Advertisement

ವಿಮಾನ ನಿಲ್ದಾಣ, ಶಿರಾಡಿ ಸುರಂಗ ನಿರ್ಮಾಣ ನಿರೀಕ್ಷೆ

07:04 AM Feb 01, 2019 | Team Udayavani |

ಹಾಸನ ವಿಮಾನ ನಿಲ್ದಾಣಕ್ಕೆ ಮಂಜೂರಾತಿ, ಶಿರಾಡಿಘಾಟ್‌ನಲ್ಲಿ ಸುರಂಗ ಮತ್ತು ಮೇಲ್ಸೇತುವೆ ನಿರ್ಮಾಣದ ಎಕ್ಸ್‌ಪ್ರೆಸ್‌ ಹೈವೇ, ಹಾಸನಕ್ಕೆ ಸ್ಮಾರ್ಟ್‌ಸಿಟಿ ಯೋಜನೆ, ಹಾಸನ – ಬೇಲೂರು – ಚಿಕ್ಕಮಗಳೂರು ರೈಲು ಮಾರ್ಗ ನಿರ್ಮಾಣ, ಹಾಸನ ಮೂಲಕ ಮೈಸೂರು, ಬೆಂಗಳೂರು, ಮಂಗಳೂರಿಗೆ ಹೆಚ್ಚು ರೈಲುಗಳ ಸಂಚಾರ, ಪ್ರವಾಸೋದ್ಯಮದ ಅಭಿವೃದ್ಧಿ ಯೋಜನೆಗಗಳು ಸೇರಿ ಹಲವು ಅಭಿವೃದ್ಧಿ ಯೋಜನೆಗಳು ಮಂಜೂರಾತಿಯ ಬಗ್ಗೆ ಜಿಲ್ಲೆಯ ಜನರು ನಿರೀಕ್ಷೆ ಹೊಂದಿದ್ದಾರೆ.

Advertisement

ಹಾಸನ ವಿಮಾನ ನಿಲ್ದಾಣಕ್ಕೆ ಮಂಜೂರಾತಿ, ಶಿರಾಡಿಘಾಟ್‌ನಲ್ಲಿ ಸುರಂಗ ಮತ್ತು ಮೇಲ್ಸೇತುವೆ ನಿರ್ಮಾಣದ ಎಕ್ಸ್‌ಪ್ರೆಸ್‌ ಹೈವೇ, ಹಾಸನಕ್ಕೆ ಸ್ಮಾರ್ಟ್‌ಸಿಟಿ ಯೋಜನೆ, ಹಾಸನ – ಬೇಲೂರು – ಚಿಕ್ಕಮಗಳೂರು ರೈಲು ಮಾರ್ಗ ನಿರ್ಮಾಣ, ಹಾಸನ ಮೂಲಕ ಮೈಸೂರು, ಬೆಂಗಳೂರು, ಮಂಗಳೂರಿಗೆ ಹೆಚ್ಚು ರೈಲುಗಳ ಸಂಚಾರ, ಪ್ರವಾಸೋದ್ಯಮದ ಅಭಿವೃದ್ಧಿ ಯೋಜನೆಗಗಳು ಸೇರಿ ಹಲವು ಅಭಿವೃದ್ಧಿ ಯೋಜನೆಗಳು ಮಂಜೂರಾತಿಯ ಬಗ್ಗೆ ಜಿಲ್ಲೆಯ ಜನರು ನಿರೀಕ್ಷೆ ಹೊಂದಿದ್ದಾರೆ.

