Advertisement

ಬೆಳಗಾವಿ:ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡಿದ ಹುಡುಗ..ಜಿಲ್ಲಾ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ

04:45 PM Nov 23, 2024 | Team Udayavani |

ನಯನ ಮನೋಹರ, ಸಾಂಸ್ಕೃತಿಕ ಸೊಬಗಿನ ನಾಡು ಬೆಳಗಾವಿ ಜಿಲ್ಲೆಯಲ್ಲಿ ಅರಳಿದ ಪ್ರತಿಭೆ ಪ್ರೊ|ಚಂದ್ರಶೇಖರ ಅಕ್ಕಿ, ಗೋಕಾಕ ತಾಲೂಕಿನ ಶಿಲ್ತಿ ಭಾವಿ ಗ್ರಾಮದವರು. ತಾಯಿಯ ತವರೂರಾದ ಖನಗಾಂವಿಯಲ್ಲಿ 1948, ಡಿ.24ರಂದು ಜನಿಸಿದರು. ತಂದೆ ದುಂಡಪ್ಪ, ತಾಯಿ ಅಂಬವ್ವ. ಪ್ರತಿಷ್ಠಿತ ಕೃಷಿ ಕುಟುಂಬದಲ್ಲಿ ಬೆಳೆದ ಚಂದ್ರಶೇಖರ ಮುಲ್ಕಿ ಶಿಕ್ಷಣದವರೆಗೆ ಖನಗಾವಿ ಪ್ರಾಥಮಿಕ ಶಾಲೆಯಲ್ಲಿ ಪೂರೈಸಿದರು. 7ನೇ ತರಗತಿ (ಮುಲ್ಕಿ) ಪರೀಕ್ಷೆಯಲ್ಲಿ ಚಿಕ್ಕೋಡಿ ವಲಯಕ್ಕೆ 3ನೇ ರ್‍ಯಾಂಕ್‌ ಗಳಿಸಿ ಎಸ್‌.ಎ.ಖನಗಾವಿ ಗುರುಗಳಿಂದ ಶಹಬ್ಭಾಸ್‌ ಎನಿಸಿಕೊಂಡಿದ್ದರು.

Advertisement

ನಂತರ ನೇಸರಗಿಯ ಕ್ರಿಶ್ಚಿಯನ್‌ ಹೈಸ್ಕೂಲ್‌ನಲ್ಲಿ ಎಸ್‌ಎಸ್‌ಎಲ್‌ಸಿ ಪಾಸಾದರು. ತಂದೆಯವರು ಮಗನನ್ನು ಎಂಜಿನಿಯರ್‌ ಮಾಡಬೇಕೆನ್ನುವ ಮಹತ್ವಾಕಾಂಕ್ಷೆಯಿಂದ ಬೆಳಗಾವಿಯ ಆರ್‌ಎಲ್‌ಎಸ್‌ ಕಾಲೇಜಿಗೆ ಸೇರಿಸಿದರು. ಸ್ವಭಾವತಃ ಚಂದ್ರಶೇಖರ್‌ಗೆ ಕನ್ನಡ, ಇತಿಹಾಸ ಭಾಷೆಗಳ ಬಗ್ಗೆ ಅಪಾರ ಆಸಕ್ತಿಯಿತ್ತು. ಅವರು ವಿಜ್ಞಾನ ತರಗತಿಗಳಿಗೆ ಒಗ್ಗಿಕೊಳ್ಳದೆ ಪಿಯುಸಿಯಲ್ಲಿ ಅನುತ್ತೀರ್ಣರಾಗಿ ಮನೆಗೆ ಮರಳಿದರು. ಚಂದ್ರಶೇಖರ ತಂದೆಯರಿಗೆ ದಿಕ್ಕೇ ತೋಚದಂತಾಯಿತು. ಅವರು ಗೋಕಾಕದ ಆಗಿನ ಪ್ರಸಿದ್ಧ ಜವಳಿ ವ್ಯಾಪಾರಸ್ಥರಾದ ಗಂಗಪ್ಪ ಶೇಬಣ್ಣವರ ಅವರಲ್ಲಿಗೆ ಬಂದು ಚಂದ್ರಶೇಖರರನ್ನು ಅಂಗಡಿಯಲ್ಲಿ ಇಟ್ಟುಕೊಂಡು ವ್ಯಾಪಾರದ ಮಾಹಿತಿ ನೀಡಲು ವಿನಂತಿಸಿಕೊಂಡರು.

