ಮುಂಬೈ : ವಾಣಿಜ್ಯ ನಗರಿ ಮುಂಬೈನಲ್ಲಿ ಮಹಾಮಾರಿ ಕೋವಿಡ್ ಸೋಂಕು ರಣಕೇಕೆ ಹಾಕುತ್ತಿದ್ದು, ಚಿತ್ರರಂಗ ಸಂಬಂಧಿ ಚಟುವಟಿಕೆಗಳ ಮೇಲೆ ತಾತ್ಕಾಲಿಕವಾಗಿ ಬ್ರೇಕ್ ಬಿದ್ದಿದೆ. ಪರಿಣಾಮ ಬಿಟೌನ್ ತಾರೆಯರು ರಜಾದಿನಗಳನ್ನು ಮಜಾ ಮಾಡಲು ತಮಗಿಷ್ಟವಾದ ಸ್ಥಳಗಳಿಗೆ ಪ್ರಯಾಣ ಬೆಳೆಸುತ್ತಿದ್ದಾರೆ.
ಇದೀಗ ಬಾಲಿವುಡ್ ಕ್ಯೂಟ್ ಕಪಲ್ ರಣಬೀರ್ ಕಪೂರ್ ಹಾಗೂ ಆಲಿಯಾ ಭಟ್, ಚಿತ್ರೀಕರಣಕ್ಕೆ ಅಲ್ಪವಿರಾಮ ಹೇಳಿ ಮಾಲ್ಡಿವ್ಸ್ ಗೆ ಹಾರಿದ್ದಾರೆ. ಇಂದು ( ಏಪ್ರಿಲ್ 19) ಮುಂಜಾನೆ ಮುಖಕ್ಕೆ ಮಾಸ್ಕ್ ಹಾಕಿಕೊಂಡು ಮುಂಬೈ ಏರ್ ಪೋರ್ಟ್‍ನಲ್ಲಿ ಪ್ರತ್ಯಕ್ಷವಾದ ಈ ಪ್ರೇಮ ಪಕ್ಷಿಗಳು ಕ್ಯಾಮರಾ ಕಣ್ಣಿಗೆ ಕಾಣಿಸಿ ಕೊಂಡಿವೆ.
ಇತ್ತೀಚಿಗಷ್ಟೆ ರಣಬೀರ್ ಹಾಗೂ ಆಲಿಯಾ ಭಟ್ ಅವರಿಗೆ ಕೋವಿಡ್ ಪಾಸಿಟಿವ್ ಸೋಂಕು ದೃಢಪಟ್ಟಿತ್ತು. ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದು ಸಂಪೂರ್ಣ ಗುಣಮುಖರಾಗಿರುವ ಅವರು ಇದೀಗ ಮಾಲ್ಡಿವ್ಸ್ ಗೆ ಪ್ರಯಾಣ ಬೆಳೆಸಿದ್ದಾರೆ.
ಇನ್ನು ಕೇವಲ ರಣಬೀರ್ ಹಾಗೂ ಆಲಿಯಾ ಮಾತ್ರ ಮಾಲ್ಡಿವ್ಸ್ ಗೆ ತೆರಳಿಲ್ಲ. ಬಾಲಿವುಡ್ ನಟಿ ಸಾರಾ ಅಲಿಖಾನ್, ದಿಶಾ ಪಠಾಣಿ ಹಾಗೂ ಟೈಗರ್ ಶ್ರಾಫ್ ಈಗಾಗಲೇ ಅಲ್ಲಿ ಬೀಡು ಬಿಟ್ಟಿದ್ದಾರೆ. ಅಲ್ಲಿನ ಸುಂದರ ಸ್ಥಳಗಳಲ್ಲಿ ಸುತ್ತಾಡಿ ಮಸ್ತ್ ಮಜಾ ಮಾಡಿದ್ದಾರೆ. ತಮ್ಮ ಸಂತಸದ ಕ್ಷಣಗಳ ಸುಂದರ ಫೋಟೊ ಹಾಗೂ ವಿಡಿಯೋಗಳನ್ನು ಸಾರಾ ಅಲಿಖಾನ್ ತಮ್ಮ ಇನ್‍ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.