Advertisement

Kundapura: ಒಂದು ಕರೆಗಾಗಿ 3-4 ಕಿ.ಮೀ. ನಡೆಯಬೇಕು!

12:44 PM Jan 03, 2025 | Team Udayavani |

ಕುಂದಾಪುರ: 2024ರಲ್ಲಿ ದೇಶಾದ್ಯಂತ ಸಂವಹನ ಸಂಪರ್ಕ ಕ್ಷೇತ್ರದಲ್ಲಿ 5ಜಿ ಯುಗ ಆರಂಭಗೊಂಡಿದೆ. ಆದರೆ, ಅಮಾಸೆಬೈಲು ಗ್ರಾ.ಪಂ. ವ್ಯಾಪ್ತಿಯ ರಟ್ಟಾಡಿ ಗ್ರಾಮದ ನಡಂಬೂರು ಎನ್ನುವ ಊರಿಗೆ ಮಾತ್ರ ಇನ್ನೂ ಒನ್‌ಜಿ ಕೂಡ ಪರಿಚಯ ಆಗಿಲ್ಲ ಅನ್ನುವುದು ನಮ್ಮ ದೇಶದ ಹಳ್ಳಿಗಳ ಕಥೆಯನ್ನು ಹೇಳುತ್ತವೆ.

Advertisement

ಉಡುಪಿ ಜಿಲ್ಲೆಯಲ್ಲಿಯೇ ತೀರಾ ಹಿಂದುಳಿದ ಮಾತ್ರವಲ್ಲದೆ, ಸಾಕಷ್ಟು ಮೂಲಭೂತ ಸೌಕರ್ಯಗಳಿಂದ ವಂಚಿತ ಊರುಗಳಲ್ಲಿ ರಟ್ಟಾಡಿ ಗ್ರಾಮದ ನಡಂಬೂರು ಸಹ ಒಂದು. ಇಲ್ಲಿನ ಜನರಿಗೆ ಸರಿಯಾದ ಬಸ್ಸಿನ ವ್ಯವಸ್ಥೆಯೂ ಇಲ್ಲ. ಈಗಿನ ಅಗತ್ಯ ಸೌಕರ್ಯಗಳಲ್ಲಿ ಒಂದಾದ ನೆಟ್ವರ್ಕ್‌ ಸೌಲಭ್ಯವೂ ಇಲ್ಲ. ಕಿರಿಯ ಪ್ರಾಥಮಿಕ ಶಾಲೆ ಮಾತ್ರವಿದ್ದು, ಅದರ ನಂತರದ ಶಿಕ್ಷಣಕ್ಕಾಗಿ ಇಲ್ಲಿನ ಮಕ್ಕಳು ಬೇರೆ ಊರುಗಳಿಗೆ ತೆರಳಬೇಕಾಗಿದೆ. ಪಡಿತರಕ್ಕೂ ಅಮಾಸೆಬೈಲಿಗೆ ಬರಬೇಕು.

ಕರೆಗಾಗಿ ಅಲೆದಾಟ
ಇಲ್ಲಿನ ಜನರಿಗೆ ಯಾರಿಗಾದರೂ ಏನಾದರೂ ಅನಾರೋಗ್ಯ ಉಂಟಾ ದರೆ ಒಂದೋ ಎತ್ತರದ ಗುಡ್ಡ ಪ್ರದೇಶ ಏರಬೇಕು. ಇಲ್ಲದಿದ್ದರೆ ನಡಂಬೂರಿನಿಂದ 4-5 ಕಿ.ಮೀ. ದೂರದ ಅಮಾಸೆಬೈಲು ಅಥವಾ 3-4 ಕಿ.ಮೀ. ದೂರದ ಹೆಂಗವಳ್ಳಿ ಕಡೆಗೆ ತೆರಳಬೇಕು. ಆಗ ಕನಿಷ್ಠ ಕರೆ ಮಾಡಲು ಆದರೂ ನೆಟ್ವರ್ಕ್‌ ಸಿಗುತ್ತದೆ. ಇಲ್ಲಿಗೆ ಸರಿಯಾದ ಬಸ್‌ ಸಂಪರ್ಕವೂ ಇಲ್ಲ. ಸಂಜೆ ವೇಳೆ ಶಾಲಾ – ಕಾಲೇಜಿಗೆ ಹೋಗುವ ಮಕ್ಕಳು ಬಸ್‌ ತಪ್ಪಿ ಹೋದರೂ, ಮನೆಯವರಿಗೆ ಕರೆ ಮಾಡಿ, ತಿಳಿಸಲು ಸಾಧ್ಯವಾಗದ ಪರಿಸ್ಥಿತಿಯಿದೆ.

