ಯಾದಗಿರಿ: ಕೊಡಗು ಜಿಲ್ಲೆಯ ಸಂತ್ರಸ್ತರ ನೆರವಿಗೆ ಸೈದಾಪುರ ನೇತಾಜಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಪಟ್ಟಣದಲ್ಲೆಡೆ ಸಂಚರಿಸಿ ಪರಿಹಾರ ನಿಧಿ ಸಂಗ್ರಹಿಸುವದರ ಮೂಲಕ ಸಾಮಾಜಿಕ ಕಾಳಜಿ ತೋರಿರುವುದು ಎಲ್ಲೆಡೆ ಶ್ಲಾಘನೆ ವ್ಯಕ್ತವಾಗಿದೆ.
ಪ್ರಕೃತಿ ವಿಕೋಪಕ್ಕೆ ಸಿಲುಕಿರುವ ಕೊಡುಗಿನ ನಿವಾಸಿಗಳು ತೀವ್ರ ಸಂಕಷ್ಟಕ್ಕೆ ಎದುರಿಸುತ್ತಿರುವು ಗಮನಿಸಿದ ವಿದ್ಯಾರ್ಥಿಗಳು ಕಠಿಣ ಪರಿಸ್ಥಿತಿಯಲ್ಲಿರುವ ನೆರೆ ಸಂತ್ರಸ್ತರ ನೆರವಿಗಾಗಿ ಧಾವಿಸಿ ಪರಿಹಾರ ನಿಧಿಸಂಗ್ರಹಿಸುತ್ತಿರುವುದು ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆಗೆ ಪಾತ್ರವಾಗಿದ್ದಾರೆ.
ಈ ವೇಳೆ ಶಾಲಾ ಮುಖ್ಯಗುರು ನರಸಪ್ಪ ನಾರಾಯಣೋರ ಮಾತನಾಡಿ, ಸಂಕಷ್ಟದಲ್ಲಿ ಇರುವವರಿಗೆ ಸಹಾಯ ಮಾಡುವುದು ಮಾನವ ಧರ್ಮ, ಅದರಂತೆ ನಮ್ಮ ಶಾಲೆಯ ವಿದ್ಯಾರ್ಥಿಗಳಿಂದ ಕೊಡಗು ಜಿಲ್ಲೆಯ ಸಂತ್ರಸ್ತರಿಗಾಗಿ ಸಾಧ್ಯವಾದ ಮಟ್ಟಿಗೆ ಅಳಿಲು ಸೇವೆ ಮಾಡುತ್ತಿದ್ದೇವೆ. ಆದರೆ ಇದೆಲ್ಲಕ್ಕಿಂತ ಮುಖ್ಯವಾಗಿ ತಮ್ಮ ಉದಾರ ಮನಸ್ಸಿನಿಂದ ನೆರವು ನೀಡಿದಂತಹ ನಾಗರಿಕರಿಗೆ ಕೃತಜ್ಞತೆ ಸಲ್ಲಿಸುತ್ತಿರುವುದಾಗಿ ತಿಳಿಸಿದರು.
ಸಂಸ್ಥೆಯ ಅಧ್ಯಕ್ಷ ಸಿದ್ದಪ್ಪ ಜೇಗರ ಮಾತನಾಡಿ, ನೇತಾಜಿ ಶಾಲಾ ವಿದ್ಯಾರ್ಥಿಗಳು ರಾಜ್ಯ ಮತ್ತು ರಾಷ್ಟ್ರದಲ್ಲಿ ನೆರೆ ಹಾವಳಿ ಸಂಭವಿಸಿದ ಪ್ರತಿ ಸಲವೂ ಮುಂಚೂಣಿಗೆ ಬಂದು ಪರಿಹಾರ ನಿಧಿ ಸಂಗ್ರಹಿಸುವ ಕೆಲಸ ಮಾಡುತ್ತಿದ್ದಾರೆ. 2006ರಲ್ಲಿ ತಮಿಳುನಾಡಿನಲ್ಲಿ ಸುನಾಮಿ ಸಂಭವಿಸಿದಾಗ ಮತ್ತು 2013ರಲ್ಲಿ ಉತ್ತರಖಂಡ ರಾಜ್ಯದ ಪ್ರಕೃತಿ ವಿಕೋಪಕ್ಕೆ ತುತ್ತಾದ ಕೇದರನಾಥ ಮತ್ತು ಬದರಿನಾಥ ಯಾತ್ರಿಕರಿಗಾಗಿ ಶಾಲೆಯಿಂದ ಪರಿಹಾರ ನಿಧಿ ಸಂಗ್ರಹಿಸುವ ಮೂಲಕ ನಮ್ಮ ಶಾಲಾ ವಿದ್ಯಾರ್ಥಿಗಳು ಸಾಮಾಜಿಕ ಕಳಕಳಿ ಮೆರೆದಿದ್ದಾರೆ ಎಂದರು.
ಸಂತ್ರಸ್ತರ ನೆರವಿಗೆ ಶಾಲಾ ಮಕ್ಕಳಿಂದ ದೇಣಿಗೆ ಸಂಗ್ರಹ
ಸೈದಾಪುರ: ಕೊಡಗು ಜಿಲ್ಲೆ ವ್ಯಾಪ್ತಿಯಲ್ಲಿ ಪ್ರಕೃತಿ ವಿಕೋಪದಿಂದ ಅಪಾರ ಹಾನಿಯಾಗಿದ್ದು, ಸಂತ್ರಸ್ತರಿಗಾಗಿ ಪಟ್ಟಣದ ವಾಸವಿ ವಿದ್ಯಾ ಸಂಸ್ಥೆಯ ಮಕ್ಕಳು ಬೀದಿಗಿಳಿದು ಪರಿಹಾರ ನಿಧಿ ಸಂಗ್ರಹಿಸಲು ಮುಂದಾಗಿದ್ದಾರೆ. ಪಟ್ಟಣದಲ್ಲಿ ಸೋಮವಾರ ರಸ್ತೆಗೆಳಿದ ಮಕ್ಕಳು ಪ್ರತಿಯೊಂದು ಅಂಗಡಿಗಳಿಗೆ ತೆರಳಿ ಹಣ ಸಂಗ್ರಹ ಮಾಡುತ್ತಿರುವುದು ಕಂಡು ಬಂತು. ಪಟ್ಟಣದ ಪ್ರತಿ ಮನೆಗಳಿಗೆ ತೆರಳಿ ಹಣ ಸಂಗ್ರಹಿಸಿ ಮುಖ್ಯಮಂತ್ರಿ ನೆರೆ ಸಂತ್ರಸ್ತರ ಪರಿಹಾರ ನಿಧಿ ಖಾತೆಗೆ ಹಣವನ್ನು ಜಮೆ ಮಾಡಿದ್ದಾರೆ. ಈ ಕಾರ್ಯಕ್ಕೆ ಸಂಸ್ಥೆಯ ಅಧ್ಯಕ್ಷ ಕೃಷ್ಣಮೂರ್ತಿ ಪತ್ತಿ, ನರಸಿಂಹಲು ಕೊಲಕೊಂಡ, ಕೆ.ಬಿ. ಗೋವರ್ಧನ, ಕೆ.ಬಿ. ರಾಘವೇಂದ್ರ , ಕೆ.ಪಿ. ಲಕ್ಷ್ಮೀ ನಾರಾಯಣ ಮುಖ್ಯಗುರು ಬಸವಲಿಂಗಪ್ಪ ವಡಿಗೇರಕರ್ ಸಹಕಾರ ನೀಡಿದ್ದಾರೆ.