Advertisement

ರಾಜ್ಯಸಭೆಗೆ ವಿಧಾನಸಭೆ ಚುನಾವಣೆ ಲೆಕ್ಕಾಚಾರ

06:15 AM Mar 12, 2018 | Team Udayavani |

ಬೆಂಗಳೂರು : ರಾಜ್ಯಸಭೆ ಚುನಾವಣೆಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡುವಾಗ ಕಾಂಗ್ರೆಸ್‌ ಹೈಕಮಾಂಡ್‌ ಹಲವರಿಗೆ ಶಾಕ್‌ಗಳನ್ನು ನೀಡಿದೆ. ಹೊಸಬರಿಗೆ ಅವಕಾಶ ನೀಡುವ ಮೂಲಕ ರಾಜಕೀಯ ಮಿತ್ರುರು ಮತ್ತು ಎದುರಾಳಿಗಳಿಗೆ ಸ್ಪಷ್ಟ ಸಂದೇಶಗಳನ್ನ ನೀಡಲಾಗಿದೆ. ಮೂರನೇ ಅಭ್ಯರ್ಥಿಯನ್ನ ಕಣಕ್ಕಿಳಿಸುವುದರೊಂದಿಗೆ ಭವಿಷ್ಯದಲ್ಲಿ ಕಾಂಗ್ರೆಸ್‌ಗೆ ಜೆಡಿಎಸ್‌ನ ದೋಸ್ತಿ ಬೇಡವೆನ್ನುವ ನೇರವಾದ ಮೆಸೇಜನ್ನ ರಾಹುಲ್‌ ಗಾಂಧಿ ಜೆಡಿಎಸ್‌ ವರಿಷ್ಠರಾದ ಮಾಜಿ ಪ್ರಧಾನಿ ದೇವೇಗೌಡರಿಗೆ ರವಾನಿಸಿದ್ದಾರೆ.

Advertisement

ಮೇ ತಿಂಗಳಲ್ಲಿ ನಡೆಯುವ ವಿಧಾನಸಭೆ ಚುನಾವಣೆಗೆ ಅನುಕೂಲಕರವಾಗುವಂತೆ ಅಭ್ಯರ್ಥಿಗಳನ್ನು ಜಾಣತನದಿಂದ ಆಯ್ಕೆ ಮಾಡಲಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ದಲಿತ ಕೋಟಾದಲ್ಲಿ ಡಾ.ಎಲ್‌ ಹನುಮಂತಯ್ಯ, ಒಕ್ಕಲಿಗ ಸಮುದಾಯದಿಂದ ಜಿ.ಸಿ. ಚಂದ್ರಶೇಖರ್‌, ಅಲ್ಪಸಂಖ್ಯಾತರ ವರ್ಗದಿಂದ ನಸೀರ್‌ ಹುಸೈನ್‌ ಅವರಂತಹ ಹೊಸ ಮುಖಗಳನ್ನು ಆಯ್ಕೆ ಮಾಡುವ ಮೂಲಕ ಹಳಬರನ್ನೇ ಪುನರಾಯ್ಕೆ ಮಾಡುವ ಸಂಪ್ರದಾಯಕ್ಕೆ ಬ್ರೇಕ್‌ ಹಾಕಲಾಗಿದೆ. ಇಲ್ಲಿಯತನಕ ಅಲ್ಪಸಂಖ್ಯಾತರ ಸಮುದಾಯದಿಂದ ರಾಜ್ಯಸಭೆ ಸದಸ್ಯರನ್ನಾಗಿ   ಕೆ.ರೆಹಮಾನ್‌ ಖಾನ್‌ ಅವರನ್ನೇ ಹೆಚ್ಚಾಗಿ ಆಯ್ಕೆ ಮಾಡಿಕೊಂಡು ಬರಲಾಗುತ್ತಿತ್ತು ಅದಕ್ಕೀಗ ಅಂತ್ಯಹಾಡಲಾಗಿದೆ.