ಹೀಗಾಗಿ ಚಂದ್ರಶೇಖರ ಅವರು ಶೇಬಣ್ಣವರ ಅವರ ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡತೊಡಗಿದರು. ಮಾಲಕರು ಚಂದ್ರಶೇಖರ ಕಲಿಕೆ ಆಸಕ್ತಿಯನ್ನು ಗಮನಿಸಿ, 1968ರಲ್ಲಿ ಗೋಕಾಕದ ಜೆಎಸ್‌ಎಸ್‌ ಕಾಲೇಜಿನಲ್ಲಿ ಕಲಾ ವಿಭಾಗಕ್ಕೆ ಸೇರಿಸಿದರು. ಮುಂಜಾನೆ ಕಾಲೇಜಿಗೆ ಹೋಗಿ ಬಂದು ಮಧ್ಯಾಹ್ನ ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡತೊಡಗಿದರು. ಚಂದ್ರಶೇಖರ ಅತ್ಯುತ್ತಮ ಅಂಕಗಳೊಂದಿಗೆ ಪಿಯುಸಿ ತೇರ್ಗಡೆಗೊಳಿಸಿದರು.

ಮಗನ ಯಶಸ್ಸನ್ನು ಕಂಡು ತಂದೆಯವರು ಬಟ್ಟೆ ಅಂಗಡಿಯಿಂದ ಬಿಡಿಸಿ ಬಿಎ ಪದವಿಗೆ ಸೇರಿಸಿದರು. ಡಾ|ಎಸ್‌.ಬಿ.ತೋಟದ, ಪ್ರೊ| ಬಿ. ಜಿ. ಯರಗಂಬಳಿಮಠ ಗುರುಗಳ ಮಾರ್ಗದರ್ಶನದಲ್ಲಿ ಬಿಎ ಪದವಿ ಪೂರೈಸಿದರು. ನಂತರ ಎಂಎ ಅಧ್ಯಯನಕ್ಕಾಗಿ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯಕ್ಕೆ ಸೇರಿದರು. ಚಂದ್ರಶೇಖರರು ಡಾ|ಆರ್‌.ಸಿ.ಹಿರೇಮಠ, ಡಾ|ಎಂ. ಎಸ್‌.ಸುಂಕಾಪುರ, ಡಾ|ಎಂ.ಎಂ.ಕಲಬುರ್ಗಿ, ಡಾ|ಎಂ.ಬಿ.ಕೊಟ್ರಶೆಟ್ಟಿ, ಡಾ|ಸೋಮಶೇಖರ ಇಮ್ರಾಪುರ ಮಾರ್ಗದರ್ಶನದಲ್ಲಿ 1974ರಲ್ಲಿ ಎಂಎ ಸ್ನಾತಕೋತ್ತರ ಪದವಿ ಪೂರ್ಣಗೊಳಿಸಿದರು.

ಗೋಕಾಕದ ಋಣಾನುಬಂಧವೋ ಏನೋ ಚಂದ್ರಶೇಖರ ಅಕ್ಕಿಯವರು 1974ರಲ್ಲಿ ಜೆಎಸ್‌ ಎಸ್‌ ಕಾಲೇಜಿನಲ್ಲಿ ಗೌರವ ಉಪನ್ಯಾಸಕರಾಗಿ ಸೇವೆ ಪ್ರಾರಂಭಿಸಿದರು. ಅಂದಿನ ಆಡಳಿತ ಮಂಡಳಿ ಮೆಚ್ಚುಗೆ ಪ್ರೀತಿ ಗಳಿಸಿದ ಅವರು 1975ರಲ್ಲಿ ತಾವು ಕಲಿತ
ಕಾಲೇಜಿನಲ್ಲಿಯೇ ಪೂರ್ಣಾವಧಿ ಉಪನ್ಯಾಸಕರಾಗಿ ನೇಮಕಗೊಂಡರು. 2006 ಜೂನ್‌ 1ರಂದು ನಿವೃತ್ತಿ ಹೊಂದಿದರು. ಪ್ರೊ|ಚಂದ್ರಶೇಖರ ಅಕ್ಕಿ ಬಿಎ ಮುಗಿಸಿದ ತಕ್ಷಣವೇ ಮನೆಯ ಹಿರಿಯರೆಲ್ಲ ಸೇರಿ ಮದುವೆಗೆ ಒತ್ತಾಯಿಸಿದರು. ಜುಲೈ 7, 1972ರಲ್ಲಿ ಅವರ ಸೋದರ ಮಾವಂದಿರ ಮಗಳು ಸುಶೀಲಾ ಅವರನ್ನು ಶಿಲ್ತಿ ಭಾವಿಯಲ್ಲಿ ಮದುವೆಯಾದರು. ಕವಿತಾ, ಅರುಣ ಮತ್ತು ಕಿರಣ ಎಂಬ ಮೂವರು ಮಕ್ಕಳಿದ್ದಾರೆ.

