Advertisement

ಬಿಬಿಎಂಪಿ ಕಸದ ಲಾರಿಗೆ ಮತ್ತೂಂದು ಬಲಿ

08:22 PM Mar 31, 2022 | Team Udayavani |

ಬೆಂಗಳೂರು: ಬಿಬಿಎಂಸಿ ಕಸದ ಲಾರಿಗೆ ಮತ್ತೂಂದು ಜೀವ ಬಲಿಯಾಗಿದೆ. ಹತ್ತು ದಿನಗಳ ಹಿಂದಷ್ಟೇ ಹೆಬ್ಬಾಳದಲ್ಲಿ ರಸ್ತೆ ದಾಟುತ್ತಿದ್ದ ಶಾಲಾ ಬಾಲಕಿ ಅಕ್ಷಯ ಮೇಲೆ ಕಸದ ಲಾರಿ ಹರಿದು ಆಕೆ ಮೃತಪಟ್ಟ ಘಟನೆ ಮಾಸುವ ಮುನ್ನವೇ ಮತ್ತೂಂದು ದುರಂತ ಸಂಭವಿಸಿದೆ.

Advertisement

ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದ ವೃದ್ಧರೊಬ್ಬರ ಮೇಲೆ ಕಸದ ಲಾರಿ ಹರಿದು ಮೃತಪಟ್ಟಿರುವ ಘಟನೆ ಯಲಹಂಕ ಸಂಚಾರ ಠಾಣೆ ವ್ಯಾಪ್ತಿಯಲ್ಲಿ ಗುರುವಾರ ಮಧ್ಯಾಹ್ನ ನಡೆದಿದೆ.

ಸಂಪಿಗೆಹಳ್ಳಿ ನಿವಾಸಿ ರಾಮಯ್ಯ(76) ಮೃತರು. ಕೃತ್ಯ ಎಸಗಿದ ಬಿಬಿಎಂಪಿ ಕಸದ ಲಾರಿ ಚಾಲಕ ವಾಹನ ಸಮೇತ ಸ್ಥಳದಿಂದ ಪರಾರಿಯಾಗಿದ್ದು, ನಿರ್ಜನ ಪ್ರದೇಶದಲ್ಲಿ ಲಾರಿ ನಿಲ್ಲಿಸಿ ನಾಪತ್ತೆಯಾಗಿದ್ದಾನೆ. ಆತನಿಗಾಗಿ ಶೋಧ ನಡೆಯುತ್ತಿದೆ ಎಂದು ಸಂಚಾರ ಪೊಲೀಸರು ಹೇಳಿದರು.

ರಾಮಯ್ಯ, ಸಂಬಂಧಿ ಯುವತಿಯೊಬ್ಬರಿಗೆ ಗಂಡು ನೋಡಲು ಸಾತನೂರಿಗೆ ಕುಟುಂಬ ಸಮೇತ ಹೋಗಿದ್ದರು. ವಾಪಸ್‌ ತಮ್ಮ ದ್ವಿಚಕ್ರ ವಾಹನದಲ್ಲಿ ಹೆಲ್ಮೆಟ್‌ ಧರಿಸಿಕೊಂಡು ಒಬ್ಬರೇ ಬರುತ್ತಿದ್ದರು. ಅವರ ಪತ್ನಿ ಹಾಗೂ ಇತರೆ ಕುಟುಂಬ ಸದಸ್ಯರು ಬೇರೆ ಕಾರಿನಲ್ಲಿ ಬರುತ್ತಿದ್ದರು.

