Advertisement

ಬಿಎಂಟಿಸಿಯಲ್ಲಿ ಆತಂಕ ಶುರು

12:42 AM Feb 05, 2020 | Lakshmi GovindaRaj |

ಬೆಂಗಳೂರು: ಅತ್ತ ಅತ್ಯಂತ ವೇಗವಾಗಿ ಉಪನಗರ ರೈಲು ಯೋಜನೆ ಜಾರಿಗೊಳಿಸಲು ಸರ್ಕಾರ ಸಿದ್ಧತೆ ಮಾಡಿಕೊಳ್ಳುತ್ತಿದೆ. ಈ ಸಂಬಂಧ ಮೂರು ವರ್ಷಗಳ ಗಡುವು ಕೂಡ ನಿಗದಿಪಡಿಸಿದೆ. ಬೆನ್ನಲ್ಲೇ ಇತ್ತ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ)ಗೆ ಅಸ್ತಿತ್ವದ ಆತಂಕ ಕಾಡಲು ಶುರುವಾಗಿದೆ!

Advertisement

ಯಾಕೆಂದರೆ, ಉಪನಗರ ರೈಲು ನಗರದಲ್ಲಿ ಹಾದುಹೋಗಲಿರುವ ಬಹುತೇಕ ಮಾರ್ಗದಲ್ಲಿ ಬಿಎಂಟಿಸಿ ಬಸ್‌ಗಳು ಅದರಲ್ಲೂ ಐಷಾರಾಮಿ ಸೇವೆಗಳಾದ ವೋಲ್ವೊ ಕಾರ್ಯಾಚರಣೆ ಮಾಡುತ್ತಿವೆ. ಉದ್ದೇಶಿತ ಯೋಜನೆ ಸಂಪೂರ್ಣ ಅನುಷ್ಠಾನಗೊಂಡ ನಂತರ ಆ ಮಾರ್ಗದ ಬಸ್‌ ಪ್ರಯಾಣಿಕರು ವಿಮುಖರಾಗುವ ಸಾಧ್ಯತೆ ಇದೆ. ಈಗಾಗಲೇ ಲಕ್ಷಾಂತರ ಜನ “ನಮ್ಮ ಮೆಟ್ರೋ’ಗೆ ಶಿಫ್ಟ್ ಆಗಿದ್ದಾರೆ.

ಇದಾಗಿ ಹೆಚ್ಚು-ಕಡಿಮೆ ಐದಾರು ವರ್ಷಗಳ ಅಂತರದಲ್ಲಿ ಉಪನಗರ ರೈಲು ರೂಪದಲ್ಲಿ ಅಂತಹದ್ದೇ ಪ್ರಯೋಗ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಬಿಎಂಟಿಸಿಗೆ ಪ್ರಯಾಣಿಕರನ್ನು ಹಿಡಿದಿಟ್ಟುಕೊಳ್ಳುವ ಸವಾಲು ಎದುರಾಗಿದೆ. 148 ಕಿ.ಮೀ. ಉದ್ದದ ಉಪನಗರ ರೈಲು ಯೋಜನೆ ಜಾಲವು ನಗರದ ಸಿಟಿ ರೈಲು ನಿಲ್ದಾಣ-ಯಲಹಂಕ-ದೇವನಹಳ್ಳಿ, ಬೈಯಪ್ಪನಹಳ್ಳಿ-ಯಶವಂತಪುರ-ಚಿಕ್ಕಬಾಣಾವರ, ಹೀಲಳಿಗೆ-ಸಿಟಿ ರೈಲು ನಿಲ್ದಾಣ-ವೈಟ್‌ಫೀಲ್ಡ್‌, ಹೀಲಳಿಗೆ-ಯಲಹಂಕ-ರಾಜಾನುಕುಂಟೆ ಮಾರ್ಗದಲ್ಲಿ ಹಾದುಹೋಗಲಿದೆ.

