ಬರೆದಷ್ಟು ವ್ಯಾಪ್ತಿ ಹಿರಿದಾಗುವ, ತಿಳಿದಷ್ಟು ಅರಿವು ತಿಳಿಯಾಗುವ, ಓದಿದಷ್ಟು ಮನಸ್ಸಿಗೆ ಹತ್ತಿರವಾಗುವ ಅನೇಕ ವಿಷಯಗಳಿವೆ. ಅವುಗಳಲ್ಲಿ ಊರ ಜಾತ್ರೆಯೂ ಒಂದು. ಜಾತ್ರೆ ಎಂದಾಕ್ಷಣ ಬಗೆಬಗೆಯ ಅಂಗಡಿಗಳು, ತಿನಿಸುಗಳು ನೆನಪಾಗುವುದು ಸಹಜ. ಆದರೆ ಅದನ್ನೂ ಮೀರಿದ ಭಾಷಾ ಸಾಮರಸ್ಯ, ನಂಬಿಕೆ ಬೆಸೆಯುವ ಆಚರಣೆಗಳು, ಅತಿಥಿ ಸತ್ಕಾರ, ನೆಲದ ಸಂಸ್ಕೃತಿಯನ್ನು ಸದಾ ಶ್ರೀಮಂತವಾಗಿಸುವ ಕೆಲವೊಂದು ಕಟ್ಟುಪಾಡುಗಳು ಜಾತ್ರೆಯ ಮತ್ತೂಂದು ಮಗ್ಗುಲನ್ನು ಅರ್ಥಪೂರ್ಣವಾಗಿಸುವುದನ್ನು ಮರೆಯುವಂತಿಲ್ಲ.
ನಮ್ಮೂರ ಆಸುಪಾಸಿನವರಿಗೆ ಅತ್ಯಂತ ದೊಡ್ಡ ಹಾಗೂ ಸಂಭ್ರಮದ ಜಾತ್ರೆಯೆಂದರೆ ಮಾರಣಕಟ್ಟೆ ಜಾತ್ರೆ. ಏನಿದರ ವೈಶಿಷ್ಟ್ಯ? ಜಾತ್ರೆಯಲ್ಲಾವ ಭಾಷಾ ಸಾಮರಸ್ಯ ಅಂತೀರಾ? ಹೌದು ಇಲ್ಲಿ ವೈಶಿಷ್ಟವೇನೆಂದರೆ ಸಾಮಾನ್ಯವಾಗಿ ಜಾತ್ರೆಯಲ್ಲಿ ಊರ ನೆರೆಯೂರ ಜನರು ನೆರೆಯುವುದು ಸಾಮಾನ್ಯ. ಆದರೆ ಇಲ್ಲಿ ಕುಂದಾಪುರ ಭಾಗದ ಒಂದು ಗ್ರಾಮದಲ್ಲಿ ನಡೆಯುವ ಜಾತ್ರೆಗೆ ತುಳುನಾಡ ಜನರದ್ದೇ ನಮಗಿಂತಲೂ ಕೊಂಚ ಹೆಚ್ಚಿನ ಸಂಭ್ರಮದ ಪಾಲುದಾರಿಕೆಯೆಂದರೆ ತಪ್ಪಿಲ್ಲವೇನೋ! ಇತಿಹಾಸ ಏನೇ ಇರಲಿ, ಭಾಷಾವಾರು, ಸಂಸ್ಕೃತಿವಾರು ಪ್ರಾದೇಶಿಕ ವ್ಯಾಪ್ತಿಗಳು ಏನೇ ಇರಲಿ ಜಿಲ್ಲೆಯ ಬಡಗು ಭಾಗದಲ್ಲಿನ ಆರಾಧ್ಯ ದೈವ ಬ್ರಹ್ಮಲಿಂಗೈಶ್ವರನಿಗೆ ತೆಂಕಿನ ಭಾಗದ ಭಕ್ತರ ದಂಡೇ ಹರಿದು ಬರು ವುದೇ ಮಾರಣಕಟ್ಟೆಯ ಮಕರ ಸಂಕ್ರಾಂತಿ ಜಾತ್ರೆಯ ವಿಶಿಷ್ಟತೆ.
