Advertisement

ಬಿಜೆಪಿ ವಿರೋಧಿ ಅಲೆ ಆರಂಭ: ಸುಭಾಷ ರಾಠೊಡ

06:24 PM Nov 01, 2022 | Team Udayavani |

ಚಿಂಚೋಳಿ: ಪಟ್ಟಣದಲ್ಲಿ ನಡೆದ ಸ್ಥಳೀಯ ಪುರಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷದ ಅಭ್ಯರ್ಥಿ ಗೆಲುವಿನ ಫಲಿತಾಂಶದಿಂದ ತಾಲೂಕಿನಲ್ಲಿ ಬದಲಾವಣೆ ಗಾಳಿ ಬಿಜೆಪಿ ವಿರೋಧಿ  ಅಲೆ ಪ್ರಾರಂಭವಾಗಿದೆ. ಮುಂದಿನ 2023 ವಿಧಾನಸಭೆ ಚುನಾವಣೆಗೆ ದಿಕ್ಸೂಚಿಯಾಗಲಿದೆ ಎಂದು ಕಾಂಗ್ರೆಸ್‌ ಮುಖಂಡ ಸುಭಾಷ ರಾಠೊಡ ತಿಳಿಸಿದ್ದಾರೆ.

Advertisement

ಪಟ್ಟಣದ ಕಾಂಗ್ರೆಸ್‌ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಾರ್ಡ14ಕ್ಕೆ ನಡೆದ ಉಪಚುನಾವಣೆಯಲ್ಲಿ ಕಲಬುರಗಿ ಬಿಜೆಪಿ ಸಂಸದ ಡಾ| ಉಮೇಶ ಜಾಧವ್‌ ಸರ್ವಶಕ್ತಿ ಉಪಯೋಗ ಮಾಡಿದ್ದಾರೆ.

ಬಿಜೆಪಿ ಶಾಸಕ ಡಾ|ಅವಿನಾಶ ಜಾಧವ್‌ ಮನೆ ಮನೆಗೆ ಹೋಗಿ ಎಲ್ಲ ಶಕ್ತಿ ಬಳಸಿ ಜನರಿಗೆ ಸಾಲ, ಮನೆ ಮಂಜೂರಿ ಮಾಡಲಾಗುವುದು ಎಂದು ಆಮಿಷವೊಡ್ಡಿದ್ದಾರೆ. ಸಂಸದರು ಕೂಡಾ ಪ್ರಚಾರ ನಡೆಸಿದ್ದರು. ಮತದಾರರು ಈ ಸುಳ್ಳು ಭರವಸೆಗೆ ಒಳಗಾಗದೇ ಕಾಂಗ್ರೆಸ್‌ ಪಕ್ಷಕ್ಕೆ ಬೆಂಬಲ ನೀಡಿರುವುದು ಸಂತಸವಾಗಿದೆ ಎಂದರು.

ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರ ಭಾರತ ಜೋಡೋ ಪಾದಯಾತ್ರೆಯಿಂದ ಹಾಗೂ ಎಐಸಿಸಿ(ಐ) ಅಧ್ಯಕ್ಷ ಸ್ಥಾನಕ್ಕೆ ಡಾ|ಮಲ್ಲಿಕಾರ್ಜುನ ಖರ್ಗೆ ಆಯ್ಕೆ ಆಗಿರುವುದರಿಂದ ಇಡೀ ದೇಶದಲ್ಲಿ ಸಂಚಲನ ಪ್ರಾರಂಭವಾಗಿದೆ. ರಾಜ್ಯದಲ್ಲಿ ಕಾಂಗ್ರೆಸ್‌ ಪಕ್ಷಕ್ಕೆ ಹೆಚ್ಚಿನ ಶಕ್ತಿ ಬಂದಿದೆ. ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜಸಿಂಗ ಚವ್ಹಾಣ ಖರ್ಗೆ ಅವರಿಗೆ ಬಲಿಕಾ ಬಕ್ರಾ ಮಾಡಿದ್ದಾರೆ ಎಂದು ಕಲಬುರಗಿಯಲ್ಲಿ ನಡೆದ ಒಬಿಸಿ ಸಮಾವೇಶದಲ್ಲಿ ಮಾತನಾಡಿದ್ದಕ್ಕೆ ಆಕ್ರೋಶ ವ್ಯಕ್ತಪಡಿಸಿದ ಅವರು, ಮುಂದಿನ ದಿನಗಳಲ್ಲಿ ಯಾರು ಬಕರಾ ಯಾರು ಹುಲಿ ಆಗುತ್ತಾರೆ ಎಂಬುದು ಗೊತ್ತಾಗಲಿದೆ. ಜನರೇ ತೀರ್ಮಾನ ಮಾಡಲಿದ್ದಾರೆ ಎಂದು ತಿರುಗೇಟು ನೀಡಿದರು.

ಪುರಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷ ಗೆಲುವು ಸಾಧಿಸಿದ್ದರಿಂದ ನಮ್ಮ ಪಕ್ಷಕ್ಕೆ ಹೆಚ್ಚಿನ ಬಲವನ್ನು ಮತದಾರರು ನೀಡಿದ್ದಾರೆ. ಸತ್ಯಕ್ಕೆ ಸಿಕ್ಕ ಗೆಲುವು ಆಗಿದೆ. ಗಡಿಪ್ರದೇಶದ ಕುಂಚಾವರಂದಿಂದ ಚಿಂಚೋಳಿ ಪಟ್ಟಣದವರೆಗೆ ಪಾದಯಾತ್ರೆ ನಡೆಸಲಾಗುತ್ತಿದೆ. ಇದರಲ್ಲಿ ಗಡಿಪ್ರದೇಶದ ಸಾವಿರಾರು ಕಾಂಗ್ರೆಸ್‌ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲಿದ್ದಾರೆ ಎಂದು ಕಾಂಗ್ರೆಸ್‌ ಮುಖಂಡ ಸುಭಾಷ ರಾಠೊಡ ತಿಳಿಸಿದರು.

Advertisement

ಸುದ್ದಿಗೋಷ್ಠಿಯಲ್ಲಿ ತಾಲೂಕ ಬ್ಲಾಕ್‌ ಕಾಂಗ್ರೆಸ್‌ ಕಮಿಟಿ ಅಧ್ಯಕ್ಷ ಬಸವರಾಜ ಮಲಿ, ಜಗನ್ನಾಥ ಕಟ್ಟಿ, ಬಸಯ್ಯ ಗುತ್ತೆದಾರ, ಚಿತ್ರಶೇಖರ ಪಾಟೀಲ, ಅಬ್ದುಲ್‌ ಬಾಸೀತ, ಸಂತೋಷ ಗುತ್ತೇದಾರ, ಚಿರಂಜೀವಿ, ನರಸಿಂಹಲು ಕುಂಬಾರ, ಗೋಪಾಲ ಜಾಧವ್‌, ನಾಗೇಶ ಗುಣಾಜಿ ಇನ್ನಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next