ಹಾಸನ: ಕೇಂದ್ರ ಸರ್ಕಾರದ 2019 -20 ರ ಸಾಲಿನ ಬಜೆಟ್ ಶುಕ್ರವಾರ ಲೋಕಸಭೆಯಲ್ಲಿ ಮಂಡನೆಯಾಗಲಿದೆ. ಮುಂದಿನ ಏಪ್ರಿಲ್‌ ಮತ್ತು ಮೇನಲ್ಲಿ ಲೋಕಸಭೆಗೆ ಚುನಾವಣೆ ನಡೆಯಲಿರುವುದರಿಂದ ಸರ್ಕಾರ ಪೂರ್ಣ ಪ್ರಮಾಣದ ಬಜೆಟ್ನ್ನು ಮಂಡಿಸುತ್ತಿಲ್ಲ. ಲೇಖಾನುದಾನ ಮಂಡಿಸುತ್ತಿದ್ದರೂ ಚುನಾವಣಾ ಪೂರ್ವದಲ್ಲಿ ಮಂಡನೆಯಾಗುತ್ತಿರುವ ಆಳುವ ಪಕ್ಷ ಮತ್ತೆ ಅಧಿಕಾರಕ್ಕೆ ಬರುವ ನಿಟ್ಟಿನಲ್ಲಿ ಜನಪ್ರಿಯ ಘೋಷಣೆಗಳನ್ನು ಬಜೆಟ್‌ನಲ್ಲಿ ಪ್ರಕಟಿಸುವ ಸಾಧ್ಯತೆ ಇದೆ. ಹಾಗಾಗಿ ಹಾಸನ ಜಿಲ್ಲೆಯ ಜನರು ಬಜೆಟ್‌ನಲ್ಲಿ ಬಹಳಷ್ಟು ಅಭಿವೃದ್ಧಿ ಯೋಜನೆಗಳನ್ನು ನಿರೀಕ್ಷಿಸಿದ್ದಾರೆ.

ಪ್ರತಿ ವರ್ಷ ಬಜೆಟ್ ಮಂಡನೆಯ ಪೂರ್ವದಲ್ಲಿ ಜನರು ತಮ್ಮ ಜಿಲ್ಲೆ, ರಾಜ್ಯಕ್ಕೆ ಬಹಳಷ್ಟು ನಿರೀಕ್ಷೆ ಮಾಡುವುದು ಸಹಜ. ಆದರೆ ಚುನಾವಣಾ ಪೂರ್ವದಲ್ಲಿ ಮಂಡನೆಯಾಗುತ್ತಿರುವ ಬಜೆಟ್‌ನಲ್ಲಿ ನಿರೀಕ್ಷೆಗಳು ತುಸು ಹೆಚ್ಚು. ಆ ನಿಟ್ಟಿನಲ್ಲಿ ಹಾಸನ ಜಿಲ್ಲೆಯ ಜನರು ಕೇಂದ್ರ ಸರ್ಕಾರದಿಂದ ನಿರೀಕ್ಷೆ ಮಾಡುತ್ತಿರುವ ಯೋಜನೆಗಳ ಪೈಕಿ ಮುಖ್ಯವಾಗಿ ಹಾಸನ ವಿಮಾನ ನಿಲ್ದಾಣಕ್ಕೆ ಮಂಜೂರಾತಿ, ಶಿರಾಡಿಘಾಟ್‌ನಲ್ಲಿ ಸುರಂಗ ಮತ್ತು ಮೇಲ್ಸೇತುವೆ ನಿರ್ಮಾಣದ ಎಕ್ಸ್‌ಪ್ರೆಸ್‌ ಹೈವೇ, ಹಾಸನಕ್ಕೆ ಸ್ಮಾರ್ಟ್‌ಸಿಟಿ ಯೋಜನೆ, ಹಾಸನ – ಬೇಲೂರು – ಚಿಕ್ಕಮಗಳೂರು ರೈಲು ಮಾರ್ಗ ನಿರ್ಮಾಣ, ಹಾಸನ ಮೂಲಕ ಮೈಸೂರು, ಬೆಂಗಳೂರು, ಮಂಗಳೂರಿಗೆ ಹೆಚ್ಚು ರೈಲುಗಳ ಸಂಚಾರ, ಪ್ರವಾಸೋದ್ಯಮದ ಅಭಿವೃದ್ಧಿ ಯೋಜನೆಗಗಳು ಸೇರಿ ಹಲವು ಅಭಿವೃದ್ಧಿ ಯೋಜನೆಗಳ ಮಂಜೂರಾತಿಯ ನಿರೀಕ್ಷೆಯಿದೆ.