ಸಾತನೂರಿನಿಂದ ರೇವಾ ಜಂಕ್ಷನ್‌ ಮೂಲಕ ರೇವಾ ಕಾಲೇಜಿನ 2ನೇ ಗೇಟ್‌ ಮುಂಭಾಗ ಬರುವಾಗ, ಅತೀ ವೇಗ ಮತ್ತು ನಿರ್ಲಕ್ಷ್ಯತನಿಂದ ಚಾಲನೆ ಮಾಡಿಕೊಂಡು ಬಂದ ಬಿಬಿಎಂಸಿ ಕಸದ ಲಾರಿ ಚಾಲಕ ಹಿಂದಿನಿಂದ ರಾಮಯ್ಯ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದಿದ್ದಾನೆ. ಪರಿಣಾಮ ಕೆಳಗೆ ಬಿದ್ದ ರಾಮಯ್ಯ ಕಾಲಿನ ಮೇಲೆ ಕಸದ ಲಾರಿ ಚಕ್ರಗಳು ಹರಿದು, ಕಾಲುಗಳು ತುಂಡಾಗಿದ್ದು, ತೀವ್ರ ರಕ್ತಸ್ರಾವದಿಂದ ಬಿದ್ದಿದ್ದರು. ಕೂಡಲೇ ಸ್ಥಳೀಯರು ಸಮೀಪದ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ, ಪರೀಕ್ಷಿಸಿದ ವೈದ್ಯರು ಮಾರ್ಗಮಧ್ಯೆಯೇ ಮೃತಪಟ್ಟಿದ್ದಾರೆ ಎಂದು ದೃಢಪಡಿಸಿದ್ದಾರೆ ಎಂದು ಸಂಚಾರ ಠಾಣೆ ಪೊಲೀಸರು ಹೇಳಿದರು. ಘಟನೆ ಸಂಬಂಧ ರಾಮಯ್ಯ ಪುತ್ರ ರಾಜಶೇಖರ್‌ (43) ಎಂಬವರು ಚಿಕ್ಕಜಾಲ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

Advertisement

ಬಿಬಿಎಂಪಿ ಕಸದ ಲಾರಿಗಳಿಂದ ಅಪಘಾತ ಹೆಚ್ಚಳ:

ದುರ್ಘ‌ಟನೆ ಕುರಿತು ರಾಮಯ್ಯ ಸಂಬಂಧಿ ಶಿವಕುಮಾರ್‌ ಮಾತನಾಡಿ, ಸಂಬಂಧಿಕರ ಮನೆಗೆ ರಾಮಯ್ಯ ಹೋಗಿದ್ದು, ವಾಪಸ್‌ ಒಬ್ಬರೇ ದ್ವಿಚಕ್ರ ವಾಹನದಲ್ಲಿ ರಸ್ತೆ ಬದಿಯಲ್ಲೇ ನಿಧಾನವಾಗಿ ಬರುತ್ತಿದ್ದರು. ಈ ವೇಳೆ ಬಿಬಿಎಂಪಿ ಕಸದ ಲಾರಿ ಏಕಾಏಕಿ ರಾಮಯ್ಯಗೆ ಡಿಕ್ಕಿ ಹೊಡೆದರಿಂದ ಅವರು ಮೃತಪಟ್ಟಿದ್ದಾರೆ.

ರಾಮಯ್ಯ ಕುಟುಂಬಕ್ಕೆ ಆಧಾರ ಸ್ತಂಭವಾಗಿದ್ದರು. ಅದೃಷ್ಟವಶಾತ್‌ ಅವರ ಪತ್ನಿ ಬೇರೆ ಕಾರಿನಲ್ಲಿ ಬರುತ್ತಿದ್ದರು. ಒಂದು ವೇಳೆ ಇಬ್ಬರು ಒಂದೇ ವಾಹನದಲ್ಲಿ ಬಂದಿದ್ದರೆ, ಇಬ್ಬರು ಮೃತಪಡುತ್ತಿದ್ದರು. ಇತ್ತೀಚೆಗೆ ಬಿಬಿಎಂಪಿ ಕಸದ ಲಾರಿಗಳಿಂದ ಅಪಘಾತಗಳು ಹೆಚ್ಚಾಗುತ್ತಿವೆ. ರಾಮಯ್ಯ ಸಾವಿಗೆ ನ್ಯಾಯ ಕೊಡಬೇಕು. ಜತೆಗೆ ಬಿಬಿಎಂಪಿ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಮಾ.21ರಂದು ಶಾಲೆಗೆ ಮನೆಗೆ ತೆರಳುತ್ತಿದ್ದ 12 ವರ್ಷದ ಬಾಲಕಿ ಅಕ್ಷಯ ಬಿ.ನರಸಿಂಹಮೂರ್ತಿ ಮೇಲೆ ಬಿಬಿಎಂಪಿ ಕಸದ ಲಾರಿ ಹರಿದು, ಆಕೆ ಸ್ಥಳದಲ್ಲೇ ಮೃತಪಟ್ಟಿದ್ದಳು. ಅಲ್ಲದೆ, ದುರ್ಘ‌ಟನೆಯಲ್ಲಿ ಪಾದಚಾರಿ ಸೌಮ್ಯ (28), ದ್ವಿಚಕ್ರ ವಾಹನ ಸವಾರ (42) ತೀವ್ರ ಗಾಯಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next