Advertisement

ಕುಡಿಯುವ ನೀರಿಗೆ ಹಾಹಾಕಾರ; ದಿನದಿಂದ ದಿನಕ್ಕೆ ಉಲ್ಬಣ…

04:39 PM May 26, 2023 | Team Udayavani |

ಮಲ್ಪೆ: ಅಂಬಲಪಾಡಿ ಗ್ರಾ. ಪಂ. ವ್ಯಾಪ್ತಿಯ ಕಿದಿಯೂರು ಗ್ರಾಮದ ಪಡುಕರೆ, ಕಿದಿಯೂರು ಮೂಡುದಡ್ಡಿ, ಪಡುದಡ್ಡಿ, ಬಂಕೇರುಕಟ್ಟ ಕಿದಿಯೂರು ಗರೋಡಿ ರಸ್ತೆ, ಸಂಕೇಶ, ಪಡುಕರೆ ಪ್ರದೇಶದಲ್ಲಿ ನೂರಾರು ಮನೆಗಳಿಗೆ ಕುಡಿಯುವ ನೀರಿನ ಸಮಸ್ಯೆ ಬಿಸಿ ದಿನದಿಂದ ದಿನಕ್ಕೆ ಉಲ್ಬಣಗೊಂಡಿದ್ದು, ಜನರು ತೀವ್ರ ಸಂಕಷ್ಟಕ್ಕೆ ಒಳಗಾಗಿದ್ದಾರೆ.

Advertisement

ಹೆಚ್ಚಿನ ಭಾಗ ಉಪ್ಪು ನೀರಿನ ಪ್ರದೇಶವಾದ್ದರಿಂದ ಇಲ್ಲಿ ಬೇಸಗೆಯಲ್ಲಿ ಕುಡಿಯುವ ನೀರಿಗೆ ಪರದಾಡುತ್ತಿದ್ದಾರೆ. ಈ ಹಿಂದೆ ನಗರಸಭೆ ಹಾಗೂ ಸುತ್ತಮುತ್ತಲಿನ ಗ್ರಾ. ಪಂ.ಗಳಿಗೆ ಬಜೆ ಡ್ಯಾಂನಿಂದ ನೀರು ಪೂರೈಸಲಾಗುತ್ತಿದ್ದು ಈ ಬಾರಿ ಮಳೆ ಇಲ್ಲದೆ ಬಜೆಯಲ್ಲೂ ನೀರಿನ ಕೊರತೆ ಎದುರಾಗಿರುವುದರಿಂದ ಸುತ್ತಮುತ್ತ ಗ್ರಾಮ ಪಂಚಾಯತ್‌ಗಳಿಗೆ ಪೂರೈಸಲಾಗುತ್ತಿದ್ದ ನೀರು ಸ್ಥಗಿತಗೊಂಡಿದೆ.

ಟ್ಯಾಂಕರ್‌ ನೀರಿಗೆ ಮೊರೆ
ಗ್ರಾಮದ ಎಲ್ಲ ಬಾವಿಗಳ ನೀರು ಕುಡಿಯುವುದು ಬಿಡಿ ಇತರ ಬಳಕೆಗೂ ಯೋಗ್ಯವಲ್ಲದ ಕಾರಣ ಜನರಿಗೆ ವರ್ಷಪೂರ್ತಿ ಪಂಚಾಯತ್‌ ನೀರೆ ಗತಿಯಾಗಿತ್ತು. ನಗರಸಭೆಯ ನೀರನ್ನು ನಂಬಿದ್ದ ಗ್ರಾಮದ ಜನ ಗ್ರಾಮದಲ್ಲಿ ಯಾವುದೇ ನೀರಿನ ಮೂಲವೇ ಇಲ್ಲದ ಕಾರಣ ಟ್ಯಾಂಕರ್‌ ನೀರಿನ ಮೊರೆ ಹೋಗುವಂತಾಗಿದೆ. ಸದ್ಯ ಗ್ರಾ.ಪಂ, ಮೂರು ದಿನಕ್ಕೊಮ್ಮ 300ಲೀ ನೀರು ಪೂರೈಕೆ ಮಾಡುತ್ತಿದ್ದರೂ ಕೆಲವು ಕಡೆಗಳಲ್ಲಿ 5 ದಿನಗಳಿಗೊಮ್ಮೆ ನೀರು ಬರುತ್ತಿದೆ ಎನ್ನಲಾಗಿದೆ. ಈ ಗ್ರಾಮದಲ್ಲಿ ಕೆಲವೊಂದು ಮನೆಗೆ ಟ್ಯಾಂಕರ್‌ ಬರಲು ಸರಿಯಾದ ದಾರಿಯಿಲ್ಲ. ಗದ್ದೆ ಮಧ್ಯೆ ಇಟ್ಟ ಟ್ಯಾಂಕಿಗೆ ಪಂಚಾಯತ್‌ ಟ್ಯಾಂಕರ್‌ ನೀರು ತುಂಬಿಸಿ ಹೋಗಲಾಗುತ್ತದೆ.

