ನವದೆಹಲಿ/ಜೈಪುರ್: ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಜತೆಗೆ ಚರ್ಚೆ ನಡೆಸಿದ ನಂತರ ಬಂಡಾಯ ಸಾರಿದ್ದ ಸಚಿನ್ ಪೈಲಟ್ ಹಾಗೂ ಶಾಸಕರು ಕಾಂಗ್ರೆಸ್ ಪಕ್ಷಕ್ಕೆ ವಾಪಸ್ ಆಗುವ ಮೂಲಕ ರಾಜಸ್ಥಾನ ಸರ್ಕಾರದ ಬಿಕ್ಕಟ್ಟು ಅಂತ್ಯಗೊಂಡು ಮೂರು ದಿನಗಳ ಬಳಿಕ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರು ಪೈಲಟ್ ಅವರನ್ನು ಗುರುವಾರ ಭೇಟಿಯಾಗಲಿದ್ದಾರೆ ಎಂದು ವರದಿ ತಿಳಿಸಿದೆ.
ಇಂದು (ಆಗಸ್ಟ್ 13,2020) ನಿಗದಿಯಂತೆ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ನಡೆಯಲಿದ್ದು, ಬದ್ಧ ವೈರಿಗಳಾದ ಗೆಹ್ಲೋಟ್ ಮತ್ತು ಪೈಲಟ್ ಮುಖಾಮುಖಿಯಾಗಲಿದ್ದಾರೆ ಎಂದು ನಿರೀಕ್ಷಿಸಲಾಗಿದೆ. ರಾಜಸ್ಥಾನ ವಿಧಾನಸಭೆ ವಿಶೇಷ ಅಧಿವೇಶನ ನಡೆಯುವ ಒಂದು ದಿನದ ಮೊದಲು ಶಾಸಕಾಂಗ ಪಕ್ಷದ ಸಭೆ ನಡೆಸಲು ಪಕ್ಷ ತೀರ್ಮಾನಿಸಿದೆ ಎಂದು ವರದಿ ತಿಳಿಸಿದೆ.
ಬಂಡಾಯವೆದ್ದು ಗೆಹ್ಲೋಟ್ ಜತೆ ಮುನಿಸಿಕೊಂಡಿದ್ದ ಸಚಿನ್ ಪೈಲಟ್ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಜತೆ ಮಾತುಕತೆ ನಡೆಸಿದ ನಂತರ ಸುಮಾರು ಒಂದು ತಿಂಗಳ ಕಾಲದ ತಿಕ್ಕಾಟ ಅಂತ್ಯಕಂಡಿತ್ತು. ಈ ಹಿನ್ನೆಲೆಯಲ್ಲಿ ಪೈಲಟ್ ಮಂಗಳವಾರ ಜೈಪುರಕ್ಕೆ ವಾಪಸ್ ಆಗಿದ್ದರು.
ಸಚಿನ್ ಪೈಲಟ್ ಜೈಪುರಕ್ಕೆ ಬಂದಿಳಿಯುತ್ತಿದ್ದಂತೆಯೇ ಸಿಎಂ ಗೆಹ್ಲೋಟ್ ಜೈಸಲ್ಮೇರ್ ಗೆ ವಿಮಾನದಲ್ಲಿ ಪ್ರಯಾಣ ಬೆಳೆಸಿದ್ದರು. ಅಲ್ಲಿ ಖಾಸಗಿ ಹೋಟೆಲ್ ವೊಂದರಲ್ಲಿ ನೂರು ಮಂದಿ ಶಾಸಕರು ಠಿಕಾಣಿ ಹೂಡಿದ್ದಾರೆ. ಶುಕ್ರವಾರ ನಡೆಯಲಿರುವ ವಿಶ್ವಾಸಮತ ಯಾಚನೆ ಹಿನ್ನೆಲೆಯಲ್ಲಿ ಶಾಸಕರ ಜತೆ ಗೆಹ್ಲೋಟ್ ಚರ್ಚೆ ನಡೆಸಿದ್ದು, ಈ ವೇಳೆ ಹಲವು ಶಾಸಕರು ಬಂಡಾಯ ಶಾಸಕರನ್ನು ಪಕ್ಷಕ್ಕೆ ವಾಪಸ್ ಕರೆಯಿಸಿಕೊಂಡ ಬಗ್ಗೆ ಅಸಮಧಾನ ವ್ಯಕ್ತಪಡಿಸಿದ್ದಾರೆನ್ನಲಾಗಿದೆ.
ಆದರೆ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್, ಎಲ್ಲವನ್ನೂ ಮರೆತು ಒಗ್ಗಟ್ಟಾಗಿ ಮುಂದುವರಿಯೋಣ ಎಂದು ಸಲಹೆ ನೀಡಿರುವುದಾಗಿ ವರದಿ ತಿಳಿಸಿದೆ.