Advertisement
ಮಾತು ಬೆಳ್ಳಿ ಮೌನ ಬಂಗಾರ ಎನ್ನುವ ಗಾದೆ ಮಾತು ಅತ್ಯಂತ ಹಳೆಯದಾಯಿತು ಎನಿಸುತ್ತದೆ. ಇಂದು ಮಾತು ಯಶಸ್ಸು, ಮೌನ ಸೋಲು ಆಗಿರುವುದು ದೌರ್ಭಾಗ್ಯವೇ ಸರಿ. ಕೆಲವೊಮ್ಮೆ ಅದ್ಭುತ ಮಾತುಗಾರರು ತಮ್ಮಲ್ಲಿ ವಿಶೇಷ ಅರ್ಹತೆ ಇಲ್ಲದೇ ಇದ್ದರೂ ಯಶಸ್ಸಿನ ಪರ್ವತವನ್ನು ಅಲ್ಪಾವಧಿಯಲ್ಲೇ ಏರಿಬಿಡುತ್ತಾರೆ. ಹಾಗೂ ಸದಾ ಮೌನವಾಗಿ ಇರುವ ಮತ್ತು ಹೆಚ್ಚು ಅರ್ಹತೆ ಇದ್ದರೂ ಎಲ್ಲೂ ಗುರುತಿಸಲ್ಪಡುವುದೇ ಇಲ್ಲ. ಹಿಂದಿನ ದಿನಗಳಲ್ಲೆಲ್ಲಾ ವ್ಯಕ್ತಿಯು ಮೌನವಾಗಿ ಇದಷ್ಟು ತುಂಬಿದ ಕೊಡ ತುಳುಕುವುದಿಲ್ಲ ಎನ್ನುವ ಮಾತಿನಂತೆ ಅವರ ಅರ್ಹತೆ ಮತ್ತು ಘನತೆಯು ಹೆಚ್ಚುತ್ತಿತ್ತು, ಹೆಚ್ಚು ವಿಚಾರಗಳನ್ನು ತಿಳಿದುಕೊಂಡಿರುವ ವ್ಯಕ್ತಿಗಳು ಹೆಚ್ಚು ಮತನ್ನಾಡುತ್ತಾ ಇರಲಿಲ್ಲ. ಅದೇ ಕಾರಣಕ್ಕೆ ಹಿರಿಯರು ಮಾತು ಬೆಳ್ಳಿಯಾದರೆ ಮೌನವು ಅದಕ್ಕಿಂತಲೂ ಹೆಚ್ಚು ಬೆಲೆಬಾಳುವ ಬಂಗಾರವೆಂದು ಹೇಳುತ್ತಿದ್ದರು. ಆದರೆ ಕಾಲ ಬದಲಾಗಿದ್ದು, ಇಂದು ಸಾಮಾಜಿಕ ಮಾಧ್ಯಮಗಳ ಕ್ರಾಂತಿಯ ಯುಗ. ಎಲ್ಲರೂ ಮಾತನಾಡುತ್ತಾ, ಇತರರನ್ನು ಮಾತನಾಡಿಸಿ ಆರ್ಭಟಿಸುವವರೇ.
