Advertisement

ಆಲಮಟ್ಟಿ ಡ್ಯಾಂ ಭರಪೂರ; ಕುಡಿಯುವ ನೀರಿಗಿಲ್ಲ ಬರ

11:16 PM May 07, 2019 | Lakshmi GovindaRaj |

ಬಾಗಲಕೋಟೆ: ದೇಶದ 2ನೇ ಅತಿದೊಡ್ಡ ಜಲಾಶಯ ಎಂದೇ ಕರೆಯುವ ಆಲಮಟ್ಟಿ ಜಲಾಶಯ ಆಶ್ರಯಿಸಿದ ಕುಡಿಯುವ ನೀರಿನ ಯೋಜನೆಗಳಿಗೆ ಈ ವರ್ಷ ಯಾವುದೇ ಸಮಸ್ಯೆ ಇಲ್ಲ. ನಿರ್ದಿಷ್ಟ ಯೋಜನೆಗಳಿಗೆ ಜಲಾಶಯದಲ್ಲಿ ನೀರು ಸಂಗ್ರಹ ಕಾಯ್ದಿರಿಸಿಕೊಂಡಿದ್ದು, ಅಗತ್ಯಕ್ಕೆ ತಕ್ಕಂತೆ ನೀರು ಕೊಡಲಾಗುತ್ತಿದೆ.

Advertisement

ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿ (ಹೊಸ ತಾಲೂಕು ನಿಡಗುಂದಿ ಹತ್ತಿರ) ತಾಲೂಕಿನ ಆಲಮಟ್ಟಿ ಬಳಿ ನಿರ್ಮಿಸಿದ ಈ ಜಲಾಶಯ, 519.60 ಮೀಟರ್‌ ಎತ್ತರವಿದ್ದು, 123 ಟಿಎಂಸಿ ನೀರು ಸಂಗ್ರಹ ಸಾಮರ್ಥ್ಯವಿದೆ. ಸದ್ಯ ಜಲಾಶಯದಲ್ಲಿ 29.32 ಟಿಎಂಸಿ ಅಡಿ ನೀರು ಸಂಗ್ರಹವಿದ್ದು, ಕಳೆದ ವರ್ಷ ಇದೇ ದಿನ 28.94 ಟಿಎಂಸಿ ನೀರಿತ್ತು. ವಿಜಯಪುರ, ಬಾಗಲಕೋಟೆ, ಯಾದಗಿರಿ, ರಾಯಚೂರು, ಕೊಪ್ಪಳದ ಕುಷ್ಟಗಿ, ಕಲಬುರಗಿ ಜಿಲ್ಲೆಯ ಕುಡಿಯುವ ನೀರು ಹಾಗೂ ಅಚ್ಚುಕಟ್ಟು ಪ್ರದೇಶದ ನೀರಾವರಿಗೆ ಈ ಜಲಾಶಯ ಆಧಾರವಾಗಿದೆ.

ರಾಜ್ಯದ ಶೇ.76 ಭೌಗೋಳಿಕ ಕ್ಷೇತ್ರ ಹೊಂದಿರುವ ಕೃಷ್ಣಾ ನದಿ, ಈಶಾನ್ಯ ಕರ್ನಾಟಕದ ಜೀವನದಿಯಾಗಿದೆ. ಹೈದ್ರಾಬಾದ್‌ ಮತ್ತು ಮುಂಬೈ ಕರ್ನಾಟಕದ ಏಳು ಜಿಲ್ಲೆಗಳಿಗೆ 170 ಟಿಎಂಸಿ ನೀರು ನೀರಾವರಿ ಮತ್ತು ಕುಡಿಯುವ ಉದ್ದೇಶಕ್ಕೆ ಈ ಜಲಾಶಯ ಪ್ರತಿವರ್ಷ ಕೊಡುತ್ತದೆ. ಆಲಮಟ್ಟಿ ಜಲಾಶಯ, ಮಹಾರಾಷ್ಟ್ರದ ಮಹಾಬಲೇಶ್ವರದಲ್ಲಿ ಹುಟ್ಟಿ, ಮೂರು ರಾಜ್ಯದಲ್ಲಿ ಹರಿದು ಅರಬ್ಬಿ ಸಮುದ್ರ ಸೇರುತ್ತದೆ.

