Advertisement

ಸಮ್ಮೇಳನಕ್ಕೆ ನಮಗೂ ಅನುದಾನ ಕೊಡಿ

06:00 AM Aug 18, 2018 | Team Udayavani |

ಬೆಂಗಳೂರು:ಅಮೆರಿಕಾದಲ್ಲಿ ನಡೆಯುವ ಅಕ್ಕ ಹಾಗೂ ನಾವಿಕ ಸಮ್ಮೇಳನಕ್ಕೆ ವಿಶೇಷ ಅನುದಾನ ನೀಡುವ ಮಾದರಿಯಲ್ಲೇ ನಮಗೂ ನೀಡಿ ಎಂದು ದುಬೈ, ಕುವೈತ್‌, ಕತಾರ್‌, ಬಹರೇನ್‌, ಸೌದಿ ಸೇರಿದಂತೆ ಅರಬ್‌ ರಾಷ್ಟ್ರಗಳ ಕನ್ನಡ ಸಂಘಟನೆಗಳು ಸರ್ಕಾರಕ್ಕೆ ಬೇಡಿಕೆ ಇಟ್ಟಿವೆ.

Advertisement

ಅಮೇರಿಕಾದಲ್ಲಿ ಪ್ರತಿ ಎರಡು ವರ್ಷಕ್ಕೊಮ್ಮೆ ಅಕ್ಕ ಹಾಗೂ ನಾವಿಕ ಸಂಘಟನೆಗಳು ಸಮ್ಮೇಳನ ನಡೆಸಲು ರಾಜ್ಯ ಸರ್ಕಾರದಿಂದ 50 ರಿಂದ 60 ಲಕ್ಷ ರೂ. ಅನುದಾನ ನೀಡಿ ರಾಜ್ಯದಿಂದ ಕಲಾವಿದರನ್ನು ರಾಜ್ಯ ಸರ್ಕಾರದ ವತಿಯಿಂದಲೇ ಕಳುಹಿಸಿಕೊಡಲಾಗುತ್ತಿದೆ. ಅದೇ ರೀತಿ ನಮಗೂ ಅನುದಾನ ಕೊಡಿ ಎಂಬುದು ಅರಬ್‌ರಾಷ್ಟ್ರಗಳಲ್ಲಿನ ಕನ್ನಡ ಸಂಘಟನೆಗಳ ವಾದ.

ಈ ವರ್ಷ ಆಗಸ್ಟ್‌ 31 ರಿಂದ ಸೆಪ್ಟಂಬರ್‌ 2 ರ ವರೆಗೆ ಮೂರು ದಿನಗಳ ಕಾಲ ಅಮೆರಿಕಾದ ಡೆಲ್ಲಾಸ್‌ನಲ್ಲಿ  ಅಕ್ಕ ಸಮ್ಮೇಳನ ಆಯೋಜಿಸಲಾಗಿದ್ದು, ಈ ಸಮ್ಮೇಳನಕ್ಕೆ ಅಕ್ಕ ಸಂಘಕಟರು ಅಧಿಕೃತವಾಗಿ ಮುಖ್ಯಮಂತ್ರಿ ಹಾಗೂ ಕನ್ನಡ ಮತ್ತು ಸಾಂಸ್ಕೃತಿಕ ಇಲಾಖೆಯ ಸಚಿವರಿಗೆ ಆಹ್ವಾನ ನೀಡಿದ್ದು, ರಾಜ್ಯ ಸರ್ಕಾರ ಪ್ರತಿ ಬಾರಿಯಂತೆ ಈ ಬಾರಿಯೂ ಅಗತ್ಯ ಅನುದಾನ ನೀಡಲು ಮುಂದಾಗಿದೆ.

