Advertisement

ಅಕ್ರಮ ನೇಮಕಾತಿ ವಿರುದ್ಧ ಅನಿರ್ದಿಷ್ಠಾವಧಿ ಧರಣಿ 4ನೇ ದಿನಕ್ಕೆ

09:55 PM Dec 29, 2019 | Lakshmi GovindaRaj |

ಚಾಮರಾಜನಗರ: ಜಿಲ್ಲಾ ಹಾಲು ಒಕ್ಕೂಟದಲ್ಲಿ ನಡೆದಿರುವ ಅಕ್ರಮ ನೇಮಕಾತಿ ವಿರುದ್ಧ ಭ್ರಷ್ಟಾಚಾರ ವಿರೋಧಿ ಆಂದೋಲನ ವೇದಿಕೆ, ಕರ್ನಾಟಕ ಪ್ರಾಂತ್ಯ ರೈತ ಮತ್ತು ಕಾರ್ಮಿಕ ರಕ್ಷಣಾ ವೇದಿಕೆ, ಕಸ್ತೂರಿ ಕರ್ನಾಟಕ ಜನಪರ ವೇದಿಕೆ ಹಾಗೂ ಪ್ರಗತಿಪರ ಸಂಘಟನೆಗಳ ಕಾರ್ಯಕರ್ತರು ಕುದೇರಿನ ಚಾಮುಲ್‌ ಮುಂಭಾಗ ನಡೆಸುತ್ತಿರುವ ಪ್ರತಿಭಟನಾ ಧರಣಿ 4ನೇ ದಿನಕ್ಕೆ ಕಾಲಿಟ್ಟಿದೆ.

Advertisement

ಭ್ರಷ್ಟಾಚಾರ ವಿರೋಧಿ ಆಂದೋಲನ ವೇದಿಕೆಯ ಜಿಲ್ಲಾಧ್ಯಕ್ಷ ಡಿ.ಪರಶಿವಮೂರ್ತಿ ಮಾತನಾಡಿ, ಚಾಮುಲ್‌ನ ವಿವಿಧ ಹುದ್ದೆಗಳ ನೇಮಕಾತಿಯಲ್ಲಿ ಅವ್ಯವಹಾರ ನಡೆದಿದೆ. ಕಳೆದ ನಾಲ್ಕು ದಿನಗಳಿಂದ ಪ್ರತಿಭಟನಾಧರಣಿ ನಡೆಸಲಾಗುತ್ತಿದೆ. ಸೌಜನ್ಯಕ್ಕಾದರೂ ಜಿಲ್ಲಾ ಉಸ್ತುವಾರಿ ಸಚಿವರಾಗಲಿ ಅಥವಾ ಜಿಲ್ಲೆಯ ಶಾಸಕರಾಗಲಿ ಭೇಟಿನೀಡಿ ಸಮಸ್ಯೆ ಆಲಿಸಿಲ್ಲ. ಇದನ್ನು ನೋಡಿದರೆ ಚಾಮುಲ್‌ ಅಕ್ರಮ ನೇಮಕಾತಿಯಲ್ಲಿ ಜಿಲ್ಲೆ ಉಸ್ತುವಾರಿ ಸಚಿವರು, ಶಾಸಕರು ಶಾಮೀಲಾಗಿದ್ದಾರೆ ಎನ್ನುವ ಸಂಶಯ ವ್ಯಕ್ತವಾಗುತ್ತದೆ ಎಂದರು.

ಚಾಮರಾಜನಗರ ಜಿಲ್ಲಾ ಹಾಲು ಒಕ್ಕೂಟದ ವಿವಿಧ 72 ಹುದ್ದೆಗಳನ್ನು ನೇಮಕ ಮಾಡಿಕೊಳ್ಳುವ ಸಂಬಂಧ ಮೀಸಲಾತಿ ವರ್ಗೀಕರಣದ ಅನ್ವಯ ನೇಮಕ ಮಾಡಿಕೊಂಡಿಲ್ಲ. ಮಂಗಳೂರು ಸಂಸ್ಥೆಯಿಂದ ಪರೀಕ್ಷೆ ನಡೆಸಿ ತಮಗಿಷ್ಟ ಬಂದಂತೆ ನೇಮಕ ಮಾಡಿಕೊಂಡಿದ್ದಾರೆ. ಆದರೆ ಒಕ್ಕೂಟದ ಅಧ್ಯಕ್ಷ ಗುರುಮಲ್ಲಪ್ಪ ಹುದ್ದೆಗಳನ್ನು ನಿಯಮ ಬದ್ಧವಾಗಿಯೇ ಇದೆ. ಪಾರದರ್ಶಕತೆ ಪಾಲಿಸಿದ್ದೇವೆ. ಯಾವುದೇ ಭ್ರಷ್ಟಾಚಾರ, ಅಕ್ರಮ ನಡೆದಿಲ್ಲ ಎನ್ನುತ್ತಾರೆ.

