ಇತ್ತೀಚೆಗೆ ತೆರೆಕಂಡು ಭರ್ಜರಿ ಯಶಸ್ಸು ಗಳಿಸಿದ್ದ ದಿ ಕಾಶ್ಮೀರ್ ಫೈಲ್ಸ್ ಚಿತ್ರದ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ, ತಮ್ಮ ಮುಂಬರುವ ಚಿತ್ರ “ದಿ ಡೆಲ್ಲಿ ಫೈಲ್ಸ್” ಎಂಬುದಾಗಿ ಘೋಷಿಸಿದ್ದರು. ಆದರೆ ಇದಕ್ಕೆ ಮಹಾರಾಷ್ಟ್ರದ ಸಿಖ್ ಅಸೋಸಿಯೇಷನ್ ತೀವ್ರ ಆಕ್ಷೇಪವ್ಯಕ್ತಪಡಿಸಿದೆ. ಸಿನಿಮಾ ನಿರ್ದೇಶಕರು, ನಿರ್ಮಾಪಕರು ಸಾಮರಸ್ಯದ ಸಮಾಜದಲ್ಲಿ ಅಶಾಂತಿಯನ್ನು ಉಂಟು ಮಾಡುವ ಚಿತ್ರವನ್ನು ನಿರ್ಮಿಸಬಾರದು ಎಂದು ಸಿಖ್ ಅಸೋಸಿಯೇಷನ್ ಹೇಳಿದೆ.
ಇದನ್ನೂ ಓದಿ:ನಿರ್ಮಲಾ ಸೀತಾರಾಮನ್ ಅರ್ಥಹೀನ ಮಾತನಾಡಿದ್ದಾರೆ: ದಿನೇಶ್ ಗುಂಡೂರಾವ್
ಅಗ್ನಿಹೋತ್ರಿಯ ದಿ ಕಾಶ್ಮೀರ್ ಫೈಲ್ಸ್ ಸಿನಿಮಾ ನಿರೀಕ್ಷೆಗೂ ಮೀರಿ ಯಶಸ್ವಿಗಳಿಸಿದ್ದಲ್ಲದೇ ಬಾಕ್ಸಾಫೀಸ್ ನಲ್ಲೂ ದಾಖಲೆ ಪ್ರಮಾಣದ ಗಳಿಕೆ ಕಂಡಿತ್ತು. ಇದೀಗ ಕಳೆದ ವಾರ ತಮ್ಮು ಮುಂದಿನ ಹೊಸ ಚಿತ್ರದ ಹೆಸರನ್ನು ಘೋಷಿಸಿದ್ದರು.
ದಿ ಡೆಲ್ಲಿ ಫೈಲ್ಸ್ ಸಿನಿಮಾ 1984ರ ಸಿಖ್ ಹತ್ಯಾಕಾಂಡದ ಕಥಾಹಂದರವನ್ನು ಹೊಂದಿರಲಿದೆ ಎಂಬ ಊಹಾಪೋಹ ಹರಿದಾಡುತ್ತಿದೆ. ಆದರೆ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಮಾತ್ರ ಚಿತ್ರಕಥೆಯ ಬಗ್ಗೆ ಈವರೆಗೂ ಯಾವ ಮಾಹಿತಿಯನ್ನೂ ಬಿಟ್ಟುಕೊಟ್ಟಿಲ್ಲ.
Related Articles
ಸಿಖ್ ಸಮುದಾಯ ಹೇಳೋದೇನು?
“ಸೃಜನಶೀಲ ಅಭಿವ್ಯಕ್ತಿ ಮತ್ತು ವೈಯಕ್ತಿಕ ಲಾಭದ ಹೆಸರಿನಲ್ಲಿ ಸಿಖ್ ಸಮುದಾಯದ ಹತ್ಯಾಕಾಂಡದಂತಹ ಮಾನವ ಕುಲದ ದುರಂತ ಅಧ್ಯಾಯಗಳನ್ನು ವ್ಯಾಪಾರೀಕರಣ ಮಾಡುವುದನ್ನು ತೀವ್ರವಾಗಿ ವಿರೋಧಿಸುವುದಾಗಿ” ಮಹಾರಾಷ್ಟ್ರ ಸಿಖ್ ಸಮುದಾಯ ಬಿಡುಗಡೆ ಮಾಡಿರುವ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
ಸಮಾಜದಲ್ಲಿ ಈಗಾಗಲೇ ಸಾಮರಸ್ಯ ಹದಗೆಡುತ್ತಿದೆ. ವಿವಿಧ ಕೋಮುಗಳ ನಡುವಿನ ಕಂದರ ಹೆಚ್ಚಾಗುತ್ತಿದೆ. ಹೀಗಾಗಿ ಇಂತಹ ಸಂದರ್ಭದಲ್ಲಿ ಇತಿಹಾಸದ ದುರಂತ ಘಟನೆಗಳನ್ನು ವಾಣಿಜ್ಯದ ದೃಷ್ಟಿಯಲ್ಲಿ ಚಿತ್ರವನ್ನಾಗಿಸಿದರೆ ಸಮಾಜದಲ್ಲಿ ಅಶಾಂತಿಗೆ ಕಾರಣವಾಗಲಿದೆ ಎಂದು ಸಿಖ್ ಸಮುದಾಯ ಆರೋಪಿಸಿದೆ.
