Advertisement
ಆಧಾರ್ ಕಡ್ಡಾಯ ಮಾಡಿರುವುದರಿಂದ ಸಾವಿರಕ್ಕೂ ಅಧಿಕ ವಿದ್ಯಾರ್ಥಿ ವೇತನದ ಅರ್ಜಿಗಳು ತಿರಸ್ಕೃತಗೊಂಡು, ವಾಪಸ್ ಪಿಯು ಇಲಾಖೆಗೆ ಬಂದಿದೆ. ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಮಾಡದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನವೇ ಬಂದಿಲ್ಲ.
Related Articles
Advertisement
ವಾರ್ಷಿಕವಾಗಿ 10 ಸಾವಿರ ರೂ.ಗಳನ್ನು ವಿದ್ಯಾರ್ಥಿ ವೇತನದ ರೂಪದಲ್ಲಿ ನೀಡಲಾಗುತ್ತದೆ. ಆಯ್ಕೆಯಾದ ವಿದ್ಯಾರ್ಥಿಗಳ ಬ್ಯಾಂಕ್ ಖಾತೆಗೆ ನೇರ ಜಮಾ ಮಾಡಲಾಗುತ್ತದೆ. ಎಂಎಚ್‌ಆರ್‌ಡಿ ನಿಯಮಾನುಸಾರವಾಗಿ ಆನ್‌ಲೈನ್ ಮೂಲಕವೇ ಅರ್ಜಿ ಸಲ್ಲಿಸುವ ವ್ಯವಸ್ಥೆ ಮಾಡಿಕೊಟ್ಟಿದ್ದಾರೆ. ಎಲ್ಲ ದಾಖಲೆ ಸಹಿತವಾಗಿ ಸಲ್ಲಿಸಿರುವ ಅರ್ಜಿ ಕೂಡ ರಿಜೆಕ್ಟ್ ಆಗಿದೆ ಎಂದು ವಿದ್ಯಾರ್ಥಿ ಅನಿಲ್ ದೂರಿದ್ದಾರೆ.
ಹಿಂದೆಲ್ಲ ಪಿಯು ಇಲಾಖೆಯಿಂದಲೇ ವಿದ್ಯಾರ್ಥಿಗಳಿಂದ ಅರ್ಜಿ ಸ್ವೀಕರಿಸಿ, ಅದನ್ನು ಕೇಂದ್ರಕ್ಕೆ ಸಲ್ಲಿಸಲಾಗುತಿತ್ತು. ಈಗ ವಿದ್ಯಾರ್ಥಿಗಳೇ ನೇರವಾಗಿ ಅರ್ಜಿ ಸಲ್ಲಿಸಿ, ವಿದ್ಯಾರ್ಥಿ ವೇತನ ಪಡೆಯಬೇಕಾದ ವ್ಯವಸ್ಥೆ ಮಾಡಿದ್ದಾರೆ. ಇದರಿಂದ ಅನುಕೂಲವೂ ಇದೆ. ಅನಾನುಕೂಲವೂ ಇದೆ. ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳ ವಿದ್ಯಾರ್ಥಿ ವೇತನದ ಅರ್ಜಿ ತಿರಸ್ಕೃತವಾಗಿರುವುದು ಸಾಕಷ್ಟು ಆತಂಕ ಸೃಷ್ಟಿಸಿದೆ. ಪುನ: ಅರ್ಜಿ ಸಲ್ಲಿಸಬೇಕೇ ಅಥವಾ ಅದೇ ಅರ್ಜಿಯನ್ನು ಮಾರ್ಪಾಡು ಮಾಡಲು ಅವಕಾಶ ಇದೆಯೇ ಎಂಬ ಗೊಂದಲದಲ್ಲಿ ವಿದ್ಯಾರ್ಥಿಗಳಿದ್ದಾರೆ.
