Advertisement

ಏರೋ ಇಂಡಿಯಾ ಶೋಗೆ ಅದ್ಧೂರಿ ತೆರೆ

11:35 AM Feb 18, 2023 | Team Udayavani |

ಬೆಂಗಳೂರು: ಅತ್ತ ಗೋಧೂಳಿಯ ಸಮಯದಲ್ಲಿ ನಿಧಾನವಾಗಿ ಸೂರ್ಯ ಪಶ್ಚಿಮದ ಕಡೆಗೆ ಜಾರುತ್ತಿದ್ದ. ಇತ್ತ ಲೋಹದ ಹಕ್ಕಿಗಳು ನೆರೆದ ಸಾವಿರಾರು ಜನರನ್ನು ರಂಜಿಸಿ ಅದೇ ದಿಕ್ಕಿನಲ್ಲಿ ಮರೆಯಾದವು. ಕರತಾಡನ, ಸಿಳ್ಳೆ-ಕೇಕೆಯೊಂದಿಗೆ ಪ್ರೇಕ್ಷಕರು ಅವುಗಳನ್ನು ಒಲ್ಲದ ಮನಸ್ಸಿನಿಂದಲೇ ಬೀಳ್ಕೊಟ್ಟರು.

Advertisement

ಯಲಹಂಕ ವಾಯುನೆಲೆಯಲ್ಲಿ 5 ದಿನಗಳ ಕಾಲ ಠಿಕಾಣಿ ಹೂಡಿದ್ದ ದೇಶ-ವಿದೇಶದಿಂದ ಬಂದ ತರಹೇವಾರಿ ಲೋಹದಹಕ್ಕಿಗಳು ತಮ್ಮ ಚಿನ್ನಾಟ ಮುಗಿಸಿ ಶುಕ್ರವಾರ ಸಂಜೆ ಗೂಡುಗಳತ್ತ ಪ್ರಯಾಣ ಬೆಳೆಸಿದವು. ಇದರೊಂದಿಗೆ ಏಷ್ಯಾದ ಅತಿದೊಡ್ಡ ವೈಮಾನಿಕ ಪ್ರದರ್ಶನ ಏರೋ ಇಂಡಿಯಾ ಶೋ 14ನೇ ಆವೃತ್ತಿಗೆ ಅದ್ಧೂರಿ ತೆರೆಬಿದ್ದಿತು.

ವೈಮಾನಿಕ ಪ್ರದರ್ಶನದ ಮೊದಲ 3 ದಿನ ವಹಿವಾಟಿಗೆ ಸೀಮಿತವಾಗಿದ್ದ ಏರೋ ಇಂಡಿಯಾ, ಕೊನೆಯ 2 ದಿನ ಸಾರ್ವಜನಿಕರ ವೀಕ್ಷಣೆಗೆ ಅವಕಾಶ ನೀಡಲಾಗಿತ್ತು. ಈ 5 ದಿನಗಳಲ್ಲಿ ಅಂದಾಜು 6.5 ಲಕ್ಷ ಜನ ಸಾಕ್ಷಿಯಾದರು. ಈ ಪೈಕಿ ಮೊದಲ 3 ದಿನ ದೇಶ ವಿದೇಶ ಸೇರಿದಂತೆ 2 ಲಕ್ಷಕ್ಕೂ ಅಧಿಕ ಉದ್ಯಮಿಗಳು, ವ್ಯಾಪಾರಿಗಳು, ವಾಯು, ನೌಕ ಹಾಗೂ ಭೂಸೇನೆಯ ಅಧಿಕಾರಿ ಸಿಬ್ಬಂದಿಗಳು ಭೇಟಿ ನೀಡಿದರೆ, ಕೊನೆಯ 2 ದಿನ ನಾಲ್ಕು ಲಕ್ಷಕ್ಕೂ ಅಧಿಕ ಸಾರ್ವಜನಿಕರು ಭೇಟಿ ನೀಡಿದ್ದಾರೆ.

ಇನ್ನು 14ನೇ ಆವೃತ್ತಿಯಲ್ಲಿ 201 ಒಪ್ಪಂದಗಳು ಸೇರಿದಂತೆ 266 ಸಹಭಾಗಿತ್ವದೊಂದಿಗೆ 80 ಸಾವಿರ ಕೋಟಿ ರೂ. ಬಂಡವಾಳ ಹರಿದು ಬರಲಿದೆ. 53 ಪ್ರಮುಖ ಘೋಷಣೆಗಳಾಗಿದ್ದು, 9 ಉತ್ಪನ್ನ ಬಿಡುಗಡೆ ಮಾಡಲಾಯಿತು. ಈ ಪೈಕಿ ಕರ್ನಾಟಕದೊಂದಿಗೆ 2,900 ಕೋಟಿ ರೂ. ಮೊತ್ತದ 32 ಒಪ್ಪಂದಗಳಾಗಿವೆ. ಏರೋ ಇಂಡಿಯಾದಲ್ಲಿ ಒಟ್ಟು 811 ಪ್ರದರ್ಶಕರು ಭಾಗವಹಿಸಿದ್ದು, ಈ ಪೈಕಿ 110 ವಿದೇಶಿ ಕಂಪನಿ ಹಾಗೂ ರಕ್ಷಣಾ ಇಲಾಖೆಗಳಿವೆ.

