Advertisement

ಕಾಲ್ತೊಡಿನಲ್ಲಿ ಅಪರೂಪದ ತಂಬೂರಿ ನಾಗ ಶಿಲ್ಪ ಪತ್ತೆ

09:18 PM Nov 02, 2019 | mahesh |

ಕುಂದಾಪುರ: ನಾಗರ ಆರಾಧನೆಯು ಕರಾವಳಿ ಭಾಗದಲ್ಲಿ ಬಹಳ ಹಿಂದಿನಿಂದಲೂ ಆಚರಣೆ ಮಾಡ ಲಾಗುತ್ತಿದೆ. ಈಗಿನ ನಾಗ ದೇವರ ಶಿಲ್ಪಗಳಿಗೂ ಹಿಂದಿನ ನಾಗ ದೇವರ ಶಿಲ್ಪಗಳಿಗೂ ಬಹಳಷ್ಟು ವ್ಯತ್ಯಾಸ ಕಂಡು ಬರುತ್ತಿದೆ. ಬೈಂದೂರು ತಾಲೂಕಿನ ಕಾಲ್ತೊಡು ಸಮೀಪದ ಚಿತ್ತೇರಿಯಲ್ಲಿ ಅತೀ ವಿಶೇಷವಾಗಿ ಕಾಣಲ್ಪಡುವ, ಅಪರೂಪದ ಪ್ರಾಚೀನ ತಂಬೂರಿ ನಾಗ ದೇವರ ಶಿಲ್ಪ ಕಲೆ ಪತ್ತೆಯಾಗಿದೆ.
ಕಾಲ್ತೊಡಿನ ತಂಬೂರಿ ನಾಗನ ಶಿಲ್ಪವನ್ನು ಪ್ರದೀಪ ಕುಮಾರ್‌ ಬಸ್ರೂರು ಪತ್ತೆ ಹಚ್ಚಿದ್ದು, ತುಳು ಸಾಹಿತ್ಯ ಅಕಾಡೆಮಿ ಸದಸ್ಯ ಡಾ| ಆಕಾಶ್‌ ರಾಜ್‌ ಇವರಿಗೆ ಸಹಕರಿಸಿದ್ದಾರೆ.

Advertisement

ಕ್ರಿ.ಶ.11 -15ನೇ ಶತಮಾನ
ಬಲ ಭಾಗದ ಕೆಳಗಡೆ ಅವಳಿ ನಾಗ ಹಾಗೂ ಎಡಭಾಗದಲ್ಲಿ ಮೂರು ಹೆಡೆ ಹೊಂದಿರುವ ನಾಗ ಶಿಲ್ಪ ಮಧ್ಯದಲ್ಲಿ ಬೃಹದಾಕಾರದಲ್ಲಿ ಕಾಣುವ ಅರ್ಧ ಭಾಗ ಮಾನವ ರೂಪದ ಹೋಲಿಕೆಯಿದ್ದರೆ, ಮತ್ತರ್ಧ ಭಾಗ ನಾಗ ರೂಪವನ್ನು ಹೋಲುವ ಶಿಲ್ಪಕಲೆ ಇದಾಗಿದೆ. ಬಲ ಭಾಗದಲ್ಲಿ ಮಹಿಳೆ ನಿಂತಿರುವ ರೀತಿಯಲ್ಲಿ ಕಾಣುತ್ತಿದ್ದು, ಪಕ್ಕದಲ್ಲಿ ವಾದ್ಯದ ಸಲಕರಣೆಯಂತೆ ಕಾಣಲ್ಪಟ್ಟಿದೆ. ಈ ತಂಬೂರಿ ನಾಗರ ಶಿಲ್ಪ ಪ್ರಾಯಶ: ಅರ್ಧ ಭಾಗದಷ್ಟು ಶಿಥಿಲಗೊಂಡಿದ್ದು, ಅಂದಾಜು ಕ್ರಿಸ್ತಶಕ 11ರಿಂದ 15ನೇ ಶತಮಾನದ್ದಾಗಿರಬಹುದು ಎನ್ನುವುದಾಗಿ ಕೆಲ ಕುರುಹುಗಳಿಂದ ತಿಳಿದು ಬರುತ್ತದೆ.