ಅಮೆರಿಕದಲ್ಲಿ  ನಡೆಯುವ ಅಕ್ಕ ಹಾಗೂ ನಾವಿಕ ಸಮ್ಮೇಳನಕ್ಕೆ ರಾಜ್ಯ ಸರ್ಕಾರ ವಿಶೇಷ ಅನುದಾನ ನೀಡುತ್ತಿರುವುದು ಶ್ಲಾಘನೀಯ. ಅದೇ ರೀತಿ ಇತರ ರಾಷ್ಟ್ರಗಳಲ್ಲಿ ಸಕ್ರೀಯರಾಗಿರುವ ಕನ್ನಡ ಸಂಘಟನೆಗಳು ತಾವು ನೆಲೆಸಿರುವ ರಾಷ್ಟ್ರಗಳಲ್ಲಿ ಕನ್ನಡ ಕಾರ್ಯಕ್ರಮಗಳನ್ನು ಕೈಗೊಳ್ಳಲು ಸರ್ಕಾರ ಅಗತ್ಯ ಅನುದಾನ ನೀಡಬೇಕು.  ಈ ಕುರಿತು ಅಧಿಕೃತವಾಗಿ ಮನವಿ ಮಾಡಲಾಗಿದ್ದರೂ ಸ್ಪಂದನೆ ದೊರೆತಿಲ್ಲ ಎಂದು ದುಬೈ ಕನ್ನಡಿಗರ ಸಂಘದ ಅಧ್ಯಕ್ಷ ಸದನ್‌ ದಾಸ್‌ ಹೇಳುತ್ತಾರೆ.

ಎನ್‌ಆರ್‌ಐ ಫೋರಂನ ಕನ್ನಡಿಗರ ಘಟಕದ ಮಾಹಿತಿ ಪ್ರಕಾರ ಪ್ರಪಂಚದ ಸುಮಾರು 150 ಕ್ಕೂ ಹೆಚ್ಚು ರಾಷ್ಟ್ರಗಳಲ್ಲಿ ಕನ್ನಡಿಗರು ನೆಲೆಸಿದ್ದಾರೆ. ಆದರೆ, ಅತಿಹೆಚ್ಚು ಕನ್ನಡಿಗರು ವಾಸವಾಗಿರುವುದು ಅರಬ್‌ ರಾಷ್ಟ್ರಗಳಲ್ಲಿ. ನಂತರದ ಸ್ಥಾನದಲ್ಲಿ ಅಮೇರಿಕ, ಇಂಗ್ಲೆಂಡ್‌, ಆಸ್ಟ್ರೇಲಿಯಾ, ಜರ್ಮನಿ, ಸಿಂಗಪುರ್‌, ಮಲೆಷಿಯಾ, ಶ್ರೀಲಂಕಾಗಳಲ್ಲಿ ನೆಲೆಸಿದ್ದಾರೆ.

Advertisement

ದುಬೈ, ಕುವೈತ್‌, ಕತಾರ್‌, ಬಹರೇನ್‌, ಸೌದಿ ಸೇರಿದಂತೆ ಅರಬ್‌ ರಾಷ್ಟ್ರಗಳಲ್ಲಿಯೇ ಸುಮಾರು 8 ಲಕ್ಷ ಕನ್ನಡಿಗರು ವಾಸವಾಗಿದ್ದು, ಅಲ್ಲದೇ ಹೆಚ್ಚು ಸಕ್ರೀಯರಾಗಿ ಕನ್ನಡ ಸಂಘಟನೆಗಳನ್ನು ಕಟ್ಟಿಕೊಂಡು ಕನ್ನಡ ಉಳಿಸುವ ಕೆಲಸ ಮಾಡುತ್ತಿದ್ದಾರೆ.
ಆಸ್ಟ್ರೇಲಿಯ ಕನ್ನಡ ಸಂಘಟನೆಗಳೂ ಒಟ್ಟಾಗಿ ವಿಶ್ವ ಕನ್ನಡ ಸಮ್ಮೇಳನ ನಡೆಸುತ್ತವೆ. ಅಲ್ಲದೇ ಕನ್ನಡ ಶಾಲೆ, ಕನ್ನಡ ಗ್ರಂಥಾಲಯ, ರಾಜ್ಯೋತ್ಸವ ಆಚರಣೆ ಜೊತೆಗೆ ರಾಜ್ಯೋತ್ಸವ ಕ್ರಿಕೆಟ್‌ ಕಪ್‌ ಆಯೋಜನೆ ಮಾಡಿ ಕನ್ನಡತನವನ್ನು ಜೀವಂತವಾಗಿಡುವ ಕೆಲಸ ಮಾಡುತ್ತಿದ್ದಾರೆ. ಬರ್ಲಿನ್‌, ನೆದರ್‌ಲ್ಯಾಂಡ್‌ಗಳಲ್ಲಿಯೂ ಕನ್ನಡ ಸಂಘಗಳು ಸಕ್ರೀಯವಾಗಿ ಕನ್ನಡದ ಉಳಿವಿಗೆ ಶ್ರಮಿಸುತ್ತಿವೆ. ಹೀಗಾಗಿ, ನಮಗೂ ಅನುದಾನ ಕೊಡಿ ಎಂಬುದು ಅವರ ಒತ್ತಾಯ.