ಈ ಬಾರಿಯ ರಾಜ್ಯ ಸಭೆ ಚುನಾವಣೆಗೆ  ಕಾಂಗ್ರೆಸ್‌ ಪಕ್ಷದಲ್ಲಿ ಬಹಳ ಪೂಪೋಟಿ ಇತ್ತು. ಘಟಾನುಘಟಿ ನಾಯಕರು ತೆರೆಮೆರೆಯಲ್ಲಿ ಟಿಕೆಟ್‌ಗಾಗಿ ಪ್ರಬಲ ಲಾಬಿ ನಡೆಸಿದ್ದರು. ದೆಹಲಿ ಮಟ್ಟದಲ್ಲಿ ವರಿಷ್ಠರ ಮೂಲಕ ಲಾಬಿಯನ್ನೂ ನಡೆಸಿದ್ದರು. ಆದರೆ ಇದ್ಯಾವುದಕ್ಕೂ ಹೈಕಮಾಂಡ್‌ ಮಣಿಯದೇ ಆಶ್ಚರ್ಯಕರವೆನ್ನುವ ರೀತಿಯಲ್ಲೇ ಅಭ್ಯರ್ಥಿಗಳನ್ನು ಆಯ್ಕೆ ಮಾಡಿ ಚರ್ಚೆಗೆ ಗ್ರಾಸವಾಗಿದೆ.

ಪಕ್ಷದ ಹಿರಿಯ ಮುಖಂಡರಾದ ಬಿಎಲ್‌ ಶಂಕರ್‌, ರಾಣಿ ಸತೀಶ್‌, ಕೆ.ರೆಹಮಾನ್‌ ಖಾನ್‌, ಸಲೀಂ ಅಹ್ಮದ್‌, ಸಿ.ಕೆ ಜಾಫ‌ರ್‌ ಷರೀಫ್, ಲೋಕಸಭೆ ಮಾಜಿ ಅಧ್ಯಕ್ಷೆ ಮೀರಾಕುಮಾರ್‌,  ಮಾಜಿ ಸಂಸದ ಎಚ್‌ ಹನುಮಂತಪ್ಪ, ಮುಖ್ಯಮಂತ್ರಿಗಳ ಆಪ್ತರಾದ ಉದ್ಯಮಿ ಚೆನ್ನಾರೆಡ್ಡಿ ಸೇರಿದಂತೆ ಹಲವರ ಹೆಸರುಗಳು ಪ್ರಸ್ತಾಪವಾಗಿದ್ದವು. ಆದರೆ ಅಂತಿಮವಾಗಿ ಹೈಕಮಾಂಡ್‌ ತನ್ನದೇ ಆದ ಲೆಕ್ಕಾಚಾರದಲ್ಲಿ ಅಭ್ಯರ್ಥಿಗಳನ್ನ ಆಯ್ಕೆಮಾಡಿ ಪಕ್ಷದಲ್ಲಿ ಅಚ್ಚರಿ ಮೂಡಿಸಿದೆ.

ರಾಜ್ಯದಲ್ಲಿ ದೊಡ್ಡ ಸಮುದಾಯವಾಗಿರುವ ಲಿಂಗಾಯತರು ಕಾಂಗ್ರೆಸ್‌ ಪಕ್ಷವನ್ನು ಬೆಂಬಲಿಸುವುದು ಅಷ್ಟಕ್ಕಷ್ಟೆ ಎನ್ನುವ ತೀರ್ಮಾನಕ್ಕೆ ಬಂದಂತಿರುವ ಪಕ್ಷದ ವರಿಷ್ಟರು  ಲಿಂಗಾಯತಕ್ಕೆ ಪರ್ಯಾಯವಾಗಿ ಇನ್ನೊಂದು ಪ್ರಬಲ ಸಮುದಾಯವಾಗಿರುವ ಒಕ್ಕಲಿಗರ ಮನವೊಲಿಕೆಗೆ ಮುಂದಾದಂತಿದೆ. ಕೆಪಿಸಿಸಿ ಅಧ್ಯಕ್ಷ ಡಾ.ಜಿ. ಪರಮೇಶ್ವರ್‌ ಅವರ ರಾಜಕೀಯ ಕಾರ್ಯದರ್ಶಿ ಜಿ.ಸಿ. ಚಂದ್ರಶೇಖರ್‌ ಆಯ್ಕೆ ಮಾಡಿ, ಜೆಡಿಎಸ್‌ನ ಸಾಂಪ್ರದಾಯಿಕ ಮತ ಒಡೆಯುವ ತಂತ್ರಕ್ಕೆ  ಕೈಹಾಕಲಾಗಿದೆ.

Advertisement

ದಲಿತ ಸಮುದಾಯದಿಂದ ಡಾ.ಎಲ್‌ ಹನುಮಂತಯ್ಯನವರನ್ನು ಮತ್ತು ಮುಸ್ಲಿಂ ಸಮುದಾಯದಿಂದ ನಸೀರ್‌ ಹುಸೈನ್‌ ಅವರನ್ನು ಆಯ್ಕೆ ಮಾಡುವ ಮೂಲಕ ಹೊಸಬರಿಗೆ ಅವಕಾಶ ನೀಡಲಾಗಿದೆ ಎಂದು ಆ ಸಮುದಾಯದ ಮತ್ತು ಯುವ ಜನಾಂಗದ ಮತಗಳನ್ನು ಸೆಳೆಯಲು ಹೈಕಮಾಂಡ್‌ ಯತ್ನಿಸಿದಂತಿದೆ.

