ಜನಕ ಮಹಾರಾಜನಿಗೆ ಶ್ರೀಮದ್ಭಾಗವತ ಪ್ರವಚನ ಮಾಡುವಾಗ ಪ್ರವಾಚಕರು ರಾಜನ ಮುಖವನ್ನೇ ನೋಡಿ ಹೇಳುತ್ತಿದ್ದರು. ಇದು ಋಷಿ ಸಮೂಹಕ್ಕೆ ಬೇಸರವಾಯಿತು. “ಆತ ರಾಜ. ಆತನೇನೋ ಲಾಭವನ್ನು ಕೊಡುತ್ತಿರಬೇಕು. ನಾವು ಋಷಿಗಳು ಏನು ಕೊಡಬಲ್ಲೆವು?’ ಅಂದುಕೊಂಡದ್ದು ಪ್ರವಾಚಕರಿಗೆ ತಿಳಿಯಿತು. ಮಿಥಿಲಾ ಪಟ್ಟಣಕ್ಕೆ ಬೆಂಕಿ ಬಿತ್ತು ಎಂಬ ಸುದ್ದಿ ಬಂತು. ಜನಕನೊಬ್ಬನನ್ನು ಬಿಟ್ಟು ಎಲ್ಲರೂ ಜಾಗ ಖಾಲಿ ಮಾಡಿದರು. ಏಕೆಂದರೆ ಅವರವರ ವಸ್ತುಗಳನ್ನು ರಕ್ಷಿಸಿಟ್ಟುಕೊಳ್ಳಲು.
ತುಸು ಸಮಯದಲ್ಲಿ ಬೆಂಕಿ ಬಿದ್ದ ಸುದ್ದಿ ತಪ್ಪು ಎಂಬ ಸುದ್ದಿ ಬಂತು. “ಇದೇ ಕಾರಣಕ್ಕಾಗಿ ನಾನು ಜನಕನ ಮುಖ ನೋಡಿ ಪುರಾಣ ಪ್ರವಚನ ಮಾಡುತ್ತಿದ್ದುದು. ನೀವೆಲ್ಲರೂ ನಿಮ್ಮ ನಿಮ್ಮ ಸಾಮಾನುಗಳನ್ನು ರಕ್ಷಿಸಲು ಓಡಿದಿರಿ. ಜನಕನಾದರೂ ಪ್ರವಚನವನ್ನೇ ಕೇಳುತ್ತಿದ್ದ’ ಎಂದು ಪ್ರವಾಚಕರು ಸ್ಪಷ್ಟಪಡಿಸಿದರು.
ಅರಮನೆಗೆ ಬೆಂಕಿ ಬಿದ್ದರೂ ಏನೂ ಆಗದಂತೆ ಇದ್ದರೆ ಜನಕ ಮಹಾರಾಜ ಹಾಗಿದ್ದರೆ ಬೇಜವಾಬ್ದಾರಿ ಮನುಷ್ಯನೇ? ಅಲ್ಲ ಹಾಗಲ್ಲ. ಬೆಂಕಿ ನಂದಿಸಲು ಬೇಕಾದ ಎಲ್ಲ ವ್ಯವಸ್ಥೆಗಳನ್ನೂ ಆತ ಮಾಡಿದ್ದಾನೆ. ಇಷ್ಟಾಗಿ ಆತನೇ ಹೋಗಿ ಬೆಂಕಿ ನಂದಿಸಲು ಸಾಧ್ಯವೆ? ಆದ್ದರಿಂದ ಬೇಜವಾಬ್ದಾರಿ ಇಲ್ಲದಿರುವುದೂ, ಕರ್ತವ್ಯಪ್ರಜ್ಞೆಯಲ್ಲಿ ಇರುವುದೂ, ಅಭಿಮಾನಶೂನ್ಯರಾಗಿರುವುದೂ ಏಕಕಾಲದಲ್ಲಿರಬೇಕು, ಇವುಗಳ ನಡುವೆ ಸೂಕ್ಷ್ಮ ರೇಖೆಗಳನ್ನು ಗುರುತಿಸಬೇಕು. ಈ ಚಿಂತನೆ ಸತತ ಅಭ್ಯಾಸದಿಂದ ಲೀಲಾಜಾಲವಾಗುತ್ತದೆ.
– ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು,
ಪರ್ಯಾಯ ಶ್ರೀಪುತ್ತಿಗೆ ಶ್ರೀಕೃಷ್ಣಮಠ, ಉಡುಪಿ
-ಕೋಟಿ ಗೀತಾ ಲೇಖನ ಯಜ್ಞದಲ್ಲಿ ಪಾಲೊಳ್ಳಿ
ಗೀತಾ ಮಂದಿರ, ಉಡುಪಿ ಸಂಪರ್ಕ ಸಂಖ್ಯೆ: 8055338811