Advertisement

ಪಾಲಿಕೆಯಲಿ ಸಹಸ್ರಾರು ಕೋಟಿ ರೂ.ಅಕ್ರಮ ಪತ್ತೆ : ಎಸಿಬಿಯ 35 ತಂಡಗಳೊಂದಿಗೆ ಶೋಧನೆ

11:05 AM Mar 03, 2022 | Team Udayavani |

ಬೆಂಗಳೂರು: ಬಿಬಿಎಂಪಿ ಕೇಂದ್ರ ಕಚೇರಿ ಹಾಗೂ ವಲಯ ಕಚೇರಿಗಳಲ್ಲಿ ಇತ್ತೀಚೆಗಷ್ಟೇ ದಾಳಿ ನಡೆಸಿದ್ದ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ), ಬುಧವಾರ ಮತ್ತೆ ತನ್ನ ದಾಳಿಯನ್ನು ಮುಂದುವರಿಸಿದೆ. ಮಹಾನಗರ ಪಾಲಿಕೆಯ ಜಾಹೀರಾತು, ಕಂದಾಯ, ಘನತ್ಯಾಜ್ಯ ವಿಲೇವಾರಿ, ಹಣಕಾಸು ಮತ್ತು ನಗರ ಯೋಜನೆ ವಿಭಾಗದಲ್ಲಿ ಸಾವಿರಾರು ಕೋಟಿ ರೂ. ಅವ್ಯವಹಾರ
ನಡೆದಿರುವುದು ಎಸಿಬಿ ದಾಳಿಯಲ್ಲಿ ಬೆಳಕಿಗೆ ಬಂದಿದೆ.

Advertisement

ವಿವಿಧ 33 ಸ್ಥಳಗಳಲ್ಲಿ ಎಸಿಬಿಯ 200 ಅಧಿಕಾರಿಗಳು ಹಾಗೂ ಸಿಬ್ಬಂದಿಯನ್ನು ಒಳಗೊಂಡ 35 ತಂಡಗಳೊಂದಿಗೆ ಶೋಧನಾ ಕಾರ್ಯ ಮುಂದುವರಿಸಿದೆ. ಜಾಹೀರಾತು ವಿಭಾಗವೊಂದ ರಲ್ಲಿಯೇ ಅಂದಾಜು 300 ಕೋಟಿ ರೂ. ಗಳಿಗೂ ಅಧಿಕ ತೆರಿಗೆ ಸಂಗ್ರಹ ಮಾಡದೆ ಸರ್ಕಾರಕ್ಕೆ ನಷ್ಟ ಮಾಡಿರುವುದು ಪರಿಶೀಲನೆಯಿಂದ ತಿಳಿದು ಬಂದಿದೆ.

ಕಳೆದ ಹಲವು ವರ್ಷಗಳಿಂದ ಜಾಹೀರಾತು ವಿಭಾಗದಲ್ಲಿ ಕರ ಸಂಗ್ರಹ ಬಾಕಿ ಇರುವುದು ಕಡತಗಳ ಪರಿಶೀಲನೆ ವೇಳೆ ಕಂಡುಬಂದಿದೆ. ಬಸ್‌ ತಂಗುದಾಣ ಮತ್ತು ಪಾದಚಾರಿ ಮಾರ್ಗ (ಸ್ಕೈ ವಾಕ್‌) ಗಳಿಗೆ ಅಳವಡಿಸಿರುವ ಜಾಹೀರಾತುಗಳಿಂದ ಸುಮಾರು 27 ಕೋಟಿ ರೂ. ಗಳಿಗೂ ಅಧಿಕ ತೆರಿಗೆ ಸಂಗ್ರಹಿಸಿಲ್ಲ. ಹೊಸದಾಗಿ ನಿರ್ಮಿಸಿರುವ ಪಿಪಿಪಿ ಮಾದರಿಯ ಬಸ್‌ ತಂಗುದಾಣಗಳಲ್ಲಿ ಅಳವಡಿಸಿರುವ ಜಾಹೀರಾತುಗಳಿಂದ ಸುಮಾರು 6 ಕೋಟಿ ರೂ. ವರೆಗೂ ಅಧಿಕ ತೆರಿಗೆ ಸಂಗ್ರಹ ಮಾಡಿಲ್ಲದಿರುವುದು ತಿಳಿದು ಬಂದಿದೆ.

ಇನ್ನು ಕಂದಾಯ ವಿಭಾಗದಲ್ಲಿ ಸರಿಯಾದ ರೀತಿಯಲ್ಲಿ ತೆರಿಗೆ ಸಂಗ್ರಹಿಸದೆ 217 ಕೋಟಿ ರೂ.ಗಳನ್ನು ಬಿಬಿಎಂಪಿಗೆ ನಷ್ಟವನ್ನುಂಟು ಮಾಡಿರುವ ಕುರಿತು 7 ಕಡತಗಳ ಪರಿಶೀಲನೆಗೆ ಒಳಪಡಿಸಲಾಗಿದೆ.