ಪಡಿತರ, ನೋಂದಣಿಗೆ ಸಮಸ್ಯೆ
ನಡಂಬೂರು, ಕೊಟ್ಟಕ್ಕಿ, ನಿಲ್ಸ್‌ಕಲ್‌, ಗುಂಡಾಣ ಈ ಊರುಗಳಲ್ಲಿ ನೆಟ್ವರ್ಕ್‌ ಸಂಪರ್ಕ ಇಲ್ಲದೇ ಇರುವುದರಿಂದ ಯಾವುದೇ ಡಿಜಿಟಲ್‌ ಬ್ಯಾಂಕಿಂಗ್‌ ನಡೆಯುವುದಿಲ್ಲ. ಅಂಗಡಿಗಳ ವ್ಯವಹಾರ, ಆನ್‌ಲೈನ್‌ ಖರೀದಿಗೆ ಇಲ್ಲಿ ಸಮಸ್ಯೆಯಾಗಿದೆ. ಹಣ ಬೇಕು ಎಂದರೆ ಇಲ್ಲಿನ ಜನ ಎಲ್ಲದಕ್ಕೂ ಬ್ಯಾಂಕಿಗೆ ತೆರಳಬೇಕಾದ ಅನಿವಾರ್ಯತೆಯಿದೆ. ಇನ್ನು ಪಡಿತರ ಅಥವಾ ಇನ್ನಿತರ ನೋಂದಣಿ ಸಂಬಂಧ ಮೊಬೈಲ್‌ಗೆ
ಒಟಿಪಿ ಸಹ ಸಕಾಲದಲ್ಲಿ ಬಾರದೇ ಇರುವುದು ಸಹ ಇಲ್ಲಿನ ರೈತರ ಸಹಿತ ಬಹಳಷ್ಟು ಜನರಿಗೆ ತಲೆನೋವಾಗಿ ಪರಿಣಮಿಸಿದೆ.

ಶಾಲೆಗೆ ಪರ್ಯಾಯ ವ್ಯವಸ್ಥೆ
ಇಲ್ಲಿರುವ ನಡಂಬೂರು ಸರಕಾರಿ ಕಿರಿಯ ಪ್ರಾಥಮಿಕ ಶಾಲೆಗೂ ನೆಟ್‌ವರ್ಕ್‌ ಇಲ್ಲದೇ ಇರುವುದು ಬಹಳಷ್ಟು ತೊಂದರೆಯಾಗುತ್ತಿತ್ತು. ಇದರಿಂದ ಸ್ಮಾರ್ಟ್‌ ಕ್ಲಾಸ್‌, ಕಂಪ್ಯೂಟರ್‌ ದಾಖಲಾತಿ, ಯಾರಾದರೂ ಮೇಲಧಿಕಾರಿಗಳು ಶಿಕ್ಷಕರಿಗೆ ಕರೆ ಮಾಡಲು ಸಹ ಸಮಸ್ಯೆಯಿದೆ. ಆದರೆ ಈಗ ದಾನಿಗಳ ನೆರವಿನಿಂದ ಬೂಸ್ಟರ್‌ ವೈಫೈ ಅಳವಡಿಸಿಕೊಂಡಿದ್ದರಿಂದ ಶಾಲೆಯ ನೆಟ್ವರ್ಕ್‌ ಸಮಸ್ಯೆಯೊಂದು ಬಗೆಹರಿದಿದೆ.