ಇದು ಬಹುತೇಕ ಹೊರವರ್ತುಲ ರಸ್ತೆಯನ್ನು ಆವರಿಸಲಿದೆ. ಮೂಲಗಳ ಪ್ರಕಾರ ಇದೇ ಹೊರವರ್ತುಲದಲ್ಲಿ ಸಾಮಾನ್ಯ ಮತ್ತು ವೋಲ್ವೊ ಸೇರಿ 1,500ರಿಂದ 1,600 ಬಸ್‌ಗಳು ನಿತ್ಯ ಸಾವಿರಾರು ಟ್ರಿಪ್‌ಗ್ಳಲ್ಲಿ ಸಂಚರಿಸುತ್ತಿದ್ದು, ಅಂದಾಜು 1ರಿಂದ 1.50 ಲಕ್ಷ ಜನ ಇದರಲ್ಲಿ ಸಂಚರಿಸುತ್ತಿದ್ದಾರೆ. ಇದರಿಂದ ನಿತ್ಯ ಲಕ್ಷಾಂತರ ರೂ. ಆದಾಯ ಹರಿದುಬರುತ್ತಿದ್ದು, ಈ ಆದಾಯಕ್ಕೆ ಪೆಟ್ಟು ಬೀಳುವ ಸಾಧ್ಯತೆ ಇದೆ.

ಏರ್‌ಪೋರ್ಟ್‌ಗೇ 100 ಶೆಡ್ಯುಲ್‌: ಇದಕ್ಕಿಂತ ಮುಖ್ಯವಾಗಿ 700 ವೋಲ್ವೊ ಬಸ್‌ಗಳಿದ್ದು, ಅದರಲ್ಲಿ 400 ಬಸ್‌ಗಳು ಕೂಡ ಹೊರವರ್ತುಲದಲ್ಲಿ ಕಾರ್ಯಾಚರಣೆ ಮಾಡುತ್ತಿವೆ. ಈ ಪೈಕಿ ಮೆಜೆಸ್ಟಿಕ್‌, ಎಲೆಕ್ಟ್ರಾನಿಕ್‌ ಸಿಟಿ, ಮೈಸೂರು ರಸ್ತೆ, ಯಶವಂತಪುರ ಸೇರಿ ನಗರದ ವಿವಿಧೆಡೆಯಿಂದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೇ ನೂರು ಬಸ್‌ಗಳು ಹೋಗುತ್ತವೆ. ಈ ವೋಲ್ವೊದಿಂದಲೇ ನಿತ್ಯ ಕೋಟಿ ರೂ. ಆದಾಯ ಅನಾಯಾಸವಾಗಿ ಹರಿದುಬರುತ್ತದೆ.

Advertisement

ಸಂಸ್ಥೆಗೆ ತಕ್ಕಮಟ್ಟಿಗೆ ಆದಾಯ ತಂದುಕೊಡುವ ಬಸ್‌ಗಳು ಇವಾಗಿವೆ. ಆದರೆ, ಸರ್ಕಾರವು ಈ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ಮಾರ್ಗವನ್ನೇ ಆದ್ಯತೆ ಮೇರೆಗೆ ಕೈಗೆತ್ತಿಕೊಳ್ಳಲು ನಿರ್ಧರಿಸಿದೆ. ಹಾಗಿದ್ದರೆ ಮುಂದೆ ಈ ವೋಲ್ವೊ ಬಸ್‌ಗಳ ಕತೆ ಏನು? ಲಾಸ್ಟ್‌ ಮೈಲ್‌ ಕನೆಕ್ಟಿವಿಟಿಗೂ ಇವುಗಳನ್ನು ಬಳಸಿಕೊಳ್ಳಲು ಆಗುವುದಿಲ್ಲ. ಹಾಗಿದ್ದರೆ, ಕೋಟ್ಯಂತರ ರೂ. ಸುರಿದು ತಂದ ಈ ಬಸ್‌ಗಳನ್ನು ಏನು ಮಾಡುವುದು? ನಗರದ ಸಂಚಾರದಟ್ಟಣೆ ನಿವಾರಣೆ ಹಾಗೂ ಪ್ರಯಾಣಿಕರ ಹಿತದೃಷ್ಟಿಯಿಂದ ಉಪನಗರ ಅಗತ್ಯ ಮತ್ತು ಅನಿವಾರ್ಯ. ಅಷ್ಟೇ ಅವಶ್ಯಕವಾಗಿದ್ದುದು ಬಿಎಂಟಿಸಿ.