ನೀತಿ ಇದೆ ಪಾಲಿಸುತ್ತಿಲ್ಲ
ಅನಿವಾಸಿ ಭಾರತೀಯ ಕನ್ನಡಿಗರ ಘಟಕ ಈ ಕುರಿತು ನೀತಿ ಜಾರಿಗೆ ತಂದಿದ್ದು ಅನಿವಾಸಿ ಕನ್ನಡಿಗರು ಕನ್ನಡದ ಅಭಿವೃದ್ಧಿ ಮತ್ತು ನಾಡಿನ ಸಂಸ್ಕೃತಿಯನ್ನು ಹರಡಲು ರಾಜ್ಯ ಸರ್ಕಾರ ವಿಶೇಷ ಅನುದಾನ ನೀಡಬೇಕೆಂದು ಅನಿವಾಸಿ ಭಾರತೀಯರ ಕನ್ನಡಿಗರ ನೀತಿಯಲ್ಲಿ ಅಳವಡಿಸಿಕೊಳ್ಳಲಾಗಿದೆ. ಎನ್‌ಆರ್‌ಐ ಫೋರಂ ಕರ್ನಾಟಕ ಘಟಕಕ್ಕೆ ಕೇವಲ 2 ಕೋಟಿ ಅನುದಾನ ನೀಡುವುದರಿಂದ ಎಲ್ಲ ರಾಷ್ಟ್ರಗಳಲ್ಲಿನ ಕನ್ನಡ ಕಾರ್ಯಕ್ರಮಗಳಿಗೆ ಅನುದಾನ ನೀಡಲು ಸಾಧ್ಯವಾಗದಿರುವುದರಿಂದ ರಾಜ್ಯ ಸರ್ಕಾರವೇ ಅನುದಾನ ನೀಡಬೇಕೆಂದು  ಎಂದು ಅರಬ್‌, ಆಸ್ಟ್ರೇಲಿಯಾ ಸೇರಿದಂತೆ ಇತರೆ ರಾಷ್ಟ್ರಗಳ ಕನ್ನಡ ಸಂಘಟನೆಗಳು ಆಗ್ರಹಿಸುತ್ತಿವೆ.

ಈ ಬಾರಿ ಸಮಾಜಕಲ್ಯಾಣದಿಂದ ಕಲಾವಿದರಿಲ್ಲ
ಹಿಂದಿನ ಸರ್ಕಾರದ ಅವಧಿಯಲ್ಲಿ ಸಮಾಜ ಕಲ್ಯಾಣ ಇಲಾಖೆ ಎಸ್ಸಿಪಿ, ಟಿಎಸ್‌ಪಿ ಯೋಜನೆ ಅಡಿಯಲ್ಲಿ ದಲಿತ ಕಲಾವಿದರನ್ನು ಅಕ್ಕ ಹಾಗೂ ನಾವಿಕ ಸಮ್ಮೇಳನಕ್ಕೆ ಕಳುಹಿಸಿಕೊಡುವ ವ್ಯವಸ್ಥೆ ಮಾಡಿತ್ತು. ಆದರೆ, ಈ ಬಾರಿ ದಲಿತ ಕಲಾವಿದರು ಆ ಅವಕಾಶದಿಂದ ವಂಚಿತರಾಗಿದ್ದಾರೆ. ಕಲಾವಿದರನ್ನು ಕಳುಹಿಸಿಕೊಡುವಂತೆ ಅಧಿಕೃತ ಪ್ರಸ್ತಾಪ  ಬಾರದ ಹಿನ್ನೆಲೆಯಲ್ಲಿ ಸಮಾಜ ಕಲ್ಯಾಣ ಇಲಾಖೆ ಕಲಾವಿದರನ್ನು ಕಳುಹಿಸಿಕೊಡುತ್ತಿಲ್ಲ.