ಹೊರ ರಾಜ್ಯದ ಅಭ್ಯರ್ಥಿಗಳನ್ನು ಕಣಕ್ಕಿಳಿಸದೇ ಕನ್ನಡಿಗರ ವಿಶ್ವಾಸಗಳಿಸುವ ಮತ್ತು ಉದ್ಯಮಿಗಳನ್ನ, ಬಂಡವಾಳ ಶಾಹಿಗಳನ್ನು ಆಯ್ಕೆ ಮಾಡದೇ ವಿಧಾನಸಭೆ ಚುನಾವಣೆಯಲ್ಲಿ ಯಾವುದೇ ವಿವಾದಗಳು ಪಕ್ಷದ ಮೈಮೇಲೆ ಬರದಂತೆ ಎಐಸಿಸಿ ಎಚ್ಚರಿಕೆ ವಹಿಸಿರುವುದು ರಾಜ್ಯಸಭೆ ಅಭ್ಯರ್ಥಿ ಆಯ್ಕೆಯಲ್ಲಿ  ಗೋಚರಿಸುತ್ತದೆ.

ಜೆಡಿಎಸ್‌ ಸಖ್ಯ ಬೇಡ …..
ರಾಜ್ಯಸಭೆಯಲ್ಲಿ ಮೂರನೇ ಅಭ್ಯರ್ಥಿ ಕಣಕ್ಕಿಳಿಸದೇ ಕಾಂಗ್ರೆಸ್‌ ಪಕ್ಷ ಜೆಡಿಎಸ್‌ಗೆ ಬೆಂಬಲಿಸಬೇಕೆಂದು ಆರಂಭದಲ್ಲಿ ಮನವಿ ಮಾಡಲಾಗಿತ್ತು. ಕೆಲವು ಹಿರಿಯ ಕಾಂಗ್ರೆಸ್‌ ನಾಯಕರು ಸಹ ಜೆಡಿಎಸ್‌ ವರಿಷ್ಟ ದೇವೇಗೌಡರೊಂದಿಗೆ ಸ್ನೇಹ ಕಾಪಾಡಿಕೊಳ್ಳಲು ರಾಜ್ಯಸಭೆ ಚುನಾವಣೆಯಲ್ಲಿ ಜೆಡಿಎಸ್‌ಗೆ ಬೆಂಬಲಿಸುವುದು ಸೂಕ್ತವೆಂಬ ಸಲಹೆ ನೀಡಿದ್ದರು. ಆದರೆ ಇದಕ್ಕೆ ಮುಖಮಂತ್ರಿ  ಸಿದ್ದರಾಮಯ್ಯ ಹೈಕಮಾಂಡ್‌ ಬಳಿ ತೀವ್ರ ವಿರೋಧ ವ್ಯಕ್ತಪಡಿಸಿ ದೇವೇಗೌಡರ ದೋಸ್ತಿ ವಿಧಾನಸಭೆ ಚುನಾವಣೆಯಲ್ಲಿ ಬೇಕಿಲ್ಲ ಕಾಂಗ್ರೆಸ್‌ ಪಕ್ಷವೇ ಸ್ವಂತ ಶಕ್ತಿಯಿಂದ ಅಧಿಕಾರಕ್ಕೆ ಬರುತ್ತದೆಂಬ ಅಚಲ ವಿಶ್ವಾಸ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ ಹೈಕಮಾಂಡ್‌ ಮೂರನೇ ಅಭ್ಯರ್ಥಿ ಕಣಕ್ಕಿಳಿಸುವ ಮೂಲಕ ಜಾತ್ಯತೀತ ಜನತಾದಳದ ದೋಸ್ತಿ ವಿಧಾನಸಭೆ  ಚುನಾವಣೆಯಲ್ಲಿ ಅಗತ್ಯತೆಯಿಲ್ಲವೆನ್ನುವ ಸಂದೇಶವನ್ನು ರವಾನಿಸಿದೆ. 