ಹಿರಿಯರು ಹೇಳುತ್ತಿದ್ದ ಕಥೆಗಳು, ಅನುಭವದ ಮಾತುಗಳ ಆಧಾರದ ಮೇಲೆ ಹೇಳುವುದಾದರೆ ಬಡಗಿನವರಾದ ನಮಗೆ ತೆಂಕಿನ ಧರ್ಮಸ್ಥಳವೂ ಹೇಗೆ ಮುಖ್ಯ ನ್ಯಾಯಸ್ಥಾನವೋ ಅಂತೆಯೇ ತೆಂಕಿನ ಎಷ್ಟೋ ಕುಟುಂಬಗಳಿಗೆ ಬಡಗಿನ ಮಾರಣಕಟ್ಟೆ ನ್ಯಾಯತೀರ್ಮಾನದ ಸ್ಥಳವೂ ಹೌದಂತೆ. ಜತೆಗೆ ವರ್ಷಕ್ಕೊಮ್ಮೆ ನಡೆಯುವ ಜಾತ್ರೆಗೆ ಅವರು ತಪ್ಪದೇ ಆಗಮಿಸಿ ಪ್ರಸಾದ ಪಡೆದು ಹಿಂತಿರುಗುವ ಕ್ರಮ ಇದೆಯಂತೆ. ಅದೇ ನಂಬಿಕೆಯಂತೆ ಇಂದಿಗೂ ಹಬ್ಬದ ದಿನದಲ್ಲಿ ತೆಂಕಿನ ಭಕ್ತರೇ ತಲೆಯ ಮೇಲೆ ಹೆಮ್ಮಾಡಿಯ ಸೇವಂತಿಗೆ, ಸಿಂಗಾರದ ಹೂವನ್ನು ಹೊಂದಿರುವ ಬುಟ್ಟಿಯನ್ನು ಹೊತ್ತು ತಂದು ತಮ್ಮ ಭಕ್ತಿಯನ್ನು ನಿವೇದಿಸಿಕೊಳ್ಳುವ ಬಗೆ ನೋಡುವ ಕಣ್ಣುಗಳಿಗೂ ಭಾಗ್ಯಪ್ರದವಾದುದು.
ಇಂದಿಗೂ ನಮ್ಮೂರ ಮನೆಗಳಲ್ಲಿ ಮಕರಸಂಕ್ರಾಂತಿಯ ದಿನ ಬೆಳಗಾಗುತ್ತಲೇ ಅಡುಗೆಯ ಒಲೆ ಉರಿಯುತ್ತಿರಬೇಕು, ತೆಂಕಿನಿಂದ ಬಂದ ಅತಿಥಿಗಳಿಗೆ ಸತ್ಕಾರದಲ್ಲಿ ಅಡಚಣೆಯಾಗಬಾರದೆಂಬ ನಂಬಿಕೆಗಳಿವೆ. ಅಂದು ಹಂಚಿನ ದೋಸೆ ಹಾಗೂ ಕಾಯಿಹಾಲು ಮಾಡಿ ಪೂರ್ವಜರಿಗೆ ಎಡೆ ಇಡುವ ಕ್ರಮವೂ ಕೆಲವೊಂದು ಮನೆಗಳಲ್ಲಿದೆ. ಹಿಂದೆಲ್ಲ ದೂರದೂರದಿಂದ ನಡೆದೇ ಜಾತ್ರೆಗೆ ಬರುತ್ತಿದ್ದರು. ಅವರಿಗೆ ಸತ್ಕರಿಸುವ ಸಲುವಾಗಿ ಹುಟ್ಟಿಕೊಂಡ ಆಚರಣೆ ಹಾಗೆ ಮುಂದುವರಿದಿದೆಯೆಂದೂ ಹೇಳಬಹುದು. ಅಲ್ಲಲ್ಲಿ ಅತಿಥಿ ಸತ್ಕಾರ ಸ್ವೀಕರಿಸಿ ಅಂದಿನ ಕಾಲಕ್ಕೆ ಮನೋರಂಜನೆಯೇ ಬಹುಮುಖ್ಯ ಭೂಮಿಕೆಯಾಗಿದ್ದ ಯಕ್ಷಗಾನವನ್ನು ಕಣ್ತುಂಬಿಕೊಂಡು ಜಾತ್ರೆಗಾಗಿ ಎಲ್ಲರೂ ಮುಂದುವರಿಯುತ್ತಿದ್ದರಂತೆ.