ಹಾಸನಕ್ಕೆ ಸ್ಮಾರ್ಟ್‌ ಸಿಟಿ ಯೋಜನೆ: ತೀವ್ರ ಬೆಳವಣಿಗೆಯಲ್ಲಿರುವ ಹಾಸನ ನಗರಕ್ಕೆ ಮೂಲ ಸೌಕರ್ಯದ ಅಗತ್ಯವಿದೆ. ಈ ನಿಟ್ಟಿನಲ್ಲಿ ಹಾಸನ ಸ್ಮಾರ್ಟ್‌ಸಿಟಿ ಯೋಜನೆಗೆ ಸೇರಬೇಕೆಂಬುದು ಎರಡು ವರ್ಷಗಳ ಬೇಡಿಕೆ. ಸ್ಮಾರ್ಟ್‌ ಸಿಟಿ ಮಂಜೂರಾತಿಗೆ ಕೇಂದ್ರ ಸರ್ಕಾರದ ಮೇಲೆ ಸಂಸದರು, ಜಿಲ್ಲಾ ಉಸ್ತುವಾರಿ ಸಚಿವರು ಒತ್ತಡ ತಂದಿದ್ದರೂ ಯೋಜನೆ ಮಂಜೂರಾಗಿಲ್ಲ. ಈ ಬಜೆಟ್‌ನಲ್ಲಾದರೂ ಹಾಸನಕ್ಕೆ ಸ್ಮಾರ್ಟ್‌ಸಿಟಿ ಮಂಜೂರಾದೀತೆ ಎಂಬ ಕನಸು ಹಾಸನದ ಜನರದ್ದು.

Advertisement

ಹೊಸ ರೈಲು ಮಾರ್ಗ ನಿರ್ಮಾಣ: ಬೇಲೂರು – ಹಾಸನ – ಚಿಕ್ಕಮಗಳೂರು – ಶೃಂಗೇರಿ ರೈಲು ಮಾರ್ಗ ನಿರ್ಮಾಣದ ಸರ್ವೆ ಮುಗಿದಿದೆ. ಈಗಾಗಲೇ ಚಿಕ್ಕಮಗಳೂರು – ಬೇಲೂರು – ಸಕಲೇಶಪುರ ರೈಲು ಮಾರ್ಗಕ್ಕೆ ಮಂಜೂರಾತಿ ಸಿಕ್ಕಿದೆ. ಆದರೆ ಬೇಲೂರಿನಿಂದ ಸಕಲೇಶಪುರ ನಡುವೆ ರೈಲು ಮಾರ್ಗ ನಿರ್ಮಾಣದಿಂದ ಹೆಚ್ಚು ಪ್ರಯೋಜನವಿಲ್ಲ. ಹಾಗಾಗಿ ಚಿಕ್ಕಮಗಳೂರು – ಬೇಲೂರು – ಹಾಸನ ರೈಲು ಮಾರ್ಗ ನಿರ್ಮಾಣ ಆಗಬೇಕೆಂಬುದು ಬಹು ದಿನಗಳ ಬೇಡಿಕೆ. ಈ ನಿಟ್ಟಿನಲ್ಲಿ ಹಾಸನ – ಬೇಲೂರು ನಡುವೆ 33 ಕಿ.ಮೀ.ರೈಲು ಮಾರ್ಗ ನಿರ್ಮಾಣದ ಸರ್ವೆ ಕಾರ್ಯ ಮುಗಿದು 460 ಕೋಟಿ ರೂ. ಯೋಜನೆಯ ಅಂದಾಜು ಮಾಡಲಾಗಿದೆ. ರಾಜ್ಯ ಸರ್ಕಾರ – ರೈಲ್ವೆ ಇಲಾಖೆ ಸಹಭಾಗಿತ್ವದಲ್ಲಿ ರೈಲು ಮಾರ್ಗ ನಿರ್ಮಾಣಕ್ಕೆ ರಾಜ್ಯ ಸರ್ಕಾರ ತನ್ನ ಪಾಲಿನ ಶೇ.50 ರಷ್ಟು ವೆಚ್ಚ ಭರಿಸಲು ರಾಜ್ಯ ಸರ್ಕಾರ ಸಮ್ಮತಿ ವ್ಯಕ್ತಪಡಿಸಿ ಸಚಿವ ಸಂಪುಟದ ಅನುಮೋದನೆಯೂ ಸಿಕ್ಕಿದೆ. ಹಾಗಾಗಿ ಈ ಬಾರಿಯ ಬಜೆಟ್‌ನಲ್ಲಿ ಹಾಸನ – ಬೇಲೂರು ನೂತನ ರೈಲು ಮಾರ್ಗ ನಿರ್ಮಾಣಕ್ಕೆ ಕೇಂದ್ರದ ಮಂಜೂರಾತಿ ಸಿಗುವ ನಿರೀಕ್ಷೆಯಿದೆ.

