ಹೊಸದಿಲ್ಲಿ: ಚೀನ ಜತೆಗೆ ಹೊಂದಿಕೊಂಡು ಇರುವ ವಾಸ್ತವಿಕ ಗಡಿ ನಿಯಂತ್ರಣ ರೇಖೆ (ಎಲ್‌ಎಸಿ)ಯಲ್ಲಿ ಪರಿಸ್ಥಿತಿ ಸದ್ಯ ನಿಯಂತ್ರಣದಲ್ಲಿದೆ. ಆದರೆ ಏನಾಗಬಹುದು ಎಂದು ಊಹಿಸಲೂ ಅಸಾಧ್ಯವಾಗಿರುವ ಪರಿಸ್ಥಿತಿ ಇದೆ ಎಂದು ಭೂಸೇನೆಯ ಮುಖ್ಯಸ್ಥ ಜ| ಮನೋಜ್ ಪಾಂಡೆ ಹೇಳಿದ್ದಾರೆ. ಯಾವುದೇ ಪರಿಸ್ಥಿತಿ ಎದುರಿಸುವ ನಿಟ್ಟಿನಲ್ಲಿ ಎಲ್‌ಎಸಿಯಲ್ಲಿ ಹೆಚ್ಚಿನ ಪ್ರಮಾಣದ ಯೋಧರನ್ನು ನಿಯೋಜಿಸಲಾಗಿದೆ ಎಂದು ಹೇಳಿದ್ದಾರೆ.
ಹೊಸದಿಲ್ಲಿಯಲ್ಲಿ ಮಾತನಾಡಿದ ಭೂ ಸೇನಾ ಮುಖ್ಯಸ್ಥರು ಚೀನ ವತಿಯಿಂದ ಯಾವುದೇ ರೀತಿಯ ಸವಾಲುಗಳು ಎದುರಾದರೂ ಅದನ್ನು ನಮ್ಮ ವೀರ ಯೋಧರು ಮಟ್ಟ ಹಾಕಲಿದ್ದಾರೆ. ಆ ನಿಟ್ಟಿನಲ್ಲಿ ಅವರು ಸರ್ವ ಸನ್ನದ್ಧರಾಗಿದ್ದಾರೆ. ಸದ್ಯ ಗಡಿಯಲ್ಲಿ ಪರಿಸ್ಥಿತಿ ನಿಯಂತ್ರಣದಲ್ಲಿ ಇದೆ. ಆದರೆ ಮುಂದೆ ಏನಾಗಬಹುದು ಎಂಬುದನ್ನೂ ಊಹಿಸಲೂ ಸಾಧ್ಯವಿಲ್ಲದಂತೆ ಆಗಿದೆ. ಚೀನ ಜತೆಗೆ ನಡೆಸಲಾಗಿರುವ ಮಾತುಕತೆಗಳಿಂದಾಗಿ 7 ಬಿಕ್ಕಟ್ಟಿನ ಅಂಶಗಳ ಪೈಕಿ ಐದನ್ನು ಬಗೆಹರಿಸಲಾಗಿದೆ ಎಂದರು.
ಪೂರ್ವ ವಲಯದಲ್ಲಿ ಚೀನ ಸೇನೆಯ ಜಮಾವಣೆ ಹೆಚ್ಚಾಗಿದೆ ಎಂಬ ಅಂಶವನ್ನು ಒಪ್ಪಿಕೊಂಡ ಜ| ಪಾಂಡೆ, ಲಡಾಖ್ ಸಹಿತ ಚೀನ ಜತೆಗಿನ ಗಡಿ ಪ್ರದೇಶದಲ್ಲಿ ಸೇನೆಗೆ ಬೇಕಾಗಿರುವ ಮೂಲಸೌಕರ್ಯಗಳನ್ನು ಹೆಚ್ಚಿಸಲಾಗಿದೆ ಎಂದರು. ಡೋಕ್ಲಾಂ ಘಟನೆಯ ಬಳಿಕ ಪೂರ್ವ ಭಾಗದಲ್ಲಿ ವಿಶೇಷವಾಗಿ ಸಿಕ್ಕಿಂನಲ್ಲಿ ನಮ್ಮ ವೀರ ಯೋಧರು ಎಚ್ಚರಿಕೆಯಿಂದ ಗಡಿಯಲ್ಲಿನ ಬೆಳವಣಿಗೆಗಳ ಮೇಲೆ ನಿಗಾ ಇರಿಸಿದ್ದಾರೆ ಎಂದರು.
ಜಮ್ಮು ಮತ್ತು ಕಾಶ್ಮೀರದಲ್ಲಿ ಪಾಕಿಸ್ಥಾನದ ಜತೆಗೆ 2021 ಫೆಬ್ರವರಿಯಲ್ಲಿ ಕದನ ವಿರಾಮ ಒಪ್ಪಂದ ಜಾರಿಗೊಳಿಸಿದ ಬಳಿಕ ಅಲ್ಲಿ ಪರಿಸ್ಥಿತಿ ಸುಧಾರಣೆಯಾಗುತ್ತಿದೆ ಎಂದರು. ಆದರೆ ಎಲ್‌ಒಸಿ ಮೂಲಕ ಉಗ್ರರ ಒಳನುಸುಳುವಿಕೆ ಮುಂದುವರಿದಿದೆ ಎಂದರು.
ಸರಕಾರಕ್ಕೆ ಪ್ರಸ್ತಾವನೆ: ಭೂಸೇನೆಯ ಫಿರಂಗಿ ಘಟಕಗಳಿಗೆ ಮಹಿಳಾ ಯೋಧರು ಮತ್ತು ಅಧಿಕಾರಿಗಳನ್ನು ನೇಮಕ ಮಾಡುವುದರ ಬಗ್ಗೆ ಸರಕಾರಕ್ಕೆ ಪ್ರಸ್ತಾವನೆ ಕಳುಹಿಸಲಾಗಿದೆ. ಇನ್ನೂ ತೀರ್ಮಾನಕ್ಕಾಗಿ ಕಾಯಲಾಗುತ್ತಿದೆ ಎಂದರು.