Advertisement

Kundapura: ಹತ್ತೂರು ಸೇರುವ ಮುಳ್ಳಿಕಟ್ಟೆಗೆ ಬೇಕು ಬಸ್‌ ನಿಲ್ದಾಣ

02:49 PM Nov 28, 2024 | Team Udayavani |

ಕುಂದಾಪುರ: ಹೊಸಾಡು ಗ್ರಾಮದ ಮುಳ್ಳಿಕಟ್ಟೆ ಜಂಕ್ಷನ್‌ನಲ್ಲಿ ಕೇವಲ ಹೆದ್ದಾರಿ ಮಾತ್ರ ಹಾದು ಹೋಗುತ್ತಿಲ್ಲ. ಹೆದ್ದಾರಿಯೊಂದಿಗೆ ಗುಜ್ಜಾಡಿ – ಆಲೂರು ಜಿಲ್ಲಾ ಮುಖ್ಯ ರಸ್ತೆಯೂ ಹಾದು ಹೋಗುತ್ತಿದ್ದು, ಇದರೊಂದಿಗೆ ಹಕ್ಲಾಡಿ, ಆಲೂರು, ನಾಡ ಹೀಗೆ ಹತ್ತಾರು ಊರುಗಳಿಗೆ ಸಂಪರ್ಕಿಸಲು ಸಹ ಜನ ಇದೇ ಜಂಕ್ಷನ್‌ ಆಗಿ ಸಂಚರಿಸಬೇಕು. ಆದರೆ ಇಲ್ಲಿ ಎರಡೂ ಬದಿಯಲ್ಲಿದ್ದ ಬಸ್‌ ನಿಲ್ದಾಣಗಳು ಏಳೆಂಟು ವರ್ಷಗಳ ಹಿಂದೆ ತೆರವಾಗಿದ್ದು, ಇನ್ನೂ ಅದರ ನಿರ್ಮಾಣ ಮಾತ್ರ ಮಾಡಲು ಯಾರೂ ಮುಂದಾಗಿಲ್ಲ.

Advertisement

ಕುಂದಾಪುರದಿಂದ ಶಿರೂರುವರೆಗಿನ ರಾಷ್ಟ್ರೀಯ ಹೆದ್ದಾರಿ 66 ಚತುಷ್ಪಥ ಬಹುತೇಕ ಕಾಮಗಾರಿ ಮುಗಿದಿದೆ. ರಸ್ತೆಯೂ ಸಂಚಾರಕ್ಕೆ ತೆರೆದು ವರ್ಷಗಳೇ ಕಳೆದಿದೆ. ಆದರೆ ಈ ಹೆದ್ದಾರಿ ವಿಸ್ತರಣೆಗೆ ಜಾಗ ಕೊಟ್ಟವರು ಮಾತ್ರವಲ್ಲದೆ ಹೆದ್ದಾರಿ ಹಾದುಹೋಗುವ ಊರಿನಲ್ಲಿ ನೆಲೆಸಿರುವ ಸ್ಥಳೀಯ ಜನರು ಅನುಭವಿಸುತ್ತಿರುವ ಸಮಸ್ಯೆಯನ್ನು ಮಾತ್ರ ಗಂಭೀರವಾಗಿ ಪರಿಗಣಿಸುವುದೇ ಇಲ್ಲ.

ವಿಸ್ತರಣೆಗೆ ಬಿಟ್ಟಿದ್ದೇ ತಪ್ಪಾ?
2015ರಲ್ಲಿ ಹೆದ್ದಾರಿ ಚತುಷ್ಪಥ ಕಾಮಗಾರಿ ಆರಂಭಗೊಳ್ಳುವ ಮೊದಲು ಎರಡೂ ಬದಿಯಲ್ಲೂ ಸಣ್ಣದಾದ ಬಸ್‌ ನಿಲ್ದಾಣವಿತ್ತು. ಆದರೆ ಹೆದ್ದಾರಿ ಕಾಮಗಾರಿ ನೆಪದಲ್ಲಿ ಆ ಬಸ್‌ ನಿಲ್ದಾಣಗಳನ್ನು ತೆಗೆಯಲಾಯಿತು. ಹೆದ್ದಾರಿ ವಿಸ್ತರಣೆಯಾಯಿತು. ಮತ್ತೆ ಆ ಹೆದ್ದಾರಿಯಲ್ಲಿ ವಾಹನಗಳ ಸಂಚಾರವೂ ಶುರುವಾಯಿತು.