ಅರಬ್‌ ರಾಷ್ಟ್ರಗಳಲ್ಲಿ ಅತಿ ಹೆಚ್ಚು ಕನ್ನಡಿಗರಿದ್ದೇವೆ. ಅಲ್ಲಿನ ಸರ್ಕಾರಗಳ ನಿರ್ಬಂಧಗಳ ನಡುವೆಯೂ ಮಾತೃ ಭಾಷೆ ಉಳಿಸಿ ಬೆಳೆಸಲು ನಿರಂತರ ಪ್ರಯತ್ನ ನಡೆಸುತ್ತಿದ್ದೇವೆ. ನಮ್ಮ ಮಕ್ಕಳಿಗೆ ಕನ್ನಡ ಕಲಿಸುವ ಪ್ರಯತ್ನ, ಅದ್ದೂರಿ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಮಾಡುತ್ತೇವೆ. ನಮ್ಮ ಸಂಸ್ಕೃತಿಯನ್ನು ವಿದೇಶಗಳಲ್ಲಿಯೂ ಹರಡಲು ರಾಜ್ಯ ಸರ್ಕಾರ  ಇಲ್ಲಿನ ಕಲಾವಿದರನ್ನು ಕಳುಹಿಸಿಕೊಡುವ ಜವಾಬ್ದಾರಿಯನ್ನಾದರೂ ವಹಿಸಿಕೊಂಡರೆ ಅನುಕೂಲವಾಗುತ್ತದೆ.
– ಸದನ್‌ ದಾಸ್‌, ಕನ್ನಡಿಗರು ದುಬೈ, ಅಧ್ಯಕ್ಷ.

ಕನ್ನಡ ಅಭಿವೃದ್ಧಿ ಪ್ರಾಧಿಕಾರ ಹಾಗೂ ಎನ್‌ಆರ್‌ಐ ಫೋರಂ ಉಪಾಧ್ಯಕ್ಷೆ  ಡಾ. ಆರತಿ ಕೃಷ್ಣ ಅವರಿಗೆ‌ ಅನಿವಾಸಿ ಕನ್ನಡಿಗರ ಬಗ್ಗೆ ಇರುವ ಕಾಳಜಿ ಹಾಗೂ ಕನ್ನಡ ಸೇವೆ ಶ್ಲಾಘನೀಯ. ರಾಜ್ಯ ಸರ್ಕಾರ ಹಣಕಾಸಿನ ನೆರವು ನೀಡಿದರೆ. ಎನ್‌ಆರ್‌ಐ ಫೋರಂ ಇನ್ನೂ ಹೆಚ್ಚಿನ ಕನ್ನಡ ಕೆಲಸ ಮಾಡಲು ಅನುಕೂಲವಾಗುತ್ತದೆ.
-ಮಂಜುನಾಥ, ಎಂ.ಎಚ್‌. ರಾಕರ್ಸ್‌ ರಾಜ್ಯೋತ್ಸವ ಸಮಿತಿ, ಮೆಲ್ಬೋರ್ನ್, ಆಸ್ಟ್ರೇಲಿಯಾ.

ವಿದೇಶದಲ್ಲಿರುವ ಕನ್ನಡ ಸಂಘಟನೆಗಳು ಕನ್ನಡ ಅಭಿವೃದ್ಧಿಗೆ ವಿಶೇಷ ಅನುದಾನ ನೀಡಲು ನಮ್ಮ ನೀತಿಯಲ್ಲಿ ಅಳವಡಿಸಿಕೊಳ್ಳಲಾಗಿದೆ. ಆದರೆ, ಸರ್ಕಾರ ಎನ್‌ಆರ್‌ಐ ಫೋರಂಗೆ ಕಡಿಮೆ ಅನುದಾನ ನೀಡುವುದರಿಂದ ಎಲ್ಲ ರಾಷ್ಟ್ರಗಳಿಗೂ ನೀಡಲು ಆಗುವುದಿಲ್ಲ. ಹೀಗಾಗಿ ರಾಜ್ಯ ಸರ್ಕಾರ  ಹೆಚ್ಚಿನ ಅನುದಾನ ನೀಡಬೇಕು.
– ಡಾ. ಆರತಿ ಕೃಷ್ಣ,, ಅನಿವಾಸಿ ಭಾರತೀಯರ  ಫೋರಂ ಉಪಾಧ್ಯಕ್ಷೆ.

– ಶಂಕರ ಪಾಗೋಜಿ
 

Advertisement

Udayavani is now on Telegram. Click here to join our channel and stay updated with the latest news.

Next