Advertisement

ಪ್ರೊ| ಚಂದ್ರಶೇಖರ ಅಕ್ಕಿ ಅವರು ಕಥೆ, ವ್ಯಕ್ತಿ ಚಿತ್ರಣ, ವಿಮರ್ಶೆ, ಸಂಪಾದನೆ ಮೊದಲಾದ ಪ್ರಕಾರಗಳಲ್ಲಿ ತೊಡಗಿಸಿಕೊಂಡು ಕನ್ನಡ ಸಾಹಿತ್ಯ ಕ್ಷೇತ್ರ ಸಮೃದ್ಧಿಗೊಳಿಸಿದ್ದಾರೆ. ಪಿಯುಸಿ ಓದುತ್ತಿರುವಾಗಲೇ ‘ಬೆಂದಾತ್ಮದ ಕೂಗು’ ಕವಿತೆ ಮತ್ತು ‘ಎಪ್ರಿಲ್‌ ಫೂಲ್‌’ ಕಥೆಯನ್ನು ಕಾಲೇಜು ಮ್ಯಾಗಜೀನ್‌ ಗೆ ಕೊಟ್ಟಿದ್ದರು. ಕಸಿ, ಪರಿಸರ, ನಮ್ಮ ನಿಮ್ಮ ಕಥೆಗಳು (ಕಥಾ ಸಂಕಲನಗಳು), ಗೋಕಾವಿ ಸಿರಿ ಸಂಪದ, ಗೋಕಾವಿ ಸಂಸ್ಕೃತಿ ಸಂಪದ, ಗೋಕಾವಿ ನಾಡಿನ ಹೊನ್ನಬೆಳೆ, ಪ್ರಸಿದ್ಧ ಸಂಸದೀಯ ಪಟು ಎ.ಆರ್‌.ಪಂಚಗಾವಿ, ಎಂ.ಬಿ.ಮುನವಳ್ಳಿ (ವ್ಯಕ್ತಿ ಚಿತ್ರಣ), ಕಥಾತರಂಗ, ಗಡಿನಾಡ ಬೆಡಗು, ಬಸವರಾಜ ಕಟ್ಟಿಮನಿಯವರ ಸಮಗ್ರ ಸಾಹಿತ್ಯ
15 ಸಂಪುಟಗಳು, ಬಸವರಾಜ ಕಟ್ಟಿಮನಿ ಕಥೆಗಳು : ಅವಲೋಕನ, ಬಸವರಾಜ ಕಟ್ಟಿಮನಿ ವ್ಯಾಸಂಗ, ಗಡಿನಾಡ ಬೆಡಗು, ಬೆಳಗಾವಿ ಬೆಳಕು, ಹಾಲು ಬಾನ, ದರ್ಪಣ ಮುಂತಾದ ಮೌಲಿಕ ಕೃತಿಗಳನ್ನು ಕನ್ನಡ ಸಾರಸ್ವತ ಲೋಕಕ್ಕೆ ಸಮರ್ಪಿಸಿದ್ದಾರೆ. ಒಂದು ಹಗ್ಗದ ಸುತ್ತ (ಕಾದಂಬರಿ), ಓಕುಳಿ (ಕಥಾ ಸಂಕಲನ) ಹಾಗೂ ಆಗೀಗ ಬರೆದ ಕವಿತೆಗಳು (ಕವನ ಸಂಕಲನ) ಅಪ್ರಕಟಿತ ಕೃತಿಗಳಾಗಿವೆ.