ಆದರೆ ಆಗ ತೆಗೆದ ಬಸ್‌ ನಿಲ್ದಾಣ ಮಾತ್ರ ಇನ್ನೂ ಆಗಿಲ್ಲ. ಅಂದಿನಿಂದ ಇಲ್ಲಿನ ಜನ ಬಸ್ಸಿಗಾಗಿ ಬೇಸಗೆಯಲ್ಲಿ ಬಿಸಿಲಿಗೆ, ಮಳೆಗಾಲದಲ್ಲಿ ಕೊಡೆ ಹಿಡಿದೇ ನಿಲ್ಲುವಂತಾಗಿದೆ. ಈ ಬಗ್ಗೆ ಪಂಚಾಯತ್‌ಗೆ ಕೇಳಿದರೆ ನಾವು ಹೆದ್ದಾರಿ ಪ್ರಾಧಿಕಾರಕ್ಕೆ ಬರೆದಿದ್ದೇವೆ ಅನ್ನುತ್ತಾರೆ. ಜನಪ್ರತಿನಿಧಿಗಳಿಗೆ ಕೇಳಿದರೂ, ಅದು ಹೆದ್ದಾರಿಯವರೇ ಮಾಡಿಕೊಡಬೇಕು ಎನ್ನುತ್ತಾರೆ. ಹೆದ್ದಾರಿಯವರಂತೂ ಜನರ ಕೈಗೆ ಸಿಗುವುದಿಲ್ಲ. ಹೆದ್ದಾರಿ ವಿಸ್ತರಣೆ, ಅಭಿವೃದ್ಧಿಗೆ ಬಿಟ್ಟಿದ್ದೇ ನಮ್ಮ ತಪ್ಪಾ? ಎನ್ನುವುದಾಗಿ ಮುಳ್ಳಿಕಟ್ಟೆ ಭಾಗದ ಜನರು ಪ್ರಶ್ನಿಸುತ್ತಿದ್ದಾರೆ.

Advertisement

ಸರ್ವಿಸ್‌ ರಸ್ತೆ, ಚರಂಡಿಯೂ ಆಗಲಿ
ಇಲ್ಲಿ ಬಸ್‌ ನಿಲ್ದಾಣ, ಚರಂಡಿ ನಿರ್ಮಾಣಕ್ಕೆ ಜಾಗದ ಸಮಸ್ಯೆಯೇನು ಇಲ್ಲ. ಈಗಾಗಲೇ ಜಾಗವನ್ನು ಹೆದ್ದಾರಿ ಪ್ರಾಧಿಕಾರವು ಸ್ವಾಧೀನಪಡಿಸಿಕೊಂಡಿದೆ. ಆದರೆ ತೆರವು ಕಾರ್ಯ ಮಾತ್ರ ಆಗಬೇಕಾಗಿದೆ. ಹೆದ್ದಾರಿ ಕಾಮಗಾರಿ ಮುಗಿದಿದ್ದು, ಆದಷ್ಟು ಬೇಗ ಸರ್ವಿಸ್‌ ರಸ್ತೆ, ಮಳೆ ನೀರು ಹರಿದು ಹೋಗಲು ಸೂಕ್ತ ಚರಂಡಿ ವ್ಯವಸ್ಥೆಯೊಂದಿಗೆ ಇಲ್ಲಿ ಸುಸಜ್ಜಿತವಾದ ಬಸ್‌ ನಿಲ್ದಾಣ ನಿರ್ಮಾಣವಾಗಲಿ.
– ಪ್ರದೀಪ್‌ ಎಂ. ಶೆಟ್ಟಿ ಮುಳ್ಳಿಕಟ್ಟೆ, ಸ್ಥಳೀಯರು