ಹೊಸ ರೈಲುಗಳ ಸಂಚಾರದ ಘೋಷಣೆ: ಬೆಂಗಳೂರು – ಹಾಸನ – ಮಂಗಳೂರು, ಅರಸೀಕೆರೆ – ಹಾಸನ – ಮೈಸೂರು ನಡುವೆ ಹೆಚ್ಚು ರೈಲುಗಳ ಸಂಚಾರ ಆರಂಭವಾಗಬೇಕು ಎಂಬ ಬೇಡಿಕೆಯೂ ಇದೆ. ಈಗಾಗಲೇ ಬೆಂಗಳೂರು (ಯಶವಂತಪುರ) – ಮಂಗಳೂರು ನಡುವೆ ವಾರದಲ್ಲಿ ಮೂರುದಿನ ರಾತ್ರಿ ರೈಲು ಸಂಚಾರದ ಪ್ರಸ್ತಾವನೆಯು ರೈಲ್ವೆ ಮಂಡಳಿಯ ಮುಂದಿದೆ. ಹಾಗೆಯೇ ಹಾಸನ – ತಿರುಪತಿ ನಡುವೆ ರೈಲು ಸಂಚಾರದ ಬೇಡಿಕೆಯಿದ್ದು ಈ ರೈಲು ಮಂಜೂರಾದರೆ ಮಂಗಳೂರಿಗೆ ವಿಸ್ತರಿಸಬೇಕೆಂದು ದ.ಕ. ಜಿಲ್ಲೆಯ ಜನಪ್ರತಿನಿಧಿಗಳ ಒತ್ತಡವೂ ಇದೆ. ಈ ಎರಡು ರೈಲುಗಳು ಮಂಜೂರಾಗುವುದು ಖಚಿತ ಎಂದು ಹೇಳಲಾಗುತ್ತಿದೆ. ಜೊತೆಗೆ ಮೈಸೂರು – ಹಾಸನ – ವಿಜಯಪುರ ನಡುವೆ ಹೊಸ ರೈಲು ಸಂಚಾರ ಆರಂಭವಾಗಬೇಕೆಂಬ ಬೇಡಿಕೆಯೂ ಇದೆ. ಈ ಬಜೆಟ್‌ನಲ್ಲಿ ಹೊಸ ರೈಲುಗಳ ಸಂಚಾರದ ಘೋಷಣೆಯಾಗುವ ಸಾಧ್ಯತೆ ಹೆಚ್ಚಿದೆ.

ಪ್ರವಾಸೋದ್ಯಮದ ಅಭಿವೃದ್ಧಿ ಯೋಜನೆ: ಬೇಲೂರು, ಹಳೆಬೀಡು, ಶ್ರವಣಬೆಳಗೊಳ ವಿಶ್ವ ವಿಖ್ಯಾತ ಪ್ರವಾಸಿ ತಾಣಗಳು. ಈ ಪ್ರವಾಸಿ ಸ್ಥಳಗಳಿಗೆ ಮೂಲ ಸೌಕರ್ಯ ಕಲ್ಪಿಸುವ ಯೋಜನೆಗಳಾಗಬೇಕು. ಬೇಲೂರು ದೇವಾಲಯ ನಿರ್ಮಾಣವಾಗಿ 900 ವರ್ಷಗಳಾಗಿವೆ. ಆ ನಿಮಿತ್ತ ವಿಶೇಷ ಕಾರ್ಯ ಕ್ರಮಗಳು, ಅಭಿವೃದ್ಧಿ ಯೋಜನೆಗ ಳಾಗಬೇಕು ಎಂಬ ಬೇಡಿಕೆ ಹಲವು ವರ್ಷಗಳದ್ದು. ಕಳೆದ ವರ್ಷ ನಡೆದ ಶ್ರವಣಬೆಳಗೊಳದ ಮಹಾಮಸ್ತಕಾಭಿಷೇಕ ಕಾರ್ಯಕ್ರಮಕ್ಕೆ ಕೇಂದ್ರ ಸರ್ಕಾರ ಬಿಡಿಗಾಸು ನೆರವೂ ನೀಡಿಲಿಲ್ಲ. ಈ ಬಜೆಟ್‌ನಲ್ಲಿಯಾದರೂ ಜಿಲ್ಲೆಯ ಪ್ರವಾಸಿ ಸ್ಥಳಗಳಲ್ಲಿ ಅಭಿವೃದ್ಧಿ ಯೋಜನೆಗಳಿಗೆ ಅನುದಾನ ಘೋಷಣೆಯಾದೀತೆ ಎಂಬ ನಿರೀಕ್ಷೆ ಜಿಲ್ಲೆಯ ಜನರದ್ದು.

