Advertisement

Doddaballapur: ಎರಡೂ ಬಸ್‌ ನಿಲ್ದಾಣಕ್ಕೆ ಬೇಕಿದೆ ಕಾಯಕಲ್ಪ!

04:36 PM Dec 12, 2024 | Team Udayavani |

ದೊಡ್ಡಬಳ್ಳಾಪುರ: ನಗರದಲ್ಲಿ ಕೆಎಸ್‌ಆರ್‌ಟಿಸಿ ಹಾಗೂ ನಗರಸಭೆಯ 2 ಬಸ್‌ ನಿಲ್ದಾಣ ಪ್ರಸ್ತುತ ಕಾರ್ಯ ನಿರ್ವಹಿಸುತ್ತಿವೆ. ಒಂದೆಡೆ ಬಸ್‌ ಕೊರತೆಯಾದರೆ ಇನ್ನೊಂದೆಡೆ ಮೂಲ ಸೌಕರ್ಯಗಳ ಕೊರತೆಯಿದೆ!.

Advertisement

ಸರ್ಕಾರಿ ಪದವಿ ಪೂರ್ವ ಕಾಲೇಜು ಸಮೀಪದ ಕೆಎಸ್‌ಆರ್‌ಟಿಸಿ ಬಸ್‌ ನೂತನ ನಿಲ್ದಾಣ ಇಂದು ಬಸ್‌ಗಳ ಸಂಚಾರವಿಲ್ಲದೇ ಪಾಳು ಬಿದ್ದಿದೆ.

ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣ:ತೀವ್ರ ಗತಿಯಲ್ಲಿ ಬೆಳೆಯುತ್ತಿರುವ ದೊಡ್ಡಬಳ್ಳಾಪುರಕ್ಕೆ ಸುಸಜ್ಜಿತ ಬಸ್‌ ನಿಲ್ದಾಣ ಬೇಕು ಎನ್ನುವ ಒತ್ತಾಯದಿಂದ ಬೆಸ್ಕಾಂ ಒಡೆತನದಲ್ಲಿದ್ದ ಜಾಗದಲ್ಲಿ ಬೆಸ್ಕಾಂಗೆ ಬೇರೆ ಕಡೆ ಜಾಗ ನೀಡಿ, ಈ ಜಾಗದಲ್ಲಿ ಬಸ್‌ ನಿಲ್ದಾಣ ಮಾಡುವ ಒಪ್ಪಂದದಿಂದ ನಿರ್ಮಾಣಗೊಂಡ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದಲ್ಲಿ ಪ್ರಯಾಣಿಕರಿಗೆ ಕುಳಿತುಕೊಳ್ಳಲು ಆಸನ, ಶೌಚಾಲಯ, ಮಾಹಿತಿ ಫಲಕ, ಸಿಸಿ ಕ್ಯಾಮೆರಾ ಮೊದಲಾದ ಸೌಲಭ್ಯಗಳಿವೆ. ಆದರೆ ಕುಡಿಯುವ ನೀರಿನ ಆರ್‌ಒ ಘಟಕವು ರಿಪೇರಿಯಾಗಿದ್ದು  ನೀರಿಗಾಗಿ ಪ್ರಯಾಣಿಕರಿಗೆ ತೊಂದರೆಯಾಗಿದೆ. ಇನ್ನು ಬಸ್‌ ಆಗಮನ, ನಿರ್ಗಮನದ ವೇಳಾಪಟ್ಟಿ ಅನ್ವಯ ಬಸ್‌ ಬರುತ್ತಿಲ್ಲ. ಬೆಂಗಳೂರಿನ ಕಾವೇರಿ ಭವನಕ್ಕೆ ತೆರಳುವ ಬಸ್‌ಗಳ ಕೊರತೆ ದಿನನಿತ್ಯದ ಸಮಸ್ಯೆಯಾಗಿದೆ. ಗ್ರಾಮಾಂತರ ಪ್ರದೇಶಗಳಲ್ಲಿಯೂ ಬಸ್‌ ಕೊರತೆ ಗಳಾಗಿ ಹಿಂದೆ ಪ್ರಯಾಣಿಕರು ಪ್ರತಿಭಟನೆಗಳನ್ನೂ ನಡೆಸಿದ್ದರು. ದಿನೇ ದಿನೆ ಬೆಂಗಳೂರಿಗೆ ತೆರಳುವ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿದ್ದು ಇದಕ್ಕೆ ಅನುಗುಣವಾಗಿ ಬಸ್‌ ವ್ಯವಸ್ಥೆ ಮಾಡಬೇಕಿದೆ.

ಉತ್ತಮವಾಗಿದ್ದ ಹೊಸ ಬಸ್‌ ನಿಲ್ದಾಣ ಈಗ ಪಾಳು ಬಿದ್ದಿದೆ  :

90ರ ದಶಕದಲ್ಲಿ ಸರ್ಕಾರಿ ಪದವಿ ಪೂರ್ವ ಕಾಲೇಜು ಸಮೀಪದಲ್ಲಿ ಹೊಸ ಬಸ್‌ ನಿಲ್ದಾಣ ತಲೆ ಎತ್ತಿತು. ಎಲ್ಲಾ ರೀತಿಯ ಬಸ್‌ ನಿಲುಗಡೆ ಮಾಡಿ ಇಲ್ಲಿಂದಲೇ ಎಲ್ಲಾ ಮಾರ್ಗಗಳಿಗೂ ಬಸ್‌ ಸಂಚಾರ ನಡೆಯುತ್ತಿತ್ತು. ನಂತರ ಇದು ಈ ಪ್ರದೇಶದ ಲ್ಯಾಂಡ್‌ ಮಾರ್ಕ್‌ ಸಹ ಆಗಿತ್ತು. ಬೆಂಗಳೂರು, ತುಮಕೂರು ಮೊದಲಾದ ಮಾರ್ಗಕ್ಕೆ ನಿಗದಿತ ಬಸ್‌, ಧರ್ಮಸ್ಥಳ, ಹೊರನಾಡು ಮೊದಲಾದ ಕ್ಷೇತ್ರಗಳ ದೂರದ ಮಾರ್ಗಗಳಿಗೆ ಹೊಸ ಬಸ್‌ ನಿಲ್ದಾಣದಿಂದಲೇ ಬಸ್‌ ಸಂಚರಿಸುತ್ತಿದ್ದವು. ನಂತರ ಬಸ್‌ ನಿಲ್ದಾಣದ ಸಮೀಪದಲ್ಲಿಯೇ ಬಸ್‌ ಡಿಪೋ ಸಹ ಆರಂಭವಾಯಿತು. ಡಿಪೋ ಆಡಳಿತವನ್ನು ಚಿಕ್ಕಬಳ್ಳಾಪುರ ವಿಭಾಗಕ್ಕೆ ವರ್ಗಾಯಿಸಲಾಯಿತು. ಉತ್ತಮವಾಗಿಯೇ ಕಾರ್ಯ ನಿರ್ವಹಿಸುತ್ತಿದ್ದ ನೂತನ ಬಸ್‌ ನಿಲ್ದಾಣದಲ್ಲಿ ಕ್ರಮೇಣ ಮೂಲ ಸೌಕರ್ಯ ಕೊರತೆ ಕಾಣತೊಡಗಿತು. ಬಸ್‌ ಸಂಚಾರ ನಿಂತವು. ಗಬ್ಬು ನಾರುವ ಶೌಚಾಲಯ, ಡಾಂಬರು ಇಲ್ಲದ ರಸ್ತೆ, ಸಮಯಕ್ಕೆ ಬಾರದ ಬಸ್‌ ಮೊದಲಾದ ಅವ್ಯವಸ್ಥೆಗಳಿಂದಾಗಿ ಇಲ್ಲಿನ ಕ್ಯಾಂಟಿನ್‌ ಮುಚ್ಚಿತು. ಪ್ರಯಾಣಿಕರ ಸಂಖ್ಯೆಯೂ ಕಡಿಮೆಯಾಗಿ ಈಗ ಬಸ್‌ ಸಂಚಾರ ಸ್ಥಗಿತಗೊಂಡಿದೆ. ಇನ್ನು ಬಸ್‌ ನಿಲ್ದಾಣದ ಕಟ್ಟಡ ಪಾಳು ಬಿದ್ದ ಬಂಗಲೆಯಂತಾಗಿದೆ. ನಗರಕ್ಕೆ ಎರಡು ಬಸ್‌ ನಿಲ್ದಾಣ ಅಗತ್ಯವಿಲ್ಲ ಎಂದು ಇನ್ನು ಒಂದು ನಗರಕ್ಕೆ ಎರಡು ಬಸ್‌ ನಿಲ್ದಾಣ ಮಂಜೂರು ಮಾಡಲು ತಾಂತ್ರಿಕ ತೊಡಕಿದೆ. ಇದರಿಂದ ಜನರಿಗೆ ಬಸ್‌ ನಿಲ್ದಾಣಗಳ ಬಗ್ಗೆ ಗೊಂದಲ  ಉಂಟಾಗುತ್ತದೆ ಎನ್ನುತ್ತಾರೆ ಸಾರಿಗೆ ಸಂಸ್ಥೆಯ ಅಧಿಕಾರಿಗಳು.