ಹತ್ತೂರಿನ ಸಂಪರ್ಕ ಕೊಂಡಿ
ಹೊಸಾಡು ಗ್ರಾಮದ ಮುಳ್ಳಿಕಟ್ಟೆ ಜಂಕ್ಷನ್‌ ಸದಾ ಜನಜಂಗುಳಿ ಯಿಂದ ಕೂಡಿರುವ ಪ್ರದೇಶ. ಕುಂದಾಪುರದಿಂದ ಬೈಂದೂರು, ಗಂಗೊಳ್ಳಿ, ಭಟ್ಕಳ, ನಾಡ, ಪಡುಕೋಣೆ, ಆಲೂರು, ಹಕ್ಲಾಡಿ ಮುಂತಾದ ಕಡೆ ತೆರಳುವ ಹಾಗೂ ಭಟ್ಕಳ, ಬೈಂದೂರು, ಗಂಗೊಳ್ಳಿ, ನಾಡ, ಪಡುಕೋಣೆ, ಆಲೂರು ಮತ್ತಿತರ ಕಡೆಗಳಿಂದ ಕುಂದಾಪುರ, ಉಡುಪಿಗೆ ತೆರಳುವ ಬಸ್‌ಗಳಿಗೆ ಇಲ್ಲಿಯೇ ಜನ ಕಾಯಬೇಕು. ಆದರೆ ಇಲ್ಲಿ ನಿಲ್ಲಲು ಸರಿಯಾದ ವ್ಯವಸ್ಥೆಯಿಲ್ಲದೆ ರಸ್ತೆ ಬದಿಯೇ ಪ್ರಯಾಣಿಕರು ಕಾಯುವಂತಾಗಿದೆ.

ಹೆದ್ದಾರಿಯಲ್ಲಿ ಸಂಚರಿಸುವ ಬಸ್‌ಗಳು ಸೇರಿದಂತೆ ಕೆಎಸ್‌ಆರ್‌ಟಿಸಿ ಹಾಗೂ ಖಾಸಗಿ ಸೇರಿದಂತೆ 50ಕ್ಕೂ ಮಿಕ್ಕಿ ಬಸ್‌ಗಳು ಇಲ್ಲಿ ನಿಲ್ಲುತ್ತವೆ. ಕೆಎಸ್‌ಆರ್‌ಟಿಸಿ ಸಾಮಾನ್ಯ ಸಾರಿಗೆ ಬಸ್‌ಗಳನ್ನು ಸಹ ಇಲ್ಲಿ ನಿಲ್ಲಿಸಬೇಕು ಅನ್ನುವ ಆದೇಶ 2 ವರ್ಷದ ಹಿಂದೆ ಆಗಿದೆ. ನಿತ್ಯ ಸಾವಿರಾರು ಮಂದಿ ಇಲ್ಲಿ ಬಸ್ಸಿಗಾಗಿ ಕಾಯುತ್ತಾರೆ. ಕುಂದಾಪುರ, ಹೆಮ್ಮಾಡಿ, ಕೋಟೇಶ್ವರ ಶಾಲಾ- ಕಾಲೇಜುಗಳಿಗೆ ಹೋಗುವ ನೂರಾರು ಮಕ್ಕಳು ಬಸ್ಸಿಗಾಗಿ ರಸ್ತೆ ಬದಿಯೇ ನಿಲ್ಲಬೇಕು. ಆದರೂ ಇನ್ನೂ ಒಂದು ಸುಸಜ್ಜಿತ ನಿಲ್ದಾಣವಿಲ್ಲದೆ ಇರುವುದು ವ್ಯವಸ್ಥೆಗೆ ಹಿಡಿದ ಕನ್ನಡಿಯಾಗಿದೆ. ಹಿಂದೆ ಸಣ್ಣ ಮಟ್ಟದಾದರೂ ಹೇಳಿಕೊಳ್ಳಲು ಒಂದು ಬಸ್‌ ನಿಲ್ದಾಣವಾದರೂ ಇತ್ತು. ಆದರೆ ಈಗ ಹೆದ್ದಾರಿಯ ಎರಡೂ ಕಡೆಯಲ್ಲೂ ಒಂದು ಸಣ್ಣ ನಿಲ್ದಾಣವೂ ಇಲ್ಲ. ಹೆದ್ದಾರಿಯಲ್ಲಿ ಸಂಚರಿಸುವಾಗ ಮುಳ್ಳಿಕಟ್ಟೆ ಜಂಕ್ಷನ್‌ ಬಂತು ಅಂತ ತೋರಿಸಲು ಸಹ ಒಂದು ಗುರುತು ಇಲ್ಲದ ಸ್ಥಿತಿ ನಿರ್ಮಾಣವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next