ಅದರ ಚೇತರಿಕೆಗೆ ಇರುವ ಆಯ್ಕೆಗಳೇನು? ಇನ್ನಷ್ಟು ಹೊಸ ಬಸ್‌ಗಳನ್ನು ರಸ್ತೆಗಿಳಿಸುವ ಪ್ರಯತ್ನವನ್ನು ಸಂಸ್ಥೆ ಸದ್ಯಕ್ಕೆ ಕೈಬಿಡಲಿದೆಯೇ ಇಂತಹ ಹಲವು ಪ್ರಶ್ನೆಗಳು ಎದ್ದಿವೆ. ಆದರೆ, ಸದ್ಯಕ್ಕಂತೂ ಬಿಎಂಟಿಸಿ ನಿರಮ್ಮಳವಾಗಿದೆ. “ಉಪನಗರ ರೈಲು ಯೋಜನೆಯಿಂದ ಆದಾಯಕ್ಕೆ ಪೆಟ್ಟು ಬೀಳುವುದಂತೂ ನಿಜ. ಬಸ್‌ ಆದ್ಯತಾ ಪಥ, ಲಾಸ್ಟ್‌ ಮೈಲ್‌ ಕನೆಕ್ಟಿವಿಟಿಯಂತಹ ಭಿನ್ನ ಮಾರ್ಗಗಳನ್ನು ಹುಡುಕಬೇಕಿದೆ’ ಎಂದು ಹೆಸರು ಹೇಳಲಿಚ್ಛಿಸದ ಅಧಿಕಾರಿಯೊಬ್ಬರು ತಿಳಿಸುತ್ತಾರೆ.

ಉಪನಗರ ರೈಲು ಮಾರ್ಗ
-ಸಿಟಿ ರೈಲು ನಿಲ್ದಾಣ-ಯಲಹಂಕ-ದೇವನಹಳ್ಳಿ
-ಬೈಯಪ್ಪನಹಳ್ಳಿ-ಯಶವಂತಪುರ-ಚಿಕ್ಕಬಾಣಾವರ
-ಹೀಲಳಿಗೆ-ಸಿಟಿ ರೈಲು ನಿಲ್ದಾಣ-ವೈಟ್‌ಫೀಲ್ಡ್‌
-ಹೀಲಳಿಗೆ-ಯಲಹಂಕ-ರಾಜಾನುಕುಂಟೆ

ಬರಲಿರುವ ಮೆಟ್ರೋ ಮಾರ್ಗ
-ಸೆಂಟ್ರಲ್‌ ಸಿಲ್ಕ್ ಬೋರ್ಡ್‌-ಹೆಬ್ಬಾಳ
-ಹೆಬ್ಬಾಳ- ಅಂತರರಾಷ್ಟ್ರೀಯ ವಿಮಾನ ನಿಲ್ದಾಣ

ಬಿಎಂಟಿಸಿ ಕಾರ್ಯಾಚರಣೆ
-ಹೆಬ್ಬಾಳ-ಟಿನ್‌ ಫ್ಯಾಕ್ಟರಿ-ಮಾರತ್‌ಹಳ್ಳಿ ಸೇತುವೆ- ಸೆಂಟ್ರಲ್‌ ಸಿಲ್ಕ್ ಬೋರ್ಡ್‌
-ಹೆಬ್ಬಾಳ-ಟಿನ್‌ ಫ್ಯಾಕ್ಟರಿ-ಐಟಿಪಿಎಲ್‌
-ಹೆಬ್ಬಾಳ-ಮಾರತ್‌ಹಳ್ಳಿ-ಐಟಿಪಿಎಲ್‌
-ಬನಶಂಕರಿ-ಮಾರತ್‌ಹಳ್ಳಿ ಸೇತುವೆ-ಐಟಿಪಿಎಲ್‌
-ಮೆಜೆಸ್ಟಿಕ್‌-ಕಾಡುಗೋಡಿ

