ವಿಜಯಪುರ: ವೀರಶೈವ-ಲಿಂಗಾಯತ ಸಮಾಜ ಪ್ರತ್ಯೇಕಿಸುವ ಹುನ್ನಾರ ಹಾಗೂ ರಂಭಾಪುರಿ ಶ್ರೀಗಳ ಅವಮಾನ ಮಾಡಿದವರನ್ನು ಬಂ ಧಿಸುವಂತೆ ಆಗ್ರಹಿಸಿ ಅಖೀಲ ಕರ್ನಾಟಕ ಜಂಗಮ ಕ್ಷೇಮಾಭಿವೃದ್ಧಿ ಮಹಾಸಭೆ ಜಿಲ್ಲಾ ಘಟಕದ ನೇತೃತ್ವದಲ್ಲಿ ನಗರದಲ್ಲಿ ಮೌನ ಪ್ರತಿಭಟನಾ ರ್ಯಾಲಿ ನಡೆಸಲಾಯಿತು.
ನಗರದ ಸಿದ್ದೇಶ್ವರ ದೇವಾಲಯದಿಂದ ರ್ಯಾಲಿ ಆರಂಭಿಸಿದ ಪ್ರತಿಭಟನಾಕಾರರು, ಜಿಲ್ಲಾ ಕಾರಿ ಕಛೇರಿಗೆ ತೆರಳಿದರು. ಸಮಾಜವನ್ನು ಒಡೆಯಬೇಡಿ, ರಂಭಾಪುರಿ ಶ್ರೀಗಳನ್ನು ಅವಮಾನಿಸಿದ ವ್ಯಕ್ತಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂಬ ಫಲಕ ಹಿಡಿದು ಪ್ರತಿಭಟಿಸಿದರು. ಈ ವೇಳೆ ಮಾತನಾಡಿದ ಜಂಗಮ ಸಮಾಜದ ಮುಖಂಡರು, ವೀರಶೈವ-ಲಿಂಗಾಯತ ಸಮಾಜವನ್ನು ಪ್ರತ್ಯೇಕಿಸಲು ಕೆಲ ಕಿಡಿಗೇಡಿಗಳು ಹುನ್ನಾರ ನಡೆಸಿದ್ದಾರೆ. ಅನಾದಿ ಕಾಲದ ಧರ್ಮವಾಗಿರುವ ವೀರಶೈವ-ಲಿಂಗಾಯತ ಧರ್ಮವನ್ನು ಒಡೆಯುವ ಕೃತ್ಯಕ್ಕೆ ಕೆಲವರು ಕೈ ಹಾಕಿದ್ದಾರೆ. ಅಲ್ಲದೇ ಇದಕ್ಕಾಗಿ ರಂಭಾಪುರಿ ಜಗದ್ಗುರುಗಳ ಭಾವಚಿತ್ರಕ್ಕೆ ಅಪಮಾನಿಸಿದ್ದು ಸಮಾಜದಲ್ಲಿ ಪ್ರತ್ಯೇಕತೆಯ ಭಾವನೆ ಹುಟ್ಟು ಹಾಕುತ್ತಿದೆ. ಸಂಸ್ಕಾರ, ಸದ್ವಿಚಾರದಿಂದ ಕೂಡಿದ ವೀರಶೈವ ಲಿಂಗಾಯತ ಧರ್ಮ ಯಾವ ಕಾರಣಕ್ಕೂ ಬೇರ್ಪಡಿಸಬಾರದು. ಇಂತಹ ಪ್ರಯತ್ನಕ್ಕೆ ಅವಕಾಶ
ನೀಡಬಾರದು ಎಂದು ಆಗ್ರಹಿಸಿದರು.
ಕೆಲ ವ್ಯಕ್ತಿಗಳು ವೀರಶೈವ ಹಾಗೂ ಲಿಂಗಾಯತ ಸಮಾಜವನ್ನು ಬೇರ್ಪಡಿಸುವ ಬಗ್ಗೆ ಪ್ರಚೋದನಕಾರಿ ಹೇಳಿಕೆ ನೀಡಿ ಸಮಾಜದಲ್ಲಿನ ಸಾಮರಸ್ಯ ಹಾಳು ಮಾಡಲು ಪ್ರಯತ್ನಿಸುತ್ತಿದ್ದು ಅಂತಹ ಕಿಡಿಗೇಡಿಗಳನ್ನು ಬಂ ಧಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಜಲ ಸಂಪನ್ಮೂಲ ಸಚಿವ ಡಾ| ಎಂ.ಬಿ. ಪಾಟೀಲ ಅವರು ಸಿಂದಗಿ ಸಾರಂಗಮಠದ ಶ್ರೀಗಳ ವಿಷಯದಲ್ಲಿ ಹಗುರವಾಗಿ ಮಾತನಾಡಿ ಅವಮಾನ ಮಾಡಿದ್ದು, ಕೂಡಲೇ ಪಾಟೀಲರು ಶ್ರೀಗಳ ಕ್ಷಮೆ ಯಾಚಿಸಬೇಕು. ಅಖೀಲ ಭಾರತ ವೀರಶೈವ ಮಹಾಸಭೆ ನಿರ್ಣಯದಂತೆ ವೀರಶೈವ-ಲಿಂಗಾಯತ ಧರ್ಮ ಎಂದು ಸರ್ಕಾರ ಕೇಂದ್ರಕ್ಕೆ ಶಿಫಾರಸು ಮಾಡಬೇಕು ಎಂದು ಆಗ್ರಹಿಸಿದರು.
ಆಲಮೇಲ ಚಂದ್ರಶೇಖರ ಶ್ರೀಗಳು, ಬಸವನಬಾಗೇವಾಡಿಯ ಶಿವಪ್ರಕಾಶ ಶ್ರೀಗಳು, ಕಲಕೇರಿಯ ಸಿದ್ದರಾಮ ಶ್ರೀಗಳು, ರುದ್ರಮುನಿ ಶ್ರೀಗಳು, ಅಭಿನವ ಮುರುಘೇಂದ್ರ ಶ್ರೀಗಳು ಪ್ರತಿಭಟನೆ ನೇತೃತ್ವ ವಹಿಸಿದ್ದರು. ಜಂಗಮ ಸಮಾಜದ ಮುಖಂಡರಾದ ಚಂದ್ರಕಾಂತ ಹಿರೇಮಠ, ಸಿದ್ಧರಾಮಯ್ಯ ಸಾವಳಗಿಮಠ, ಶಿವರುದ್ರಯ್ಯ ಹಿರೇಮಠ, ಗುರು ಗಚ್ಚಿನಮಠ, ಶಿವು ಮುಗಡ್ಲಿಮಠ, ರಾಜು ಮುತ್ತಿನಪೆಂಡಿನಮಠ, ರಾಜು ಹಿರೇಮಠ, ಅಶೋಕ ಮಠ, ಆರ್.ಐ. ಚೌಕಿಮಠ, ಗುರುಪಾದಯ್ಯ ಹಿರೇಮಠ, ವಿ.ಎಸ್. ನಿರಂಜನಮಠ, ಸಿದ್ಧು ಮಲ್ಲಿಕಾರ್ಜುನಮಠ, ರಾಜು ಗಚ್ಚಿನಮಠ, ಪ್ರಕಾಶ ಹಿರೇಮಠ ಮೊದಲಾದವರು ಪಾಲ್ಗೊಂಡಿದ್ದರು.