Advertisement

ಸಾರಿಗೆ ಇಲಾಖೆಗೆ ಮನವಿ ಸಲ್ಲಿಸುತ್ತೇವೆ:

ಬಸ್‌ಗಳ ಕೊರತೆ ನೀಗಿಸಲು ಸಾರಿಗೆ ಸಂಸ್ಥೆ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದ್ದು ಪರಿಸ್ಥಿತಿ ಈಗ ಸುಧಾರಿಸುತ್ತಿದೆ. ನಗರಸಭೆ ಬಸ್‌ ನಿಲ್ದಾಣದಲ್ಲಿ ಬಿಎಂಟಿಸಿ ಬಸ್‌ ನಿಲುಗಡೆ ಮಾಡುವ ಬಗ್ಗೆ ಸಂಬಂಧ ಪಟ್ಟವರಿಗೆ ಮನವಿ ಸಲ್ಲಿಸಲಾಗಿದೆ. ಡಿಪೋ ಸಮೀಪದ ಹೊಸ ಬಸ್‌ ನಿಲ್ದಾಣದಲ್ಲಿ ಬಿಎಂಟಿಸಿ ಬಸ್‌ ನಿಲು ಗಡೆ ಮಾಡಿ, ನಗರ ಪ್ರದೇಶ ಹಾಗೂ ಗ್ರಾಮಾಂತರ ಪ್ರದೇಶಗಳಿಗೂ ಬಿಎಂಟಿಸಿ ಬಸ್‌ ಮಾರ್ಗ ವಿಸ್ತರಿ ಸಲು ಸಾರಿಗೆ ಇಲಾಖೆಗೆ ಮನವಿ ಸಲ್ಲಿಸಲಾಗುವುದು ಎಂದು ಶಾಸಕರಾದ ಧೀರಜ್‌ ಮುನಿರಾಜು ತಿಳಿಸಿದ್ದಾರೆ.

ಹಳೆಯ ಬಸ್‌ ನಿಲ್ದಾಣದಲ್ಲಿ ಸೌಕರ್ಯಗಳ ಕೊರತೆ :

