“ಅಟೆಂಪ್ಟ್ ಟು ಮರ್ಡರ್’ (ಎಟಿಎಂ) – ಹೀಗೊಂದು ಸಿನಿಮಾ ಕೆಲವು ದಿನಗಳಿಂದ ಸುದ್ದಿ ಮಾಡುತ್ತಲೇ ಇದೆ. ಈಗ ಆ ಚಿತ್ರ ಬಿಡುಗಡೆಯ ಹಂತಕ್ಕೆ ಬಂದಿದ್ದು, ಇಂದು ತೆರೆ ಕಾಣುತ್ತಿದೆ. ಈ ಚಿತ್ರವನ್ನು ನಾರಾಯಣ್ ನಿರ್ಮಿಸಿದ್ದಾರೆ. ಈಗ ಚಿತ್ರ ಮೂಡಿಬಂದಿರುವ ರೀತಿಯಿಂದ ಥ್ರಿಲ್ ಆಗಿರುವ ಅವರು ಮುಂದೆ ವರ್ಷಕ್ಕೊಂದು ಸಿನಿಮಾ ಮಾಡಲು ನಿರ್ಧರಿಸಿದ್ದಾರಂತೆ. ಜೊತೆಗೆ ನಿರ್ದೇಶಕ ಅಮರ್ ಜೊತೆಯೂ ಮುಂದೆ ಸಿನಿಮಾ ಮಾಡುವುದಾಗಿ ಹೇಳಿಕೊಂಡರು.
“ಈ ಹುಡುಗರು ಮಾಡಿದ ಕಿರುಚಿತ್ರವೊಂದನ್ನು ನೋಡಿದೆ. ತುಂಬಾ ಚೆನ್ನಾಗಿ ಮಾಡಿದ್ದರು. ಆಗಲೇ ನನಗೆ ಇವರಲ್ಲಿ ಪ್ರತಿಭೆ ಎಂದು ಗೊತ್ತಾಯಿತು. ಮುಂದೆ ಇವರ ಜೊತೆ ಸಿನಿಮಾ ಮಾಡಬೇಕೆಂದು ನಿರ್ಧರಿಸಿ, ಮಾತುಕತೆಯೂ ಆಯಿತು. ಸಿನಿಮಾ ಮಾಡಲು ನಿರ್ಧರಿಸಿದ ನಂತರ ನಾನು ನಿರ್ದೇಶಕರಿಗೆ ಸಂಪೂರ್ಣ ಸ್ವತಂತ್ರ ಕೊಟ್ಟಿದ್ದೆ. ಅದು ಕಲಾವಿದರ ಆಯ್ಕೆಯಿಂದ ಹಿಡಿದು ತಾಂತ್ರಿಕ ವರ್ಗದವರೆಗೂ. ಸಿನಿಮಾ ಎಂಬುದು ನಿರ್ದೇಶಕನ ಕಲ್ಪನೆ. ಅದರಂತೆ ನಿರ್ದೇಶಕ ಅಮರ್ ಕೂಡಾ ತುಂಬಾ ಚೆನ್ನಾಗಿ ಸಿನಿಮಾ ಮಾಡಿದ್ದಾರೆ. ಈ ಸಿನಿಮಾ ನೋಡಿದವರು ಮೆಚ್ಚಿಕೊಳ್ಳುತ್ತಾರೆಂಬ ವಿಶ್ವಾಸವಿದೆ’ ಎಂದು ಹೇಳಿಕೊಂಡರು ನಿರ್ಮಾಪಕ ನಾರಾಯಣ್.
