Advertisement
ಕುಂದಾಪುರ-ಬೈಂದೂರು ನಡುವೆ ನಾಲ್ಕು ವರ್ಷಗಳ ಹಿಂದೆ ಪೂರ್ಣಗೊಂಡ ರಾಷ್ಟ್ರೀಯ ಹೆದ್ದಾರಿಯೇನೋ ಸುಂದರವಾಗಿದೆ, ಸಾಕಷ್ಟು ವ್ಯವಸ್ಥಿತವಾಗಿದೆ. ಈ ಹೆದ್ದಾರಿಯಲ್ಲಿ ನೂರಾರು ಬಸ್ಗಳ ಓಡಾಟವೂ ಇದೆ. ಆದರೆ, ಪ್ರಯಾಣಿಕರಿಗೆ ಈ ಬಸ್ಗಳಿಗಾಗಿ ಕಾಯಲು ಮೂಲಭೂತವಾಗಿ ಬೇಕಾದ ವ್ಯವಸ್ಥಿತ ಬಸ್ ತಂಗುದಾಣಗಳೇ ಇಲ್ಲ.
Related Articles
ಹೆದ್ದಾರಿಯ ಕೆಲವು ಕಡೆ ಹೆಸರಿಗೆ ಬಸ್ ತಂಗುದಾಣಗಳು ಇವೆ. ಅವು ಎಷ್ಟು ಪುಟ್ಟವು ಎಂದರೆ ಇಬ್ಬರಿಗೆ ಮಾತ್ರ ಕುಳಿತುಕೊಳ್ಳಬಹುದು. ಮಳೆಗಾಳಿ ಬಂದರೆ ಸಣ್ಣ ರಕ್ಷಣೆಯೂ ಅದಕ್ಕಿಲ್ಲ. ಜೋರು ಗಾಳಿ ಮಳೆ ಬಂದರೆ ತಂಗುದಾಣವೇ ಕಿತ್ತೆದ್ದು ಹೋದೀತೋ ಏನೋ ಎಂಬ ಭಯದಲ್ಲಿ ನಿಲ್ಲಬೇಕು. ಈ ಬಗ್ಗೆ ಜಾಲತಾಣದಲ್ಲಿ ಆಗಾಗ ಅಪಹಾಸ್ಯಗಳು ನಡೆಯುತ್ತಾ ಇರುತ್ತವೆ.
Advertisement
ಕೆಲವು ಕಡೆ ಸರ್ವಿಸ್ ರಸ್ತೆಯಲ್ಲಿ ಬಸ್ ತಂಗುದಾಣ ನಿರ್ಮಿಸಲಾಗಿದೆ. ಅಲ್ಲಿ ನಿಂತರೆ ಬಸ್ ಬರುವಾಗ ಹೆದ್ದಾರಿಗೆ ಓಡಿಕೊಂಡು ಬರುವುದು ಕೂಡಾ ಅಪಾಯಕ್ಕೆ ಆಹ್ವಾನ ನೀಡಿದಂತೆ.
ಕುಂದಾಪುರದಲ್ಲೇ ಹಲವು ಕಡೆ ಸಮಸ್ಯೆಕುಂದಾಪುರ ನಗರದ ಸಮೀಪದಲ್ಲಿ ಕೋಟೇಶ್ವರದಲ್ಲಿ ಹೆದ್ದಾರಿ ಬದಿ ಸುಸಜ್ಜಿತ ತಂಗುದಾಣ ಇಲ್ಲ. ಹಂಗಳೂರಿನಲ್ಲಿ ರಸ್ತೆಯಲ್ಲಿಯೇ ಮಕ್ಕಳು, ಮಹಿಳೆಯರು ಬಸ್ಸೇರುತ್ತಾರೆ. ಸಂಗಂನಲ್ಲಿ ಪುಟ್ಟ ಗೂಡಿನಂತಹ ತಂಗುದಾಣ ಇದೆ. ಆದರೆ ಇಲ್ಲಿ ಬಸ್ಸೇರುವ ಮಕ್ಕಳ ಸಂಖ್ಯೆ ಸಾವಿರಕ್ಕೂ ಹೆಚ್ಚು! ಬೆಳಗ್ಗೆ, ಸಂಜೆ ಇಲ್ಲಿಗೆ ಭೇಟಿ ನೀಡಿದರೆ ಪಕ್ಕದ ಕಾಲೇಜಿನಿಂದ ಬರುವ ಮಕ್ಕಳ ಸಂಖ್ಯೆ ಸ್ಪಷ್ಟವಾಗುತ್ತದೆ. ಎಲ್ಲೆಲ್ಲಿ ಬಸ್ ತಂಗುದಾಣ ಮಾಯ?