ಎಂಎಚ್‌ಆರ್‌ಡಿ ನಿಯಮಾನುಸಾರವಾಗಿ ಬ್ಯಾಂಕ್ ಖಾತೆ, ಆಧಾರ್ ಸಂಖ್ಯೆ ಸೇರಿದಂತೆ ಎಲ್ಲ ದಾಖಲೆಗಳನ್ನು ಅರ್ಜಿ ಜತೆಗೆ ಸಲ್ಲಿಸಿದ್ದೇನೆ. ಮೊದಲೆರಡು ವರ್ಷ ಸಮಸ್ಯೆ ಇಲ್ಲದೆ ವಿದ್ಯಾರ್ಥಿ ವೇತನ ಬಂದಿದೆ. ಆದರೆ, ಈ ಬಾರಿ ವಿದ್ಯಾರ್ಥಿ ವೇತನ ನವೀಕರಣಕ್ಕೆ ಸಲ್ಲಿಸಿರುವ ಅರ್ಜಿ ತಿರಸ್ಕೃತಗೊಂಡಿದೆ. ಏನು ಮಾಡಬೇಕೆಂದು ತಿಳಿಯುತ್ತಿಲ್ಲ. ಎಂಜಿನಿಯರಿಂಗ್ ವಿದ್ಯಾಭ್ಯಾಸ ಮಾಡುತ್ತಿದ್ದೇನೆ. 10 ಸಾವಿರ ರೂ.ವಿದ್ಯಾರ್ಥಿ ವೇತನದಲ್ಲಿ ಶೈಕ್ಷಣಿಕವಾಗಿ ಬೇಕಿರುವ ಪರಿಕರಗಳನ್ನು ಕೊಳ್ಳಬಹುದು ಎಂದುಕೊಂಡಿದ್ದೆ ಎಂದು ವಿದ್ಯಾರ್ಥಿನಿ ಪೂರ್ಣಿಮಾ ಅಳಲು ತೋಡಿಕೊಂಡಿದ್ದಾರೆ.
ಈ ವಿದ್ಯಾರ್ಥಿ ವೇತನವನ್ನು ಕೇಂದ್ರ ಸರ್ಕಾರದಿಂದ ನೇರವಾಗಿ ನಿರ್ವಹಣೆ ಮಾಡಿರುವುದರಿಂದ ಪಿಯು ಇಲಾಖೆ ಏನೂ ಮಾಡಲು ಸಾಧ್ಯವಿಲ್ಲ. ಅರ್ಜಿ ತಿರಸ್ಕೃತಗೊಂಡಿರುವ ಅಭ್ಯರ್ಥಿಗಳು ಪಿಯು ಬೋರ್ಡ್‌ಗೆ ಬಂದು ಸಮಸ್ಯೆ ಹೇಳಿಕೊಂಡರೆ, ತಿರಸ್ಕೃತಗೊಂಡಿರುವುದಕ್ಕೆ ಕಾರಣ ಏನು ಎಂಬುದನ್ನು ಹೇಳಬಹುದು ಮತ್ತು ಪುನರ್ ಸಲ್ಲಿಸಬಹುದಾದ ವಿಧಾನದ ಬಗ್ಗೆಯೂ ತಿಳಿಸುತ್ತೇವೆ. ಬಹುತೇಕ ವಿದ್ಯಾರ್ಥಿಗಳ ಅರ್ಜಿ ಆಧಾರ್ ಲಿಂಕ್ ಸಮಸ್ಯೆಯಿಂದಲೇ ತಿರಸ್ಕೃತಗೊಂಡಿದೆ ಎಂದು ಪಿಯು ಇಲಾಖೆ ವಿದ್ಯಾರ್ಥಿ ವೇತನ ವಿಭಾಗದ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.
ಮರು ಅರ್ಜಿ ಸಲ್ಲಿಸಬೇಕುಆಧಾರ್ ಕಡ್ಡಾಯ ಅಲ್ಲ ಎಂದು ಕೇಂದ್ರ ಸರ್ಕಾರ ಹೇಳಿದ್ದರೂ, ತಾಂತ್ರಿಕ ಕಾರಣಗಳಿಂದ ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಮಾಡದೆ ತಿರಸ್ಕೃತಗೊಂಡಿರುವ ಅರ್ಜಿದಾರರು ಮರು ಅರ್ಜಿ ಸಲ್ಲಿಸಬೇಕು. ಅಥವಾ ಆಧಾರ್ ಲಿಂಕ್ ಮಾಡಿ ಅದೇ ಅರ್ಜಿಯನ್ನು ನವೀಕರಿಸಬಹುದು. – ರಾಜು ಖಾರ್ವಿ ಕೊಡೇರಿ