ಉಳಿದಂತೆ 701 ಸ್ವದೇಶಿ ಉದ್ಯಮಿಗಳು ಭಾಗವಹಿಸಿದ್ದವು. 5 ದಿನಗಳು ನಡೆಯುವ ಏರೋ ಶೋನಲ್ಲಿ ಮೊದಲ 3 ದಿನಗಳು (ಫೆ.13-15) ಬ್ಯುಸಿನೆಸ್‌ಗೆ ಮೀಸಲಿಡಲಾಗಿತ್ತು. ಈ ವೇಳೆ ಸಿಇಒ ಕಾನ್‌ಕ್ಲೇವ್‌, ರಕ್ಷಣಾ ಸಚಿವರ ಕಾನ್‌ಕ್ಲೇವ್‌, ಮಂಥನ್‌, ಬಂಧನ್‌ ಸೇರಿದಂತೆ ಮೊದಲಾದ ಸಭೆ- ಸಮಾರಂಭಗಳು ನಡೆದವು.

Advertisement

ಈ ಕಾರ್ಯಕ್ರಮಗಳಿಗೆ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಅಧ್ಯಕ್ಷತೆ ವಹಿಸಿದ್ದರು. ಈ ಕಾರ್ಯಕ್ರಮಗಳಲ್ಲಿ 32 ವಿದೇಶಿ ರಕ್ಷಣಾ ಸಚಿವರು, 29 ಏರ್‌ಚೀಫ್‌, ಪ್ರಮುಖ ಸಂಶೋಧನೆ ಮತ್ತು ಅಭಿವೃದ್ಧಿ, ಜೆವಿ, ತರಬೇತಿ, ಸ್ಪೇಸ್‌, ಎಐ, ಸೈಬರ್‌ ಸೆಕ್ಯೂರಿಟಿ ಸಂಸ್ಥೆಗಳ ಮುಖ್ಯಸ್ಥರು ಭಾಗಹಿಸಿದ್ದರು.

ಕೊನೆಯ 2 ದಿನ ಯಾವುದೇ ಸಭೆ ಸಮಾರಂಭ ಇರಲಿಲ್ಲ. ಪ್ರತಿ ಏರೋ ಶೋದಲ್ಲಿ ಬೆಳಗ್ಗೆ ಮತ್ತು ಮಧ್ಯಾಹ್ನ ಹೀಗೆ ದಿನಕ್ಕೆ 2 ಬಾರಿ ವೈಮಾನಿಕ ಪ್ರದರ್ಶನ ನಡೆಸಲಾಗುತ್ತಿತ್ತು. ಆದರೆ, ಈ ಬಾರಿ ದಿನಕ್ಕೆ ಕೇವಲ ಒಂದು ಬಾರಿ ವೈಮಾನಿಕ ಪ್ರದರ್ಶನ ನಡೆಸಲಾಯಿತು.  ಕೊನೆಯ 2 ದಿನ ಮಾತ್ರ ಬೆಳಗ್ಗೆ ಮತ್ತು ಮಧ್ಯಾಹ್ನ ವೈಮಾನಿಕ ಪ್ರದರ್ಶನ ಏರ್ಪಡಿಸಲಾಗಿತ್ತು.

 67 ವಿಮಾನಗಳ ಪ್ರದರ್ಶನ : ಏರೋ ಇಂಡಿಯಾದಲ್ಲಿ ಅಮೆರಿಕಾದ ಎಫ್-16, ಎಫ್-35, ರಫೇಲ್‌, ತೇಜಸ್‌, ಸೂರ್ಯಕಿರಣ, ಸಾರಂಗ್‌ ಹೆಲಿಕಾಪ್ಟರ್‌ ಸೇರಿದಂತೆ 67 ಏರ್‌ಕಾಪ್ಟ್ರ್‌ಗಳು ಪ್ರದರ್ಶನ ನೀಡಿವೆ. ಸ್ಟಾಟಿಕ್‌ ಡಿಸ್‌ಪ್ಲೇ 36 ಏರ್‌ ಕ್ರಾಪ್ಟ್ ಪ್ರದರ್ಶನಕ್ಕೆ ಇಡಲಾಗಿತ್ತು. ಏರೋ ಇಂಡಿಯಾದಲ್ಲಿ ಮೊದಲ ಬಾರಿಗೆ ಅಮೆರಿಕಾದ ಎಫ್-16, ಎಫ್-35 ಹಾಗೂ ಎಫ್ -18 ಹಾರಾಟ ನಡೆಸಿದರೆ, ಎಚ್‌ಎಎಲ್‌ ನಿರ್ಮಿತ ಯುದ್ಧ ವಿಮಾನ ಪ್ರಚಂಡ ಶಕ್ತಿ ಪ್ರದರ್ಶನ ಮಾಡಿತ್ತು. ಇನ್ನು ಡಿಆರ್‌ಡಿಓ ಅಭಿವೃದ್ಧಿ ಪಡಿಸಿದ ತಪಸ್‌ ಚಾಲಕರಹಿತ ವಾಹನವು ಆಗಸದಲ್ಲಿಂದ ವೈಮಾನಿಕ ಪ್ರದರ್ಶನ ನೇರ ಪ್ರಸಾರವನ್ನು ನೀಡಿತ್ತು.

Advertisement

Udayavani is now on Telegram. Click here to join our channel and stay updated with the latest news.

Next