Advertisement

ಸಂಕಲ್ಪದ ಕಹಳೆ: ಬಿಜೆಪಿ ಚುನಾವಣ ಪ್ರಚಾರಕ್ಕೆ ಹಳೇ ಮೈಸೂರು ಭಾಗದಿಂದಲೇ ಅಮಿತ್‌ ಶಾ ಚಾಲನೆ

01:02 AM Dec 31, 2022 | Team Udayavani |

ಮಂಡ್ಯ/ಬೆಂಗಳೂರು : ರಾಜ್ಯ ವಿಧಾನಸಭೆ ಚುನಾವಣೆಗೆ ಬಿಜೆಪಿ ಸಮರೋಪಾದಿಯಲ್ಲಿ ಸಜ್ಜಾಗುತ್ತಿದೆ. ಹಳೇ ಮೈಸೂರು ಭಾಗದಲ್ಲಿನ ಪಕ್ಷದ ಪ್ರಚಾರಕ್ಕೆ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರೇ “ಕಣಕಹಳೆ’ ಊದುವ ಮೂಲಕ ಚಾಲನೆ ನೀಡಿದ್ದಾರೆ.

Advertisement

ಜತೆಗೆ, ಡಬಲ್‌ ಎಂಜಿನ್‌ ಸರಕಾರದಿಂದ ಅಭಿವೃದ್ಧಿ ಯೋಜನೆಗಳು ಸಾಕಾರಗೊಳ್ಳುತ್ತಿದ್ದು, ಉತ್ತಮ ಆಡಳಿತ ನೀಡಲಾಗುತ್ತಿದೆ. ಹಾಗಾಗಿ ಮತ್ತೆ ಬಿಜೆಪಿಗೆ ಬಲತುಂಬಿ ಎಂದು ಕಾರ್ಯಕರ್ತರಲ್ಲಿ ಮತ್ತು ಸಾರ್ವಜನಿಕರಲ್ಲಿ ಮನವಿ ಮಾಡಿದರು.

ಮಂಡ್ಯದ ವಿಶ್ವವಿದ್ಯಾನಿಲಯದ ಆವರಣದಲ್ಲಿ ನಡೆದ ಬಿಜೆಪಿಯ ಜನಸಂಕಲ್ಪ ಯಾತ್ರೆಯಲ್ಲಿ ಭಾಗಿಯಾದ ಅಮಿತ್‌ ಶಾ ಅವರು, ಹಳೇ ಮೈಸೂರು ಭಾಗಕ್ಕೆ ನೀಡಿದ ಕೊಡುಗೆಗಳ ಬಗ್ಗೆ ಪ್ರಸ್ತಾವಿಸಿದರು. ಕಾಂಗ್ರೆಸ್‌ ಹಾಗೂ ಜೆಡಿಎಸ್‌ ವಿರುದ್ಧ ಹರಿಹಾಯ್ದ ಅವರು, ಅವು ಜಾತಿವಾದಿ, ಭ್ರಷ್ಟಾಚಾರದ ಜತೆಗೆ ಕ್ರಿಮಿನಲ್‌ಗ‌ಳನ್ನು ಪೋಷಿಸುವ ಪಕ್ಷಗಳಾಗಿವೆ ಎಂದು ಆರೋಪಿಸಿದರು.
ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಕುಟುಂಬ ರಾಜಕಾರಣದ ಪಕ್ಷಗಳು. ಕಾಂಗ್ರೆಸ್‌ ಆಡಳಿತದಲ್ಲಿ ಕರ್ನಾಟಕ ದಿಲ್ಲಿಗೆ “ಎಟಿಎಂ’ ಆಗುತ್ತದೆ. ಜೆಡಿಎಸ್‌ ಆಡಳಿತದಲ್ಲಿ ಕರ್ನಾಟಕ ಒಂದು ಕುಟುಂಬಕ್ಕೆ “ಎಟಿಎಂ’ ಆಗುತ್ತದೆ. ಈ ಎರಡೂ ಪಕ್ಷಗಳು ಭ್ರಷ್ಟಾಚಾರದ ಮೂಲಕ ಈ ನೆಲದ ಅಭಿವೃದ್ಧಿಯನ್ನು ತಡೆಯುತ್ತಿವೆ ಎಂದು ಕಿಡಿಕಾರಿದರು.