Related Articles
Advertisement
ಮೌನವೂ ಬಂಗಾರ
ಹಿಂದಿನಿದಲೂ ಮೌನಕ್ಕೆ ಬಂಗಾರದ ಮೌಲ್ಯವಿದೆ ಎಂದ ಮಾತ್ರಕ್ಕೆ ಪ್ರತಿಯೊಂದಕ್ಕೂ ಮೌನವೇ ಉತ್ತರ ಆಗಬಾರದು ಮತ್ತು ಅದು ಜಾಣತನವೂ ಅಲ್ಲ. ಮೌನ ಎಂಬ ಮಹಾ ಆಯುಧವನ್ನು ಎಂದು, ಯಾವ ಸನ್ನಿವೇಶದಲ್ಲಿ ಉಪಯೋಗಿಸಬೇಕು ಎನ್ನುವ ಅರಿವು ನಮ್ಮಲ್ಲಿ ಇರಬೇಕು. ಕೆಲವೊಮ್ಮೆ ಯಾವುದೋ ಒಂದು ಪರಿಸ್ಥಿತಿಯು ವಿಕೋಪಕ್ಕೆ ತಿರುಗುವ ಲಕ್ಷಣ ಇದ್ದಾಗ ಯೋಚಿಸಿ ನಿರ್ಧಾರ ತೆಗೆದುಕೊಳ್ಳುವ ಸಮಯದಲ್ಲಿ ಮೌನಕ್ಕೆ ಶರಣಾಗುವುದು ಜಾಣರ ಲಕ್ಷಣ. ಇಬ್ಬರು ವ್ಯಕ್ತಿಗಳ ನಡುವೆ ಅಚಾನಕ್ಕಾಗಿ ಆರಂಭವಾಗುವ ವಾಗ್ವಾದವನ್ನು ಕೂಡಲೇ ಹತೋಟಿಗೆ ತರಲು ಅಗತ್ಯವಿರುವುದು ಜಾಣ ಮೌನವೇ.
ಇಂತಹ ಸಂದರ್ಭದಲ್ಲಿ ನನ್ನ ತಂದೆ ಮಾಡುತ್ತಿದ್ದ ರೀತಿ ನೆನಪಿಗೆ ಬರುತ್ತದೆ. ಅವರು ಸದಾ ತಪ್ಪು ನಡೆಯುವ ಸನ್ನಿವೇಶ ಬರುವ ಮೊದಲು ತಪ್ಪಿನ ದಾರಿಯನ್ನೇ ಮೊದಲು ತಪ್ಪಿಸಿ ಬಿಡಬೇಕು ಎನ್ನುತ್ತಿದ್ದರು. ಅವರಿಗೆ ತಪ್ಪುಗಳು ಘಟಿಸಿದಾಗ ಬಹಳಷ್ಟು ಸಿಟ್ಟು ಬರುತ್ತಿದ್ದರೂ, ತತ್‌ಕ್ಷಣ ಸಿಟ್ಟಿನಿಂದ ನಾಲಿಗೆಯನ್ನು ಉದ್ದನೇ ಹರಿಯಲು ಬಿಡುತ್ತಿರಲಿಲ್ಲ.
ಸಿಟ್ಟು ಬಂದಾಕ್ಷಣ ಅವರು ಮೌನಕ್ಕೆ ಜಾರಿ, ಕೋಣೆಯಲ್ಲಿ ಕುಳಿತು ನಡೆದ ಸನ್ನಿವೇಶದ ಬಗ್ಗೆ ಅಥವಾ ತಪ್ಪಿನ ಬಗ್ಗೆ ವಿಮರ್ಷೆ ತಾವೇ ನಡೆಸುತಿದ್ದರು. ಏನನ್ನು ಮತ್ತು ಹೇಗೆ ಮಾತನಾಡಬೇಕು ಎನ್ನುದನ್ನು ಯೋಚಿಸಿ ಅನಂತರ ಕರೆದು ಮಾತನಾಡುತ್ತಿದ್ದರು. ಯಾವುದೇ ವಿಚಾರವನ್ನು ಅವರಿಗೆ ಯಾರಾದರೂ ದೂರವಾಣಿ ಕರೆ ಮಾಡಿ ವಿಚಾರಿಸಿದಾಗಲೂ ಅವರು ಐದು ನಿಮಿಷ ಬಿಟ್ಟು ಕರೆ ಮಾಡುತ್ತೇನೆ ಎನ್ನುತಿದ್ದರೇ ವಿನಃ ತತ್‌ಕ್ಷಣ ತಮ್ಮ ಅಬಿಪ್ರಾಯವನ್ನು ಎಂದೂ ವ್ಯಕ್ತಪಡಿಸಿದವರಲ್ಲ. ಇದುವೇ ಅವರು ಕೆಟ್ಟ ಸನ್ನಿವೇಶವನ್ನು ನಿರ್ವಹಿಸುತ್ತಿದ್ದ ರೀತಿ.
