ಮಾಲೂರು: ಈಗಷ್ಟೇ ಬೇಸಿಗೆ ಆರಂಭವಾಗಿದ್ದು, ನೀರಿನ ಸಮಸ್ಯೆ ದಿನೇ ದಿನೆ ಹೆಚ್ಚುತ್ತಿದೆ. ಹೀಗಾಗಿ ಜನ-ಜಾನುವಾರು ನೀರಿಗಾಗಿ ನಿತ್ಯ ಪರಿತಪ್ಪಿಸುವಂತಾಗಿದೆ. ಹೀಗಾಗಿ ಸಂಬಂಧಿಸಿದವರು ನೀರಿನ ಸಮಸ್ಯೆ ತೀವ್ರವಾಗುವುದಕ್ಕಿಂತ ಮೊದಲೇ ನೀರು ಪೂರೈಕೆಗೆ ಕ್ರಮಕೈಗೊಳ್ಳುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಕೋಲಾರ ಜಿಲ್ಲೆಗೆ ಕೆರೆಗಳೇ ಜೀವಾಳ. ನದಿ, ನಾಲೆಗಳು ಸೇರಿ ಒಂದೇ ಒಂದು ಶಾಶ್ವತ ನೀರಾವರಿ ಯೋಜನೆಗಳಿಲ್ಲ. ಹೀಗಾಗಿ ಜಿಲ್ಲೆಯ ಜನರು ಮಳೆಯಾಶ್ರಿತ ಕೆರೆ ಹಾಗೂ ಕುಂಟೆಗಳನ್ನೇ ಆಶ್ರಯಿಸಿದ್ದಾರೆ. ಇಂತಹ ಸ್ಥಿತಿಯಲ್ಲಿ ಕಳೆದ ಮೂರು-ನಾಲ್ಕು ವರ್ಷಗಳಿಂದ ಸಮರ್ಪಕವಾಗಿ ಮಳೆಯಾಗದೆ, ಜನ ಮತ್ತು ಜಾನುವಾರು ಕುಡಿಯುವ ನೀರಿಗೆ ಪರಿತಪ್ಪಿಸುವಂತಾಗಿದೆ. ಆದರೆ ಜನಪ್ರತಿನಿಧಿಗಳಾಗಲಿ, ಸಂಬಂಧಿಸಿದ ಅಧಿಕಾರಿಗಳಾಗಲಿ ಈವರೆಗೂ ಯಾವುದೇ ಕ್ರಮಕೈಗೊಂಡಿಲ್ಲ ಎಂದು ಸಾರ್ವಜನಿಕರ ಆರೋಪವಾಗಿದೆ.
ಕುಡಿಯಲು ಸಿಗುತ್ತಿಲ್ಲ ನೀರು: ಪ್ರಸ್ತುತ ವರ್ಷದಲ್ಲಿ ಕಡಿಮೆ ಮಳೆಯಾಗಿರುವ ಕಾರಣ ಗ್ರಾಮೀಣ ಭಾಗದಲ್ಲಿ ಜಾನುವಾರಿಗೆ ಕುಡಿಯುವ ನೀರಿನ ಬವಣೆ ಅತಿಯಾಗಿ ಕಾಡುತ್ತಿದೆ. ರೈತರು, ಜಾನುವಾರು ಮೇವು ಮತ್ತು ಕುಡಿಯುವ ನೀರಿಗೆ ಗುಳೆಹೋಗುವ ಸ್ಥಿತಿ ನಿರ್ಮಾಣವಾಗಿದೆ. ಕೆರೆಗಳು ಸಂಪೂರ್ಣ ಬತ್ತಿವೆ. ಜತೆಗೆ ಅಂತರ್ಜಲ 1,200 ಅಡಿಗಳಿಗೆ ಕುಸಿದಿದ್ದು, ಕುಡಿಯುವ ನೀರು ಸಿಗದಂತಾಗಿದೆ. ಹೀಗಾಗಿ ಸಂಬಂಧಿಸಿದ ಅಧಿಕಾರಿಗಳು ಗ್ರಾಮದಲ್ಲಿ ನೀರಿನ ಸಮಸ್ಯೆಯಾಗದಂತೆ ಕ್ರಮಕೈಗೊಳ್ಳಬೇಕು ಎಂಬುದು ಸಾರ್ವಜನಿಕರ ಅಳಲಾಗಿದೆ.
ತಾಲೂಕಿನಲ್ಲಿರುವ ಕುಡಿಯುವ ನೀರಿನ ಸಮಸ್ಯೆ ಗಂಭೀರವಾಗಿ ಪರಿಗಣಿಸಲು ಗ್ರಾಪಂ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಅದೇ ರೀತಿ ಅರಣ್ಯ ಪ್ರದೇಶದಲ್ಲಿ ವನ್ಯಜೀವಿಗಳು ಮತ್ತು ಜಾನುವಾರು ಕುಡಿಯುವ ನೀರಿಗೂ ವ್ಯವಸ್ಥೆಗೊಳಿಸಲು ನೀಡಲು ಸೂಚಿಸಲಾಗಿದೆ.
-ಕೃಷ್ಣಪ್ಪ, ಇಒ ತಾಪಂ
ಜಾನುವಾರು ಮತ್ತು ಸಾಕು ಪ್ರಾಣಿ ಬಗ್ಗೆ ಪಾಲಕರು ಎಚ್ಚರ ವಹಿಸಲಿದ್ದಾರೆ. ಆದರೆ ವನ್ಯಜೀವಿಗಳ ಬಗ್ಗೆ ಸರಕಾರಗಳು ಮತ್ತು ಸಾರ್ವಜನಿಕರು ಹೆಚ್ಚಿನ ಗಮನ ಹರಿಸಿದರೆ ಉತ್ತಮ.
-ಎಂ.ವಿ.ನಾಗರಾಜಯ್ಯ, ಪ್ರಾಣಿ ಪ್ರಿಯರು