ಕೈ-ದಳ ಕಿತ್ತೆಸೆಯಿರಿ
ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಪಕ್ಷಗಳನ್ನು ಕಿತ್ತೆಸೆಯಬೇಕಿದೆ. ಇವರ ಆಡಳಿತದಲ್ಲಿ ದಲಿತರಿಗೆ-ಆದಿವಾಸಿಗಳಿಗೆ ಅನ್ಯಾಯವಾಗಿದೆ. ದಲಿತರಾದ ರಾಮನಾಥ್‌ ಕೋವಿಂದ್‌ ಹಾಗೂ ದ್ರೌಪದಿ ಮರ್ಮು ಅವರನ್ನು ರಾಷ್ಟ್ರಪತಿಗಳನ್ನಾಗಿ ಮಾಡುವ ಮೂಲಕ ದಲಿತರಿಗೆ ನಾವು ಗೌರವ ಸಲ್ಲಿಸಿದ್ದೇವೆ. ದೀನದಲಿತರ ಕಲ್ಯಾಣ ಮಾಡುವ ಕೆಲಸ ಮಾಡಿದ್ದೇವೆ. ಎಸ್ಸಿ, ಎಸ್ಟಿಗಳ ಮೀಸಲು ಹೆಚ್ಚಳ ಮಾಡಿದ್ದೇವೆ ಎಂದರು.

ಹಳೇ ಮೈಸೂರು ಭಾಗಕ್ಕೆ ಯೋಜನೆ ನೀಡಿಲ್ಲ
ಹಳೇ ಮೈಸೂರು ಪ್ರಾಂತ್ಯಕ್ಕೆ ಕಾಂಗ್ರೆಸ್‌ನಿಂದಾಗಲಿ, ಜೆಡಿಎಸ್‌ನಿಂದಾಗಲಿ ಯಾವುದೇ ಕೊಡುಗೆ ಇಲ್ಲ. ವಿಕಾಸಕ್ಕೆ ಏನೂ ಯೋಜನೆ ಜಾರಿಗೊಳಿಸಿಲ್ಲ. ಬಿಜೆಪಿಯಿಂದ ಮಾತ್ರ ಅಭಿವೃದ್ಧಿ ಸಾಧ್ಯ. ಬೆಂಗಳೂರು-ಮೈಸೂರು ಹೆದ್ದಾರಿ ನಿರ್ಮಿಸಲಾಗಿದ್ದು, ಮೈಷುಗರ್‌ ಕಾರ್ಖಾನೆ ಆರಂಭಿಸಲಾಗಿದೆ. ಆದ್ದರಿಂದ ಬಿಜೆಪಿಗೆ ಬೃಹತ್‌ ಮಟ್ಟದ ಬೆಂಬಲ ನೀಡಿ ಎಂದು ಮನವಿ ಮಾಡಿದರು.

