ಕೋಲಾರ: ಅಂಬೇಡ್ಕರ್ ಆಶಯ ಮತ್ತು ಆದರ್ಶಗಳೇ ಸಾಧನೆಗೆ ಕಾರಣ, ಅಂಬೇಡ್ಕರ್ ಅವರ ಮಾನವ ಹಕ್ಕುಗಳ ಸಂರಕ್ಷಣೆಯ ಉದ್ದೇಶಗಳನ್ನು ವಿಶ್ವಸಂಸ್ಥೆಯಲ್ಲಿ ಜಾರಿ ಮಾಡಲು ಚರ್ಚಿಸುತ್ತೇನೆ ಎಂದು ವಿಶ್ವಸಂಸ್ಥೆ ಮಾನವ ಹಕ್ಕು ಸಮಿತಿ ನೂತನ ಸದಸ್ಯೆ ಡಾ.ಕೆ.ಪಿ ಅಶ್ವಿನಿ ತಿಳಿಸಿದರು.
ನಗರದ ಪತ್ರಕರ್ತರ ಭವನದಲ್ಲಿ ಶ್ರೀ ರೇಣುಕಾ ಯಲ್ಲಮ್ಮ ಬಳಗದ ಅಭಿವೃದ್ಧಿ ಸಂಘದಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಎಷ್ಟೋ ಪ್ರಯತ್ನದ ಫಲವಾಗಿ ಒಬ್ಬ ದಲಿತ ಸಮುದಾಯದ ಮಗಳು ವಿಶ್ವಸಂಸ್ಥೆಯಲ್ಲಿ ಸ್ಥಾನ ಪಡೆದಿದ್ದು ಮುಂದಿನ ದಿನಗಳಲ್ಲಿ ವಿಶೇಷವಾಗಿ ದಲಿತ ಸಮುದಾಯದ ಹಾಗೂ ದೇಶದ ಬೆಳವಣಿಗೆ ಶ್ರಮಿಸುತ್ತೇನೆ ಎಂದು ಹೇಳಿದರು. ನಾನು ಮೂಲತಃ ದಲಿತ ಕುಟುಂಬದಲ್ಲಿ ಜನಿಸಿ ದಲಿತರ ಕಷ್ಟ ಸುಖವನ್ನು ಅರಿತಿದ್ದೇನೆ. ದೇಶದ ಬುಡಕಟ್ಟು ಜನಾಂಗದ ಪರಿಸ್ಥಿತಿಗಳ ಬಗ್ಗೆ ಜನಾಂಗೀಯ ಭೇಧ ವರ್ಣಭೇದ ನಿಂದನೆಗಳ ಬಗ್ಗೆ ಮಾಹಿತಿ ಸಂಗ್ರಹಿಸಿ ಬದಲಾವಣೆಗೆ ಪ್ರಯತ್ನಿಸಿದ್ದು, ಇದಕ್ಕೆ ಕುಟುಂಬದ ಹಾಗೂ ಸಮುದಾಯದ ಸಹಕಾರ ಮುಖ್ಯವಾಗಿದ್ದು ವಿಶ್ವಸಂಸ್ಥೆ ತಮ್ಮ ಕಾರ್ಯವನ್ನು ಗುರುತಿಸಿ ಗೌರವಿಸುವ ಮೂಲಕ ಉನ್ನತ ಸ್ಥಾನ ನೀಡಿದ್ದಾರೆ ಎಂದರು.
ವಿಶ್ವದ 190 ರಾಷ್ಟ್ರಗಳ ಪ್ರತಿನಿಧಿಗಳು ಭಾಗವಹಿಸುವ ಸಭೆಯಲ್ಲಿ ಮಾನವ ಹಕ್ಕುಗಳ ಸಂರಕ್ಷಣೆ ಕುರಿತು ಮಾತನಾಡುವ ಅವಕಾಶ ತಮಗೆ ದೊರೆತಿದ್ದು, ಈ ಅವಕಾಶವನ್ನು ಸದ್ಬಳಕೆ ಮಾಡಿಕೊಳ್ಳುವುದಾಗಿ ಘೋಷಿಸಿದರು.
