ಬೆಂಗಳೂರು: ಪ್ರಥಮ ದರ್ಜೆ ಕಾಲೇಜುಗಳ ಅತಿಥಿ ಉಪನ್ಯಾಸಕರ ಬೇಡಿಕೆಗಳನ್ನು ಈಡೇರಿಸಿ ಉನ್ನತ ಶಿಕ್ಷಣ ಇಲಾಖೆ ಆದೇಶಿಸಿದೆ.
ತನ್ಮೂಲಕ ಕಳೆದ ನವೆಂಬರ್, ಡಿಸೆಂಬರ್‌ನಲ್ಲಿ ಅತಿಥಿ ಶಿಕ್ಷಕರು ನಡೆಸಿದ್ದ ಹೋರಾಟದ ಸಂದರ್ಭದಲ್ಲಿ ನೀಡಿದ್ದ ಭರವಸೆಯನ್ನು ಇಲಾಖೆ ಈಡೇರಿಸಿದೆ.
ಗೌರವಧನವನ್ನು ಕನಿಷ್ಠ 5 ಸಾವಿರ ರೂ.ಗಳಿಂದ ಗರಿಷ್ಠ 8 ಸಾವಿರ ರೂ. ಏರಿಕೆ, 5 ಲಕ್ಷ ರೂ. ಆರೋಗ್ಯ ವಿಮೆ ಮತ್ತು 60 ವರ್ಷ ತುಂಬಿದ ಅತಿಥಿ ಉಪನ್ಯಾಸಕರಿಗೆ ವಾರ್ಷಿಕ 50 ಸಾವಿರ ರೂ.ಗಳಂತೆ ಗರಿಷ್ಠ 5 ಲಕ್ಷ ರೂ.ಗಳ ಇಡಗಂಟು ನೀಡುವುದಾಗಿ ಇಲಾಖೆ ತನ್ನ ಆದೇಶದಲ್ಲಿ ತಿಳಿಸಿದೆ.
5 ವರ್ಷಕ್ಕಿಂತ ಕಡಿಮೆ ಸೇವಾವಧಿ ಸಲ್ಲಿಸಿರುವವರಿಗೆ ಮತ್ತು ಯುಜಿಸಿ ನಿಗದಿಪಡಿಸಿದ ವಿದ್ಯಾರ್ಹತೆ ಹೊಂದಿರುವವರಿಗೆ 35 ಸಾವಿರ ರೂ., 5 ವರ್ಷಕ್ಕಿಂತ ಕಡಿಮೆ ಸೇವಾವಧಿ ಸಲ್ಲಿಸಿರುವವರಿಗೆ ಮತ್ತು ಯುಜಿಸಿ ನಿಗದಿಪಡಿಸಿದ ವಿದ್ಯಾರ್ಹತೆ ಹೊಂದಿಲ್ಲದವರಿಗೆ 31 ಸಾವಿರ ರೂ., 5 ವರ್ಷಕ್ಕಿಂತ 10 ವರ್ಷಗಳ ಸೇವಾವಧಿ ಸಲ್ಲಿಸಿರುವವರಿಗೆ ಮತ್ತು ಯುಜಿಸಿ ವಿದ್ಯಾರ್ಹತೆ ಹೊಂದಿರುವವರಿಗೆ 38 ಸಾವಿರ ರೂ., 5 ವರ್ಷದಿಂದ 10 ವರ್ಷ ಸೇವೆ ಮತ್ತು ಯುಜಿಸಿ ವಿದ್ಯಾರ್ಹತೆ ಹೊಂದಿಲ್ಲದವರಿಗೆ 34 ಸಾವಿರ ರೂ., 10 ವರ್ಷದಿಂದ 15 ವರ್ಷ ಸೇವಾವಧಿ ಸಲ್ಲಿಸಿ ಮತ್ತು ಯುಜಿಸಿ ನಿಗದಿಪಡಿಸಿದ ವಿದ್ಯಾರ್ಹತೆ ಹೊಂದಿರುವವರಿಗೆ 39 ಸಾವಿರ ರೂ., ಯುಜಿಸಿ ನಿಗದಿಪಡಿಸಿದ ವಿದ್ಯಾರ್ಹತೆ ಹೊಂದಿಲ್ಲದವರಿಗೆ 35 ಸಾವಿರ ರೂ., 15 ವರ್ಷಕ್ಕಿಂತ ಹೆಚ್ಚಿನ ಸೇವಾವಧಿ ಮತ್ತು ಯುಜಿಸಿ ವಿದ್ಯಾರ್ಹತೆ ಹೊಂದಿರುವವರಿಗೆ 40 ಸಾವಿರ ರೂ. ಮತ್ತು ಯುಜಿಸಿ ವಿದ್ಯಾರ್ಹತೆ ಹೊಂದಿಲ್ಲದವರಿಗೆ 36 ಸಾವಿರ ರೂ.ಗಳನ್ನು ನಿಗದಿ ಮಾಡಲಾಗಿದೆ.
ಅತಿಥಿ ಉಪನ್ಯಾಸಕರಿಗೆ ವಾರ್ಷಿಕ 5 ಲಕ್ಷ ರೂ.ಗಳ ಆರೋಗ್ಯ ವಿಮೆ ಸೌಲಭ್ಯವನ್ನು ಕಲ್ಪಿಸಲಾಗುತ್ತಿದೆ. ಉಪನ್ಯಾಸಕರಿಂದ ಮಾಸಿಕ 400 ರೂ.ಗಳ ವಂತಿಕೆಯನ್ನು ಕಟಾಯಿಸಿ ಇದಕ್ಕೆ ಸರಕಾರದಿಂದ 400 ರೂ. ಸೇರಿಸಿ ಒಟ್ಟು 800 ರೂ.ಗಳನ್ನು ಆರೋಗ್ಯ ವಿಮೆಗೆ ಪಾವತಿಸಲಾಗುತ್ತದೆ.