ಕುಟುಂಬದ ಸದಸ್ಯರ ನಡುವೆ ಆಗಾಗ ಮನಸ್ತಾಪ ಉಂಟಾಗಿ ಮಾತಿಗೆ ಮಾತು ಬೆಳೆಯಲು ಆರಂಭಿಸಿದಾಗ ಕನಿಷ್ಟ ಒಬ್ಬರಾದರೂ ಆ ಕ್ಷಣ ಮೌನಕ್ಕೆ ಜಾರಿದರೆ ಪರಿಸ್ಥಿತ ಸಹವಾಗಿ ಹತೋಟಿಗೆ ಬರುತ್ತದೆ. ಜಗಳ ಮತ್ತು ಮನಸ್ತಾಪದ ಪರಿಸ್ಥಿತಿಯನ್ನು ನಿಬಾಯಿಸುವಲ್ಲಿ ಮೌನಕ್ಕಿಂತ ಪ್ರಭಲವಾದ ಅಸ್ತÅ ಮತ್ತೂಂದಿಲ್ಲ. ನಮ್ಮ ನಾಲಿಗೆಯು ನಮ್ಮ ಹತೋಟಿ ತಪ್ಪುತ್ತಿದೆ ಎಂದೆನಿಸಿದ ಕೂಡಲೇ ಮೌನಕ್ಕೆ ಶರಣಾಗಿ ಬಿಡಬೇಕು. ಹಾಗೆಂದು ಎಲ್ಲ ಸಂದರ್ಭದಲ್ಲೂ ಮೌನವಾಗಿದ್ದರೆ ಜನ ನಮ್ಮನ್ನು ತಪ್ಪಾಗಿ ಅರ್ಥೈಸಿಕೊಳ್ಳುತ್ತಾರೆ. ಮೌನ ಸಮ್ಮತಿ ಲಕ್ಷಣಂ ಎನ್ನುವ ಮಾತನ್ನು ನಾವೆಲ್ಲರೂ ಕೇಳಿದ್ದೇವೆ, ನಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸುವ ಸಂದರ್ಭದಲ್ಲಿ ಎಂದೂ ಮೌನವಾಗಿ ಇರುವುದು ತರವಲ್ಲ.
ಮಾತು ಮತ್ತು ಮೌನ ಎರಡೂ ಶ್ರೇಷ್ಠವೇ
ಒಟ್ಟಾರೆಯಾಗಿ ಮಾತು ಮತ್ತು ಮೌನ ಎರಡನ್ನೂ ಬಹಳ ಜತನದಿಂದ ನಿರ್ವಹಿಸಿದರೆ ಬದುಕು ಅತ್ಯಂತ ಸುಂದರ ಮತ್ತು ಸುಲಲಿತವಾಗಿ ಸಾಗುತ್ತದೆ. ಈ ರೀತಿ ಆದಾಗಷ್ಟೇ ನಮ್ಮ ಮಾತು ಮತ್ತು ಮೌನ ಇವೆರಡೂ ನಮ್ಮ ವ್ಯಕ್ತಿತ್ವಕ್ಕೆ ಅಂದವನ್ನು ತರುತ್ತದೆ. ಮಾತು ಮತ್ತು ಮೌನ ಇವೆರಡನ್ನು ಯಾವಾಗ ಮತ್ತು ಹೇಗೆ ಬಳಸಬೇಕು ಎನ್ನುವ ವಿವೇಚನೆ ಇದ್ದರೆ ಬದುಕು ಮತ್ತುಷ್ಟು ಸುಗಮವಾಗುತ್ತದೆ.
-ಸಂತೋಷ್ ರಾವ್ ಪೆರ್ಮುಡ,
ಬೆಳ್ತಂಗಡಿ