ಶಿರಾಡಿಘಾಟ್ ಸುರಂಗ, ಎಕ್ಸ್‌ಪ್ರೆಸ್‌ ಹೈವೇ ಮೇಲ್ಸೇತುವೆ ನಿರೀಕ್ಷೆ: ರಾಜ್ಯದ ಕರಾವಳಿ ಮತ್ತು ರಾಜ್ಯ ರಾಜಧಾನಿ ಬೆಂಗಳೂರು ಮೂಲಕ ಚನ್ನೈ ಬಂದರು ಸಂಪರ್ಕಿಸುವ ಪ್ರಮುಖ ರಾಷ್ಟ್ರೀಯ ಹೆದ್ದಾರಿ – 75 ರ ಬೆಂಗಳೂರು – ಮಂಗಳೂರು ನಡುವಿನ ಕೊಂಡಿ ಶಿರಾಡಿಘಾಟ್ ರಸ್ತೆ ಮಳೆಗಾಲ ಬಂತೆಂದರೆ ಭೂ ಕುಸಿತದಿಂದ ಬಂದ್‌ ಆಗುವುದು ಸಾಮಾನ್ಯವಾಗಿದೆ.

ಶಿರಾಡಿಘಾಟಿಯ 32 ಕಿ.ಮೀ. ರಸ್ತೆಯಲ್ಲಿ ಈಗಿರುವ ದ್ವಿಪಥವನ್ನು ಚತುಷ್ಪಥವನ್ನಾಗಿ ವಿಸ್ತರಿಸಲು ಸಾಧ್ಯವೂ ಇಲ್ಲ. ಹಾಗಾಗಿ ಶಿರಾಡಿಘಾಟ್‌ನಲ್ಲಿ ಚತುಷ್ಪಥ ಸುರಂಗ ಮತ್ತು ಮೇಲ್ಸೇತುವೆ ನಿರ್ಮಾಣದ ಮೂಲಕ ಎಕ್ಸ್‌ಪ್ರೆಸ್‌ ಹೈವೇ ನಿರ್ಮಾಣದ 10 ಸಾವಿರ ಕೋಟಿ ರೂ. ಯೋಜನೆ ರೂಪುಗೊಂಡಿದೆ. ಜಪಾನ್‌ ಕಂಪನಿಯೊಂದರ ಸಹಭಾಗಿತ್ವದಲ್ಲಿ ಈ ಯೋಜನೆ ಅನುಷ್ಠಾನದ ಬಗ್ಗೆ ಕಳೆದೆರಡು ವರ್ಷಗಳಿಂದಲೂ ಚರ್ಚೆ ನಡೆದಿದೆ.