ಇದು ಪಂಚಾಯತ್‌ ನೀರು ಅಲ್ಲ..!
ಕಿದಿಯೂರು ದಡ್ಡಿ ಮತ್ತು ಸಂಕೇಶ ಜನರು ದಿನಾ ನೀರಿಗೆ ಹಪಹಪಿಸುತ್ತಿರುವುದನ್ನು ಕಂಡು ದಡ್ಡಿಯ ಸಂತೋಷ್‌ ಕರ್ಕೇರ ಮತ್ತು ರಮೇಶ್‌ ಅವರು ದಿನಾಲು 30 ಮನೆಗೆ ಉಚಿತವಾಗಿ ನೀರನ್ನು ಪೂರೈಸುತ್ತಿದ್ದಾರೆ. ಆರಂಭದಲ್ಲಿ ತನ್ನ ಮನೆಗೆ ನೀರನ್ನು ದೂರದಿಂದ ನೀರನ್ನು ತರುತ್ತಿದ್ದ ಸಂತೋಷ್‌ ಇದೀಗ ಅಲ್ಲಿನ ಜನರ ಪರಿಸ್ಥಿತಿಯನ್ನು ಕಂಡು ತನ್ನ ಕೆಲಸವನ್ನು ಬಿಟ್ಟು ಆ ಪ್ರದೇಶದ ಎಲ್ಲ ಮನೆಗೂ ನೀರನ್ನು ಉಚಿತವಾಗಿ ತಂದು ಹಾಕುತ್ತಿದ್ದಾರೆ. ಸ್ಥಳೀಯ ಆಡಳಿತ ವ್ಯವಸ್ಥೆಗೆ ಬೇಸತ್ತ ಸಂತೋಷ್‌ ಅವರು ಇದು ಪಂಚಾಯತ್‌ ನೀರು ಅಲ್ಲ ಎಂದು ಬ್ಯಾನರ್‌ ಟೆಂಪೋಗೆ ಅಳವಡಿಸಿ ಮನೆ ಮನೆಗೆ ನೀರು ವಿತರಿಸುತ್ತಿದ್ದಾರೆ.

