧಾನ ತಿಳಿಸಿಕೊಟ್ಟರು.
ಪರಿಸರ ಸಂರಕ್ಷಣೆ ಕುರಿತು ವಲಯ ಅರಣ್ಯಾಧಿಕಾರಿ ಮಧುದೇವಯ್ಯ, ಪರಿಸರ ಸಂರಕ್ಷಣೆಯ ಮಹತ್ವ ಹಾಗೂ ಕಾಳ್ಗಿಚ್ಚು ಸಂಭವಿಸುವ ಹಾಗೂ ತಡೆಗಟ್ಟಬಹುದಾದ ಕ್ರಮಗಳು, ಅರಣ್ಯ ಇಲಾಖೆಯಲ್ಲಿನ ವಿವಿಧ ಹಂತಗಳ ಹುದ್ದೆಗಳ ಬಗ್ಗೆ ಸಮಗ್ರ ಮಾಹಿತಿ ನೀಡಿದರು.
ಶಾಲೆಗೆ ಕೊಡುಗೆ: ಟ್ರಸ್ಟ್ ವತಿಯಿಂದ ಶಾಲೆಗೆ ಗ್ರೀನ್‌ಬೋರ್ಡ್, ಗ್ರಂಥಾಲಯಕ್ಕೆ ಉಪಯುಕ್ತ ಪುಸ್ತಕಗಳು, ಸಂವಿಧಾನ ಪೂರ್ವ ಪೀಠಿಕೆಯ ಫೋಟೋ, ನಿಘಂಟು, ಪ್ರಥಮ ಚಿಕಿತ್ಸಾ ಕಿಟ್ ಹಾಗೂ 105 ವಿದ್ಯಾರ್ಥಿಗಳಿಗೂ ಪರೀಕ್ಷಾ ಪ್ಯಾಡ್, ಪೆನ್, ಜಾಮಿಟ್ರಿ, ನೋಟ್ ಪುಸ್ತಕ ವಿತರಿಸಲಾಯಿತು. ಶಾಲಾ ಮಕ್ಕಳಿಗೆ ರಸಪ್ರಶ್ನೆ ಕಾರ್ಯಕ್ರಮ ಏರ್ಪಡಿಸಿ ವಿಜೇತರಿಗೆ ಬಹುಮಾನ ನೀಡಲಾಯಿತು.
ಕಾರ್ಯಾಗಾರದಲ್ಲಿ ಟ್ರಸ್ಟ್ ಗೌರವಾಧ್ಯಕ್ಷ ದೇವರಾಜು, ಉಪಾಧ್ಯಕ್ಷ ರಮೇಶ್, ಕಾರ್ಯದರ್ಶಿ ಸೋಮೇಶ್, ಲೆಕ್ಕಪರಿಶೋಧಕ ಸಿ.ಆರ್.ಸಂತೋಷ್‌ಕುಮಾರ್, ಖಜಾಂಚಿ ಪ್ರಕಾಶ್, ನಿರ್ದೇಶಕರಾದ ಭೋಗನಂಜಯ್ಯ, ಕಾಂತರಾಜು, ಪ್ರಸನ್ನ, ಶಿವಕುಮಾರ್, ರಾಜೇಶ್, ಕಲ್ಯಾಣ್ ಹಾಗೂ ನವೀನ್‌ಕುಮಾರ್, ಶಶಿಕುಮಾರ್, ಪ್ರಪುಲ್ಲ, ಮುಖ್ಯಶಿಕ್ಷಕ ಪುಟ್ಟಬಸವೇಗೌಡ ಇತರರಿದ್ದರು.