Advertisement

ಕನ್ನಡ ಬಳಸದ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮಕ್ಕೆ ಮುಂದಾದ ಪ್ರಾಧಿಕಾರ

09:05 AM Jan 18, 2021 | Team Udayavani |

ಬೆಂಗಳೂರು: ಬ್ಯಾಂಕ್‌ಗಳಲ್ಲಿ ಕನ್ನಡ ಬಳಕೆ ಕಡೆಗಣನೆ ಇದೀಗ ಆಂದೋಲನ ಸ್ವರೂಪ ಪಡೆ ದುಕೊಳ್ಳುತ್ತಿದೆ. ಆದರೆ, ಸರ್ಕಾರಿ ಅಧಿಕಾರಿಗಳೇ ಆಂಗ್ಲ ಭಾಷೆಯಲ್ಲಿ ಸುತ್ತೋಲೆ ಹಾಗೂ ಆದೇಶಗಳನ್ನು ಹೊರಡಿಸುತ್ತಿದ್ದು, ಅಂತಹ 114 ಜನ ಪ್ರಮುಖ ಅಧಿಕಾರಿಗಳ ಮೇಲೆ ಶಿಸ್ತು ಕ್ರಮಕ್ಕೆ ಕನ್ನಡ ಅಭಿವೃದ್ಧಿ ಪ್ರಾಧಿಕಾರವು ಕನ್ನಡ ಅನುಷ್ಠಾನ ಸಮಿತಿ ಹಾಗೂ ಸರ್ಕಾರಕ್ಕೆ ಶಿಫಾರಸು ಮಾಡಿದೆ.

Advertisement

ಕನ್ನಡ ಭಾಷೆಯನ್ನು ರಾಜ್ಯದ ಆಡಳಿತದ ಎಲ್ಲ ಮಟ್ಟದಲ್ಲಿಯೂ ಅನುಷ್ಠಾನ ಮಾಡಬೇಕು. ರಾಜ್ಯ ಸರ್ಕಾರ ಮತ್ತು ಸ್ಥಳೀಯ ಸಂಸ್ಥೆಗಳು ಅಧಿಕಾರಿಗಳು ಆಡಳಿತದಲ್ಲಿ ಕನ್ನಡ ಭಾಷೆ ಬಳಕೆ ಮತ್ತು ಅನುಷ್ಠಾನದ ಲೋಪವೆಸಗಿದರೆ, “ಕರ್ತವ್ಯ ಲೋಪ’ ಎಂದು ಪರಿಗಣಿಸಲು ಅವಕಾಶ ಇದೆ. ಸಂದರ್ಭದಲ್ಲಿ ಕನ್ನಡ ಭಾಷೆ ಅನುಷ್ಠಾನಕ್ಕೆ ಅಡೆತಡೆ ಉಂಟು ಮಾಡಿದರೆ, ಆಯಾ ಇಲಾಖೆಯ ಮುಖ್ಯಸ್ಥರನ್ನೇ ಹೊಣೆ ಮಾಡಲಾಗುವುದು ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರ ಮಂಡಳಿ ಪುನರುಚ್ಚರಿಸಿದೆ.

ಈ ಸಂಬಂಧ “ಉದಯವಾಣಿ’ಯೊಂದಿಗೆ ಮಾತನಾಡಿದ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಟಿ.ಎಸ್‌. ನಾಗಾಭರಣ, ಕನ್ನಡ ಬಳಕೆ ಮಾಡದೆ ನಿರ್ಲಕ್ಷ್ಯ ವಹಿಸಿರುವ ಅಧಿಕಾರಿಗಳ ಮೇಲೆ ಶಿಸ್ತು ಕ್ರಮಕ್ಕೆ ಶಿಫಾರಸು ಮಾಡಲಾಗಿದೆ. ಇವರ ಮೇಲೆ ನಿರ್ದಾಕ್ಷಿಣ್ಯ ಕ್ರಮಕೈಗೊಳ್ಳಬೇಕು. ಅವರ ವೃತ್ತಿ ಪ್ರಮಾಣ ಪತ್ರಗಳಲ್ಲಿ ಈ ತಪ್ಪನ್ನು ಉಲ್ಲೇಖ ಮಾಡಬೇಕು ಎಂದು ಆಗ್ರಹಿಸಿದರು.