ಓಆರ್‌ಆರ್‌ನಲ್ಲಿ ಬಸ್‌ ಕಾರ್ಯಾಚರಣೆ
-10 ಲಕ್ಷ ನಿತ್ಯ ಉಪನಗರ ರೈಲು ಪ್ರಯಾಣಿಕರು
-3.1 ಲಕ್ಷ ಜನ ಓಆರ್‌ಆರ್‌ನಲ್ಲಿ ಮೆಟ್ರೋ ನಿರ್ಮಾಣಗೊಂಡ ಮೊದಲ ವರ್ಷದ ಪ್ರಯಾಣಿಕರ ನಿರೀಕ್ಷೆ
-4.20 ಲಕ್ಷ ನಿತ್ಯ ಸದ್ಯ ಮೆಟ್ರೋದಲ್ಲಿ ಪ್ರಯಾಣಿಕರು
-42 ಲಕ್ಷ ನಿತ್ಯ ಬಸ್‌ ಪ್ರಯಾಣಿಕರು

ಕೆಲ ಮಾರ್ಗಗಳ ಬದಲಾವಣೆ: ಈ ಹಿಂದೆ ಉಪನಗರ ರೈಲು ಯೋಜನೆಗೆ ಸಂಬಂಧಿಸಿದಂತೆ ಸಮಗ್ರ ಯೋಜನಾ ವರದಿ (ಡಿಪಿಆರ್‌) ಸಿದ್ಧಪಡಿಸಿದಾಗ, ಅದು “ನಮ್ಮ ಮೆಟ್ರೋ’ ಹಾದುಹೋಗಲಿರುವ ಮಾರ್ಗದಲ್ಲೇ ಸಂಚರಿಸಲಿದೆ ಎಂಬ ಕಾರಣಕ್ಕೆ ಪರಿಷ್ಕರಿಸಲಾಯಿತು. ಇದರಿಂದ ಮಾರ್ಗಕ್ಕೆ ಕತ್ತರಿ ಹಾಕುವುದರ ಜತೆಗೆ ಕೆಲ ಮಾರ್ಗಗಳನ್ನು ಬದಲಾಯಿಸಲಾಯಿತು.

ಸ್ಪರ್ಧಾತ್ಮಕ ಆಗದೆ; ಪೂರಕ ಆಗಲಿ: 1.2 ಕೋಟಿ ಜನ ಇರುವಂತಹ ಬೆಂಗಳೂರಿಗೆ ಉಪನಗರ ರೈಲು ಮಾತ್ರವಲ್ಲ; ಸಾಧ್ಯವಾದಷ್ಟು ಹೆಚ್ಚು ಸಮೂಹ ಸಾರಿಗೆ ವ್ಯವಸ್ಥೆಗಳ ಅವಶ್ಯಕತೆ ಇದೆ. ಆದರೆ, ಅವೆಲ್ಲವೂ ಒಂದಕ್ಕೊಂದು ಪೂರಕವಾಗಿರಬೇಕಾಗುತ್ತದೆ ಎಂದು ತಜ್ಞರು ಅಭಿಪ್ರಾಯಪಡುತ್ತಾರೆ.

