Advertisement

ಟೆಸ್ಟ್‌ ನಿರೀಕ್ಷೆಯಲ್ಲಿ ಅಮರ್‌ ವಿರ್ದಿ

11:04 PM Jun 27, 2020 | Sriram |

ಲಂಡನ್‌: ಭಾರತೀಯ ಮೂಲದ ಸ್ಪಿನ್ನರ್‌ ಮಾಂಟಿ ಪೆನೆಸರ್‌ ಇಂಗ್ಲೆಂಡ್‌ ಪರ ಅಂತಾರಾಷ್ಟ್ರೀಯ ಪಂದ್ಯಗಳನ್ನಾಡಿದ್ದು ಈಗ ಇತಿಹಾಸ. ಈಗ ಪನೆಸರ್‌ ಅವರನ್ನೇ ಹೋಲುವ, ಅದೇ ಶೈಲಿಯ ಮತ್ತೋರ್ವ ಸರ್ದಾರ್ಜಿ ಇಂಗ್ಲೆಂಡ್‌ ತಂಡದಿಂದ ಟೆಸ್ಟ್‌ ಕರೆಯ ನಿರೀಕ್ಷೆಯಲ್ಲಿದ್ದಾರೆ. 21ರ ಹರೆಯದ ಈ ಬೌಲರ್‌ ಅಮರ್‌ ವಿರ್ದಿ.

Advertisement

ಈಗಾಗಲೇ ಟೆಸ್ಟ್‌ ಸರಣಿಗಾಗಿ ವೆಸ್ಟ್‌ ಇಂಡೀಸ್‌ ತಂಡ ಇಂಗ್ಲೆಂಡಿನಲ್ಲಿ ಬೀಡುಬಿಟ್ಟಿದೆ. ಈ ಸರಣಿಗಾಗಿ ತನಗೆ ಕರೆ ಲಭಿಸೀತೆಂಬ ನಿರೀಕ್ಷೆ ಅಮರ್‌ ವಿರ್ದಿ ಅವರದು. ಅವರು 30 ಸದಸ್ಯರ ಸಂಭಾವ್ಯ ತಂಡದಲ್ಲಿ ಸ್ಥಾನವನ್ನೂ ಪಡೆದಿದ್ದಾರೆ. ಆದರೆ ಅಲ್ಲಿ ಜಾಕ್‌ ಲೀಚ್‌, ಡಾಮ್‌ ಬೆಸ್‌, ಮ್ಯಾಟ್‌ ಪಾರ್ಕಿನ್ಸನ್‌, ಮೊಯಿನ್‌ ಅಲಿ ಮೊದಲಾದ ಪ್ರಮುಖ ಸ್ಪಿನ್ನರ್‌ಗಳಿದ್ದಾರೆ. ಆಯ್ಕೆ ರೇಸ್‌ನಲ್ಲಿ ಇವರನ್ನೆಲ್ಲ ಹಿಂದಿಕ್ಕಲು ವಿರ್ದಿಗೆ ಸಾಧ್ಯವೇ ಎಂಬುದೊಂದು ಕುತೂಹಲ.

ಟೆಸ್ಟ್‌ ಆಡುವುದೇ ಗುರಿ
“ಅವಕಾಶ ಯಾವಾಗ ಬೇಕಾದರೂ ಲಭಿಸಲಿ, ಟೆಸ್ಟ್‌ ಆಡುವುದು ನನ್ನ ಏಕೈಕ ಗುರಿ. ಇದಕ್ಕಾಗಿ ನನ್ನ ಕಠಿನ ಪರಿಶ್ರಮ ಸಾಗಲಿದೆ. ನನ್ನ ಸಾಮರ್ಥ್ಯ ಏನೆಂಬುದು ಗೊತ್ತು. ವಿಂಡೀಸ್‌ ಸರಣಿಯ ಮೊದಲ ಟೆಸ್ಟ್‌ ಪಂದ್ಯವನ್ನು ಆಡುವುದು ನನ್ನ ಕನಸು. ಇಲ್ಲವಾದರೆ ತಂಡದಲ್ಲಾದರೂ ಸ್ಥಾನ ಸಂಪಾದಿಸಬೇಕು. ಈ ಹಂತ ತಲುಪಿದ್ದಕ್ಕೆ ನನಗೆ ಹೆಮ್ಮೆ ಇದೆ’ ಎಂದು ಅಮರ್‌ ವಿರ್ದಿ ಹೇಳಿದರು.

ಇಂಗ್ಲಿಷ್‌ ಕೌಂಟಿ ಕ್ರಿಕೆಟ್‌ನಲ್ಲಿ ಅವರು ಸರ್ರೆ ತಂಡದ ಆಟಗಾರ. 23 ಪ್ರಥಮ ದರ್ಜೆ ಪಂದ್ಯಗಳಿಂದ 69 ವಿಕೆಟ್‌ ಉರುಳಿಸಿದ್ದಾರೆ. ಆಕ್ರಮಣಕಾರಿ ಮನೋಭಾವವೇ ತನ್ನನ್ನು ಕೈಹಿಡಿದಿದೆ, ಇಲ್ಲಿಯ ತನಕ ಕರೆತಂದಿದೆ ಎನ್ನುತ್ತಾರೆ ಅಮರ್‌ ವಿರ್ದಿ.

“ಮಾಂಟಿ ಪನೆಸರ್‌ ನನ್ನ ರೋಲ್‌ ಮಾಡೆಲ್‌. ಇಬ್ಬರೂ ಹೇಸ್‌ನ ಗುರುನಾನಕ್‌ ಸಿಕ್ಖ್ ಅಕಾಡೆಮಿ ಯಲ್ಲಿ ವ್ಯಾಸಂಗ ನಡೆಸಿದವರು. ಮಾಂಟಿ ಮತ್ತು ಗ್ರೇಮ್‌ ಸ್ವಾನ್‌ ಅವರ ಬೌಲಿಂಗ್‌ ನೋಡಿ ಬೆಳೆದೆ. ಇವರೇ ನನಗೆ ಸ್ಫೂರ್ತಿ’ ಎಂಬುದಾಗಿ ವಿರ್ದಿ ಹೇಳಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next