ಈ ಜಲಾಶಯ ಪ್ರತಿವರ್ಷ ಅಕ್ಟೋಬರ್‌-ನವೆಂಬರ್‌ನಲ್ಲಿ ಭರ್ತಿಯಾಗುತ್ತದೆ. ಮಹಾರಾಷ್ಟ್ರದ ಸಹ್ಯಾದ್ರಿ ಪರ್ವತ ಶ್ರೇಣಿಯಲ್ಲಿ ಮಳೆಯಾದರೆ ಮಾತ್ರ ಭರ್ತಿಯಾಗಲು ಸಾಧ್ಯವಿದೆ. 2016ರಲ್ಲಿ ಮಹಾರಾಷ್ಟ್ರದಲ್ಲೂ ಅಲ್ಪ ಮಳೆಯಾದ ಕಾರಣ ಜಲಾಶಯ ಭರ್ತಿಯಾಗಿರಲಿಲ್ಲ. ಅದೊಂದು ವರ್ಷ ಬಿಟ್ಟರೆ ಬಹುತೇಕ ಎಲ್ಲ ವರ್ಷ ಆಲಮಟ್ಟಿ ಜಲಾಶಯ ಭರ್ತಿಯಾಗುತ್ತಿದೆ.

ಕುಡಿಯುವ ಉದ್ದೇಶಕ್ಕೆ ಮೀಸಲು: ಸದ್ಯ ಜಲಾಶಯದಲ್ಲಿ 29.32 ಟಿಎಂಸಿ ನೀರು ಸಂಗ್ರಹವಿದ್ದು, 17.36 ಟಿಎಂಸಿ ಅಡಿ ಡೆಡ್‌ ಸ್ಟೋರೇಜ್‌ ಇದೆ. ತುರ್ತು ಸಂದರ್ಭದಲ್ಲಿ ಡೆಡ್‌ ಸ್ಟೋರೇಜ್‌ ನೀರನ್ನೂ ಕುಡಿಯುವ ಉದ್ದೇಶಕ್ಕೆ ಬಳಸಿಕೊಳ್ಳಲಾಗುತ್ತದೆ. ಸದ್ಯಕ್ಕಿರುವ ನೀರನ್ನು ಜನ-ಜಾನುವಾರುಗಳ ಕುಡಿಯುವ ನೀರು, ವಿದ್ಯುತ್‌ ಉತ್ಪಾದನೆ (ರಾಯಚೂರು ಶಾಖೋತ್ಪನ್ನ ಕೇಂದ್ರ)ಗೆ ಮೀಸಲಿರಿಸಲಾಗಿದೆ.

Advertisement

ಪ್ರತಿವರ್ಷ ಮೇ ತಿಂಗಳಲ್ಲಿ ರಾಯಚೂರು ವಿದ್ಯುತ್‌ ಉತ್ಪಾದನೆಗೆ 1 ಟಿಎಂಸಿ ನೀರನ್ನು ಕಡ್ಡಾಯವಾಗಿ ಕೊಡಬೇಕು. ಹೀಗಾಗಿ ಆಲಮಟ್ಟಿಯ ಕೆಪಿಟಿಸಿಎಲ್‌ನಲ್ಲಿ ಉತ್ಪಾದನೆಗೆ ಬಳಸಿ ಅಲ್ಲಿಂದ ನಾರಾಯಣಪುರ ಡ್ಯಾಂಗೆ ಸದ್ಯ 4432 ಕ್ಯುಸೆಕ್‌ ನೀರು ಬಿಡಲಾಗುತ್ತಿದೆ. ಡ್ಯಾಂನಲ್ಲಿನ ಸದ್ಯದ ನೀರು ಈ ಬೇಸಿಗೆ ಪೂರ್ಣಗೊಳ್ಳುವವರೆಗೂ ಕುಡಿಯುವ ನೀರಿನ ಯೋಜನೆಗೆ ಸಾಕಾಗಲಿದೆ.

