ಅರಕಲಗೂಡು: ಪಟ್ಟಣದಲ್ಲಿನ ಹಳೆ ಬಸ್ ನಿಲ್ದಾಣಕ್ಕೆ ಕಾಯಕಲ್ಪ ನೀಡಲು ಮುಂದಾಗಿರುವ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ 13.25 ಕೋಟಿ ರೂ. ವೆಚ್ಚದಲ್ಲಿ ವಾಣಿಜ್ಯ ಸಂಕೀರ್ಣ ನಿರ್ಮಿಸಲು ನೀಲ ನಕ್ಷೆ ತಯಾರಿಸಿದೆ.
ಪಟ್ಟಣದ ಮಧ್ಯ ಭಾಗದಲ್ಲಿನ ನಿಲ್ದಾಣವು 10 ವರ್ಷಗಳಿಂದ ಪಾಳು ಬಿದ್ದು, ಅನೈತಿಕ ಚಟುವಟಿಕೆಗಳ ತಾಣವಾಗಿದೆ. ಮಲ ಮೂತ್ರ ವಿಸರ್ಜನೆ ಮಾಡುತ್ತಿದ್ದ ಕಾರಣ ಸಾರ್ವಜನಿಕರು ತಲೆತಗ್ಗಿಸಿಕೊಂಡು ಓಡಾಡುವ ಪರಿಸ್ಥಿತಿಗೆ ನಿರ್ಮಾಣವಾಗಿದೆ. ಇದನ್ನು ಮನಗಂಡ ಶಾಸಕ ಎ.ಟಿ.ರಾಮಸ್ವಾಮಿ, ರಸ್ತೆ ಸಾರಿಗೆ ನಿಗಮದ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ಇದರಿಂದ ಅಧಿಕಾರಿಗಳು ಎಚ್ಚೆತ್ತುಕೊಂಡು 13.25 ಕೋಟಿ ರೂ. ವೆಚ್ಚದಲ್ಲಿ ವಾಣಿಜ್ಯ ಮಳಿಗೆ ತೆರೆಯಲು ಮುಂದಾಗಿದ್ದಾರೆ.
ಜನರ ಆಕ್ರೋಶ: 15 ವರ್ಷಗಳ ಹಿಂದೆ ಪಟ್ಟಣದ ಕೋಟೆ ಮತ್ತು ಪೇಟೆಯ ಮಧ್ಯಭಾಗದಲ್ಲಿದ್ದ ದೊಡ್ಡಕೆರೆಯನ್ನು ಮುಚ್ಚಿ 4.5 ಎಕರೆ ಜಾಗದಲ್ಲಿ 2009ರಲ್ಲಿ ಹೊಸ ಬಸ್ ನಿಲ್ದಾಣವನ್ನು ನಿರ್ಮಿಸಲಾಗಿತ್ತು. 2012ರಲ್ಲಿ ಬಸ್ ನಿಲ್ದಾಣ ಸಂಪೂರ್ಣ ಸ್ಥಳಾಂತರವಾದ ನಂತರ ಹಳೇ ಬಸ್ ನಿಲ್ದಾಣ, ಅಧಿಕಾರಿಗಳ ಬೇಜವಾಬ್ದಾರಿತನದಿಂದ ಪಾಳು ಬಿದ್ದಿತ್ತು. ಇದರಿಂದ ಸಾರ್ವಜನಿಕರು ಹಲವು ಬಾರಿ ಇಲಾಖೆ ಅಧಿಕಾರಿಗಳಿಗೆ ಮತ್ತು ಚುನಾಯಿತ ಪ್ರತಿನಿಧಿಗಳಿಗೆ ಪತ್ರದ ಮೂಲಕ ಪಟ್ಟಣದ ಮಧ್ಯ ಭಾಗದಲ್ಲಿನ ಈ ಸ್ಥಳವನ್ನು ಪುನಃ ಪಟ್ಟಣ ಪಂಚಾಯಿತಿಗೆ ನೀಡಿ ಇಲ್ಲವಾದರೆ ವಾಣಿಜ್ಯ ಸಂಕೀರ್ಣ ನಿರ್ಮಿಸಿ ಎಂದು ಹೇಳಿದ್ದರು.
ಸಿಎಂ ಶಂಕು ಸ್ಥಾಪನೆ: ಪಪಂ ಚುನಾವಣೆಗೂ ಮುನ್ನ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ಕೊಡಿಸಲು ಉತ್ಸುಕರಾಗಿರುವ ಶಾಸಕ ಎ.ಟಿ. ರಾಮಸ್ವಾಮಿ, ಕ್ಷೇತ್ರದಲ್ಲಿ ದೊಡ್ಡಮಟ್ಟದ ಕಾರ್ಯಕ್ರಮ ಮಾಡುವ ಮೂಲಕ ವಾಣಿಜ್ಯ ಸಂಕೀರ್ಣ ನಿರ್ಮಾಣ ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಂದ ಚಾಲನೆ ಕೊಡಿಸಲು ಮುಂದಾಗಿದ್ದಾರೆ.
ಶೀಘ್ರವೇ ಚಾಲನೆ: ಪಟ್ಟಣದ ಹಳೆ ಬಸ್ ನಿಲ್ದಾಣವು ವರ್ಷಗಳಿಂದ ಪಾಳುಬಿದ್ದಿದೆ. ಸಂಬಂಧಪಟ್ಟ ಅಧಿಕಾರಿಗಳ ನಿರ್ಲಕ್ಷ್ಯದ ಬಗ್ಗೆ ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಗಿತ್ತು. ಇದನ್ನು ಮನಗಂಡು ಇಲಾಖೆ ಅಧಿಕಾರಿಗಳೊಂದಿಗೆ ಚರ್ಚಿಸಿ ಉತ್ತಮ ವಾಣಿಜ್ಯ ಸಂಕೀರ್ಣ ತೆರೆಯಲು ಮುಂದಾಗಿದ್ದೇನೆ.
ಇದಕ್ಕೆ 13.25 ಕೋಟಿ ರೂ. ವೆಚ್ಚವಾಗುತ್ತಿದ್ದು, ವಾಣಿಜ್ಯ ಮಳಿಗೆ ತೆರೆದು, ಉತ್ತಮ ಹೋಟೆಲ್, ಸಿನಿಮಾ ಮಂದಿರ, ಐಟೆಕ್ ಶೌಚಾಲಯ, ಲಿಫ್ಟ್, ಪಿಕ್ ಅಂಡ್ ಡ್ರಾಪ್ ಪಾಯಿಂಟ್, ಇನ್ನು ಮೊದಲಾದ ಯೋಜನೆಗಳನ್ನು ಒಳಗೊಂಡು ನೀಲನಕ್ಷೆ ತಯಾರಿಸಲಾಗಿದೆ. ಅತೀ ಶೀಘ್ರದಲ್ಲಿ ಮುಖ್ಯಮಂತ್ರಿಗಳಿಂದ ಶಂಕುಸ್ಥಾಪನೆ ನೆರವೇರಲಿದೆ ಎಂದು ತಿಳಿಸಿದರು.