Advertisement

21ರಂದು ಅಂಬಿಗರ ಚೌಡಯ್ಯ ಜಯಂತಿ ಆಚರಣೆ

11:43 AM Jan 11, 2019 | |

ಅಥಣಿ: ಇಲ್ಲಿಯ ಮಿನಿ ವಿಧಾನಸೌಧದಲ್ಲಿ ದಿನಾಂಕ ಜ.21ರಂದು ನಿಜಶರಣ ಅಂಬಿಗರ ಚೌಡಯ್ಯ ಅವರ ಜಯಂತಿ ಆಚರಣೆ ಕುರಿತು ಪೂರ್ವಭಾವಿ ಸಿದ್ಧತೆಗಾಗಿ ಉಪ ತಹಶೀಲ್ದಾರರಾದ ರಾಜು ಬುರ್ಲಿ ಹಾಗೂ ಬಿರಾದಾರಪಾಟೀಲ ಅವರ ನೇತೃತ್ವದಲ್ಲಿ ಗಂಗಾಮತ(ತಳವಾರ) ಸಮಾಜದ ತಾಲೂಕಿನ ಹಿರಿಯ ಕಿರಿಯ ಮುಖಂಡರ ಸಭೆ ಜರುಗಿತು.

Advertisement

ತಾಲೂಕಾಡಳಿತದಿಂದ ನಿಜಶರಣ ಅಂಬಿಗರ ಚೌಡಯ್ಯನವರ ಜಯಂತಿಯನ್ನು ಅರ್ಥಪೂರ್ಣವಾಗಿ ಹಾಗೂ ವಿಜೃಂಭಣೆಯಿಂದ ಸರಕಾರದ ನಿರ್ದೇಶನದ ಪ್ರಕಾರ ಆಚರಿಸಲು ನಿರ್ಣಯಿಸಲಾಯಿತು. ಸಮಾಜದ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಹಾಗೂ ಸಾಧಕರನ್ನು ಸನ್ಮಾನಿಸಲು ತೀರ್ಮಾನಿಸಲಾಯಿತು. ಜಯಂತಿಗಾಗಿ ಸರಕಾರದಿಂದ ಗಂಗಾಮತ(ತಳವಾರ) ಸಮಾಜಕ್ಕೆ 25 ಸಾವಿರ ರೂ. ನೀಡಲಾಗುವುದು. ಸರಕಾರ ಕಾರ್ಯಕ್ರಮವನ್ನಾಗಿ ಮಿನಿ ವಿಧಾನಸೌಧದಲ್ಲಿ 9.30ಕ್ಕೆ ಆಚರಿಸಲಾಗುವುದು. ಬಸವೇಶ್ವರ(ಅನಂತಪುರ) ವೃತ್ತದಲ್ಲಿ ಕುಂಭಮೇಳ ಉದ್ಘಾಟನೆ ನೆರವೇರಿಸಲಾಗುವುದು. ಚೌಡಯ್ಯನವರ ಭಾವಚಿತ್ರದೊಂದಿಗೆ ಕುಂಭ ಮೇಳ ಹಲ್ಯಾಳ ಮತ್ತು ಅಂಬೇಡ್ಕರ್‌ ವೃತ್ತದ ಮುಖಾಂತರ ಪಟ್ಟಣದ ಪ್ರಮುಖ ಬಿದಿಗಳಲ್ಲಿ ಹಾಯ್ದು ಶಿವಣಗಿ ಸಾಂಸ್ಕೃತಿಕ ಭವನದಲ್ಲಿ ಸಮಾರೋಪಗೊಂಡು ನಂತರ ಪ್ರಮುಖ ಕಾರ್ಯಕ್ರಮವನ್ನು ಗಣ್ಯರಿಂದ ಉದ್ಘಾಟಿಸಲಾಗುವುದು. ಕಾರಣ ತಾಲೂಕಿನ ಎಲ್ಲ ಸಮಾಜದ ಬಾಂಧವರು ಜಯಂತಿಗೆ ಬಂದು ಯಶಸ್ವಿಗೊಳಿಸುವಂತೆ ಕೋರಿ ಸಭೆಯಲ್ಲಿ ಠರಾವ್‌ ಪಾಸ್‌ ಮಾಡಲಾಯಿತು.

