Advertisement

ಹಣೆಗೆ ಸಿಂಧೂರ-ಮತದಾನಕ್ಕೆ ಆಹ್ವಾನ ಪತ್ರ

10:46 AM Apr 08, 2018 | |

ಹೊಸಪೇಟೆ: ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಅಧಿಕಾರಿಗಳು ಹಲವು ರೀತಿಯಲ್ಲಿ ಮತದಾನ ಜಾಗೃತಿ ಮೂಡಿಸುತ್ತಿದ್ದಾರೆ. ಬಳ್ಳಾರಿ ಜಿಲ್ಲೆಯ ವಿಜಯನಗರ ಕ್ಷೇತ್ರದಲ್ಲಿ ಶನಿವಾರ ವಿನೂತನವಾಗಿ ಮತ ಜಾಗೃತಿ ಮಾಡಲಾಗಿದೆ. ಮತದಾರರಲ್ಲಿ ಮತದಾನ ಜಾಗೃತಿ ಮೂಡಿಸಲು ಮಹಿಳೆಯರ ಹಣೆಗೆ ಸಿಂಧೂರವನ್ನಿಟ್ಟು, ಮತದಾನದ ಕರೆಯೋಲೆ ನೀಡುವ ಮೂಲಕ ಮತದಾನದ ಮಹತ್ವ ತಿಳಿಸಲಾಗಿದೆ. ಈ ವಿನೂತನ ಕಾರ್ಯಕ್ರಮಕ್ಕೆ ಉಪವಿಭಾಗಾಧಿಕಾರಿ ಗಾರ್ಗಿ ಜೈನ್‌ ಅವರು ಶನಿವಾರ ಚಾಲನೆ ನೀಡಿ ತಪ್ಪದೆ ಮತ ಚಲಾಯಿಸುವಂತೆ ಮನವಿ ಮಾಡಿದ್ದಾರೆ.

Advertisement

ನಗರದ ಸಣ್ಣಕ್ಕಿ ವೀರಭದ್ರೇಶ್ವರ ದೇವಸ್ಥಾನದ ಎದುರು ಮಹಿಳೆಯರ ಹಣೆಗೆ ತಿಲಕವಿಟ್ಟು ಮತದಾನದ ಮಮತೆಯ ಕರೆಯೋಲೆಯನ್ನು ಅವರು ವಿತರಿಸಿದ್ದಾರೆ. ನಂತರ ಮಾತನಾಡಿದ ಅವರು, ಎಲ್ಲಿ ಮತದಾನ ಕಡಿಮೆಯಾಗುತ್ತಿದೆ. ಆ ಮತಗಟ್ಟೆಯ ಪ್ರದೇಶಗಳಲ್ಲಿ ಹೆಚ್ಚಿನ ಜಾಗೃತಿ ಮೂಡಿಸಬೇಕು. 

ಪ್ರಜಾಪ್ರಭುತ್ವಕ್ಕೆ ನಿಮ್ಮ ಅಮೂಲ್ಯವಾದ ಮತ ಚಲಾಯಿಸಿ. ಯಾವುದೇ ಆಮಿಷಕ್ಕೆ ಒಳಗಾಗದೆ ಯೋಗ್ಯರನ್ನು ಆಯ್ಕೆ ಮಾಡಬೇಕು ಎಂದರು. ವಿಜಯನಗರ ವಿಧಾನಸಭಾ ಕ್ಷೇತ್ರದಲ್ಲಿ 18 ಸೆಕ್ಟರ್‌ಗಳಿದ್ದು, ಇದರಲ್ಲಿ 11 ಸೆಕ್ಟರ್‌ಗಳಲ್ಲಿ ಕ್ಷೇತ್ರಾದ್ಯಂತ 800 ಮಹಿಳೆಯರು ಮತದಾನದ ಕುರಿತು ಜಾಗೃತಿ ಮೂಡಿಸುವ ಕಾರ್ಯ ಮಾಡುತ್ತಿದ್ದಾರೆ. ಪ್ರತಿ
ಸೆಕ್ಟರ್‌ಗೆ 50 ಜನ ಮಹಿಳೆಯರು ಕರೆಯೋಲೆ ಕರಪತ್ರಗಳೊಂದಿಗೆ ಸಿಹಿ ಹಂಚಿ, ಕುಂಕುಮ ಮತ್ತು ಹೂ ನೀಡಿ ಮೇ 12 ರಂದು ನಡೆಯುವ ವಿಧಾನಸಭಾ ಚುನಾವಣೆಯಲ್ಲಿ ಮತಚಲಾಯಿಸಲು ಕೋರುತ್ತಿದ್ದಾರೆ ಎಂದರು.

18 ವರ್ಷದ ತುಂಬಿದ ಮತದಾರರು ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸಿಕೊಳ್ಳಬೇಕು. ನಿಮ್ಮ ಮತ ಚಲಾಯಿಸುವ ಅಧಿಕಾರವನ್ನು ವ್ಯರ್ಥ ಮಾಡದೇ, ಯಾವುದೇ ಆಮಿಷಕ್ಕೆ ಒಳಗಾಗದೇ ತಪ್ಪದೇ ಹಾಗೂ ಹೆಮ್ಮೆಯಿಂದ ಮತ ಚಲಾಯಿಸಿಸಬೇಕು ಎಂದು ಹೇಳಿದರು. 

ಪೂರ್ಣಕುಂಭದೊಂದಿಗೆ ಕುಂಕುಮ, ಸಿಹಿ ಮತ್ತು ಹೂವುಗಳನ್ನು ಹೊತ್ತುಕೊಂಡು ನಾರಿಯರು ಮನೆಮನೆಗೆ ತೆರಳಿ ಮತದಾನದ ಮಮತೆಯ ಕರೆಯೋಲೆ ನೀಡುವುದರ ಮೂಲಕ ಮತದಾನದ ಜಾಗೃತಿ ಮೂಡಿಸಿದರು.
 
ತಹಶೀಲ್ದಾರ್‌ ಗಂಗಪ್ಪ, ತಾ.ಪಂ. ಇಒ ವೆಂಕೋಬಪ್ಪ, ಅಧಿಕಾರಿಗಳಾದ ಎಲ್‌.ಡಿ. ಜೋಷಿ, ಪ್ರಭಾಕರ್‌, ಕಿಶೋರ್‌, ರಾಜೇಂದ್ರ, ಮಂಜುನಾಥ್‌ ಇತರರಿದ್ದರು. 

Advertisement
Advertisement

Udayavani is now on Telegram. Click here to join our channel and stay updated with the latest news.

Next