Advertisement

Agriculture ಹಡಿಲು ಭೂಮಿಗೆ ಜೀವ ತುಂಬುವ ರೈತ

12:24 AM Jun 29, 2024 | Team Udayavani |

ಕುಂದಾಪುರ: ಇಲ್ಲೊಬ್ಬ ಅಪರೂಪದ ಕೃಷಿಕ ತನ್ನ ಮಾದರಿ ಕಾರ್ಯದ ಮೂಲಕ ಎಕ್ರೆಗಟ್ಟಲೆ ಹಡಿಲು ಭೂಮಿಯನ್ನು ಹಸನು ಮಾಡುತ್ತಿದ್ದಾರೆ. ಊರಲ್ಲಿ ಹಡಿಲು ಬೀಳುವ ಗದ್ದೆಗಳನ್ನು ಗೇಣಿಗೆ ಪಡೆದು ಬೇಸಾಯ ಮಾಡುವುದೇ ಇವರ ಕಾಯಕ. 20 ವರ್ಷಗಳಿಂದ ನಿರಂತರವಾಗಿ ಈ ಕಾರ್ಯವನ್ನು ಬದ್ಧತೆಯಿಂದ ಮಾಡುತ್ತಿದ್ದಾರೆ. ಕುಂದಾಪುರ ಕೋಡಿಯ ಗಂಗಾಧರ ಪೂಜಾರಿ ಅವರೇ ಮಾದರಿ ಕೃಷಿಕ.

Advertisement

ಇವರು ತನ್ನ ಒಂದು ಎಕ್ರೆ ಗದ್ದೆಯೊಂದಿಗೆ ಕೋಡಿಯ ಶ್ರೀ ಚಕ್ರೇಶ್ವರಿ ದೇವಸ್ಥಾನದ ಆಸುಪಾಸಿನಲ್ಲಿ ರೈತರು ಹಡಿಲು ಬಿಡುವ ಗದ್ದೆಗಳನ್ನು ಹುಡುಕಿ, ಅವುಗಳಲ್ಲಿ ಬೇಸಾಯ ಮಾಡುತ್ತಿದ್ದಾರೆ. ಈ ವರ್ಷ ಒಟ್ಟಾರೆ 45 ಎಕ್ರೆ ಗದ್ದೆಗಳಲ್ಲಿ ನಾಟಿ ಕಾರ್ಯ ಕೈಗೊಂಡಿದ್ದಾರೆ. ಈ ಬಾರಿ ಸೋನ್ಸ್‌ ಶಾಲೆ ಹತ್ತಿರ ಹೆಚ್ಚುವರಿಯಾಗಿ 15 ಎಕ್ರೆ ಗದ್ದೆಗಳಿಗೆ ಜೀವ ತುಂಬುವ ಪ್ರಯತ್ನವನ್ನು ಮಾಡುತ್ತಿದ್ದಾರೆ.

ಇಡೀ ಕುಟುಂಬ ಜತೆಗಿದೆ
ಗಂಗಾಧರ ಪೂಜಾರಿ ವೃತ್ತಿಯಲ್ಲಿ ಎಲೆಕ್ಟ್ರಿಕಲ್‌ ಹಾಗೂ ಡೆಕೊರೇಶನ್‌ ಕೆಲಸ ಮಾಡುತ್ತಿದ್ದು, ಅವರಿಗೆ ಕೃಷಿಯಲ್ಲಿ ಅಪಾರ ಆಸಕ್ತಿಯಿದೆ. ತಂದೆಯಿಂದ ಬಳುವಳಿಯಾಗಿ ಬಂದ ಕೃಷಿ ಕಾಯಕವನ್ನು ಎಂದಿಗೂ ಬಿಡಲಾರೆ ಎನ್ನುವ ಅವರಿಗೆ ಈ ಕಾರ್ಯದಲ್ಲಿ ಇಡೀ ಕುಟುಂಬವೇ ಸಹಕಾರ ನೀಡುತ್ತಿದೆ. ಮನೆಮಂದಿ ಜತೆಗೆ ಸಹೋದರ, ಅಳಿಯ, ಮಾವ ಹೀಗೆ ಎಲ್ಲರೂ ನಾಟಿ ಕಾರ್ಯದಲ್ಲಿ ಭಾಗಿಯಾಗುತ್ತಿದ್ದಾರೆ. ಇವರೆಲ್ಲರ ಬೆಂಬಲದಿಂದ ಯಾವತ್ತೂ ಈ ಕಾರ್ಯ ತನಗೆ ಹೊರೆ ಎನಿಸಿಲ್ಲ ಎಂದು ಗಂಗಾಧರ ಪೂಜಾರಿ ಅವರು ಹೇಳುತ್ತಿದ್ದಾರೆ.