ಈ ವೇಳೆ ಗಂಗಾಮತ ಕೋಳಿ ತಳವಾರ ಸಮಾಜ ಸೇವಾ ಸಂಘದ ಅಧ್ಯಕ್ಷ ರಾಜು ಜಮಖಂಡಿಕರ ಮಾತನಾಡಿ, ನಿಜಶರಣ ಅಂಬಿಗರ ಚೌಡಯ್ಯನವರು ತಮ್ಮ ನೇರ ದಿಟ್ಟ ವಚನಗಳಿಂದ ಸಮಾಜದಲ್ಲಿರುವ ಅನಿಷ್ಟತೆ ಮತ್ತು ಅಂಕುಡೊಂಕುಗಳನ್ನು ತಿದ್ದುವಂತಾ ಕಾರ್ಯವನ್ನು ಮಾಡಿದರು. ಅಸಂಘಟಿತ ಸಮಾಜವನ್ನು ಒಂದುಗೂಡಿಸಲು ಮಹಾನ್‌ ಪುರುಷರ ಹಾಗೂ ನಾಯಕರ ಜಯಂತಿಗಳು ಸಹಕಾರಿಯಾಗುತ್ತವೆ ಎಂದು ತಿಳಿಸಿದರು. ತಹಶೀಲ್ದಾರರಾದ ರಾಜು ಬುರ್ಲಿ ಹಾಗೂ ಎನ್‌.ಎಂ. ಬಿರಾದಾರಪಾಟೀಲ ಮಾತನಾಡಿ, ಯಾವುದೇ ರೀತಿ ತಾರತಮ್ಯ ಮತ್ತು ವಿವಾದವಿಲ್ಲದೆ ಅಂಬಿಗರ ಚೌಡಯ್ಯನವರ ಜಯಂತಿಯನ್ನು ಆಚರಿಸೋಣ. ಸರಕಾರದಿಂದ ಕೇವಲ 25 ಸಾವಿರ ರೂ. ಧನಸಹಾಯ ಒದಗಿಸಲಾಗುವುದು. ಸಮಾಜದ ಬಾಂಧವರು ಇದಕ್ಕಿಂತ ಹೆಚ್ಚಿನ ವಿಜೃಂಭಣೆ ಬೇಕಾದರೆ ತಮ್ಮ ಶಕ್ತಿಗೆ ಅನುಗುಣವಾಗಿ ಆಚರಿಸಕೊಳ್ಳಬಹುದಾಗಿದೆ ಎಂದು ಸ್ಪಷ್ಟಪಡಿಸಿದರು.

ಬಿ.ಎಸ್‌.ಯಾದವಾಡ, ಸಿ.ಜಿ.ಬಿರಾದಾರ, ಸಂಘರ್ಷ ಸಿದ್ದಾರ್ಥ ಸಿಂಗೆ, ಖಲಾಟೆ, ಗ್ರಾಪಂ ಸದಸ್ಯ ಪ್ರಹ್ಲಾದ ಗಸ್ತಿ, ಬಾಪು ಗಸ್ತಿ, ರಾವಸಾಬ ಕಟಗೇರಿ, ಹನುಮಂತ ಕಾಲವೆ, ಶಿವನಗೌಡ ಚುನಾರ, ಸದಾಶಿವ ತಳವಾರ, ಅಣ್ಣಾಪ್ಪ ಸನದಿ, ಸದಾಶಿವ ಕೋಳಿ, ಪ್ರಕಾಶ ಕೋಳಿ, ಗುಳಪ್ಪ ಕೋಳಿ ಸೇರಿದಂತೆ ಇನ್ನಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next