Advertisement

ಗೋಕಾಕ್‌ ಸಾಹಿತ್ಯದ ಸಮಗ್ರ ಅಧ್ಯಯನ ಅಗತ್ಯ

06:51 AM Jul 10, 2019 | Lakshmi GovindaRaj |

ಬೆಂಗಳೂರು: ನವ್ಯಕಾವ್ಯದ ಸೂಕ್ಷ್ಮತೆಗಳನ್ನು ಅರಿಯಲು ವಿ.ಕೃ.ಗೋಕಾಕ್‌ ಅವರ ಸಾಹಿತ್ಯವನ್ನು ಸಮಗ್ರವಾಗಿ ಅಧ್ಯಯನ ಮಾಡಬೇಕಾದ ಅಗತ್ಯವಿದೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಚಂದ್ರಶೇಖರ ಕಂಬಾರ ಅಭಿಪ್ರಾಯ ಪಟ್ಟರು.

Advertisement

ಜಯನಗರದ ಎನ್‌.ಎಂ.ಕೆ.ಆರ್‌.ವಿ.ಮಹಿಳಾ ಕಾಲೇಜಿನಲ್ಲಿ ಮಂಗಳವಾರ ನಡೆದ “ವಿ.ಕೃ.ಗೋಕಾಕ್‌ ಜೀವನ ಮತ್ತು ಸಾಹಿತ್ಯ – ಸಮಕಾಲೀನ ಸ್ಪಂದನೆ’ ಕುರಿತ ರಾಜ್ಯಮಟ್ಟದ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡಿದ ಅವರು,ಗೋಕಾಕ್‌ ಅವರ ಸಾಹಿತ್ಯದ ಕುರಿತಾದ ವಿಚಾರ ಸಂಕಿರಣಗಳು ರಾಷ್ಟ್ರ ಮಟ್ಟದಲ್ಲಿ ನಡೆಯಬೇಕು. ಇದಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿ ಎಲ್ಲಾ ರೀತಿಯ ನೆರವು ನೀಡಲಿದೆ ಎಂದರು ತಿಳಿಸಿದರು.

ಮನಸಿಗೆ ಬೇಸರವಾಗುತ್ತದೆ: ವಿ.ಕೃ.ಗೋಕಾಕ್‌ ಅವರು ಧಾರವಾಡದಲ್ಲಿ ನೆಲೆಸಿದ್ದರೂ, ನಾನು ಅವರ ಸಾಹಿತ್ಯದ ಪ್ರಭಾವಕ್ಕೆ ಒಳಗಾಗಲಿಲ್ಲ. ಗೋಪಾಲ ಕೃಷ್ಣ ಅಡಿಗರ ಶಿಷ್ಯರು ನನ್ನ ಪ್ರಾಧ್ಯಾಪಕರಾದ ಹಿನ್ನೆಲೆಯಲ್ಲಿ ಗೋಕಾಕ್‌ರ ಸಾಹಿತ್ಯದ ಬಗ್ಗೆ ಹೆಚ್ಚು ಒಲವು ತೋರಲಿಲ್ಲ. ಆದರೆ ಗೋಕಾಕ್‌ ಅವರ ಸಂಪರ್ಕ ಸಾಧಿಸದೇ ಇರುವುದನ್ನ ಈಗ ನೆನಪಿಸಿಕೊಂಡರೆ, ಮನಸಿಗೆ ಬಹಳ ಬೇಸರವಾಗುತ್ತದೆ ಎಂದು ಹೇಳಿದರು.

ನವ್ಯ ಕಾವ್ಯದ ಪ್ರತಿಪಾದಕರು: ಗೋಪಾಲ ಕೃಷ್ಣ ಅಡಿಗರು ಮತ್ತು ವಿ.ಕೃ.ಗೋಕಾಕರು ನವ್ಯ ಕಾವ್ಯವನ್ನೇ ಪ್ರತಿಪಾದಿಸಿದರು. ಇಬ್ಬರ ನಡುವೆ ಸಾಹಿತ್ಯದ ಕುರಿತು ಭಿನ್ನತೆ ಇತ್ತು. ಆದರೂ, ಶಾಸ್ತ್ರೀಯವಾದ ಸಾಹಿತ್ಯ ಚಿಂತನೆ ಗೋಕಾಕ್‌ ಅವರ ಸಾಹಿತ್ಯ ಮತ್ತು ಬರಹಗಳಲ್ಲಿ ಕಾಣಬಹುದಾಗಿದೆ. ರಾಜ್ಯವಷ್ಟೇ ಅಲ್ಲ ದೇಶದ ಹಲವು ಕಡೆಗಳಲ್ಲಿ ಗೋಕಾಕ್‌ ಅವರ ಶಿಷ್ಯರಿದ್ದಾರೆ ಎಂದರು.