Advertisement

ನೂರಕ್ಕೂ ಮಿಕ್ಕಿ ಮನೆಗಳಿಗೆ ನೆಟ್ವರ್ಕ್‌ ಇಲ್ಲ
ರಟ್ಟಾಡಿ ಗ್ರಾಮದ ಎರಡನೇ ವಾರ್ಡಿನಲ್ಲಿರುವ ನಡಂಬೂರು, ಕೊಟ್ಟಕ್ಕಿ, ನಿಲ್ಸ್‌ಕಲ್‌, ಗುಂಡಾಣ ಪ್ರದೇಶಗಳಿಗೆ ನೆಟ್ವರ್ಕ್‌ ಸೌಲಭ್ಯವಿಲ್ಲ. ಒಂದೆರಡು ಕಡೆಗಳಲ್ಲಿ ಮಾತ್ರ ಅಲ್ಪ-ಸ್ವಲ್ಪ ಏರ್‌ಟೆಲ್‌ ಸಿಗುವುದು ಬಾಕಿ ಎಲ್ಲ ಕಡೆಗಳಲ್ಲಿ ಯಾವುದೇ ನೆಟ್ವರ್ಕ್‌ ಸಿಗುವುದಿಲ್ಲ. ಈ ಪ್ರದೇಶದಲ್ಲಿ ಒಟ್ಟಾರೆ 150 ಮನೆಗಳಿವೆ. ಈ ಪೈಕಿ ನೂರಕ್ಕೂ ಮಿಕ್ಕಿ ಮನೆಗಳಿಗೆ ಯಾವುದೇ ನೆಟ್ವರ್ಕ್‌ ಸಂಪರ್ಕ ಸಿಗದೇ, ಜನ ತೊಂದರೆ ಅನುಭವಿಸುತ್ತಿದ್ದಾರೆ.

ಪಂಚಾಯತ್‌ ನಿರ್ಣಯ
2023ರಲ್ಲಿ ಅಮಾಸೆಬೈಲು ಗ್ರಾಮಸಭೆಯಲ್ಲೂ ನೆಟ್ವರ್ಕ್‌ ಬೇಡಿಕೆ ಬಗ್ಗೆ, ಟವರ್‌ ನಿರ್ಮಾಣದ ಕುರಿತಂತೆ ಗ್ರಾ.ಪಂ. ವತಿಯಿಂದ ನಿರ್ಣಯ ಮಾಡಿ, ಸಂಬಂಧಪಟ್ಟ ಇಲಾಖೆಯವರಿಗೆ ಕಳುಹಿಸಲಾಗಿತ್ತು. ಆದರೆ ಅದಕ್ಕೆ ಈವರೆಗೆ ಆ ಇಲಾಖೆಯವರು ಪ್ರಾಶಸ್ಯ ಕೊಡದೇ, ನಿರ್ಲಕ್ಷ್ಯ ವಹಿಸಿದ್ದಾರೆ. ಈಗಲಾದರೂ ಶಾಸಕರು, ಸಂಸದರು, ಅಧಿಕಾರಿಗಳು ಈ ಬಗ್ಗೆ ಗಮನಹರಿಸಿ, ನೆಟ್ವರ್ಕ್‌ ಸೌಕರ್ಯ ಮಾಡಿಕೊಡಲಿ.
– ಕಿರಣ್‌ ಕುಮಾರ್‌ ಶೆಟ್ಟಿ ನಡಂಬೂರು, ಸ್ಥಳೀಯ ಗ್ರಾ.ಪಂ. ಸದಸ್ಯ

-ಪ್ರಶಾಂತ್‌ ಪಾದೆ‌

Advertisement

Udayavani is now on Telegram. Click here to join our channel and stay updated with the latest news.

Next