ದಡ್ಡಿ ಪ್ರದೇಶದ ಜನರು ದಡ್ಡರೆ ?
ಇನ್ನೂ ಗ್ರಾಮದ ಕಿದಿಯೂರು ದಡ್ಡಿ ಪ್ರದೇಶ ಬಹುತೇಕ ಸುತ್ತಲೂ ಹೊಳೆಯಿಂದಾಗಿ ಉಪ್ಪುನೀರೇ ಗತೀ. ಪಂಚಾಯತ್‌ನಿಂದ ನೀರು ಪೂರೈಕೆಯಾಗದೇ ವಾರಗಳೇ ಸಂದಿವೆ. ನೀರಿಲ್ಲದ ಕಾರಣ ಉಪ್ಪು ನೀರಿನಲ್ಲೇ ಬಟ್ಟೆ ಒಗೆಯುವುದು ಸ್ನಾನ ಮಾಡುತ್ತೇವೆ. ಉಪ್ಪು ನೀರಿನಲ್ಲಿ ಸ್ನಾನ ಮಾಡಿದ್ದರಿಂದ ಮೈಕೈ ತುರಿಕೆ ಉಂಟಾಗಿದೆ. ದಡ್ಡಿ ಪ್ರದೇಶದ ಜನ ದಡ್ಡರೇ? ಎಂದು ದಡ್ಡಿಯ ಜ್ಯೋತಿ, ಸತ್ಯವತಿ, ವನಿತ, ಆರತಿ, ಮೀನಾಕ್ಷಿ ಅವರು ಬೇಸರ ವ್ಯಕ್ತ ಪಡಿಸುತ್ತಾರೆ. ಕೆಲವೊಮ್ಮೆ ಸ್ನಾನಕ್ಕೆ ಅನಿವಾರ್ಯವಾಗಿ ಸಂಬಂಧಿಕರ ಮನೆಗಳಿಗೆ ಹೋಗಬೇಕಾಗುವ ಪರಿಸ್ಥಿತಿ ಇದೆ. ಕುಡಿಯುಲು ಸಂತೋಷ್‌ ಎಂಬಾತ ಮಾನವೀಯತೆಯನ್ನು ನಮಗೆ ಎಲ್ಲಿಂದಲೇ ನೀರು ತಂದು ಕೊಡುತ್ತಾನೆ. ಇಂತಹ ಸ್ಥಿತಿ ಈ ಹಿಂದೆ ಬಂದಿಲ್ಲ ಎನ್ನುತ್ತಾರೆ ಗ್ರಾಮಸ್ಥರಾದ ಗೀತಾ, ಜಾನಕಿ, ಭಾನುಮತಿ.

Advertisement

ಒಂದು ಮನೆಗೆ 300ಲೀ. ನೀರು ಸರಬರಾಜು
ನಗರಸಭೆಯವರು ನೀರು ಪೂರೈಕೆಯನ್ನು ಒಮ್ಮೆಲೆ ಸ್ಥಗಿತಗೊಳಿಸಿರುವುದರಿಂದ ಪಂಚಾಯತ್‌ ವ್ಯಾಪ್ತಿಯಲ್ಲಿ ತುಂಬಾ ನೀರಿನ ಸಮಸ್ಯೆ ಆಗಿದೆ. ಆದರೂ ಟ್ಯಾಂಕರೂ ಮೂಲಕ ಒಂದು ಮನೆಗೆ 300ಲೀ. ನೀರನ್ನು ಸರಬರಾಜು ಮಾಡುತ್ತಿದ್ದೇವೆ. ಸ್ಥಳೀಯವಾಗಿ ಯಾವುದೇ ಮನೆಯ ಬಾವಿಯಲ್ಲೂ ನೀರಿಲ್ಲ. ದೂರದ ಸಂಪಿಗೆನಗರ ಹಾಗೂ ತೊಟ್ಟಂನಿಂದ ಟ್ಯಾಂಕರ್‌ ಮೂಲಕ ನೀರು ತರಿಸಿ ಮನೆ ಮನೆಗೆ ಕೊಡಲಾಗುತ್ತಿದೆ. ಅಲ್ಲದೇ ಟ್ಯಾಂಕರ್‌ ಸಂಖ್ಯೆ ಹೆಚ್ಚಿಸುವ ನಿರ್ಧಾರವನ್ನು ಗ್ರಾ.ಪಂ. ಸಭೆಯಲ್ಲಿ ಮಾಡಲಾಗಿದೆ. ಮೇ 26ರಿಂದ ಎಲ್ಲ ಕಡೆ ನೀರು ಪೂರೈಕೆಯಾಗಲಿದೆ.
– ಶಶಿಧರ್‌ ಸುವರ್ಣ, ಕಿದಿಯೂರು ದಡ್ಡಿ ವಾರ್ಡ್‌ಸದಸ್ಯರು

Advertisement

Udayavani is now on Telegram. Click here to join our channel and stay updated with the latest news.

Next