ರೈಲು ಮತ್ತು ಬಸ್‌ ಕಾರ್ಯಾಚರಣೆ ಮಾರ್ಗ ಬೇರೆ ಬೇರೆ. ಆದರೂ, ಉಪನಗರ ರೈಲು ಹಾದುಹೋಗುವ ಮಾರ್ಗಕ್ಕೆ ಅನುಗುಣವಾಗಿ ಮುಂದಿನ ದಿನಗಳಲ್ಲಿ ಬಸ್‌ ಮಾರ್ಗಗಳನ್ನು ಮರುವಿನ್ಯಾಸಗೊಳಿಸಲಾಗುವುದು. ಉದಾಹರಣೆಗೆ ಮೈಸೂರು ರಸ್ತೆಯಲ್ಲಿ ಮೆಟ್ರೋ ಬಂದ ನಂತರ ಮುಖ್ಯರಸ್ತೆಯಲ್ಲಿ ಸೇವೆಗಳನ್ನು ನಿಲ್ಲಿಸಿ, ಉಪ ರಸ್ತೆಗಳಲ್ಲಿ ಸೇವೆ ಆರಂಭಿಸಿದ್ದೇವೆ. ಇದೇ ಮಾದರಿ ಅನುಸರಿಸಲಾಗುವುದು.
-ಸಿ. ಶಿಖಾ, ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕಿ

40ರಿಂದ 42 ಲಕ್ಷ ಜನ ನಿತ್ಯ ಬಿಎಂಟಿಸಿಯಲ್ಲಿ ಪ್ರಯಾಣಿಸುತ್ತಾರೆ. ಹಾಗಾಗಿ, ಮೆಟ್ರೋ ಅಥವಾ ಉಪನಗರದಂತಹ ಯಾವುದೇ ಯೋಜನೆಗಳನ್ನು ರೂಪಿಸುವಾಗ ಬಿಎಂಟಿಸಿಯನ್ನು ಕೇಂದ್ರೀಕೃತವಾಗಿಟ್ಟುಕೊಳ್ಳಬೇಕು. ನಗರದ ಅಭಿವೃದ್ಧಿ ಮತ್ತು ಸಾರಿಗೆ ಒಟ್ಟೊಟ್ಟಿಗೆ ಹೋಗಬೇಕು. ದುರದೃಷ್ಟವೆಂದರೆ ಈ ನಿಟ್ಟಿನಲ್ಲಿ ಯೋಜನೆಗಳು ರೂಪುಗೊಳ್ಳುತ್ತಿಲ್ಲ
-ವಿನಯ್‌ ಶ್ರೀನಿವಾಸ್‌, ಬಿಎಂಟಿಸಿ ಬಸ್‌ ಪ್ರಯಾಣಿಕರ ವೇದಿಕೆ ಸದಸ್ಯ

ಬಿಎಂಟಿಸಿ ಬಸ್‌ ಸೇವೆಗೆ ಸಮಸ್ಯೆ ಆಗಲಿದೆ ಎಂಬ ಕಾರಣಕ್ಕೆ ಉಪನಗರ ರೈಲು ಯೋಜನೆಯನ್ನು ನಾವು ದೂರಲು ಬರುವುದಿಲ್ಲ. ಮುಂಬೈ, ದೆಹಲಿಯಂತಹ ನಗರಗಳಲ್ಲಿ ಬಹು ಪ್ರಕಾರದ ಸಮೂಹ ಸಾರಿಗೆ ವ್ಯವಸ್ಥೆಗಳಿವೆ. ಬೆಂಗಳೂರಿಗೆ ಕೂಡ ಅಂತಹ ವ್ಯವಸ್ಥೆ ಅವಶ್ಯಕತೆ ಇದೆ. ಪೂರಕ ವ್ಯವಸ್ಥೆಯಾದರೆ ಉದ್ದೇಶ ಸಾಕಾರ.
-ಸಂಜೀವ ದ್ಯಾಮಣ್ಣವರ, ಉಪನಗರ ರೈಲು ಹೋರಾಟಗಾರ

* ವಿಜಯಕುಮಾರ್‌ ಚಂದರಗಿ

Advertisement

Udayavani is now on Telegram. Click here to join our channel and stay updated with the latest news.

Next