ಹಾಗಾದರೆ ನೇಮಕಾತಿ ದಾಖಲಾತಿಗಳನ್ನು ಬಹಿರಂಗ ಪಡಿಸಲಿ ಎಂದು ಸವಾಲು ಹಾಕಿದರು. ಜಿಲ್ಲೆಯ ಶಾಸಕರು ಚಾಮುಲ್‌ನ ಹುದ್ದೆಗಳ ನೇಮಕಾತಿಯಲ್ಲಿ ನಡೆದಿರುವ ಅಕ್ರಮವನ್ನು ಸರ್ಕಾರದ ಗಮನಕ್ಕೆ ತಂದು ನೇಮಕಾತಿ ರದ್ದುಪಡಿಸಿ, ಮರುಪರೀಕ್ಷೆ ನಡೆಸುವ ಮೂಲಕ ಜಿಲ್ಲೆಯ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ನ್ಯಾಯ ದೊರಕಿಸಿಕೊಡುವ ಕೆಲಸ ಮಾಡಬೇಕು ಎಂದರು.

ದಲಿತ ಮುಖಂಡ ವೆಂಕಟರಮಣಸ್ವಾಮಿ (ಪಾಪು) ಮಾತನಾಡಿ, ಜಿಲ್ಲಾ ಹಾಲು ಒಕ್ಕೂಟದಲ್ಲಿ ನಡೆದಿರುವ ಅಕ್ರಮ ನೇಮಕಾತಿ ವಿರುದ್ಧ ಕಳೆದ 4 ದಿನಗಳಿಂದ ಪ್ರತಿಭಟನಾ ಧರಣಿ ನಡೆಸಲಾಗುತ್ತಿದೆ. ಸ್ಥಳಕ್ಕೆ ಯಾವ ಅಧಿಕಾರಿ ಭೇಟಿ ನೀಡಿ ಸಮಸ್ಯೆ ಆಲಿಸದ ಕಾರಣ ಸೋಮವಾರ ಸಂತೇಮರಹಳ್ಳಿ ಹೋಬಳಿ ಸ್ವಯಂಪ್ರೇರಿತ ಬಂದ್‌ ಕರೆ ನೀಡಲಾಗಿದೆ, ನಂತರದ ದಿನಗಳಲ್ಲಿ ತೀವ್ರತರ ನಿರಂತರ ಹೋರಾಟವನ್ನು ರೂಪಿಸಲಾಗುವುದು ಎಂದು ಎಚ್ಚರಿಸಿದರು.

Advertisement

ಸಂತಾಪ: ಧರಣಿ ಸಂದರ್ಭದಲ್ಲಿ ಪೇಜಾವರ ಶ್ರೀಗಳ ನಿಧನಕ್ಕೆ 2 ನಿಮಿಷಗಳ ಕಾಲ ಮೌನ ಆಚರಿಸಿ ಗೌರವ ಸಂತಾಪ ಸೂಚಿಸಿಲಾಯಿತು. ಧರಣಿಯಲ್ಲಿ ಜಿಲ್ಲಾ ಅಭಿವೃದ್ಧಿ ಹೋರಾಟ ಸಮಿತಿ ಅಧ್ಯಕ್ಷ ಕೆ.ವೀರಭದ್ರಸ್ವಾಮಿ, ಕಸ್ತೂರಿ ಕರ್ನಾಟಕ ಜನಪರ ವೇದಿಕೆ ಜಿಲ್ಲಾಧ್ಯಕ್ಷ ಮಲ್ಲು ಯರಗಂಬಳ್ಳಿ, ಕರ್ನಾಟಕ ಪ್ರಾಂತ್ಯ ರೈತ ಮತ್ತು ಕಾರ್ಮಿಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಪಿ.ಗೋವಿಂದರಾಜು, ಜಯಕರ್ನಾಟಕ ರಕ್ಷಣಾ ಸೇನೆಯ ಜಿಲ್ಲಾ ಉಪಾಧ್ಯಕ್ಷ ಎಸ್‌.ಮರಪ್ಪ, ಬದನಗುಪ್ಪೆ ಮಹೇಶ್‌, ರಾಮಸಮುದ್ರ ಸುರೇಶ್‌, ವೀಣಾ, ಉಮ್ಮತ್ತೂರು ನಾಗೇಶ್‌, ಶಂಭುಲಿಂಗಸ್ವಾಮಿ, ನಾಗರಾಜು, ಸಿದ್ದು, ಮಹೇಶ್‌, ನಂಜುಂಡಯ್ಯ, ಶ್ರೀನಿವಾಸಮೂರ್ತಿ, ವೃಷಭೇಂದ್ರಸ್ವಾಮಿ ಇತರರು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next