ನಿರ್ದೇಶಕ ಅಮರ್ ಮೊದಲ ಸಿನಿಮಾಕ್ಕೆ ಬೆನ್ನೆಲುಬಾಗಿ ನಿಂತವರಿಗೆ ಥ್ಯಾಂಕ್ಸ್ ಹೇಳಲು ಸಾಕಷ್ಟು ಸಮಯ ತಗೊಂಡರು. ಜೊತೆಗೆ ಸಿನಿಮಾ ಬಗ್ಗೆಯೂ ಮಾತನಾಡಿದರು. “ಕೆಲವು ವರ್ಷಗಳ ಹಿಂದೆ ಬೆಂಗಳೂರಿನ ಎಟಿಎಂವೊಂದರಲ್ಲಿ ನಡೆದ ದರೋಡೆಯನ್ನಿಟ್ಟುಕೊಂಡು ಈ ಸಿನಿಮಾ ಮಾಡಿದ್ದೇನೆ. ದರೋಡೆಕೋರನನ್ನು ಒಬ್ಬ ಪೊಲೀಸ್ ಅಧಿಕಾರಿ ಹೇಗೆ ಹುಡುಕುತ್ತಾನೆ, ಆತನಿಗಿರುವ ಸವಾಲುಗಳೇನು ಎಂಬ ಅಂಶದೊಂದಿಗೆ ಚಿತ್ರ ಸಾಗುತ್ತದೆ. ಜೊತೆಗೆ ಇಲ್ಲೊಂದು ಲವ್‌ಟ್ರ್ಯಾಕ್ ಕೂಡಾ ಬರುತ್ತದೆ’ ಎಂದರು ಅಮರ್.
ಈ ಚಿತ್ರದಲ್ಲಿ ನಾಯಕನಿಗಿಂತ ಹೆಚ್ಚು ಸ್ಕೋಪ್ ಇರೋದು ವಿಲನ್‌ಗಂತೆ. ಅದನ್ನು ಸ್ವತಃ ನಿರ್ದೇಶಕರೇ ಹೇಳುತ್ತಾರೆ. “ಈ ಕಥೆ ಬರೆಯೋದಕ್ಕೆ ನನಗೆ ಸ್ಫೂತಿ ವಿಲನ್ ಪಾತ್ರ. ಆ ಪಾತ್ರವನ್ನು ಸೂರ್ಯ ಮಾಡಿದ್ದಾರೆ. ಈ ಪಾತ್ರಕ್ಕೆ ಉದ್ದ ಗಡ್ಗ ಬೇಕಿತ್ತು. ಅದೇ ಕಾರಣಕ್ಕೆ ಅವರಿಗೆ ಒಂದು ವರ್ಷ ದಾಡಿ ಬಿಡೋಕೆ ಹೇಳಿದೆ’ ಎಂದು ವಿಲನ್ ಪಾತ್ರದ ತಯಾರಿ ಬಗ್ಗೆ ಹೇಳುತ್ತಾರೆ ಅಮರ್.
ಸಾಮಾನ್ಯವಾಗಿ ಸಿನಿಮಾಗಳಲ್ಲಿ ನಾಯಕನಿಗೆ ಇಂಟ್ರೊಡಕ್ಷನ್ ಸಾಂಗ್ ಇರುತ್ತದೆ. ಆದರೆ, “ಎಟಿಎಂ’ ಚಿತ್ರದಲ್ಲಿ ವಿಲನ್‌ಗೆಂದೇ ಒಂದು ಹಾಡೂ ಇದೆಯಂತೆ. ಆ ಹಾಡನ್ನು ತುಂಬಾ ವಿಶೇಷವಾಗಿ ಚಿತ್ರೀಕರಿಸಲಾಗಿದೆಯಂತೆ. ಸೂರ್ಯ ಇಲ್ಲಿ ವಿಲನ್ ಆಗಿ ನಟಿಸಿದ್ದಾರೆ.
ಚಿತ್ರದಲ್ಲಿ ಹೇಮಲತಾ ಪತ್ರಕರ್ತೆಯಾಗಿ ನಟಿಸಿದ್ದಾರೆ. ಒಳ್ಳೆಯ ತಂಡ ಸಿಕ್ಕ ಖುಷಿ ಹಂಚಿಕೊಂಡರು. ನಿರ್ದೇಶಕರು ವಿಶ್ವಾಸ ತುಂಬಿ ನಟನೆ ತೆಗೆಸಿದ ಬಗ್ಗೆಯೂ ಹೇಳಿಕೊಂಡರು. ಚಿತ್ರದಲ್ಲಿ ನಟಿಸಿದ ಚಂದು, ಶೋಭಿತಾ, ಛಾಯಾಗ್ರಾಹಕ ಎಸ್.ಕೆ. ರಾವ್ ಸೇರಿದಂತೆ ಚಿತ್ರತಂಡ ಪ್ರತಿಯೊಬ್ಬರು ಸಿನಿಮಾ ಬಿಡುಗಡೆಯ ಖುಷಿ ಹಂಚಿಕೊಂಡರು.