ಶ್ರೀ ರೇಣುಕಾ ಯಲ್ಲಮ್ಮ ಬಳಗದ ಅಭಿವೃದ್ಧಿ ಸಂಘದ ರಾಜ್ಯ ಅಧ್ಯಕ್ಷ ನಾಗೇಂದ್ರ ಮಾತನಾಡಿ ದಲಿತರಿಗೂ ಇಂತಹ ಉನ್ನತ ಸ್ಥಾನ ಪಡೆಯಲು ಶಿಕ್ಷಣ ಸಂವಿಧಾನದಿಂದ ಸಾಧ್ಯವಾಗಿದೆ ಯುವಕರು ಶಿಕ್ಷಣ ಸಂಘಟನೆ ಹೋರಾಟದ ಮನೋಭಾವ ಬೆಳಸಿಕೊಳ್ಳಬೇಕು ಎಂದರು. ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಕಾರ್ಯಕಾರಣಿ ಸದಸ್ಯ ಕೆ.ಎಸ್ ಗಣೇಶ್ ಮಾತನಾಡಿ, ದೇಶಕ್ಕೆ ಸ್ವಾತಂತ್ರ್ಯ ಬಂದಾಗಿನಿಂದ ದಲಿತರ, ಮಹಿಳೆಯರ, ಬಡವರ ಸಮಸ್ಯೆಗಳಿಗೆ ಪರಿಹಾರ ನೀಡಲು ಸಾಧ್ಯವಾಗಿಲ್ಲ. ಅಷ್ಟು ಇಷ್ಟು ಏನಾದರೂ ಸಾಧನೆ ಮಾಡಿದ್ದರೆ ವ್ಯಯಕ್ತಿಕ ಸಾಧನೆಯುಷ್ಟೆ. ಅಶ್ವಿನಿಯವರ ಸಾಧನೆ ಕೋಲಾರ ಮಾತ್ರವಲ್ಲ ಭಾರತವೇ ಮೆಚ್ಚುವಂಥದ್ದು ಎಂದರು.
ಶ್ರೀ ರೇಣುಕಾ ಯಲ್ಲಮ್ಮ ಬಳಗದ ರಾಜ್ಯ ಕಾರ್ಯದರ್ಶಿ ಬೆಳ್ಳಾರಪ್ಪ ಮಾತನಾಡಿ, ಅಂಬೇಡ್ಕರ್ ನಂತರ ಅದೇ ಸಮುದಾಯದ ಕೋಲಾರ ಜಿಲ್ಲೆಯ ದಲಿತ ಹೆಣ್ಣು ಮಗಳು ವಿಶ್ವದ ವೇದಿಕೆಯಲ್ಲಿ ಸ್ಥಾನ ಸಂಪಾದಿಸಿಕೊಂಡಿರುವುದು ಹೆಮ್ಮೆಯ ಸಂಗತಿ ಎಂದು ಹೇಳಿದರು.
ಜಿಪಂ ಮಾಜಿ ಸದಸ್ಯರಾದ ಅಶ್ವಿನಿ ಸಂಪಂಗಿ, ಆರ್ ಕೃಷ್ಣಪ್ಪ, ನಿವೃತ್ತ ಐಪಿಎಸ್ ಅಧಿಕಾರಿ ಮುನಿಸ್ವಾಮಿ, ಕಾರ್ಮಿಕ ಮುಖಂಡ ಗಾಂಧಿನಗರ ನಾರಾಯಣಸ್ವಾಮಿ, ರಾಜ್ಯ ಒಕ್ಕಲಿಗ ಸಂಘದ ನಿರ್ದೇಶಕ. ಡಾ.ಡಿ.ಕೆ ರಮೇಶ್, ಶ್ರೀ ರೇಣುಕಾ ಯಲ್ಲಮ್ಮ ಬಳಗದ ಜಿಲ್ಲಾ ಅಧ್ಯಕ್ಷ ಬಂಡೂರು ನಾರಾಯಣಸ್ವಾಮಿ, ತಾಲೂಕು ಅಧ್ಯಕ್ಷ ಕೊಡಿಯಪ್ಪ, ಅಶ್ವಿನಿ ಪೋಷಕರಾದ ವಿ.ಪ್ರಸನ್ನ ಕುಮಾರ್, ಜಯಮ್ಮ, ಅರಿವು ಶಿವಪ್ಪ ಇತರರಿದ್ದರು.