ನೀರಾವರಿಗೆ ನೀರಿಲ್ಲ: ಆಲಮಟ್ಟಿ ಎಡದಂಡೆ ಕಾಲುವೆಗೆ 28.10 ಟಿಎಂಸಿ ನೀರಿನಿಂದ 1,01,175 ಹೆಕ್ಟೇರ್‌, ಬಲದಂಡೆ ಕಾಲುವೆಯಡಿ 10 ಟಿಎಂಸಿ ನೀರಿನಿಂದ 33,100 ಹೆಕ್ಟೇರ್‌, ಮುಳವಾಡ ಹಂತ-1 ಮತ್ತು 2ರಡಿ 65 ಟಿಎಂಸಿ ನೀರಿನಿಂದ 2,11,600 ಹೆಕ್ಟೇರ್‌ ನೀರಾವರಿ ಕಲ್ಪಿಸುತ್ತದೆ. ಬೇಸಿಗೆಗೆ ಕುಡಿಯುವ ಉದ್ದೇಶಕ್ಕಾಗಿ ನೀರು ಮೀಸಲಿಟ್ಟಿದ್ದು, ಬೇಸಿಗೆ ಹಂಗಾಮಿನ ನೀರಾವರಿಗೆ ಸದ್ಯ ನೀರು ಬಿಡಲಾಗುತ್ತಿಲ್ಲ.

ಗರಿಷ್ಠ ಮಟ್ಟ: 519.60 ಮೀಟರ್‌
ಇಂದಿನ ಮಟ್ಟ: 509.80 ಮೀಟರ್‌
ಒಳ ಹರಿವು: ಇಲ್ಲ
ಹೊರ ಹರಿವು: 4432
ಒಟ್ಟು ಸಂಗ್ರಹ ಸಾಮರ್ಥ್ಯ: 123 ಟಿಎಂಸಿ ಅಡಿ
ಸದ್ಯ ಸಂಗ್ರಹ ಇರುವ ನೀರು: 29.329 ಟಿಎಂಸಿ ಅಡಿ
ಕಳೆದ ವರ್ಷ ನೀರು ಸಂಗ್ರಹ: 28.946 ಟಿಎಂಸಿ ಅಡಿ

ಜಲಾಶಯದಲ್ಲಿ ಸದ್ಯ 29.32 ಟಿಎಂಸಿ ನೀರು ಸಂಗ್ರಹವಿದೆ. ಜನ-ಜಾನುವಾರು, ವಿದ್ಯುತ್‌ ಉತ್ಪಾದನೆಯ ನಿರ್ದಿಷ್ಟ ಯೋಜನೆಗಳಿಗೆ ಸದ್ಯ 4432 ಕ್ಯೂಸೆಕ್‌ ನೀರು ಹೊರ ಬಿಡಲಾಗುತ್ತಿದೆ. ಜಲಾಶಯ ವ್ಯಾಪ್ತಿಯ ಅಷ್ಟೂ ಕುಡಿಯುವ ನೀರಿನ ಯೋಜನೆಗಳಿಗೆ ಸದ್ಯಕ್ಕಿರುವ ನೀರು ಸಾಕಾಗಲಿದೆ. ಡ್ಯಾಂ ವ್ಯಾಪ್ತಿ ಅವಲಂಬಿತ ಕುಡಿಯುವ ನೀರಿನ ಯೋಜನೆಗಳಿಗೆ ನೀರಿನ ಸಮಸ್ಯೆ ಇಲ್ಲ.
-ಎಸ್‌.ಎಸ್‌. ಚಲವಾದಿ, ಸಹಾಯಕ ಎಂಜಿನಿಯರ್‌, ಆಲಮಟ್ಟಿ ಡ್ಯಾಂ ಸೈಟ್‌, ಆಲಮಟ್ಟಿ

* ಶ್ರೀಶೈಲ ಕೆ. ಬಿರಾದಾರ

Advertisement

Udayavani is now on Telegram. Click here to join our channel and stay updated with the latest news.

Next