Advertisement

ಶಾ ಬಂದ ಮೇಲೆ ಸುನಾಮಿ
ಅಮಿತ್‌ ಶಾ ಕಾಲಿಟ್ಟ ಮೇಲೆ ಕರ್ನಾಟಕ ದಲ್ಲಿ ಸುನಾಮಿಯಾಗಿ 2023ಕ್ಕೆ ಅಧಿಕಾರಕ್ಕೆ ಬರುವುದರಲ್ಲಿ ಅನುಮಾನ ಇಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. 30 ವರ್ಷಗಳಿಂದ ಕಾಂಗ್ರೆಸ್‌, ಜೆಡಿಎಸ್‌ ಆಡಳಿತದಿಂದ ಜನ ಬೇಸತ್ತಿದ್ದಾರೆ. ಈ ಭಾಗದ ನೀರಾವರಿ, ಸಕ್ಕರೆ ಕಾರ್ಖಾನೆ ಬಗ್ಗೆ ತೀರ್ಮಾನ ಕೈಗೊಳ್ಳಲಿಲ್ಲ. ಮಂಡ್ಯದಲ್ಲಿ ಈ ಬಾರಿ ಚುನಾವಣೆಯಲ್ಲಿ ಅಧಿಕ ಸ್ಥಾನವನ್ನು ಬಿಜೆಪಿ ಪಡೆಯುತ್ತದೆ. ಮೈಷುಗರ್‌ ಆರಂಭ ದಿಂದ ಕಬ್ಬು ಬೆಳೆಗಾರರ ಆತ್ಮ ವಿಶ್ವಾಸ ಹೆಚ್ಚಾಗಿದೆ. ಸರಕಾರಿ ಸ್ವಾಮ್ಯದ, ರೈತರ ಲಾಭ ದಾಯಕ ಕಾರ್ಖಾನೆ ಮಾಡುತ್ತೇವೆ ಎಂದರು. ಸಮಾವೇಶದಲ್ಲಿ ಕೇಂದ್ರ ಸಚಿವ ಪ್ರಹ್ಲಾದ್‌ ಜೋಷಿ, ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್‌ ಕುಮಾರ್‌ ಕಟೀಲು, ಸಚಿವರಾದ ಡಾ.ಕೆ.ಎನ್‌. ಅಶ್ವತ್ಥನಾರಾಯಣ ಮತ್ತಿತರಿದ್ದರು.

ಹೆಚ್ಚು ಸ್ಥಾನ ಗೆಲ್ಲಲು ಸೂಚನೆ
ಬೆಂಗಳೂರು: ಮೈಸೂರು ವಿಭಾಗದಲ್ಲಿ ಹೆಚ್ಚು ಕ್ಷೇತ್ರ ಗೆಲ್ಲಲು ಎಲ್ಲರೂ ಶ್ರಮಿಸುವಂತೆ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಸೂಚಿಸಿದ್ದಾರೆ. ಖಾಸಗಿ ಹೊಟೇಲ್‌ನಲ್ಲಿ ಶುಕ್ರವಾರ ರಾತ್ರಿ ನಡೆದ ಮೈಸೂರು ವಿಭಾಗದ ಮುಖಂಡರ ಸಭೆಯಲ್ಲಿ ಮಾತನಾಡಿ, ಕಾಂಗ್ರೆಸ್‌, ಜೆಡಿಎಸ್‌ ಗೆದ್ದ ಕ್ಷೇತ್ರಗಳಲ್ಲಿ ಬಿಜೆಪಿ ಗೆಲ್ಲಲು ಕಾರ್ಯತಂತ್ರ ರೂಪಿಸಿ ಎಂದು ಹೇಳಿದಾದರೆ. ಅಗತ್ಯವಿದ್ದರೆ ಬೇರೆ ಪಕ್ಷಗಳಲ್ಲಿ ಸ್ವಸಾಮರ್ಥ್ಯ ಹೊಂದಿರುವ ನಾಯಕರನ್ನು ಕರೆತರಲು ಒಪ್ಪಿಗೆ ಸೂಚಿಸಿದ್ದಾರೆ ಎನ್ನಲಾಗಿದೆ. ಜೆಡಿಎಸ್‌ನ ಪಂಚರತ್ನ ಯಾತ್ರೆ, ಕಾಂಗ್ರೆಸ್‌ನ ಬಸ್‌ ಯಾತ್ರೆಯಿಂದ ಮೈಸೂರು ಭಾಗದಲ್ಲಿ ಆಗುವ ಪರಿಣಾಮಗಳ ಬಗ್ಗೆಯೂ ಚರ್ಚೆಯಾಯಿತು ಎಂದು ತಿಳಿದು ಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next