ಹೊಸದಿಲ್ಲಿ : ‘2019ರ ಲೋಕಸಭಾ ಚುನಾವಣೆಗೆ ಮುನ್ನ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಿಸಲಾಗುವುದೆಂದು ಬಿಜೆಪಿ ಅಧ್ಯಕ್ಷ ಅಮಿತ್ ಶಾ ಹೇಳೇ ಇಲ್ಲ’ ಎಂದು ಸ್ಪಷ್ಟನೆ ನೀಡುವ ಮೂಲಕ ಬಿಜೆಪಿ ತಿಪ್ಪೆ ಸಾರಿಸುವ ಪ್ರಯತ್ನ ಮಾಡಿದೆ.
ಹೈದರಾಬಾದಿನಲ್ಲಿ ನಡೆದಿದ್ದ ಬಿಜೆಪಿ ನಾಯಕರ ಸಭೆಯಲ್ಲಿ ಅಮಿತ್ ಶಾ ‘2019ರ ಲೋಕಸಭಾ ಚುನಾವಣೆಗೆ ಮುನ್ನ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಿಸಲಾಗುವುದು’ ಎಂದು ಹೇಳಿರುವುದಾಗಿ ವರದಿಯಾಗಿತ್ತು.
ಬಿಜೆಪಿಯ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯ ಪೇರಾಲ ಶೇಖರ್‌ಜೀ ಅವರು ನಿನ್ನೆ ಶುಕ್ರವಾರ ಅಮಿತ್ ಶಾ ಅವರ ಮಾತುಗಳನ್ನು ಉಲ್ಲೇಖೀಸಿ ‘ಈಗಿನ ತಾಜಾ ವಿದ್ಯಮಾನಗಳನ್ನು ಲೆಕ್ಕಿಸುವುದಾದರೆ ಮುಂದಿನ ಮಹಾ ಚುನಾವಣೆಗೆ ಮುನ್ನ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಕಾರ್ಯವನ್ನು ಆರಂಭಿಸಲಾಗುತ್ತದೆ ಎಂದು ನಾನು ನಂಬುತ್ತೇನೆ’ ಎಂದು ಹೇಳಿರುವುದನ್ನು ಐಎಎನ್‌ಎಸ್ ಸುದ್ದಿ ಸಂಸ್ಥೆ ವರದಿ ಮಾಡಿತ್ತು.
2019ರ ಲೋಕಸಭಾ ಚುನಾವಣೆಗೆ ಮುನ್ನ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಆಗುವುದೆಂದು ಬಿಜೆಪಿ ಅಧ್ಯಕ್ಷ ಅಮಿತ್ ಶಾ ಹೇಳಿರುವರೆಂಬ ವರದಿ ವಿವಾದಕ್ಕೆ ಕಾರಣವಾದ ಕೆಲವೇ ತಾಸುಗಳಲಿ ಬಿಜೆಪಿಯು ‘ಅಧ್ಯಕ್ಷ ಅಮಿತ್ ಶಾ ಹಾಗೆ ಹೇಳೇ ಇಲ್ಲ’ ಎಂದು ತಿಪ್ಪೇ ಸಾರಿಸುವ ಸ್ಪಷ್ಟೀಕರಣ ನೀಡಿತು.
“ಮಾಧ್ಯಮದ ಕೆಲ ವರ್ಗಗಳು ಹೇಳಿರುವಂತೆ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರು ನಿನ್ನೆ ತೆಲಂಗಾಣದಲ್ಲಿ ‘ಮುಂದಿನ ಲೋಕಸಭಾ ಚುನಾವಣೆಗೆ ಮುನ್ನ ರಾಮ ಮಂದಿರ ನಿಮಾರ್ಣ ಕಾರ್ಯ ಆರಂಭವಾಗುವುದು’ ಎಂಬಂತಹ ಯಾವುದೇ ಹೇಳಿಕೆ ನೀಡಿಲ್ಲ; ಅಂತಹ ಯಾವ ವಿಷಯವೂ ಸಭೆಯ ಕಾರ್ಯಸೂಚಿಯಲ್ಲಿ ಇರಲಿಲ್ಲ’ ಎಂದು ಬಿಜೆಪಿಯ ಟ್ವೀಟ್ ಹೇಳಿದೆ.