ಘನತ್ಯಾಜ್ಯ ವಿಭಾಗದಲ್ಲಿ 2014-15ನೇ ಸಾಲಿನ ಆಡಿಟ್‌ ವರದಿ ಪ್ರಕಾರ 75 ಕೋಟಿ ರೂ.ಗಳಷ್ಟು ಓವರ್‌ ಬಿಲ್ಲಿಂಗ್‌ ಆಗಿರುವುದು ವರದಿಯಲ್ಲಿ ನಮೂದಿಸಲಾಗಿದೆ. ಈ ಬಗ್ಗೆ ಬಿಬಿಎಂಪಿ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳದಿರುವುದರಿಂದ ಅಂದಾಜು 100 ಕೋಟಿ ರೂ.ಗಳಿಗೂ ಅಧಿಕಾರ ಅವ್ಯವಹಾರವಾಗಿರುವ ಬಗ್ಗೆ ಕಡತ ಪರಿಶೀಲನಾ ಕಾರ್ಯ ಮುಂದುವರಿದಿದೆ.

Advertisement

ಇದನ್ನೂ ಓದಿ : ಹಾಡಿನಲ್ಲಿ ಎಂಟ್ರಿಕೊಟ್ಟ ಕೌಟಿಲ್ಯ; ಕಿರುತೆರೆ ನಟ ಅರ್ಜುನ್‌ ರಮೇಶ್‌ ನಾಯಕ

ಕೆರೆ, ಬಫ‌ರ್‌ ಜೋನ್‌ನಲ್ಲಿ ನಕ್ಷೆ ಮಂಜೂರು: ಕೆಲವು ಕೆರೆ ಮತ್ತು ಬಫ‌ರ್‌ ಜೋನ್‌ಗಳಲ್ಲಿ ಅನಧಿಕೃತವಾಗಿ ಅಪಾರ್ಟ್‌ಮೆಂಟ್‌ಗಳನ್ನು ನಿರ್ಮಿಸಲು ಸ್ಥಳ ಪರಿಶೀಲನೆ ನಡೆಸದೆ ನಕ್ಷೆ ಮಂಜೂರು ಮಾಡಿ, ಖಾತಾ ಸೃಷ್ಟಿಸಲಾಗಿದೆ. ಪ್ರಸ್ತುತ ನಿರ್ಮಾಣ ಹಂತದಲ್ಲಿರುವ ಕಟ್ಟಡಗಳಿಗೆ ಈಗಾಗಲೇ ಒಸಿ ಯನ್ನು ನೀಡಲಾಗಿದೆ. 3 ಅಂತಸ್ತಿನ ಕಟ್ಟಡ ನಿರ್ಮಾಣ ಮಾಡಲು ಅನುಮೋದನೆ ಪಡೆದುಕೊಂಡು 6ಕ್ಕೂ ಅಧಿಕ ಅಂತಸ್ತಿನ ಕಟ್ಟಗಳನ್ನು ನಿರ್ಮಿಸಿದ್ದು, ಈ ಬಗ್ಗೆ ಬಿಬಿಎಂಪಿ ಅಧಿಕಾರಿಗಳು ಕ್ರಮ ಕೈಗೊಂಡಿಲ್ಲ. 10 ಮಹಡಿಗಳಿಂತ ಮೇಲ್ಪಟ್ಟ ಎಲ್ಲ
ಕಟ್ಟಡಗಳ ದಾಖಲಾತಿಗಳನ್ನು ಮತ್ತು 2 ಎಕರೆ ಜಾಗದಲ್ಲಿ ಮತ್ತು ಅದಕ್ಕಿಂತ ಹೆಚ್ಚಿನ ಜಾಗದಲ್ಲಿ ನಿರ್ಮಿಸಿರುವ ಕಟ್ಟಡ ಹಾಗೂ ಅಪಾರ್ಟ್‌ಮೆಂಟ್‌ಗಳಿಗೆ ಸಂಬಂಧಪಟ್ಟ ಕಡತ ಪರಿಶೀಲನೆಯಲ್ಲಿದೆ. ಇದರಿಂದ ಸರ್ಕಾರಕ್ಕೆ ಬರಬೇಕಾಗಿರುವ ಕೋಟ್ಯಂತರ ರೂ. ತೆರಿಗೆ ಸರ್ಕಾರಕ್ಕೆ ಪಾವತಿಯಾಗದಿರುವುದು ಬೆಳಕಿಗೆ ಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next