ಈ ಹಿಂದೆಯೂ ಸಹ ಇಂತಹ ಶಿಲ್ಪ ಕಲೆಯ ಮೂರ್ತಿಯನ್ನು ಕಾರ್ಕಳ ಭಾಗದ ಕೆರ್ವಾಸೆ ಎಂಬಲ್ಲಿ ಉಡುಪಿಯ ಇತಿಹಾಸ ತಜ್ಞರು ಪತ್ತೆಹಚ್ಚಿದ್ದು, ತಂಬೂರಿ ನಾಗ ಶಿಲ್ಪ, ಜೈನ ನಾಗ ಶಿಲ್ಪಗಳು, ಚರನಾಗ, ಶಿಲ್ಪಗಳು ಹಾಗೂ ಮುರ ಕಲ್ಲಿನಲ್ಲಿ ಮಾಡಿದ ನಾಗ ಶಿಲ್ಪಗಳು ಮತ್ತು ಚಿತ್ರಕೂಟದ ಅವಶೇಷಗಳನ್ನು ಪತ್ತೆಹಚ್ಚಿದ್ದು, ಕೆರ್ವಾಸೆಯಲ್ಲಿ 15 ತಂಬೂರಿ ನಾಗ ಶಿಲ್ಪಗಳನ್ನು ಪತ್ತೆಹಚ್ಚಲಾಗಿದೆ. ಇದರಿಂದ ಬಹಳ ಹಿಂದಿನಿಂದಲೂ ಕೆರ್ವಾಸೆ ಪ್ರದೇಶವು ಜೈನರ ಪ್ರಭಾವ ಹೆಚ್ಚಿರುವ ಊರೆಂದು ತಿಳಿದು ಬರುತ್ತದೆ. ಕಾಲ್ತೊಡಿನಲ್ಲಿ ಕೂಡ ಜೈನರ ಕೆಲವೊಂದು ಕುರುಹುಗಳಿರುವುದು ಕಂಡು ಬಂದಿದೆ.

ಹೆಚ್ಚಿನ ಅಧ್ಯಯನ ಆಗಬೇಕು
ಈ ಸ್ಥಳದ ಸ್ವಲ್ಪ ದೂರದಲ್ಲಿಯೇ 11ನೇ ಶತಮಾನದಲ್ಲಿ ಆಳುಪ ಕುಲಶೇಖರ ಕಾಲದ ಶಾಸನ ಈ ಹಿಂದೆ ಇತಿಹಾಸ ತಜ್ಞರಿಗೆ ಹತ್ತಿರದಲ್ಲಿ ಸಿಕ್ಕಿದ್ದು, ತುಳುನಾಡಿನ ಅಖಂಡ ಭಾಗವಾಗಿದ್ದ ಕುಂದಾಪುರ ಪ್ರದೇಶದಲ್ಲಿ ಇನ್ನೂ ಕೂಡ ಅಧ್ಯಯನ ಆಗಬೇಕಾಗಿದೆ. ರಾಜ ವೀರ ಕುಲಶೇಖರನ ಕನ್ನಡ ಶಾಸನ ಸಿಕ್ಕಿದ್ದು, ಮಂಗಳೂರಿನಲ್ಲಿ ತುಳು ಶಾಸನ ಕೂಡಾ ಸಿಕ್ಕಿದೆ. ಇದರಿಂದ ಕನ್ನಡ ಮತ್ತು ತುಳುವಿಗೆ ಸಮಾನ ಪ್ರಾಧಾನ್ಯತೆಯನ್ನು ನೀಡಿರುವುದು ಕಾಣಬಹುದಾಗಿದೆ.
-ಡಾ| ಆಕಾಶ್‌ ರಾಜ್‌, ತುಳು ಸಾಹಿತ್ಯ ಅಕಾಡೆಮಿ ಸದಸ್ಯ

Advertisement

Udayavani is now on Telegram. Click here to join our channel and stay updated with the latest news.

Next