ಉಡುಪಿಯ ಸಂತೆಕಟ್ಟೆಯಿಂದ ಆರಂಭಿಸಿ ಶಿರೂರುವರೆಗೆ ಅನೇಕ ಕಡೆ ತಂಗುದಾಣದ ಅಗತ್ಯವಿದೆ. ಸಂತೆಕಟ್ಟೆ, ಬ್ರಹ್ಮಾವರ, ಮಣೂರು, ತೆಕ್ಕಟ್ಟೆ, ಕೋಟೇಶ್ವರ, ಹಂಗಳೂರು, ಹೇರಿಕುದ್ರು, ತಲ್ಲೂರು, ಹೆಮ್ಮಾಡಿ, ತ್ರಾಸಿ, ಮುಳ್ಳಿಕಟ್ಟೆ, ಮರವಂತೆ ಆಸ್ಪತ್ರೆ ಬಳಿ, ನಾವುಂದ, ಅರೆಹೊಳೆ ಕ್ರಾಸ್, ನಾಗೂರು ಉಪ್ರಳ್ಳಿ ಕ್ರಾಸ್, ಕಂಬದಕೋಣೆ, ನಾಯ್ಕನಕಟ್ಟೆ, ಉಪ್ಪುಂದ, ಯಡ್ತರೆ ಜಂಕ್ಷನ್, ಕೆಎಸ್ಆರ್ಟಿಸಿ ಬಸ್ ನಿಲ್ದಾಣ, ಬೈಂದೂರು ವಿಧಾನಸೌಧ ಬಳಿ, ಶಿರೂರು ಬಳಿ ಬಸ್ ನಿಲ್ದಾಣ ಬೇಕು. ರಸ್ತೆಯಲ್ಲೇ ನಿಂತು ಕಾಯಬೇಕು
ಒಂದು ವ್ಯವಸ್ಥಿತ ಬಸ್ ತಂಗುದಾಣ ಇಲ್ಲದೆ ಇರುವುದರಿಂದ ಪ್ರಯಾಣಿಕರು ಮಾರ್ಗದ ಬದಿಯಲ್ಲೇ ನಿಂತು ಕಾಯಬೇಕು. ಕೆಲವೊಮ್ಮೆ ತಮ್ಮ ಊರಿನ ಬಸ್ಸಿಗಾಗಿ ಅರ್ಧರ್ಧ ಗಂಟೆ ಕಾಯಬೇಕಾಗಿಯೂ ಇರುತ್ತದೆ. ಕಾಯುವವರಲ್ಲಿ ವೃದ್ಧರೂ, ಮಹಿಳೆಯರು, ಮಕ್ಕಳು ಕೂಡಾ ಇರುತ್ತಾರೆ. ಶಾಲೆ ಬಿಟ್ಟು ಬರುವವರೋ, ಕೆಲಸ ಬಿಟ್ಟು ಬರುವವರೋ ತುಂಬ ಹೊತ್ತು ನಿಂತುಕೊಳ್ಳುವ ಸ್ಥಿತಿಯಲ್ಲೂ ಇರುವುದಿಲ್ಲ. ಎಲ್ಲಾದರೂ ಕುಳಿತುಕೊಳ್ಳಲು ಜಾಗ ಸಿಗಲಿ ಎಂದು ಅವರು ಹಾರೈಸುವುದಕ್ಕಾಗಿಯಾದರೂ ಬಸ್ ತಂಗುದಾಣಗಳಿಲ್ಲ. ಬಸ್ ತಂಗುದಾಣ ಇಲ್ಲವೆಂದಾದರೆ ಜನರೂ ಒಂದು ಕಡೆ ನಿಲ್ಲುವುದಿಲ್ಲ, ಬಸ್ಗಳೂ ಸರಿಯಾದ ಜಾಗದಲ್ಲಿ ನಿಲ್ಲುವುದಿಲ್ಲ. ಹೀಗಾಗಿ ಜನರು ಬಸ್ಸಿನತ್ತ ಓಡುವುದು ಹೆಚ್ಚು. ಓಡಿ ಬರುವ ಜನರನ್ನು ನೋಡಿ ದಿಢೀರ್ ಬ್ರೇಕ್ ಹಾಕುವ ಕಾರಣದಿಂದಲೂ ವಾಹನ ಅಪಘಾತಗಳಾಗುತ್ತಿವೆ. ಇತರ ವಾಹನಗಳಿಗೂ ಗೊಂದಲ ಉಂಟಾಗುತ್ತದೆ. ಹಂಗಳೂರಿನಂತಹ ಪ್ರದೇಶದಲ್ಲಿ ಹೆದ್ದಾರಿಯಲ್ಲಿಯೇ ಪ್ರಯಾಣಿಕರು ನಿಂತು ಬಸ್ಸೇರುವ ಕಾರಣದಿಂದ ಅಪಘಾತಗಳಿಗೆ ಆಹ್ವಾನ ನೀಡಿದಂತಾಗುತ್ತದೆ. ಬೇಕಿರುವುದು ದುಡ್ಡಲ್ಲ, ಮನಸ್ಸು
ಹೆದ್ದಾರಿ ಚತುಷ್ಪಥಗೊಳ್ಳುವ ಮೊದಲು ಇದ್ದ ಮಾದರಿಯಲ್ಲಿಯೇ ಅಥವಾ ಇನ್ನೂ ಉತ್ತಮ ರೀತಿಯಲ್ಲಿ ಹೆದ್ದಾರಿ ಬದಿ ಬಸ್ ತಂಗುದಾಣದ ಅವಶ್ಯವಿದೆ. ಇಲ್ಲೆಲ್ಲ ಬಸ್ ತಂಗುದಾಣ ಸ್ಥಾಪನೆಗೆ ದೊಡ್ಡ ಮೊತ್ತವೇನೂ ಬೇಕಾಗಿಲ್ಲ. ಸಣ್ಣ ಮೊತ್ತದಲ್ಲಿ ಮುಗಿಯಬಹುದಾದ ಕೆಲಸ ಇದು. ಒಂದೊಮ್ಮೆ ಸರಕಾರದಿಂದ ಮಾಡಲು ಅಸಾಧ್ಯವಾದರೆ ಸಂಘ, ಸಂಸ್ಥೆ ದಾನಿಗಳು ಕೂಡಾ ಮುಂದೆ ಬರುತ್ತಾರೆ. ಆದರೆ ಇವೆಲ್ಲಕ್ಕೂ ತಲೆ ಕೊಡಬೇಕಾದ ಹೆದ್ದಾರಿ ಪ್ರಾಧಿಕಾರವಾಗಲೀ, ಅದರ ಗುತ್ತಿಗೆದಾರರಾಗಲೀ ತಲೆ ಕೆಡಿಸಿಕೊಳ್ಳುವುದೇ ಇಲ್ಲ. ಎಸಿ ಕಾರಿನಲ್ಲಿ ಹೋಗುವ ಜನಪ್ರತಿನಿಧಿಗಳಿಗೂ ಇದರ ಅರಿವು ಉಂಟಾಗಲೇ ಇಲ್ಲ. -ಲಕ್ಷ್ಮೀ ಮಚ್ಚಿನ