ಎರಡು ವರ್ಷದಿದ ಸಭೆ ನಡೆಸಿಲ್ಲ! : ರಾಜ್ಯದಲ್ಲಿ ಯಾವುದೇ ಅಧಿಕಾರಿ ಕನ್ನಡ ಬಳಕೆಗೆ ಆದ್ಯತೆ ನೀಡದೆ ನಿರ್ಲಕ್ಷ್ಯ ವಹಿಸಿದರೆ ಅಂತವರ ಮೇಲೆ ಸಚಿವಾಲಯ ಮಟ್ಟದಲ್ಲಿರುವ ಕನ್ನಡ ಅನುಷ್ಠಾನ ಸಮಿತಿ ಕ್ರಮ ಕೈಗೊಳ್ಳಬೇಕು. ಕನ್ನಡ ಅಭಿವೃದ್ಧಿ ಪ್ರಾಧಿಕಾರ ಸಹ ಇದೇ ಸಮಿತಿಗೆ ಶಿಸ್ತು ಕ್ರಮಕ್ಕೆ ಶಿಫಾರಸು ಮಾಡುತ್ತದೆ. ಆದರೆ, ಕನ್ನಡ ಅನುಷ್ಠಾನ ಸಮಿತಿಯೂ ಸಕ್ರಿಯವಾಗಿ ಕೆಲಸ ಮಾಡದೆ ಇರುವುದು ಇದೀಗ ಬೆಳಕಿಗೆ ಬಂದಿದೆ. ಈ ಸಮಿತಿ ಕೊನೆಯ ಸಭೆ ನಡೆಸಿರುವುದು 2018ರಲ್ಲಿ ಇದಾದ ಮೇಲೆ ಸಭೆಯನ್ನೇ ನಡೆಸಿಲ್ಲ ಎಂದು ಮೂಲಗಳು ತಿಳಿಸಿವೆ. “ಕನ್ನಡ ಅನುಷ್ಠಾನ ಸಮಿತಿ ಸಭೆ ನಡೆಸುವಂತೆ ಸರ್ಕಾರಕ್ಕೆ ಕೋರಲಾಗಿದೆ. ಸಭೆ ಕರೆದರೆ ಎಲ್ಲ ವಿಷಯಗಳನ್ನು ಸಮಿತಿಯಲ್ಲಿ ವಿವರಿಸಲಾಗುವುದು’ ಎಂದು ಟಿ.ಎಸ್‌. ನಾಗಾಭರಣ ಹೇಳಿದರು.

114 ಜನರಿಗೆ ನೋಟಿಸ್‌ ಜಾರಿ

Advertisement

ಸರ್ಕಾರದ ಮಟ್ಟದಿಂದ ಸ್ಥಳೀಯ ಮಟ್ಟದ ಅಧಿಕಾರಿಗಳವರೆಗೆ ಆಡಳಿತದಲ್ಲಿ ಕನ್ನಡ ಬಳಸದೆ, ಆಂಗ್ಲ ಭಾಷೆಯಲ್ಲಿ ಆದೇಶ, ಸುತ್ತೋಲೆ ಹಾಗೂ ಮಾರ್ಗಸೂಚಿ ಸೇರಿ ಆಡಳಿತಾತ್ಮಕ ನಿರ್ಧಾರಗಳನ್ನು ತಿಳಿಸಲು ಆಂಗ್ಲ ಭಾಷೆ ಬಳಕೆ ಮಾಡಿದ ಆರೋಪದ ಮೇಲೆ 114 ಜನ ರಿಗೆ ನೋಟಿಸ್‌ ಜಾರಿ ಮಾಡಲಾಗಿದ್ದು, ಇವರಲ್ಲಿ ಕೆಲವರು ಕ್ಷಮಾಪಣ ಪತ್ರ ಸಲ್ಲಿಸಿರುವುದರಿಂದ ಕೆಲವು ನಿರ್ದಿಷ್ಟ ಪ್ರಕರಣಗಳನ್ನು ಪ್ರಾಧಿಕಾರ ಕೈಬಿಟ್ಟಿದೆ.

ಭಾಷಾ ನಿಯಮ ಉಲ್ಲಂಘನೆ ಮಾಡಿದ ಪ್ರಮುಖರು

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆಯುಕ್ತ, ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ಕಾರ್ಯದರ್ಶಿ, ಬಿಬಿಎಂಪಿ ಆಯುಕ್ತ, ದಕ್ಷಿಣ ಕನ್ನಡ ಜಿಲ್ಲಾಧಿಕಾರಿ, ಅಧೀನ ಕಾರ್ಯದರ್ಶಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ, ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ನಿರ್ದೇಶಕ, ಹಿಂದುಸ್ತಾನ್‌ ಏರೋನಾಟಿಕಲ್‌ಲಿ. ಜನರಲ್‌ ಮ್ಯಾನೇಜರ್‌, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಮೈಸೂರು ಹಾಗೂ ಭಾರತೀಯ ಭಾಷಾ ಸಂಸ್ಥಾನ (ಮೈಸೂರು) ನಿರ್ದೇಶಕರಿಗೆ ನೋಟಿಸ್‌ ನೀಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next