ಗೋಕಾವಿ ನಾಡಿನ ಹಲವಾರು ಸಂಘ-ಸಂಸ್ಥೆಗಳೊಂದಿಗೆ ನಿಕಟ ಸಂಬಂಧ ಇಟ್ಟುಕೊಂಡಿದ್ದಾರೆ. ಕನ್ನಡ ನಾಡು ನುಡಿ ಬಗ್ಗೆ
ಅವರಿಗಿರುವ ಅಭಿಮಾನ, ಕಾಳಜಿ ಅಗಾಧವಾದದ್ದು. ಶರಣ ಚಿಂತನೆ, ಅಧ್ಯಯನವನ್ನೇ ತಮ್ಮ ಜೀವನದ ಉಸಿರಾಗಿಸಿಕೊಂಡಿದ್ದಾರೆ. ಧಾರವಾಡದ ಮುರಘಾ ಮಠ, ಹುಬ್ಬಳ್ಳಿ ಮೂರು ಸಾವಿರ ಮಠ, ಸಾವಳಗಿ ಮಠ, ಇಳಕಲ್‌ ಮಠ, ಅರಭಾಂವಿ ಮಠ, ತವಗ ಮಠ, ಗೋಕಾಕ ಸಂಪಾದನಾಮಠಗಳಿಂದ ಹಾಗೂ ನಾಡಿನ ವಿವಿಧ ಸಂಘ-ಸಂಸ್ಥೆಗಳ ಪ್ರಶಸ್ತಿ-ಪುರಸ್ಕಾರಗಳಿಗೆ ಅವರು ಭಾಜನರಾಗಿದ್ದಾರೆ.

ಅವರಿಗೆ ‘ಸಿರಿಗಂಧ’ ಹಾಗೂ ‘ಸಹೃದಯಿ’ ಅಭಿನಂದನ ಗ್ರಂಥಗಳು ಸಮರ್ಪಿತಗೊಂಡಿವೆ.  ದೂರದರ್ಶನ ಚಂದನ ವಾಹಿನಿಯ ‘ಬೆಳಗು’ ಕಾರ್ಯಕ್ರಮದ ಗೌರವವು ಅವರಿಗೆ ಸಂದಿದೆ. ಬೆಳಗಾವಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷೆ ಮಂಗಲಾ ಮೆಟಗುಡ್ಡ ಅವರು ಸಾಹಿತ್ಯಿಕ ಬಳಗದೊಂದಿಗೆ ಪ್ರೊ|ಚಂದ್ರಶೇಖರ ಅಕ್ಕಿ ಅವರನ್ನು ನ.23, 24ರಂದು ಮೂಡಲಗಿಯಲ್ಲಿ ಜರುಗಲಿರುವ ಬೆಳಗಾವಿ ಜಿಲ್ಲಾ 16ನೇ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರನ್ನಾಗಿ ನಿಯೋಜಿಸಿರುವದು ಹೆಮ್ಮೆಯ ಸಂಗತಿ.

76ರ ಹರೆಯದ ಕನ್ನಡದ ಕಟ್ಟಾಳು ಪ್ರೊ|ಚಂದ್ರಶೇಖರ ಅಕ್ಕಿ ನಮ್ಮೆಲ್ಲರಿಗೂ ಆದರ್ಶಪ್ರಿಯ. ಅವರ ಸರಳ ನಡೆ-ನುಡಿ, ಹಿರಿಯ-ಕಿರಿಯರೆನ್ನದೇ ಎಲ್ಲರೊಂದಿಗೆ ಪ್ರೀತಿಯಿಂದ ಬೆರೆಯುವ, ಪ್ರತಿಕ್ರಿಯಿಸುವ ಮನೋಭಾವ ಅಪ್ಯಾಯಮಾನವಾದುದು. ಅವರ ಬದುಕು-ಬರಹ ನಮಗೆಲ್ಲ ಸ್ಪೂರ್ತಿದಾಯಕವಾಗಲಿ.

ಸುರೇಶ ಗುದಗನವರ,
ಸಾಹಿತಿಗಳು, ರಾಮದುರ್ಗ

Advertisement

Udayavani is now on Telegram. Click here to join our channel and stay updated with the latest news.

Next