ಕನ್ನಡ ಸಾಹಿತ್ಯವನ್ನು ಹಲವರು ಶ್ರೀಮಂತಗೊಳಿಸಿದ್ದಾರೆ.ಭಾರತ ಮತ್ತು ಪಾಶ್ಚಿಮಾತ್ಯ ಸಾಹಿತ್ಯವನ್ನು ಅರಿತುಕೊಂಡಿದ್ದಾರೆ. ಕನ್ನಡ ಸಾಹಿತಿಗಳಿಗೆ ಆಂಗ್ಲದ ಹೆಸರಾಂತ ಕವಿಗಳಾದ ಎಟ್ಸ್‌ ಮತ್ತು ಎಲಿಯಟ್‌ ಅವರ ಸಾಹಿತ್ಯವನ್ನು ವಿಮರ್ಶಿಸುವಷ್ಟು ಶಕ್ತಿ ಇದೆ ಎಂದು ಹೇಳಿದರು.

Advertisement

ಹೊಸತನ್ನು ಕಟ್ಟಬೇಕು: ವಿಮರ್ಶಕ ನರಹಳ್ಳಿ ಬಾಲಸುಬ್ರಮಣ್ಯ ಮಾತನಾಡಿ, ಯುವ ಸಾಹಿತಿಗಳು ಹಳೆ ತಲೆಮಾರಿನ ಸಾಹಿತ್ಯವನ್ನು ಓದಿಕೊಂಡು, ಹೊಸತನ್ನು ಕಟ್ಟಬೇಕು. ಪರಂಪರೆ ಜತೆಗೆ ಸಂಬಂಧ ಸೃಷ್ಟಿಕೊಂಡು ಕಾವ್ಯದ ಮೂಲಕ ಪರಂಪರೆಯ ಅನುಸಂಧಾನ ನಡೆಸಬೇಕು ಎಂದು ತಿಳಿಸಿದರು.

ಗೋಕಾಕ್‌ ಅವರು ಸಾಹಿತ್ಯದ ಮೂಲಕ ದೇಶದಲ್ಲೆಡೆ ಹೆಸರು ವಾಸಿಯಾಗಿದ್ದಾರೆ. ವಿ.ಕೃ ಗೋಕಾಕ್‌ ಅವರ ಸಾಹಿತ್ಯದಲ್ಲಿ ಪಾಶ್ಚಿಮಾತ್ಯ ಹಾಗೂ ಭಾರತೀಯತೆಯನ್ನು ಕಾಣಬಹುದಾಗಿದ್ದು, ಹೊಸ ಪ್ರಯೋಗಗಳಿಗೆ ಇವರ ಸಾಹಿತ್ಯ ಪ್ರೇರಣೆ ನೀಡಲಿದೆ ಎಂದು ಹೇಳಿದರು.

ವಿ.ಕೃ.ಗೋಕಾಕ್‌ ಟ್ರಸ್ಟ್‌ನ ಕಾರ್ಯದರ್ಶಿ ಅನಿಲ್‌ ಗೋಕಾಕ್‌, ಎನ್‌.ಎಂ.ಕೆ.ಆರ್‌.ವಿ ಕಾಲೇಜಿನ ಪ್ರಾಂಶುಪಾಲರಾದ ಸ್ನೇಹಲತಾ ನಾಡಿಗೇರ್‌, ಕನ್ನಡ ವಿಭಾಗದ ಮುಖ್ಯಸ್ಥ ಆತ್ಮಾನಂದ ಉಪಸ್ಥಿತರಿದ್ದರು.

ಇದೇ ವೇಳೆ ಬೆಳಗ್ಗೆಯಿಂದ ಸಂಜೆಯವರೆಗೂ ವಿ.ಕೃ.ಗೋಕಾಕ್‌ ಅವರ ಕಾವ್ಯದ ಕುರಿತಾದ ವಿಚಾರಗೋಷ್ಠಿಗಳು ನಡೆದವು. ಲೇಖಕ ಲಕ್ಷ್ಮೀಶ ತೋಳ್ಪಾಡಿ, ರಾಜಶೇಖರ ಹಳೆಮನೆ, ಸಂಧ್ಯಾ ಹೆಗಡೆ ದೊಡ್ಡಹೊಂಡ, ವೆಂಕಟಗಿರಿ ದಳವಾಯಿ ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next