ಅದಾಗಲೇ ಹೇಳಿದಂತೆ ಜಾತ್ರೆ ಅನೇಕ ವಿಷಯಗಳ ಹಾಗೂ ಜನರ ಸಮ್ಮಿಲನವೂ ಹೌದು. ಮಾರಣಕಟ್ಟೆಯ ಜಾತ್ರೆಗೆ ಹೆಮ್ಮಾಡಿಯ ಸೇವಂತಿಗೆ ಕಂಪು ಬೇರೆಯದೇ ಕಳೆಗಟ್ಟುತ್ತದೆ. ಜಾತ್ರೆಯ ಸಮಯಕ್ಕೆ ಸರಿಯಾಗಿ ಅರಳಿ ನಿಂತು ಜಾತ್ರೆಗಾಗಿಯೇ ಅರಳುತ್ತದೆ ಎನ್ನುವಷ್ಟರ ಮಟ್ಟಿಗೆ ಜಾತ್ರೆಯೊಂದಿಗೆ ಬಾಂಧವ್ಯ ಬೆಸೆದುಕೊಂಡಿರುವುದು ಹೆಮ್ಮಾಡಿಯ ಸೇವಂತಿಗೆ. ಶ್ರೀ ಬ್ರಹ್ಮಲಿಂಗೈಶ್ವರ ದೇವರಿಗೆ ಹೆಮ್ಮಾಡಿಯ ಸೇವಂತಿಗೆ ಬಹುಪ್ರಿಯವೆನ್ನುವುದು ಭಕ್ತರ ನಂಬಿಕೆ.
ಮೊದಲ ದಿನದ ಕೆಂಡೋತ್ಸವದಲ್ಲೂ ಅನಂತರದ ದಿನಗಳ ಚಿಕ್ಕು, ಯಕ್ಷಿ, ಹಾಯುYಳಿ ಮೊದಲಾದ ದೈವಗಳ ಮಂಡಲ ಸೇವೆಯಲ್ಲೂ ತೆಂಕು ಬಡಗಿನವರೆಂಬ ಭೇದವಿಲ್ಲದೆ ತುಳು-ಕನ್ನಡದವರೆಲ್ಲರೂ ಒಂದೇ ತಾಯಿಯ ಮಕ್ಕಳಾಗಿ ಜತೆಯಾಗಿ ಸಂಭ್ರಮಿಸುವ ಈ ಪರಿಪಾಠ ಹಾಗೆಯೇ ಮುಂದುವರಿಯಲಿ. ನಂಬಿಕೆಯ ನಂಟಿನಲ್ಲಿ, ಆಚರಣೆಗಳ ಆತ್ಮೀಯತೆಯಲ್ಲಿ ಎಲ್ಲರೂ ಒಂದೇ ಎನ್ನುವ ಭಾವ ಗಟ್ಟಿಯಾಗಲಿ. ನೆಲದ ಒಗ್ಗಟ್ಟು, ಸಂಸ್ಕೃತಿ ಇನ್ನಷ್ಟು ಮೆರೆಯಲಿ.
-ಶರತ್ ಶೆಟ್ಟಿ
ವಂಡ್ಸೆ