ಭಾರತ ವೈವಿಧ್ಯತೆಯನ್ನು ಹೊಂದಿರುವ ದೇಶವಾಗಿದೆ. ಜನರು ವಿವಿಧ ಧರ್ಮ,, ನಂಬಿಕೆಗಳ ಮೂಲಕ ಸಾಮರಸ್ಯ ಮತ್ತು ಶಾಂತಿಯಿಂದ ಬದುಕಲು ಪ್ರಯತ್ನಿಸುತ್ತಿದ್ದಾರೆ. ಅದೇ ರೀತಿ ಸಿಖ್ ಸಮುದಾಯ ಕೂಡ ಇತಿಹಾಸದಲ್ಲಿನ ಕರಾಳ ಅಧ್ಯಾಯವನ್ನು ಮರೆಯಲು ಪ್ರಯತ್ನಿಸುತ್ತಿದೆ ಎಂದು ಹೇಳಿದೆ.
ಸಿಖ್ ಸಮುದಾಯದ ಆರೋಪಕ್ಕೆ ಅಗ್ನಿಹೋತ್ರಿ ಹೇಳಿದ್ದೇನು?
ದಿ ಡೆಲ್ಲಿ ಫೈಲ್ಸ್ ಚಿತ್ರ ನಿರ್ಮಾಣದ ಕುರಿತು ಮಹಾರಾಷ್ಟ್ರ ಸಿಖ್ ಅಸೋಸಿಯೇಷನ್ ಆಕ್ಷೇಪ ವ್ಯಕ್ತಪಡಿಸಿರುವುದಕ್ಕೆ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಪ್ರತಿಕ್ರಿಯೆ ನೀಡಿದ್ದು, ಒಬ್ಬ ನಿರ್ದೇಶಕನಾಗಿ ನನಗೆ ಹೇಳುವ ಹಕ್ಕಿದೆ. ಅಷ್ಟೇ ಅಲ್ಲ ಅವರ ಆತ್ಮಸಾಕ್ಷಿಗನುಗುಣವಾಗಿ ಚಿತ್ರ ನಿರ್ಮಾಣ ಮಾಡಲು ಮಾರ್ಗದರ್ಶನವನ್ನೂ ನೀಡಬಹುದಾಗಿದೆ. ಅವೆಲ್ಲಕ್ಕಿಂತ ಹೆಚ್ಚಾಗಿ ಸಿನಿಮಾದ ಶೀರ್ಷಿಕೆಯನ್ನು ಹೊರತುಪಡಿಸಿ ಚಿತ್ರ ಕಥೆ ಬಗ್ಗೆ ಯಾವ ಅಂಶವನ್ನೂ ಬಹಿರಂಗಪಡಿಸಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
ಇದು ಯಾವ ಸಂಘಟನೆ ಎಂಬ ಬಗ್ಗೆ ನನಗೆ ತಿಳಿದಿಲ್ಲ. ನಾನೊಬ್ಬ ಭಾರತೀಯನಾಗಿ ಒಕ್ಕೂಟ ವ್ಯವಸ್ಥೆಯಲ್ಲಿ ಬದುಕುತ್ತಿದ್ದೇನೆ. ಇದರಿಂದಾಗಿ ನಾನು ಏನು ಮಾಡಬೇಕು ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸುವ ಪೂರ್ಣ ಹಕ್ಕು ನನಗಿದೆ. ನನ್ನ ಆತ್ಮಸಾಕ್ಷಿಗೆ ಅನುಗುಣವಾಗಿ ಅಗತ್ಯವಿರುವ ಸಿನಿಮಾ ಮಾಡುತ್ತೇನೆ. ನಾನು ಯಾರ ಬೇಡಿಕೆಗಳ ಅಥವಾ ಸಂಘಟನೆಗಳ ಸೇವಕನಲ್ಲ ಎಂದು ಅಗ್ನಿಹೋತ್ರಿ ತಿರುಗೇಟು ನೀಡಿದ್ದಾರೆ.
ನಾನು ಯಾವ ಕಥಾಹಂದರ ಮಾಡುತ್ತಿದ್ದೇನೆ, ಏನು ಮಾಡುತ್ತೇನೆ ಎಂಬುದನ್ನೂ ಹೇಳಿಲ್ಲ. ಜನರು ಊಹೆಗಳನ್ನು ಮಾಡುತ್ತಿರುತ್ತಾರೆ. ಅದನ್ನು ಅವರು ಯಾವಾಗಲೂ ಮಾಡುತ್ತಾರೆ. ಆದರೆ ಅಂತಿಮವಾಗಿ ನಾನು ಯಾವ ರೀತಿಯ ಚಿತ್ರ ಮಾಡುತ್ತೇನೆ ಮತ್ತು ಈ ಸಿನಿಮಾ ಬಿಡುಗಡೆಯಾಗಬೇಕೇ ಅಥವಾ ಬೇಡವೇ ಎಂಬುದನ್ನು ಸಿಬಿಎಫ್ ಸಿ ನಿರ್ಧಾರ ಮಾಡುತ್ತದೆ ಎಂಬುದು ಅಗ್ನಿಹೋತ್ರಿ ಅಭಿಪ್ರಾಯವಾಗಿದೆ.