ಇಸ್ಲಾಮಾಬಾದ್: ಭಾರತದಲ್ಲಿ ಅಲ್ಪಸಂಖ್ಯಾತರ ಹಕ್ಕುಗಳನ್ನು ದಮನಿಸಲಾಗುತ್ತದೆ ಎಂದು ಹುಯಿಲೆಬ್ಬಿಸುವ ಪಾಕಿಸ್ತಾನದಲ್ಲಿಯೇ ದೇಗುಲ ಧ್ವಂಸಗೊಳಿಸಿದ ಘಟನೆ ನಡೆದಿದೆ.
ರಾವಲ್ಪಿಂಡಿಯ ಪುರಾನಾ ಕಿಲಾ (ಹಳೆಯ ಕೋಟೆ) ಪ್ರದೇಶದಲ್ಲಿ 100 ವರ್ಷಗಳಷ್ಟು ಹಳೆಯದಾಗಿರುವ ದೇಗುಲವನ್ನು ಪುನರ್ ನಿರ್ಮಿಸುವ ಕೆಲಸ ನಡೆಯುತ್ತಿತ್ತು. ಶನಿವಾರ ರಾತ್ರಿ 7.30ರ ಸುಮಾರಿಗೆ 10-15 ಮಂದಿ ಇದ್ದ ತಂಡ ದೇಗುಲಕ್ಕೆ ನುಗ್ಗಿತು. ಮುಖ್ಯ ದ್ವಾರ, ಮೊದಲ ಅಂತಸ್ತಿನಲ್ಲಿರುವ ಬಾಗಿಲನ್ನೂ ಪುಂಡರು ಧ್ವಂಸ ಮಾಡಿದ್ದಾರೆ. ಈ ಬಗ್ಗೆ ಪೊಲೀಸರಿಗೆ ದೂರು ನೀಡಲಾಗಿದೆ. ಪಾಕಿಸ್ತಾನದ ಉತ್ತರ ವಲಯದ ನಿರ್ವಸಿತರ ಆಸ್ತಿಯ ಟ್ರಸ್ಟ್ ಮಂಡಳಿ (ಇಟಿಪಿಬಿ)ಯ ಭದ್ರತಾ ಅಧಿಕಾರಿ ಸಯ್ಯದ್ ರಾಝಾ ಅಬ್ಟಾಸ್ ಝೈದಿ ಬನ್ನಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಮಾ.24ರಂದು ದೇಗುಲದ ಜಮೀನನ್ನು ಹಲವರು ಒತ್ತುವರಿ ಮಾಡಿಕೊಂಡಿದ್ದರು. ಅದನ್ನು ತೆರವುಗೊಳಿಸಲಾಗಿತ್ತು ಎಂದು ಅವರು ದೂರಿನಲ್ಲಿ ಉಲ್ಲೇಖೀಸಿದ್ದಾರೆ. ನಿರ್ಮಾಣ ಕಾರ್ಯ ಪ್ರಗತಿಯಲ್ಲಿ ಇರುವುದರಿಂದ ದೇವರ ಮೂರ್ತಿಯನ್ನು ಅಲ್ಲಿ ಪ್ರತಿಷ್ಠಾಪಿಸಲಾಗಿರಲಿಲ್ಲ ಮತ್ತು ಧಾರ್ಮಿಕ ಕಾರ್ಯಕ್ರಮಗಳನ್ನೂ ನಡೆಸಲಾಗುತ್ತಿರಲಿಲ್ಲ ಎಂದಿದ್ದಾರೆ. ದೇಗುಲದ ಆಡಳಿತಾಧಿಕಾರಿ ಓಂ ಪ್ರಕಾಶ್ ಕೂಡ ಘಟನೆಯನ್ನು ಖಚಿತಪಡಿಸಿದ್ದಾರೆ.
ಇದನ್ನೂ ಓದಿ :ಲಾಕ್ ಡೌನ್ ಇಲ್ಲ, ಆದ್ರೆ 15 ದಿನ ಸತ್ಯಾಗ್ರಹ, ಚಳವಳಿ ಮಾಡುವಂತಿಲ್ಲ : ಸಿಎಂ ಆದೇಶ
2020ರ ಡಿಸೆಂಬರ್‌ನಲ್ಲಿ ಖೈಬರ್ ಪಕ್ತಾಖ್ವಾ ಪ್ರಾಂತ್ಯದ ಕರಕ್ ಜಿಲ್ಲೆಯ ಟೆರಿ ಗ್ರಾಮದಲ್ಲಿ ದೇಗುಲ ಧ್ವಂಸ ಮಾಡಲಾಗಿತ್ತು. ಭಾರತ ಸರ್ಕಾರದ ಪ್ರತಿಭಟನೆಯ ಬಳಿಕ 100ಕ್ಕೂ ಅಧಿಕ ಮಂದಿಯನ್ನು ಬಂಧಿಸಲಾಗಿತ್ತು.