ಡಿಪಿಆರ್‌ ಕೂಡ ರೂಪುಗೊಂಡಿದೆ ಇನ್ನು ಕೇಂದ್ರ ಸರ್ಕಾರದ ಮಂಜೂರಾತಿಯಷ್ಟೇ ಬಾಕಿ ಉಳಿದಿದೆ. ಹಾಸನ ಕ್ಷೇತ್ರ ಪ್ರತಿನಿಧಿಸುವ ಸಂಸದ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಮುಖ್ಯಮಂತ್ರಿ ಕುಮಾರಸ್ವಾಮಿ, ಜಿಲ್ಲಾ ಉಸ್ತುವಾರಿ ಸಚಿವ ಎಚ್.ಡಿ.ರೇವಣ್ಣ ಅವರು ಹಲವು ಬಾರಿ ಮನವಿ ಸಲ್ಲಿಸಿದ್ದು, ಕೇಂದ್ರ ಭೂ ಸಾರಿಗೆ ಸಚಿವ ನಿತಿನ್‌ ಗಡ್ಕರಿ ಅವರೂ ಮಂಜೂರಾತಿಯ ಭರವಸೆಯನ್ನೂ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಶಿರಾಡಿಘಾಟ್‌ನಲ್ಲಿ ಸುರಂಗ ಮತ್ತು ಮೇಲ್ಸೇತುವೆ ಯೋಜನೆಗೆ ಮಂಜೂರಾತಿಯ ನಿರೀಕ್ಷೆ ಗರಿಗೆದರಿದೆ.

ಹಾಸನ ವಿಮಾನ ನಿಲ್ದಾಣ ನಿರೀಕ್ಷೆ: ಹಾಸನ ವಿಮಾನ ನಿಲ್ದಾಣ ನಿರ್ಮಾಣ ಆಗಬೇಕೆಂಬುದು 4 ದಶಕಗಳ ಕನಸು. ಖಾಸಗಿ ಸಹಭಾಗಿತ್ವದಲ್ಲಿ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಶಿಲಾನ್ಯಾಸ ಮಾಡಿ 10 ವರ್ಷ ಕಳೆದರೂ ವಿಮಾನ ನಿಲ್ದಾಣ ನಿರ್ಮಾಣ ಆರಂಭವಾಗಿಲ್ಲ. ವಿಮಾನ ನಿಲ್ದಾಣ ನಿರ್ಮಾಣಕ್ಕೆ 560 ಎಕರೆ ಸ್ವಾಧೀನವಾಗಿದ್ದರೂ ವಿಮಾನ ನಿಲ್ದಾಣ ನಿರ್ಮಾಣ ಕೈಗೂಡಿಲ್ಲ.

ಎನ್‌ಡಿಎ ಸರ್ಕಾರ ಎರಡನೇ ಮತ್ತು ಮೂರನೇ ದರ್ಜೆ ನಗರಗಳಲ್ಲಿ ಉಡಾನ್‌ ಯೋಜನೆಯಡಿ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಹಲವು ನಗರಗಳಲ್ಲಿ ಮಂಜೂರಾತಿ ನೀಡಿದ್ದರೂ ಹಾಸನ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಮಾತ್ರ ಶಾಪ ವಿಮೋಚನೆ ಆಗಿಲ್ಲ. ಕೇಂದ್ರ ಸರ್ಕಾರದ ನಿರ್ಲಕ್ಷ್ಯದಿಂದ ಬೇಸತ್ತಿರುವ ರಾಜ್ಯ ಸರ್ಕಾರ ಈಗ ರಾಜ್ಯ ಲೋಕೋಪಯೋಗಿ ಇಲಾಖೆಯಿಂದಲೇ ವಿಮಾನ ನಿಲ್ದಾಣ ನಿರ್ಮಾಣಕೆ ಮುಂದಾಗುತ್ತಿದೆ. ಆದರೆ ಕೇಂದ್ರ ಸರ್ಕಾರದ ಮಂಜೂರಾತಿ ಅಗತ್ಯವಾಗಿದೆ. ಹಾಗಾಗಿ ಈ ಬಾರಿಯ ಬಜೆಟ್‌ನಲ್ಲಿ ಹಾಸನ ವಿಮಾನ ನಿಲ್ದಾಣ ನಿರ್ಮಾಣದ ಘೋಷಣೆಯಾಗಬಹುದೆಂಬ ನಿರೀಕ್ಷೆಯಿದೆ.

* ಎನ್‌. ನಂಜುಂಡೇಗೌಡ

Advertisement

Udayavani is now on Telegram. Click here to join our channel and stay updated with the latest news.

Next