ಲಾಭಕ್ಕಿಂತಲೂ ಖುಷಿ ಜಾಸ್ತಿ
ತಂದೆ ಕಾಲದಿಂದಲೂ ಈ ಕಾರ್ಯ ಮಾಡುತ್ತಿದ್ದೇವೆ. ಮೊದಲಿಗೆ 10 ಎಕ್ರೆ ಮಾಡಿದ್ದೇವೆ. ಹಿಂದೆ 30-40 ಆಳುಗಳಿಂದ ನಾಟಿ ಮಾಡುತ್ತಿದ್ದೆವು. ಆದರೆ ಕೂಲಿಯಾಳುಗಳ ಸಮಸ್ಯೆಯಿಂದ ಯಾಂತ್ರೀಕೃತ ನಾಟಿ ಮಾಡುತ್ತಿದ್ದೇವೆ. ಮನೆಯಂಗಳದಲ್ಲೇ ಚಾಪೆ ನೇಜಿ ಮಾಡುತ್ತಿದ್ದು, ಇದು ಲಾಭದಾಯಕ. ಲಾಭಕ್ಕಿಂತಲೂ ಹೆಚ್ಚು ಇದರಿಂದ ಸಿಗುವ ಖುಷಿಯೇ ವಿಶೇಷವಾದುದು. ಈ ಬಾರಿ 45 ಎಕ್ರೆ ಗದ್ದೆಯಲ್ಲಿ ನಾಟಿ ಮಾಡುತ್ತಿದ್ದೇವೆ. 1 ಎಕ್ರೆ ಬಿಟ್ಟರೆ ಮತ್ತೆಲ್ಲವೂ ಹಡಿಲು ಭೂಮಿಯೇ. ಈವರೆಗೆ 2.70 ಲಕ್ಷ ರೂ. ಖರ್ಚಾಗಿದೆ. ಇನ್ನು ಗೊಬ್ಬರ, ಕಟಾವು ಸೇರಿ ಒಟ್ಟು ಖರ್ಚು 5 ಲಕ್ಷ ರೂ. ಆಗಬಹುದು. ಉತ್ತಮ ಆದಾಯವೂ ಸಿಗುತ್ತದೆ, ಜತೆಗೆ ನಮ್ಮ ಇಡೀ ಕುಟುಂಬಕ್ಕೆ ವರ್ಷಪೂರ್ತಿ ಅಕ್ಕಿಯೂ ಸಿಗುತ್ತದೆ. ಗದ್ದೆಯ ಮಾಲಕರಿಗೆ 40 ಸೆಂಟ್ಸ್‌ಗೆ 1 ಮುಡಿ ಹಾಗೂ ಎಕ್ರೆಗೆ ಒಂದು ಕ್ವಿಂಟಾಲ್‌ ಅಕ್ಕಿ ಗೇಣಿ ನೀಡುತ್ತೇವೆ.
– ಗಂಗಾಧರ ಪೂಜಾರಿ ಕೋಡಿ, ಕೃಷಿಕ

ಕಷ್ಟಪಟ್ಟರೆ ಲಾಭ..
ಬಹಳ ಹಿಂದೆ ಕೈ ನಾಟಿಯೇ ಜಾಸ್ತಿ ಇತ್ತು. ಈಗ ಯಂತ್ರ ಬಂದಿರುವುದರಿಂದ ತುಂಬಾ ಸಹಾಯವಾಗುತ್ತಿದೆ. ಕೂಲಿ ತುಂಬಾ ಹೊರೆ ಯಾಗುತ್ತಿತ್ತು. ಇಂಥ ಸಂದರ್ಭ ದಲ್ಲಿ ಮನೆಯವರೆಲ್ಲ ಸೇರಿದರೆ ಅನುಕೂಲವಾಗುತ್ತದೆ ಹಾಗೂ ಉತ್ತಮ ಲಾಭವೂ ಸಿಗುತ್ತದೆ.
– ಶಂಕರ ಪೂಜಾರಿ ಕೋಡಿ

Advertisement

-ಪ್ರಶಾಂತ್‌ ಪಾದೆ

Advertisement

Udayavani is now on Telegram. Click here to join our channel and stay updated with the latest news.

Next