ರಾಜ್ಯ ರಸ್ತೆ ಸಾರಿಗೆ ನಿಗಮಕ್ಕೆ ಸೇರಿದ ಬಸ್‌ ನಿಲ್ದಾಣ ಒಂದು ಭಾಗವಾದರೆ, ನಗರಸಭೆಗೆ ಸೇರಿದ ಕೊಂಗಾಡಿಯಪ್ಪ ಬಸ್‌ ನಿಲ್ದಾಣ ಇನ್ನೊಂದು ಭಾಗದಲ್ಲಿದೆ. ಕೊಂಗಾಡಿಯಪ್ಪ ಬಸ್‌ ನಿಲ್ದಾಣದಲ್ಲಿ ಖಾಸಗಿ ಬಸ್‌ಗಳ ಸಂಚಾರ ಹೆಚ್ಚಾಗಿವೆ. ಇನ್ನು  ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದಲ್ಲಿ ಸಂಸ್ಥೆಯ ಬಸ್‌ಗಳು ಮಾತ್ರ ನಿಲುಗಡೆಗೆ ಅವಕಾಶವಿದೆ. ಇನ್ನು ಬಿಎಂಟಿಸಿ ಬಸ್‌ಗಳಿಗೆ ಸೂಕ್ತ ಜಾಗವಿಲ್ಲದೇ ರಸ್ತೆ ಬದಿಯಲ್ಲಿಯೋ ಕೊಂಗಾಡಿಯಪ್ಪ ಬಸ್‌ ನಿಲ್ದಾಣದ ಒಂದು ಭಾಗದಲ್ಲಿಯೋ ನಿಂತಿರುತ್ತವೆ. ಪ್ರಯಾಣಿಕರು ಎಲ್ಲಿ ಹತ್ತಬೇಕು ಎನ್ನುವ ಗೊಂದಲ ಕಾಡುತ್ತಿದೆ.ಹಾಗೆಯೇ ನಗರದ ಕೊಂಗಾಡಿಯಪ್ಪ ಬಸ್‌ ನಿಲ್ದಾಣದಲ್ಲಿ ಪ್ರಯಾಣಿಕರು ಕುಳಿತುಕೊಳ್ಳುತ್ತಿದ್ದ ಕುರ್ಚಿಗಳನ್ನು ತೆಗೆದುಹಾಕಲಾಗಿದೆ. ಇನ್ನು ಬಸ್‌ ಶೆಲ್ಟರ್‌ ಸುತ್ತಮುತ್ತ ಮಲ, ಮೂತ್ರ ವಿಸರ್ಜಿಸಲಾಗುತ್ತಿದೆ. ಹೀಗಾಗಿ ಇಲ್ಲಿರುವ ಅಂಗಡಿಗಳಿಗೆ ಬಾಡಿಗೆಗೂ ಯಾರೂ ಬರುತ್ತಿಲ್ಲ. ಇಲ್ಲಿ ಕುಡುಕರ ಹಾಗೂ ಕಿಡಿಗೇಡಿಗಳ ತೊಂದರೆಯೂ ಇದೆ. ಕೂಡಲೇ ಅಧಿಕಾರಿಗಳು ಕೊಂಗಾಡಿಯಪ್ಪ ಬಸ್‌ ನಿಲ್ದಾ ಣದಲ್ಲಿ ಬಿಎಂಟಿಸಿ ಬಸ್‌ಗಳನ್ನು ಸೂಕ್ತ ಸ್ಥಳದಲ್ಲಿ ನಿಲುಗಡೆ ಮಾಡಿ ಮೂಲ ಸೌಕರ್ಯ, ನೈರ್ಮಲ್ಯಕ್ಕೆ ಒತ್ತು ನೀಡಬೇಕಿದೆ.

ಡಿಪೋ ಸಮೀಪದ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದಲ್ಲಿ ಖಾಸಗಿ ಪೆಟೊ›àಲ್‌ ಬಂಕ್‌ ತೆರೆಯಲು ಉದ್ದೇಶಿಸಲಾಗಿದೆ. ಇದಕ್ಕೆ ಅವಕಾಶ ನೀಡಬಾರದು. ನಗರ ಸಾರಿಗೆ ಸೇರಿ ಗ್ರಾಮೀಣ ಪ್ರದೇಶಗಳ ಕಡೆಗೆ ಸಂಚರಿಸುವ ಬಸ್‌ ಸೇವೆ ಪ್ರಾರಂಭಿಸಬೇಕು. ಈ ಬಗ್ಗೆ ಬಸ್‌ ಡಿಪೋ ವ್ಯವಸ್ಥಾಪಕರಿಗೆ ಮನವಿ ಸಲ್ಲಿಸಲಾಗಿದೆ.– ಬಿ.ಎಸ್‌.ಚಂದ್ರಶೇಖರ್‌, ಕರ್ನಾಟಕ ರಕ್ಷಣಾ ವೇದಿಕೆ ಕನ್ನಡಿಗರ ಬಣದ ಅಧ್ಯಕ್ಷ

ಬೆಳೆಯುತ್ತಿರುವ ನಗರಕ್ಕೆ ಬಸ್‌ ನಿಲ್ದಾಣ ನಿರ್ಮಾಣವಾದರೆ ಸಾಲದು. ಬಸ್‌ಗಳ ಸಮರ್ಪಕ ವ್ಯವಸ್ಥೆ, ಮೂಲ ಸೌಕರ್ಯಗಳಿರಬೇಕು. ಪಾಳು ಬಿದ್ದಿರುವ ಹೊಸ ಬಸ್‌ ನಿಲ್ದಾಣದಲ್ಲಿ ಬೇರೆ ಡಿಪೋದಿಂದ ಬರುವ ಬಿಎಂಟಿಸಿ ಬಸ್‌ ತಂಗಲು ವ್ಯವಸ್ಥೆ ಮಾಡಬೇಕು.– ಕೆ.ಎನ್‌.ಮಂಜುನಾಥ, ದೈನಂದಿನ ಪ್ರಯಾಣಿಕರು   

– ಡಿ.ಶ್ರೀಕಾಂತ

Advertisement

Udayavani is now on Telegram. Click here to join our channel and stay updated with the latest news.

Next