ರಾಜ್ಯಸಭೆ ಅಭ್ಯರ್ಥಿಗಳ ವಿವರ
ಎಲ್‌. ಹನುಮಂತಯ್ಯ

ಬೆಂಗಳೂರು ಗ್ರಾಮಂತರ ಜಿಲ್ಲೆ ದೊಡ್ಡ ಬಳ್ಳಾಪುರದವರು. ಕವಿ, ಸಾಹಿತಿ. ಎಸ್‌.ಎಂ. ಕೃಷ್ಣ ಅವಧಿಯಲ್ಲಿ ವಿಧಾನ ಪರಿಷತ್‌ ಸದಸ್ಯರಾಗಿದ್ದರು. ಕನ್ನಡ ಅಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಪ್ರಸ್ತುತ ಕೆಪಿಸಿಸಿ ಉಪಾಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಜೆ.ಸಿ. ಚಂದ್ರಶೇಖರ್‌
ಹಾಸನ ಜಿಲ್ಲೆ ಅರಕಲಗೂಡಿನವರು, ಎನ್‌ಎಸ್‌ಯುಐ ಪದಾಧಿಕಾರಿಯಾಗಿ ಕಾಂಗ್ರೆಸ್‌ನಲ್ಲಿ ರಾಜಕೀಯ ಆರಂಭಿಸಿದ್ದ ಅವರು ಎಸ್‌.ಎಂ.ಕೃಷ್ಣ ಮುಖ್ಯಮಂತ್ರಿಯಾಗಿದ್ದಾಗ ಸರ್ವ ಶಿಕ್ಷಣ ಅಭಿಯಾನದ ಉಸ್ತುವಾರಿಯಾಗಿ ಕಾರ್ಯ ನಿರ್ವಹಿದ್ದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಿ ಜಲ ಮಂಡಳಿ ಅಧ್ಯಕ್ಷರಾಗಿ ಕಾರ್ಯ ನಿರ್ವಹಿದ್ದ ಇವರು ಪ್ರಸ್ತುತ ಕೆಪಿಸಿಸಿ ಅಧ್ಯಕ್ಷ$ಡಾ.ಜಿ.ಪರಮೇಶ್ವರ್‌ ಅವರ ರಾಜಕೀಯ ಪ್ರಧಾನ ಕಾರ್ಯದರ್ಶಿ.

ಸೈಯದ್‌ ನಸೀರ್‌ ಹುಸೈನ್‌
ಮೂಲತಹ ಬಳ್ಳಾರಿ ಜಿಲ್ಲೆ ರೈತ ಕುಟುಂಬದವರು. ರಾಜ್ಯದಲ್ಲಿ ತಮ್ಮ ಶಿಕ್ಷಣ ಪೂರೈಸಿದ ಅವರು ನಂತರ ದೆಹಲಿಯಲ್ಲಿ ರಾಜಕೀಯ ಇರುವು ಕಂಡುಕೊಂಡರು. ಜೆಎನ್‌ಯು  ವಿದ್ಯಾರ್ಥಿ ಘಟಕದ ಅಧ್ಯಕ್ಷರಾಗಿ ಕೆಲಸ ಮಾಡಿದ್ದರು. ಪ್ರಸ್ತುತ ದೆಹಲಿಯಲ್ಲಿ ಎಐಸಿಸಿ ಸದಸ್ಯ ಹಾಗೂ ಪಕ್ಷದ ರಾಷ್ಟ್ರೀಯ ವಕ್ತಾರ.

ರಾಜೀವ್‌ ಚಂದ್ರಶೇಖರ್‌
ಮೂಲತಃ ಗುಜರಾತ್‌ನವರಾದರೂ ರಾಜಕೀಯ ನೆಲೆ ಕಂಡುಕೊಂಡಿದ್ದು ಕರ್ನಾಟಕದಲ್ಲಿ. ನೆರೆಯ ಕೇರಳದಲ್ಲೂ ಪ್ರಭಾವಿಯಾಗಿರುವ ಇವರು ಜ್ಯೂಪಿಟರ್‌ ಕ್ಯಾಪಿಟಲ್‌ನ ಸಂಸ್ಥಾಪಕ ಅಧ್ಯಕ್ಷರು. ಏಷ್ಯಾನೆಟ್‌ ಸಮೂಹದ ಮುಖ್ಯಸ್ಥರು. ಬಿಜೆಪಿ ನೇತೃತ್ವದ ಎನ್‌ಡಿಎ ಅಂಗಪಕ್ಷಗಳ ಕೇರಳ ಘಟಕದ ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ರಾಜ್ಯಸಭೆಯ ಹಾಲಿ ಸದಸ್ಯ.

Advertisement

Udayavani is now on Telegram. Click here to join our channel and stay updated with the latest news.

Next