ಕಾಪು: ತೆಲುಗು ಮತ್ತು ಕನ್ನಡ ಚಲನಚಿತ್ರ ನಟಿ ಪ್ರೇಮಾ ಅವರು ಮಂಗಳವಾರ ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನ ಮತ್ತು ಕಾರಣಿಕದ ಕೊರಗಜ್ಜ ದೈವಸ್ಥಾನಕ್ಕೆ ಭೇಟಿ ನೀಡಿ ಮಾರಿಯಮ್ಮ ದೇವರ ದರ್ಶನ ಪಡೆದರು.
ಈ ಸಂದರ್ಭದಲ್ಲಿ ಹೊಸ ಮಾರಿಗುಡಿ ದೇವಸ್ಥಾನ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಕೆ. ವಾಸುದೇವ ಶೆಟ್ಟಿ ಮಾರಿಗುಡಿ ದೇವಸ್ಥಾನದ ಐತಿಹ್ಯ, ನವೀಕರಣ ಕಾರ್ಯ, ಶಿಲಾ ಸೇವೆ ಸಮರ್ಪಣೆ ಸಹಿತ ವಿವಿಧ ಮಾಹಿತಿ ನೀಡಿದರು. ತಂತ್ರಿ ವೇ| ಮೂ| ಶ್ರೀನಿವಾಸ ತಂತ್ರಿ ಕಲ್ಯ ದೇವರ ಪ್ರಸಾದ ನೀಡಿದರು.
ಬಳಿಕ ಮಾಧ್ಯಮದೊಂದಿಗೆ ನಟಿ ಪ್ರೇಮಾ ಮಾತನಾಡಿ, ಅಮ್ಮನ ಅನುಗ್ರಹದಿಂದ ಇಲ್ಲಿಗೆ ಬಂದಿರುವೆ. ಮಾರಿಯಮ್ಮನ ದರ್ಶನ ಪಡೆದು ಸಂತೋಷವಾಗಿದೆ. ಕರಾವಳಿ ಜಿಲ್ಲೆಗಳು ದೇವಸ್ಥಾನಗಳ ತವರೂರು ಎಂದು ತಿಳಿದಿದ್ದೇನೆ. ದಿನವಿಡೀ ಬೇರೆ ಬೇರೆ ದೇವಸ್ಥಾನಗಳಿಗೆ ತೆರಳಿದಾಗಲೇ ಇಲ್ಲಿನ ಧಾರ್ಮಿಕ ಕ್ಷೇತ್ರಗಳ ಬಗ್ಗೆ ತಿಳಿಯುವಂತಾಗಿದೆ. ಅಮ್ಮನ ಅನುಗ್ರಹದಂತೆ ಮುನ್ನಡೆಯುತ್ತೇನೆ. ಜೀರ್ಣೋದ್ಧಾರ ಕಾರ್ಯದಲ್ಲೂ ತನ್ನಿಂದಾದಷ್ಟು ರೀತಿಯಲ್ಲಿ ಸಹಕಾರ ನೀಡುತ್ತೇನೆ ಎಂದರು.
ಕಾಪು ಹೊಸ ಮಾರಿಗುಡಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ರಮೇಶ್ ಹೆಗ್ಡೆ ಕಲ್ಯ, ಸದಸ್ಯರಾದ ಜಗದೀಶ್ ಬಂಗೇರ, ಚಂದ್ರಶೇಖರ್ ಅಮೀನ್, ಬಾಬು ಮಲ್ಲಾರು, ಅಭಿವೃದ್ಧಿ ಸಮಿತಿ ಪ್ರಚಾರ ಸಮಿತಿ ಅಧ್ಯಕ್ಷ ಯೋಗೀಶ್ ಶೆಟ್ಟಿ ಬಾಲಾಜಿ, ಪ್ರಬಂಧಕ ಗೋವರ್ಧನ್ ಕಾಪು, ರಾಧಿಕಾ ಭಟ್, ಭಾರತಿ ಟಿ.ಕೆ. ಮೊದಲಾದವರು ಉಪಸ್ಥಿತರಿದ್ದರು.
ಕೊರಗಜ್ಜ ಸನ್ನಿಧಿಗೆ ಭೇಟಿ : ಕೊರಗಜ್ಜ ದೈವಸ್ಥಾನಕ್ಕೆ ಭೇಟಿ ನೀಡಿದ ಅವರು, ಕೊರಗಜ್ಜ ದೈವದ ಬಗ್ಗೆ ಕೇಳಿ ತಿಳಿದಿದ್ದೇನೆ. ಆದರೆ ಪ್ರಥಮ ಬಾರಿಗೆ ಸನ್ನಿಧಾನಕ್ಕೆ ಭೇಟಿ ನೀಡುತ್ತಿದ್ದೇನೆ. ನನ್ನ ಮನಸ್ಸಿನ ಬೇಡಿಕೆಯನ್ನು ಅಜ್ಜನ ಬಳಿ ಹೇಳಿಕೊಂಡಿದ್ದೇನೆ. ಅಜ್ಜನ ಅನುಗ್ರಹದಿಂದ ಎಲ್ಲವೂ ಸುಸೂತ್ರವಾಗಿ ಈಡೇರುವ ಭರವಸೆಯಿದೆ ಎಂದರು. ಕೊರಗಜ್ಜ ಸನ್ನಿಧಿಯಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದ ಅವರನ್ನು ಕ್ಷೇತ್ರದ ಮುಖ್ಯಸ್ಥ ಸುರೇಶ್ ಪಿ. ಅವರು ಅಜ್ಜನ ಪ್ರಸಾದ ನೀಡಿ ಗೌರವಿಸಿದರು. ನಟಿ ಅನು ಅಯ್ಯಪ್ಪ, ರತ್ನಾ ಸುರೇಶ್, ನಟಿಯರಾದ ರಾಧಿಕಾ ಭಟ್, ಭಾರತಿ ಟಿ.ಕೆ. ಮೊದಲಾದವರು ಉಪಸ್ಥಿತರಿದ್ದರು.